ಹೊಸಪೇಟೆ (ವಿಜಯನಗರ): ‘ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಆಡಳಿತ ನೀಡಿದ್ದ ಹಾಗೂ ಸಂಪದ್ಭರಿತ ಸಾಮ್ರಾಜ್ಯ ಎಂದು ಕರೆಸಿಕೊಂಡಿದ್ದ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದುದು ಏಪ್ರಿಲ್ 18ರಂದು. ಅದೇ ದಿನ ಹಂಪಿ ಉತ್ಸವ ನಡೆಯುವಂತಾಗಬೇಕು’ ಎಂದು ನಗರದ ಹೊರವಲಯದ ಯಲ್ಲಾಲಿಂಗ ಮಠದ ಸಿದ್ಧರಾಮಾನಂದ ಸ್ವಾಮೀಜಿ ಹೇಳಿದರು.
ಮಠದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ 869ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಭಾರತದ ಇತಿಹಾಸದಲ್ಲಿ ಹಿಂದೂ ಸಾಮ್ರಾಜ್ಯ ವಿವಿಧ ರಾಜರ ದಬ್ಬಾಳಿಕೆಯಿಂದ ನಶಿಸಿಹೋಗುವ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಹಿಂದೂ ಸಾಮ್ರಾಜ್ಯ ಮರು ಸ್ಥಾಪಿಸಿದ ಹಕ್ಕಬುಕ್ಕರು ಪ್ರಪಂಚದ ಗಮನಸೆಳೆದ ಮಹಾನ್ ಸಾಧಕರು, ನಮ್ಮ ಪೂರ್ವಜರ ಇತಿಹಾಸ ತಿಳಿದುಕೊಳ್ಳುವ ಮೂಲಕ ಹಕ್ಕಬುಕ್ಕರನ್ನು ಸ್ಮರಿಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು. ಅದಕ್ಕಾಗಿ ಸರ್ಕಾರ ಪ್ರತಿ ವರ್ಷ ಏಪ್ರಿಲ್ 18ರಂದು ಹಂಪಿ ಉತ್ಸವ ಏರ್ಪಡಿಸಿ ವಿಜಯನಗರ ಉತ್ಸವವನ್ನಾಗಿ ಆಚರಿಸಬೇಕು’ ಎಂದರು.
ಲಿಂಗಬೀರದೇವ ಸ್ವಾಮೀಜಿ ಇದ್ದರು. ಮುಖಂಡರಾದ ರಶ್ಮಿ ರಾಜಶೇಖರ್ ಹಿಟ್ನಾಳ್, ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಕುರಿ ಶಿವಮೂರ್ತಿ, ಗೌಡರ ರಾಮಣ್ಣ, ಗಂಟೆ ಸೋಮಶೇಖರ್, ವಕೀಲರಾದ ಟಿ.ಕೆ.ಕಾಮೇಶ, ಎಚ್. ಮಹೇಶ್, ವೈ.ಯರಿಸ್ವಾಮಿ, ಬಿಸಾಟಿ ತಾಯಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.