ADVERTISEMENT

ತಿಕೋಟಾ: ಮಿಶ್ರ ಬೇಸಾಯದಲ್ಲಿ ಉತ್ತಮ ಆದಾಯ

ಪರಮೇಶ್ವರ ಎಸ್.ಜಿ.
Published 20 ಡಿಸೆಂಬರ್ 2024, 5:34 IST
Last Updated 20 ಡಿಸೆಂಬರ್ 2024, 5:34 IST
ತಿಕೋಟಾ ತಾಲ್ಲೂಕಿನ ಸಿದ್ದಾಪುರ(ಅ) ಗ್ರಾಮದ ರೈತ ಸಿದ್ದಣ್ಣಾ ಸಕ್ರಿ ತಾವು ಬೆಳೆದ ಡಬ್ಬು ಮೆಣಸಿನಕಾಯಿ ಮಾರಾಟಕ್ಕೆ ಸಜ್ಜುಗೊಳಿಸುತ್ತಿರುವುದು
ತಿಕೋಟಾ ತಾಲ್ಲೂಕಿನ ಸಿದ್ದಾಪುರ(ಅ) ಗ್ರಾಮದ ರೈತ ಸಿದ್ದಣ್ಣಾ ಸಕ್ರಿ ತಾವು ಬೆಳೆದ ಡಬ್ಬು ಮೆಣಸಿನಕಾಯಿ ಮಾರಾಟಕ್ಕೆ ಸಜ್ಜುಗೊಳಿಸುತ್ತಿರುವುದು   

ತಿಕೋಟಾ: ಇಲ್ಲೊಬ್ಬ ರೈತ ತನ್ನ ಇಳಿ ವಯಸ್ಸಿನಲ್ಲೂ ತನ್ನ ಐವತೈದು ಎಕರೆ ಜಮೀನಿನಲ್ಲಿ ವಿವಿಧ ಮಿಶ್ರ ಬೆಳೆ ಬೆಳೆದು ವರ್ಷಕ್ಕೆ ₹ 50 ಲಕ್ಷ ಆದಾಯ ಗಿಟ್ಟಿಸಿಕೊಂಡು ಖರ್ಚು ಕಳೆದು ₹ 25 ಲಕ್ಷದವರೆಗೆ ಲಾಭಾಂಶ ಪಡೆದು ಯುವ ಪೀಳಿಗೆಗೆ ಮಾದರಿ ಕೃಷಿಕರಾಗಿದ್ದಾರೆ.

ತಾಲ್ಲೂಕಿನ ಸಿದ್ದಾಪುರ (ಅ) ಗ್ರಾಮದ ಸಿದ್ದಣ್ಣ ಸಕ್ರಿ ಎಂಬ ರೈತನ ಯಶೋಗಾಥೆ ಇದು. ಎಂಟು ಎಕರೆ ದ್ರಾಕ್ಷಿ, ಆರು ಎಕರೆ ಜೋಳ, ಎಂಟು ಎಕರೆ ಮೆಕ್ಕೆಜೋಳ, ಒಂಬತ್ತು ಎಕರೆ ಕಡ್ಲಿ, ಎರಡು ಎಕರೆ ಗೋಧಿ, ಮೂರು ಎಕರೆ ಕಬ್ಬು ವಿಶಾಲವಾದ ತೋಟದಲ್ಲಿ ಹಚ್ಚ ಹಸಿರಾಗಿ ಮೈದುಂಬಿ ಬೆಳೆದು ನಿಂತಿದೆ.

ವರ್ಷಪೂರ್ತಿ ಕಾಯಿಪಲ್ಯೆ ಬೆಳೆ: ಪ್ರತಿ ವಾರ ಆದಾಯ ಕೈ ಸೇರುವಂತೆ ಒಂದರ ನಂತರ ಒಂದು ಕಾಯಿಪಲ್ಯೆ ಬೆಳೆಯುತ್ತಾ ಸ್ಥಳೀಯ ಎಪಿಎಂಸಿಗೆ ಮಾರಾಟ ಮಾಡುತ್ತಿದ್ದಾರೆ.

ADVERTISEMENT

ಒಂದು ಎಕರೆ ಜಮೀನಿನಲ್ಲಿ ₹ 1 ಲಕ್ಷ ಖರ್ಚು ಮಾಡಿ ಡಬ್ಬು ಮೆಣಸಿನಕಾಯಿ ಸಸಿ ನಾಟಿ ಮಾಡಿ ₹4.5 ಲಕ್ಷ ಆದಾಯ ಪಡೆದು ₹ 3.5 ಲಕ್ಷ ಲಾಭಾಂಶ ಪಡೆದಿದ್ದಾರೆ. ಬ್ಯಾಡಗಿ ಮೆಣಸಿಕಾಯಿ ಬೆಳೆಯಲು ₹ 50 ಸಾವಿರ ಖರ್ಚು ಮಾಡಿ ₹ 2 ಲಕ್ಷ ಆದಾಯ ಪಡೆದಿದ್ದಾರೆ. ಒಂದು ಎಕರೆ ಜಮೀನಿನಲ್ಲಿ ₹ 20 ಸಾವಿರ ಖರ್ಚು ಮಾಡಿ ಟೊಮೆಟೊ ಸಸಿ ನಾಟಿ ಮಾಡಿ ₹ 1ಲಕ್ಷ ಆದಾಯ ಪಡೆದು ₹ 80 ಸಾವಿರ ಲಾಭಾಂಶ ಪಡೆದಿದ್ದಾರೆ.

‘ಎಲ್ಲ ಕಾಯಿಪಲ್ಯೆ ಬೆಳೆಗಳಿಗೆ ಕೀಟಗಳ ತೊಂದರೆ ತಪ್ಪಿಸಲು ಅಲ್ಲಲ್ಲಿ ಚಂಡು ಹೂವಿನ ಸಸಿ ನಾಟಿ ಮಾಡಿದ್ದಾರೆ. ಇದರಿಂದ ಕೀಟಗಳು ಕಾಯಿಪಲ್ಲೆಯ ಮೇಲೆ ಕೂಡದೇ ಹೂವಿನ ಮೇಲೆ ಕುಳಿತು ನಾಶವಾಗುತ್ತವೆ ಎಂದು ಈ ಉಪಾಯ ಮಾಡಿದ್ದೇನೆ. ಇಲ್ಲಿ ಬೆಳೆದ ಚಂಡು ಹೂವಿನಿಂದಲೂ ₹ 50 ಸಾವಿರ ಆದಾಯ ಪಡೆದಿದ್ದೇನೆ’ ಎಂದು ರೈತ ಸಿದ್ದಣ್ಣ ಸಕ್ರಿ ‘ಪ್ರಜಾವಾಣಿ’ಗೆ ವಿವರಿಸಿದರು.

ಸದ್ಯ ಹೊಸದಾಗಿ ಒಂದು ಎಕರೆ ಬೆಂಡೆ ನಾಟಿ ಮಾಡಿದ್ದು ₹ 25 ಸಾವಿರ ಖರ್ಚು ಮಾಡಿದ್ದಾರೆ. ₹2 ಲಕ್ಷ ಆದಾಯ ಬರುವ ನಿರೀಕ್ಷೆ ಇದೆ. ಒಂದು ಎಕರೆ ಬದನೆ ₹ 50 ಸಾವಿರ ಖರ್ಚು ಮಾಡಿದ್ದು, ₹ 3 ಲಕ್ಷ ಆದಾಯ ಬರುವ ನಿರೀಕ್ಷೆ ಇದೆ. ಕಬ್ಬು ಮೂರು ಎಕರೆ ಇದ್ದು ₹ 5 ಲಕ್ಷ ಆದಾಯದ ನಿರೀಕ್ಷೆ ಇದೆ. ದ್ರಾಕ್ಷಿ ಎಂಟು ಎಕರೆ ಇದ್ದು ಪ್ರತಿ ವರ್ಷ ₹ 30 ಲಕ್ಷ ಆದಾಯ ಇದ್ದು ₹ 15 ಲಕ್ಷ ಖರ್ಚು ತೆಗೆದು ₹ 15 ಲಕ್ಷ ಲಾಭಾಂಶವಾಗಬಹುದು. ಕೋತಂಬರಿ, ಮೆಂತಿ, ಸಬಸಗಿ, ರಾಜಗಿರಿ ಪಲ್ಯೆ ಸಹ ಬೆಳೆದು ವರ್ಷಕ್ಕೆ ₹ 2 ಲಕ್ಷ ಪಡೆಯುತ್ತಿದ್ದೇನೆ ಎನ್ನುತ್ತಾರೆ ಸಕ್ರಿ ಕಾಕಾ.

ಐದಾರು ಕೂಲಿಕಾರರ ಬಳಸಿಕೊಂಡು ಕೃಷಿ ಮಾಡುವ ಇವರು ನಗರದ ಎಪಿಎಂಸಿ ಮಾರುಕಟ್ಟೆಗೆ ವಿವಿಧ ತರಕಾರಿಯನ್ನು ಟಂಟಂ ಮೂಲಕ ಎರಡು ದಿನಕ್ಕೊಮ್ಮೆ ಮಾರಾಟ ಮಾಡಿದಾಗ ₹ 20 ಸಾವಿರ ಆದಾಯ ಬರುತ್ತದೆ.

ಆಡು ಸಾಕಾಣಿಕೆ: ಶೆಡ್ ನಿರ್ಮಾಣ ಮಾಡಿ ಪ್ರಾಣಿ ಸಾಕಾಣಿಕೆಗೂ ಸೈ ಎಂದರಿರುವ ಸಕ್ರಿ ಕಾಕಾ ಅವರು 100 ಆಡು ಸಾಕಿದ್ದಾರೆ. ಪ್ರತಿ ವರ್ಷ 120ಕ್ಕೂ ಹೆಚ್ಚು ಮರಿ ಮಾರಾಟ ಮಾಡಿ, ಅದರಿಂದ ₹ 7 ಲಕ್ಷದವರೆಗೆ ಆದಾಯ ನಿರೀಕ್ಷೆಯಲ್ಲಿದ್ದಾರೆ. ಇದರಿಂದ ಬೆಳೆಗಳಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಗೊಬ್ಬರ ಉತ್ಪತ್ತಿಯಾಗುತ್ತದೆ. ಮನೆಗೆ ಬೇಕಾದ ಹೈನುಗಾರಿಕೆಯನ್ನು ಇವರು ಹೊಂದಿದ್ದಾರೆ.

‘ಇಷ್ಟೊಂದು ಸಂಪದ್ಭರಿತ ಫಲ ದೊರೆಯಲು ಸಚಿವ ಎಂ.ಬಿ.ಪಾಟೀಲ ಅವರು ಈ ಭಾಗಕ್ಕೆ ಮಾಡಿದ ನೀರಾವರಿ ಯೋಜನೆಗಳಿಂದ ಅಂತರ್ಜಲ ಹೆಚ್ಚಾಗಿ ನಾವು ಲಕ್ಷಾಂತರ ಆದಾಯ ಪಡೆಯಲು ಸಹಕಾರಿಯಾಗಿದೆ’ ಎಂದು ತಿಳಿಸಿದರು.

ಪ್ರತಿ ವರ್ಷ ಎಲ್ಲ ಮೂಲಗಳಿಂದ ಉತ್ತಮ ಲಾಭಾಂಶ ಬರುತ್ತಿದ್ದು ದ್ರಾಕ್ಷಿಗಿಂತ ಕಾಯಿಪಲ್ಯೆ ಮಾಡಿದರೆ ಉತ್ತಮ ಆದಾಯ ಪಡೆಯಬಹುದು
–ಸಿದ್ದಣ್ಣಾ ಸಕ್ರಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.