
ಬಂಧನ
ವಿಜಯಪುರ: ಗೃಹಿಣಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಆರೋಪದ ಮೇರೆಗೆ ಆಕೆಯ ಗಂಡ, ಬಾವ, ಅತ್ತೆ, ಒರಗಿತ್ತಿ, ನಾದಿನಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಗಣೇಶ ಶಂಕರ ಕಾಲೊನಿಯ ನಿವಾಸಿಯಾಗಿದ್ದ ಸವಿತಾ ಎಂಬುವವರನ್ನು ಕೊಲೆ ಮಾಡಿದ ಆರೋಪದ ಮೇರೆಗೆ ಪತಿ ರಾಜಶೇಖರ ಶಿರಶ್ಯಾಡ, ಬಾವ ಶ್ರವಣಕುಮಾರ ಶಿರಶ್ಯಾಡ, ಜಯಶ್ರೀ ಶ್ರವಣಕುಮಾರ ಶಿರಶ್ಯಾಡ, ಕಮಲಾ ಶಿರಶ್ಯಾಡ ಅವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಸವಿತಾ ಅವರ ಮದುವೆ 8 ವರ್ಷಗಳ ಹಿಂದೆ ರಾಜಶೇಖರ ಶಿರಶ್ಯಾಡ ಜೊತೆ ಆಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಆರೋಪಿತರೆಲ್ಲರೂ ಮೃತಳ ಜೊತೆ ಆಗಾಗ ಸಣ್ಣ ಪುಟ್ಟ ಜಗಳ ಮಾಡುತ್ತಾ, ಮೇಲಿಂದ ಮೇಲೆ ದೈಹಿಕ ಮತ್ತು ಮಾನಸಿಕ ಕಿರಕುಳ ಕೊಡುತ್ತಾ ಬಂದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಳೆದ ಡಿಸೆಂಬರ್ 28 ರಂದು ಸವಿತಾಳ ಗಂಡ ರಾಜಶೇಖರ ಮೃತಳ ತವರು ಮನೆಗೆ ಫೋನ್ ಮಾಡಿ, ನಿಮ್ಮ ಮಗಳು ಚಕ್ರ ಬಂದು ಬಿದ್ದು, ಆಲ್ ಅಮೀನ್ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದೇವೆ. ನೀವು ಬನ್ನಿ ಎಂದು ತವರು ಮನೆಯವರೆಗೆ ತಿಳಿಸಿದ್ದನು. ತವರು ಮನೆಯವರು ಆಸ್ಪತ್ರೆಗೆ ಹೋಗಿ ನೋಡಿದಾಗ ಸವಿತಾ ಮರಣ ಹೊಂದಿದ್ದಳು. ಮೃತಳ ಕುತ್ತಿಗೆಯ ಮುಂಭಾಗದಲ್ಲಿ ಕಂದುಗಟ್ಟಿದ ಗಾಯವಾಗಿರುವ ಮಾರ್ಕ್ ಇದ್ದು, ಆರೋಪಿತರೆಲ್ಲರೂ ಕೂಡಿಕೊಂಡು ಕತ್ತು ಹಿಸುಕಿ ಅಥವಾ ಉರುಲು ಹಾಕಿ ಕೊಲೆ ಮಾಡಿರುತ್ತಾರೆ ಎಂದು ಸವಿತಾಳ ತಾಯಿ ಪೊಲೀಸರಿಗೆ ದೂರು ನೀಡಿದ್ದರು.
ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಆಧರಿಸಿ, ಪೊಲೀಸರು ತನಿಖೆ ನಡೆಸಿದಾಗ ಆರೋಪಿಗಳು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.