
ಇಂಡಿ: ಕರ್ನಾಟಕದ ಇಂಡಿ, ಚಡಚಣ, ಆಲಮೇಲ, ತಾಲ್ಲೂಕುಗಳಿಗೆ ಅಂಟಿಕೊಂಡು ಹರಿದಿರುವ ಭೀಮಾ ತೀರ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯಲ್ಲಿ ಸುಮಾರು 90 ಕಿ.ಮೀ ಗಡಿ ಹಂಚಿಕೊಂಡಿದೆ. ಈ ಗಡಿ ಭಾಗದಲ್ಲಿ ಭೀಮಾ ನದಿಗೆ ಎರಡು ದಶಕಗಳ ಹಿಂದೆ ಬ್ಯಾರೇಜ್ ನಿರ್ಮಾಣ ಮಾಡಲಾಗಿತ್ತು. ಈಗ ಅವುಗಳು ದುಃಸ್ಥಿತಿಯತ್ತ ಸಾಗಿದ್ದು, ಸಂಬಂಧಿಸಿದವರು ಗಮನಹರಿಸಬೇಕಾಗಿದೆ.
ಭೀಮಾ ನದಿ ನೀರು ವ್ಯರ್ಥ್ಯವಾಗಿ ಹರಿದು ಹೋಗಬಾರದು ಎಂದು 2021–22ರಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರ ತಲಾ 4ರಂತೆ ಒಟ್ಟು 8 ಬ್ಯಾರೇಜ್‌ಗಳನ್ನು ಅಂದಿನ ಶಾಸಕರ ವಿಶೇಷ ಪ್ರಯತ್ನದಿಂದ ನಿರ್ಮಾಣ ಮಾಡಲಾಗಿತ್ತು.
ತೀವ್ರ ಬರ ಮತ್ತು ಬಿಸಿಲಿನಿಂದ ಬಳಲುತ್ತಿದ್ದ ಇಲ್ಲಿನ ಜನ–ಜಾನುವಾರುಗಳ ದಾಹ ತಣಿಸಲು ಈ ಬ್ಯಾರೇಜ್‌ಗಳು ಅನೇಕ ರೀತಿ ಸಹಾಯಕವಾಗಿದ್ದವು.
ಈ ಬ್ಯಾರೇಜ್ ಗಳು ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಮಧ್ಯೆ ಕರ್ನಾಟಕದ ಅನುದಾನದಲ್ಲಿ ಗೋವಿಂದಪೂರ-ಬಂಡಾರಕವಟೆ, ಉಮರಾಣಿ-ಲವಗಿ, ಭುಯ್ಯಾರ-ಬರೂರ, ಹಿಂಗಣಿ-ಆಳಗಿ ಬ್ಯಾರೇಜ್ ನಿರ್ಮಿಸಿದರೆ, ಮಹಾರಾಷ್ಟ್ರ ಸರ್ಕಾರದಿಂದ ಶಿರನಾಳ-ಔಜ್, ಧೂಳಖೇಡ-ಚಿತಪೂರ, ಗುಬ್ಬೇವಾಡ -ಹಿಳ್ಳಿ, ಪಡನೂರ-ಖಾನಾಪೂರ ಹೀಗೆ ಒಟ್ಟು 8 (ಬಾಂದಾರ) ಗಳನ್ನು ಕಟ್ಟಲಾಗಿದೆ.
ಇವುಗಳಲ್ಲಿ ಎರಡೂ ರಾಜ್ಯಗಳು ತಲಾ 4 ಬ್ಯಾರೇಜುಗಳನ್ನು ರಕ್ಷಣೆ ಮಾಡಬೇಕು. 25 ವರ್ಷಗಳ ಹಿಂದೆ ಇವುಗಳಿಗೆ ಒಂದೊಂದು ಬ್ಯಾರೇಜ್ ಕಟ್ಟಲು ₹ 7.75 ಕೋಟಿ ಹೀಗೆ ಒಟ್ಟು ಕರ್ನಾಟಕದಿಂದ ₹ 31 ಕೋಟಿ, ಮಹಾರಾಷ್ಟ್ರ ಸರ್ಕಾರದಿಂದ ₹ 31 ಕೋಟಿ ಖರ್ಚಾಗಿದೆ.
ಇವು ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಭೀಮಾ ನದಿಗೆ ಬಂದಿದ್ದ ಪ್ರವಾಹದಿಂದ ಬ್ಯಾರೇಜ್ ಗೇಟ್ ಗಳು ಹಾಳಾಗಿವೆ.
ಇವುಗಳ ಮೂಲಕ ಪ್ರತಿನಿತ್ಯ ಸಾಗುವ ವಾಹನ ಸವಾರರು, ರೈತರಿಗೆ ಅತೀವ್ರ ತೊಂದರೆಯಾಯಿತು. ಗೇಟ್ ಹಾಳಾಗಿದ್ದರಿಂದ ನೀರು ಹರಿದು ಹೋಯಿತು. ಇದರಿಂದ ಬೇಸಿಗೆಯಲ್ಲಿ ಕುಡಿಯುವ ನೀರು ಸೇರಿದಂತೆ ತೀವ್ರ ಅಭಾವ ಕಾಡುತ್ತದೆ ಎಂದು ಜನರು ಚಿಂತಿತರಾಗಿದ್ದಾರೆ.
ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ಯಾರೇಜ್‌ಗಳನ್ನು ಈ ಕೂಡಲೇ ರಿಪೇರಿ ಮಾಡಿಸಿ, ಅದರಲ್ಲಿ ನೀರು ನಿಲ್ಲುವಂತೆ ಮಾಡಬೇಕು
ಮಹಾದೇವ ಬರಗಾಲಿ, ಶಿವಪುತ್ರಪ್ಪ ಬಿರಾದಾರ, ಸಂಗಮೇಶ ಪಾಟೀಲ, ಅಲ್ಲಾಸಾಬ ಮುಲ್ಲಾ, ರೈತರು
ಹಿಂಗಣಿ-ಆಳಗಿ ಭುಯ್ಯಾರ -ಬರೂರ ಮಧ್ಯದಲ್ಲಿ ಬ್ಯಾರೇಜುಗಳ ದುರಸ್ತಿಗೆ ಸರ್ಕಾರ ಒಟ್ಟು ₹ 5 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಶೀಘ್ರ ಕೆಲಸ ಆರಂಭಿಸಲಾಗುವುದುಯಶವಂತರಾಯಗೌಡ ಪಾಟೀಲ ಶಾಸಕ
ಗೋವಿಂದಪೂರ-ಬಂಡಾರಕವಟೆ ಮತ್ತು ಉಮರಾಣಿ-ಲವಗಿ ಗ್ರಾಮಗಳ ಮಧ್ಯದಲ್ಲಿ ನಿರ್ಮಿಸಿದ ಬಾಂದಾರಗಳ ದುರಸ್ತಿಗೆ ನಾಗಠಾಣ ಶಾಸಕರು ಅನುದಾನ ಬಿಡುಗಡೆ ಮಾಡಿಸಬೇಕುಪಿ.ಜಿ.ಪ್ಯಾಟಿ ಅಧ್ಯಕ್ಷ ಹಿಂಗಣಿ ಪಂಚಾಯಿತಿ
ಕರ್ನಾಟಕಕ್ಕೆ ಸಂಬಂಧಪಟ್ಟ ಇನ್ನಿತರ 2 ಬ್ಯಾರೇಜುಗಳ ದುರಸ್ತಿಗಾಗಿ ಅಂದಾಜು ಪತ್ರಿಕೆ ಸಿದ್ದಗೊಳಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣವೇ ದುರಸ್ತಿ ಕಾರ್ಯ ಕೈಗೊಳ್ಲಲಾಗುವದುಸಂದೀಪ ಎಇಇ ಸಣ್ಣ ನೀರಾವರಿ ಇಲಾಖೆ
ಈ ಎಲ್ಲಾ ಬ್ಯಾರೇಜ್ ಗಳಿಂದ (ಪ್ರತೀ ಬ್ಯಾರೇಜ್ ) ನಿಂದ 8 ರಿಂದ 10 ಗ್ರಾಮಗಳ ಜನ ಜಾನುವಾರುಗಳಿಗೆ ಕುಡಿಯುವ ನೀರು ಅಲ್ಲದೇ ಪ್ರತೀ ಗ್ರಾಮಗಳ 800 ಹೆಕ್ಟರ್ ಪ್ರದೇಶಗಳಿಗೆ ಅಂದರೆ ಒಟ್ಟು ಸುಮಾರು 8000 ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಒದಗಿಸಿವೆ. ಈ ಬ್ಯಾರೇಜ್ ಗಳು ನೀರಾವರಿ ಒದಗಿಸಿದ್ದಲ್ಲದೇ ಎರಡೂ ರಾಜ್ಯಗಳಿಗೆ ಸಂಪರ್ಕ ಕೂಡಾ ಕಲ್ಪಿಸಿವೆ. ಬೈಕ್ ಕಾರು ಚಿಕ್ಕ ಚಿಕ್ಕ ಸರಕು ವಾಹನಗಳು ನಿತ್ಯ ಸಂಚರಿಸುತ್ತವೆ. ಇದರಿಂದ ಎರಡೂ ರಾಜ್ಯಗಳ ವ್ಯಾಪಾರ ವಹಿವಾಟು ಹೆಚ್ಚಾಗಿದೆ. ಆದರೆ ಕಳೆದ 25 ವರ್ಷಗಳ ಹಿಂದೆ ನಿರ್ಮಿಸಿದ ಈ ಬ್ಯಾರೇಜುಗಳ ಗೇಟ್ ಗಳು ಕೊಳೆತು ಹಾಳಾಗಿವೆ. ಕಳೆದ ನಾಲ್ಕಾರು ವರ್ಷಗಳಿಂದ ಬ್ಯಾರೇಜುಗಳಲ್ಲಿ ನೀರು ನಿಲ್ಲುತ್ತಿಲ್ಲ. ಮಹಾರಾಷ್ಟ್ರ ರಾಜ್ಯದ ಉಜನಿ ಜಲಾಶಯದಿಂದ ಬೇಸಿಗೆಯಲ್ಲಿ ಭೀಮಾ ನದಿಗೆ ಹರಿಬಿಡುವ ನೀರು ಕೆಲವೇ ದಿವಸಗಳಲ್ಲಿ ಬ್ಯಾರೇಜಿನಿಂದ ನೀರು ಹರಿದು ಹೋಗುತ್ತಿವೆ. ಇದರಿಂದ ಬ್ಯಾರೇಜ್ ಗಳ ಮೂಲ ಉದ್ದೇಶ ಈಡೇರುತ್ತಿಲ್ಲ. ಕಾರಣ ಎರಡೂ ಸರ್ಕಾರಗಳು ಈ ಬಗ್ಗೆ ಗಮನ ಹರಿಸಿ. ಬ್ಯಾರೇಜುಗಳಿಗೆ ಹೊಸ ಗೇಟ್ ಗಳನ್ನು ಅಳವಡಿಸಿ ರಸ್ತೆ ರಿಪೇರಿ ಮತ್ತು ಎರಡೂ ಬದಿಗೆ ಕೊರೆದಿರುವದನ್ನು ರಿಪೇರಿ ಮಾಡಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.