ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದು, ಸೋಮವಾರ ಸಂಜೆಯಿಂದೀಚೆಗೆ ನದಿಗೆ ಎರಡು ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ಮುನಿರಾಬಾದ್‌ನ ಜಲವಿದ್ಯುದಾಗಾರ ಮೂಲಕ ಎಡದಂಡೆ ಮುಖ್ಯ ಕಾಲುವೆ ಮತ್ತು ನದಿಗೆ ಹರಿಸಲಾಗುತ್ತಿದೆ.
‘ಸದ್ಯ ಕ್ರಸ್ಟ್‌ಗೇಟ್ ಎತ್ತಿ ನೀರನ್ನು ಹೊರಗೆ ಬಿಡುವುದಿಲ್ಲ. ವಿದ್ಯುತ್ ಉತ್ಪಾದನೆಗೆ ನೀರು ಹರಿಸಿ, ಆ ನೀರನ್ನು ಕಾಲುವೆಗೆ ಮತ್ತು ನದಿಗೆ ಬಿಡುವ ಅವಕಾಶ ಇದೆ, ಅದನ್ನೀಗ ಮಾಡಲಾಗುತ್ತಿದೆ. ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.
ಎರಡು ದಿನದಿಂದ ಜಲಾಶಯದ ಒಳಹರಿವಿನ ಪ್ರಮಾಣ 60 ಸಾವಿರ ಕ್ಯೂಸೆಕ್‌ಗಿಂತ ಅಧಿಕ ಇತ್ತು. ಮಂಗಳವಾರ ಅದರ ಸರಾಸರಿ ಪ್ರಮಾಣ 33,916 ಕ್ಯೂಸೆಕ್‌ಗೆ ಇಳಿದಿದೆ. ಸದ್ಯ 1,624.38 ಅಡಿ ಎತ್ತರದ ಮಟ್ಟದಲ್ಲಿ ನೀರಿದ್ದು, ಜಲಾಶಯದಲ್ಲಿ 74.48 ಟಿಎಂಸಿ ಅಡಿ ನೀರಿನ ಸಂಗ್ರಹ ಇದೆ.
ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್ ಅತ್ಯಧಿಕ ಮಳೆ ಸುರಿಯುವ ತಿಂಗಳು ಎಂಬುದು ಈಗಾಗಲೇ ತಿಳಿದ ವಿಷಯವಾಗಿದ್ದು, ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಅಧಿಕ ನೀರು ಹರಿದುಬರಲಿದೆ. ಈ ಬಾರಿ ಗರಿಷ್ಠ ಮಟ್ಟದಲ್ಲಿ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳದೆ ಇರಲು ನಿರ್ಧರಿಸಿರುವುದರಿಂದ ಕೆಲವೇ ದಿನಗಳಲ್ಲಿ ಕ್ರಸ್ಟ್‌ಗೇಟ್ ಮೇಲಕ್ಕೆತ್ತಿ ಹೆಚ್ಚುವರಿ ನೀರನ್ನು ನದಿಗ ಹರಿಸುವ ಸಾಧ್ಯತೆ ದಟ್ಟವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.