ADVERTISEMENT

ಅಧಿಕಾರಿಗಳ ಜತೆ ಸಭೆ ನಡೆಸಿ ಮಾಹಿತಿ ಪಡೆದ ಸಚಿವ ಡಿಕೆಶಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2018, 17:36 IST
Last Updated 23 ಜೂನ್ 2018, 17:36 IST
ಆಲಮಟ್ಟಿಯಲ್ಲಿ ಶನಿವಾರ ತಡರಾತ್ರಿ ಅಧಿಕಾರಿಳ ಸಭೆಯನ್ನು ಸಚಿವ ಡಿ.ಕೆ. ಶಿವಕುಮಾರ ನಡೆಸಿದರು
ಆಲಮಟ್ಟಿಯಲ್ಲಿ ಶನಿವಾರ ತಡರಾತ್ರಿ ಅಧಿಕಾರಿಳ ಸಭೆಯನ್ನು ಸಚಿವ ಡಿ.ಕೆ. ಶಿವಕುಮಾರ ನಡೆಸಿದರು   

ಆಲಮಟ್ಟಿ: ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಆಲಮಟ್ಟಿಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ ಶನಿವಾರ ತಡರಾತ್ರಿಯವರೆಗೂ ಕೆಬಿಜೆಎನ್ಎಲ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದರು.
ರಾತ್ರಿ 9 ಕ್ಕೆ ಸಭೆ ಆರಂಭಗೊಂಡ ಸಭೆ ತಡರಾತ್ರಿಯವರೆಗೂ ಜರುಗಿತು.


ರಾಜ್ಯದ ಬೃಹತ್ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆಯ ಪ್ರತಿಯೊಂದು ನೀರಾವರಿ ಯೋಜನೆಗಳು, ಪುನರ್ವಸತಿ, ಭೂಸ್ವಾಧೀನ ಪ್ರಕ್ರಿಯೆಯ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು.
ಆಲಮಟ್ಟಿ ಜಲಾಶಯ ಸದ್ಯದ ಸ್ಥಿತಿಗತಿ, ಜಲಾಶಯವನ್ನು 524.256 ಮೀಗೆ ಎತ್ತರದಿಂದಾಗಿ ಸಂಗ್ರಹವಾಗುವ ನೀರು, ಅದಕ್ಕೆ ಸಂಬಂಧಿಸಿದ ನೀರಾವರಿ ಯೋಜನೆಗಳ ಮಾಹಿತಿ, ಭೂಸ್ವಾಧೀನ ಪ್ರಕ್ರಿಯೆ, ನೀರಾವರಿ ಯೋಜನೆಗಳ ಸದ್ಯದ ಸ್ಥಿತಿಗತಿ ಬಗ್ಗೆ ಕೆಬಿಜೆಎನ್ಎಲ್ ಎಂಡಿ ವಿ.ಶಂಕರ ಮಾಹಿತಿ ನೀಡಿದರು.


ಮರೋಳ ಹನಿ ನೀರಾವರಿ ಯೋಜನೆ, ಮುಳವಾಡ ಏತ ನೀರಾವರಿ ಯೋಜನೆ, ಚಿಮ್ಮಲಗಿ ಪೂರ್ವ ಮತ್ತು ಪಶ್ಚಿಮ ಕಾಲುವೆ ಸೇರಿದಂತೆ ಯುಕೆಪಿ ಮೂರನೇ ಹಂತದ ಕಾಮಗಾರಿಯ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದರು.
ಅತ್ಯಂತ ಶಾಂತಚಿತ್ತರಾಗಿ ಸಭೆಯಲ್ಲಿ ಪ್ರತಿ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಪುನರ್ವಸತಿ, ಪುನರ್ನಿರ್ಮಾಣ ಪ್ರಕ್ರಿಯೆಯಲ್ಲಿ ಉಂಟಾಗಿರುವ ಕಾನೂನು ತೊಡಕಿನ ಬಗ್ಗೆ ವಿಶೇಷವಾಗಿ ಆಲಿಸಿದರು. ಸರ್ಕಾರದ ಮಟ್ಟದಲ್ಲಿ ತುರ್ತು ಆಗಬೇಕಾದ ಕೆಲಸಗಳು, ಬೇಕಾದ ಅನುದಾನದ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ವಿವಿಧ ಮಾಹಿತಿಯನ್ನು ಸಚಿವರಿಗೆ ನೀಡುತ್ತಾ, ಸಮರ್ಪಕ ಕಾರ್ಯನಿರ್ವಹಿಸಿದ ಕೆಬಿಜೆಎನ್ಎಲ್‌ನ ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT


ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ), ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಹಲವು ಪುನರ್ವಸತಿ ಕೇಂದ್ರಗಳು ನಿರ್ಮಾಣಗೊಂಡು ಎರಡು ದಶಕ ಕಳೆದರೂ ಮೂಲಭೂತ ಸೌಕರ್ಯ ದೊರಕಿಲ್ಲ ಎಂದರು, ಅಲ್ಲದೇ ಮುಳುಗಡೆಯಾಗದ ಅಮರಗೋಳ, ಕುಂಚಗನೂರ,ಕಮಲದಿನ್ನಿ, ಗಂಗೂರ ಸೇರಿದಂತೆ ಇನ್ನೀತರ ಗ್ರಾಮಗಳ ಸುತ್ತಲೂ ನಾರಾಯಣಪುರ ಜಲಾಶಯದ ಹಿನ್ನೀರು ಆವರಿಸುತ್ತದೆ, ಇದರಿಂದ ರೋಗ ರುಜಿನ, ಜೀವ ಜಂತುಗಳ ಭಯದಿಂದ ಬದುಕು ಸಾಗುತ್ತದೆ, ಆಲಮಟ್ಟಿ ಎಡದಂಡೆ ಕಾಲುವೆ ನಿರ್ಮಾಣಗೊಂಡು 15 ವರ್ಷ ಕಳೆದಿವೆ, ಆದರೂ ಕಾಲುವೆಯ ತುತ್ತತುದಿಯ ಪ್ರದೇಶಕ್ಕೆ ನೀರು ಹರಿಯುತ್ತಿಲ್ಲ ಎಂದು ಆರೋಪಿಸಿದರು. ಅಧಿಕಾರಿಗಳಿಂದಲೂ ಈ ಬಗ್ಗೆ ಸಮರ್ಪಕ ಉತ್ತರ ದೊರೆಯಲಿಲ್ಲ.


ವಿಧಾನಪರಿಷತ್ ಸದಸ್ಯ ಹನುಮಂತ ನಿರಾಣಿ ನೇತೃತ್ವದಲ್ಲಿ ಮುಧೋಳ, ಬೀಳಗಿ ಭಾಗದ ರೈತರು, ಭೂಸ್ವಾಧೀನಗೊಂಡ ಜಮೀನಿಗೆ ಶೀಘ್ರವೇ ಪರಿಹಾರ ನಿಗದಿಮಾಡಬೇಕೆಂದು ಮನವಿ ಮಾಡಿದರು. ಐದು ವರ್ಷವಾದರೂ ಇನ್ನೂ ಜಮೀನಿಗೆ ಬೆಲೆ ನಿಗದಿಮಾಡಿಲ್ಲ, ಶೀಘ್ರವೇ ಬೆಲೆ ನಿಗದಿ ಮಾಡಬೇಕೆಂದರು. ಕೆಬಿಜೆಎನ್ಎಲ್ ಮುಖ್ಯ ಎಂಜಿನಿಯರ್ ಎಸ್.ಎಚ್. ಮಂಜಪ್ಪ ಸೇರಿದಂತೆ ಇನ್ನೀತರ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.