
ಬಸವನಬಾಗೇವಾಡಿ: ‘ವಿದ್ಯಾರ್ಥಿಗಳ ವರ್ಷಪೂರ್ತಿ ಪಠ್ಯ ಹಾಗೂ ಪಠ್ಯೇತರ ಸಾಧನೆಗಳ ಸಂಭ್ರಮವೇ ವಾರ್ಷಿಕ ಸ್ನೇಹ ಸಮ್ಮಿಲನ. ಈ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಎಲ್ಲಾ ರಂಗದಲ್ಲೂ ಸಾಧನೆ ತೋರಲು ಶಿಸ್ತು, ಆತ್ಮವಿಶ್ವಾಸ ಅತ್ಯಗತ್ಯ’ ಎಂದು ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗುರುನಾಥ ದಡ್ಡೆ ಹೇಳಿದರು.
ಪಟ್ಟಣದ ಬಸವೇಶ್ವರ ಅಂತರರಾಷ್ಟ್ರೀಯ ಶಾಲಾವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಶ್ರೀ ಬಸವೇಶ್ವರ ದೇವಾಲಯ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕ ಸ್ನೇಹ ಸಮ್ಮಿಲನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಮಕ್ಕಳ ಆಸಕ್ತಿ, ಅಭಿರುಚಿಯನ್ನು ಪೋಷಕರು ಪ್ರೋತ್ಸಾಹಿಸಬೇಕು. ಇಂಗ್ಲಿಷ್ ಮಾಧ್ಯಮ ಹಾವಳಿಯಲ್ಲೂ ಪ್ರಾಧಿಕಾರದ ಈ ಕನ್ನಡ ಶಾಲೆಯಲ್ಲಿ 450ಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿರುವುದು ಹೆಮ್ಮೆಯ ಸಂಗತಿ’ ಎಂದರು.
ಶಿಕ್ಷಣ ಸಂಯೋಜಕಿ ಎ.ಎಸ್.ಗುಬ್ಬಾ ಅವರು ಮಾತನಾಡಿ, ಇಂಗ್ಲಿಷ್ ಮಾಧ್ಯಮದ ವ್ಯಾಮೋಹದ ನಡುವೆಯೂ ಕೇವಲ 11 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಬಸವೇಶ್ವರ ದೇವಾಲಯದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯೂ ಆಡಳಿತ ಮಂಡಳಿ, ಶಿಕ್ಷಕರ ಪರಿಶ್ರಮದಿಂದ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಂಡಿದೆ’ ಎಂದು ಶ್ಲಾಘಿಸಿದರು. ರಾಜ್ಯ ಸಹಕಾರಿ ಮಹಾಮಂಡಲದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅನಿಲ ಅಗರವಾಲ ಅವರು ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಎಸ್‌ಡಿಎಂಸಿ ಉಪಾಧ್ಯಕ್ಷ ಶಿವಶರಣಪ್ಪ ಝಳಕಿ, ಸದಸ್ಯರಾದ ಮಹಾಂತೇಶ ಆದಿಗೊಂಡ, ಸುರೇಶಗೌಡ ಪಾಟೀಲ, ಸದಾನಂದ ಯಳಮೇಲಿ, ಸಚಿನ ಬಾಗೇವಾಡಿ, ಸೋಮನಾಥ ಪಾಟೀಲ, ಶಬ್ಬೀರಹ್ಮದ್ ನದಾಫ್, ಶೈಲಶ್ರೀ ತೇರದಾಳಮಠ, ಪ್ರಭಾವತಿ ರಾಯಗೊಂಡ, ಲಕ್ಷ್ಮೀ ಮಾಲಗಾರ, ಬೇಬಿ ಗಣಾಚಾರಿ, ಮೀನಾಕ್ಷಿ ಮೋದಿ, ಶೋಭಾ ಚಿಕ್ಕೊಂಡ ಹಾಗೂ ಮುಖ್ಯಶಿಕ್ಷಕ ವೈ.ಎಸ್.ಮಿಣಜಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.