ADVERTISEMENT

ಪ್ರವಾದಿ ಅವಹೇಳನ: ಕಿಡಿಗೇಡಿ ಯತ್ನಾಳ ಬಂಧಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 13:42 IST
Last Updated 10 ಏಪ್ರಿಲ್ 2025, 13:42 IST
<div class="paragraphs"><p>ಬಸನಗೌಡ ಪಾಟೀಲ ಯತ್ನಾಳ</p></div>

ಬಸನಗೌಡ ಪಾಟೀಲ ಯತ್ನಾಳ

   

ವಿಜಯಪುರ: ‘ಪ್ರವಾದಿ ಮಹಮ್ಮದ್‌ ಪೈಗಂಬರ್‌ ಅವರನ್ನು ಅವಹೇಳನ ಮಾಡಿರುವ ಬಿಜೆಪಿ ಉಚ್ಚಾಟಿತ ಕಿಡಿಗೇಡಿ ಶಾಸಕ ಬಸನಗೌಡ ಪಾಟೀಲ ಅವರನ್ನು ಬಂಧಿಸಬೇಕು’ ಎಂದು ಮುಸ್ಲಿಂ ಮುಖಂಡರು ಆಗ್ರಹಿಸಿದರು.

ನಗರದಲ್ಲಿ ಗುರುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಸ್ಲಿಂ ಮುಖಂಡರಾದ ಅಬ್ದುಲ್ ಹಮೀದ್‌ ಮುಶ್ರೀಫ್‌, ಎಸ್‌.ಎಂ.ಪಾಟೀಲ ಗಣಿಹಾರ, ಮಹಮ್ಮದ್‌ ರಫೀಕ್‌ ಟಪಾಲ್‌, ಅಬ್ದುಲ್ ರಜಾಕ್ ಹೊರ್ತಿ, ಎಂ.ಸಿ.ಮುಲ್ಲಾ, ‘ಹಿಂದೂ–ಮುಸ್ಲಿಂ ಧರ್ಮೀಯರ ನಡುವೆ ದ್ವೇಷ ಬಿತ್ತುತ್ತಿರುವ, ಸಮಾಜದ ಶಾಂತಿ ಕದಡಲು ಯತ್ನಿಸುತ್ತಿರುವ ಯತ್ನಾಳ ವಿರುದ್ಧ ಕಾನೂನು ಕ್ರಮಕೈಗೊಳ್ಳದೇ ಹೋದರೆ ನಗರದಲ್ಲಿ ಮುಂದಾಗಬಹುದಾದ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆಯಾಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು. 

ADVERTISEMENT

‘ಯತ್ನಾಳ ಅವರು ಇದುವರೆಗೂ ಮುಸ್ಲಿಂ ಮುಖಂಡರು, ರಾಜ, ಮಹಾರಾಜರನ್ನು ಹೀನಾಯವಾಗಿ ನಿಂದಿಸಿದರೂ ಅದಕ್ಕೆ ಸಮಾಜದಿಂದ ಯಾರೂ ಉತ್ತರ ನೀಡಲು ಹೋಗದೇ ನಿರ್ಲಕ್ಷ್ಯ ಮಾಡಿದ್ದೇವೆ. ಆದರೆ, ಇದೀಗ ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ. ಪ್ರವಾದಿಗಾಗಿ ನಾವು ಜೀವ ಕೊಡಲು ಸಿದ್ಧರಿದ್ದೇವೆ, ಎಲ್ಲ ತ್ಯಾಗಕ್ಕೂ ಸಿದ್ಧರಾಗಿದ್ದೇವೆ ಎಂಬುದನ್ನು ಯತ್ನಾಳಗೆ ತಿಳಿಸಲು ಬಯಸುತ್ತೇವೆ’ ಎಂದರು. 

ಶೀಘ್ರ ರ‍್ಯಾಲಿ:

‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಪ್‌ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಏಪ್ರಿಲ್‌ 23 ಅಥವಾ 24ರಂದು ವಿಜಯಪುರ ನಗರದಲ್ಲಿ ಬೃಹತ್‌ ಪ್ರತಿಭಟನಾ ರ‍್ಯಾಲಿ ನಡೆಸಲು ಉದ್ದೇಶಿಸಲಾಗಿದೆ’ ಎಂದು ಮುಖಂಡರು ತಿಳಿಸಿದರು.

‘ಕೇಂದ್ರ ಬಿಜೆಪಿ ಸರ್ಕಾರ ಮುಸ್ಲಿಂ ಸಮಾಜವನ್ನು ಗುರಿಯಾಗಿಸಿ, ತೊಂದರೆ‌ ನೀಡಲು ವಕ್ಪ್ ತಿದ್ದುಪಡಿ ಮಸೂದೆ ಜಾರಿಗೆ ತಂದಿದೆ. ವಕ್ಪ್ ತಿದ್ದುಪಡಿ ಕಾಯ್ದೆ ಮೂಲಕ ಕೇಂದ್ರ ಸರ್ಕಾರ ಮುಸ್ಲಿಮರನ್ನು ಗೊಂದಲ, ಭಯ ಭೀತರನ್ನಾಗಿ ಮಾಡುತ್ತಿದೆ. ಕಾಯ್ದೆಯನ್ನು ರದ್ದುಗೊಳಿಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ’ ಎಂದು ಹೇಳಿದರು.

‘ವಕ್ಪ್ ತಿದ್ದುಪಡಿ ಕಾಯ್ದೆಯಿಂದ ಬಡ ಮುಸ್ಲಿಮರಿಗೆ ಅನುಕೂಲವಾಗಲಿದೆ ಎಂದು ಬಿಜೆಪಿಯವರು ಬಿಂಬಿಸುತ್ತಿದ್ದಾರೆ. ಆದರೆ, ಇದರ ಹಿಂದೆ ಕೋಮುವಾದ, ಜಾತಿವಾದ ಇದೆ’ ಎಂದು ಹೇಳಿದರು.

‘ಹೊನವಾಡದಲ್ಲಿ 16 ಸಾವಿರ ಎಕರೆ ರೈತರ ಆಸ್ತಿಯನ್ನು ವಕ್ಪ್ ಬೋರ್ಡ್‌ ವಶಪಡಿಸಿಕೊಂಡಿದೆ ಎಂದು ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸುಳ್ಳು ಹೇಳಿದ್ದಾರೆ’ ಎಂದು ಆರೋಪಿಸಿದರು.

ಮುಖಂಡರಾದ ಫಯಾಜ್ ಕಲಾದಗಿ, ಆಸಿಫ್ ವುಲ್ಲಾ ಖಾದ್ರಿ, ದಸ್ತಗೀರ ಸಾಲೊಟಗಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಸಮೀಕ್ಷೆ ಮಾಡಿಯೇ ಪಕ್ಷ ನನಗೆ ಟಿಕೆಟ್ ನೀಡಿತ್ತು. ನನ್ನ ಸೋಲಿಗೆ ಯತ್ನಾಳರ ಬೋಗಸ್ ಮತಗಳೇ ಕಾರಣ. ನಮ್ಮ ಯಾವ ನಾಯಕರು ಯತ್ನಾಳ ಜೊತೆ ಒಳಒಪ್ಪಂದ ಮಾಡಿಕೊಂಡಿಲ್ಲ. ನಾನು ಬಲಿಪಶುವಾಗಿಲ್ಲ ವಿಜುಗೌಡ ಆರೋಪ ಸುಳ್ಳು 
-ಅಬ್ದುಲ್ ಹಮೀದ್ ಮುಶ್ರೀಫ್ ಕಾಂಗ್ರೆಸ್‌ ಮುಖಂಡ  
ಬಸವಣ್ಣನವರ ತತ್ವ ಸಿದ್ಧಾಂತಗಳಿಗೆ ಹಾಗೂ ಲಿಂಗಾಯತ ಧರ್ಮಕ್ಕೆ ವ್ಯತಿರಿಕ್ತವಾಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಲಿಂಗಾಯತ ಸಮಾಜದಿಂದ ಹೊರಹಾಕಿದೆ ಸಮಾಜಕ್ಕೆ ಕ್ಷೇಮ
–ಎಸ್‌.ಎಂ.ಪಾಟೀಲ ಗಣಿಹಾರ ಕೆಪಿಸಿಸಿ ವಕ್ತಾರ
ಚಿಂಚೋಳಿಯಿಂದ 25 ಸಾವಿರ ಜನರನ್ನು ಕರೆತಂದು ಬೋಗಸ್‌ ಮತ ಹಾಕಿಸಿಕೊಂಡಿದ್ದಾರೆ. ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಬ್ಯಾಂಕ್ ಆರಂಭಿಸಿದ್ದಾರೆ. ‌ಹೀಗಾಗಿ ಯತ್ನಾಳ ವಿಜಯಪುರ ಶಾಸಕರಲ್ಲ ಚಿಂಚೋಳಿ ಶಾಸಕ
-ಎಂ.ಸಿ.ಮುಲ್ಲಾ ಮುಸ್ಲಿಂ ಮುಖಂಡ
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸರ್ಕಾರದ ಅನೇಕ ಆಸ್ತಿಯನ್ನು ಖಾಸಗಿಯವರಿಗೆ ಮಾರಾಟ ಮಾಡಿದೆ. ಇದೀಗ ವಕ್ಪ್ ಭೂಮಿಯನ್ನು ಲೂಟಿ ಮಾಡಲು ಹವಣಿಸುತ್ತಿದೆ. ಇದಕ್ಕೆ ನಮ್ಮ ವಿರೋಧ ಇದೆ.
–ಮಹಮ್ಮದ್‌ ರಫೀಕ್‌ ಟಪಾಲ್‌ ಕಾಂಗ್ರೆಸ್‌ ಮುಖಂಡ
ಮಹಮ್ಮದ್‌ ಪೈಗಂಬರ್ ಹೆಸರು ಯತ್ನಾಳ ಹೊಸಲು ಬಾಯಲ್ಲಿ ಎಂದಿಗೂ ಬರುವಂತಿಲ್ಲ ಇನ್ನೊಮ್ಮೆ ಏನಾದರೂ ಪ್ರವಾದಿಯರಿಗೆ ಅವಹೇಳನ ಮಾಡಿದರೆ ನಿಮ್ಮ ಮನೆವರೆಗೂ ಬರುತ್ತೇವೆ
–ಅಬ್ದುಲ್‌ ರಜಾಕ್‌ ಹೊರ್ತಿ ಕಾಂಗ್ರೆಸ್‌ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.