ADVERTISEMENT

ಹೊಸ ಸವಾಲು ಎದುರಿಸಲು ಪತ್ರಕರ್ತರು ಸನ್ನದ್ಧರಾಗಿ: ಸಚಿವ ಎಂ.ಬಿ.ಪಾಟೀಲ

ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 6:05 IST
Last Updated 20 ಜುಲೈ 2025, 6:05 IST
ವಿಜಯಪುರದ ಕಂದಗಲ್‌ ಹನುಮಂತರಾಯ ರಂಗ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಿದರು. ಸಚಿವ ಶಿವಾನಂದ ಪಾಟೀಲ ಇದ್ದಾರೆ
ವಿಜಯಪುರದ ಕಂದಗಲ್‌ ಹನುಮಂತರಾಯ ರಂಗ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಿದರು. ಸಚಿವ ಶಿವಾನಂದ ಪಾಟೀಲ ಇದ್ದಾರೆ   

ವಿಜಯಪುರ: ‘ಪತ್ರಕರ್ತರು ಹೊಸ ಸವಾಲು ಎದುರಿಸಲು ಸನ್ನದ್ಧರಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪತ್ರಿಕೋದ್ಯಮ ಕ್ಷೇತ್ರಕ್ಕೆ ವಿಜಯಪುರ ಜಿಲ್ಲೆಯ ಕೊಡುಗೆ ಅನನ್ಯವಾಗಿದೆ. ಫ.ಗು.ಹಳಕಟ್ಟಿ, ಮೊಹರೆ ಹನುಮಂತರಾಯರ ಕೊಡುಗೆ ಸ್ಮರಣೀಯ’ ಎಂದರು.

ADVERTISEMENT

‘ಬಿಎಲ್‌ಡಿಇ ಆಸ್ಪತ್ರೆಯಲ್ಲಿ 400ಕ್ಕೂ ಅಧಿಕ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ನೀಡಲಾಗಿದೆ. ಬಹಳಷ್ಟು ಜನ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ₹5 ಲಕ್ಷ ದೇಣಿಗೆ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ಸಚಿವ ಶಿವಾನಂದ ಪಾಟೀಲ ಮಾತನಾಡಿ, ‘ಜಿಲ್ಲೆಯ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ₹5 ಲಕ್ಷ ಧನ ಸಹಾಯ ಮಾಡುತ್ತೇನೆ. ಜಿಲ್ಲೆಯ ಪತ್ರಕರ್ತರಿಗೆ ನಿವೇಶನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ‘ಪತ್ರಕರ್ತರು ಮತ್ತು ಪೊಲೀಸರು ಘಟನೆ ಮತ್ತು ಸಮಯದ ಜೊತೆ ಕೆಲಸ ಮಾಡುತ್ತಿರುತ್ತೇವೆ. ಸಮಯದ ಜೊತೆ ಓಡುವ ನಮ್ಮ ವೃತ್ತಿಯಲ್ಲಿ ಅನೇಕ ಏರಿಳಿತ ಇರುತ್ತದೆ’ ಎಂದರು.

‘ವಿಜಯಪುರ ವೇಗವಾಗಿ ಬೆಳೆಯುತ್ತಿರುವ ನಗರ, ವ್ಯಾಪರ, ವಹಿವಾಟು ಹೆಚ್ಚಾಗಿವೆ, ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಹೆಚ್ಚಾಗಿದೆ, ಪರಿಣಾಮ ಅಪರಾಧ ಚಟುವಟಿಕೆಗಳು ಹೆಚ್ಚಾಗಿವೆ, ಇದನ್ನು ಎದುರಿಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ’ ಎಂದರು.

ಹಿರಿಯ ಪತ್ರಕರ್ತ ಗೋಪಾಲ ನಾಯಕ ಮಾತನಾಡಿ, ‘ಪತ್ರಿಕೋದ್ಯಮ ಇಂದು ವಿಶಾಲವಾಗಿ ಬೆಳೆದಿದೆ. ಗ್ರಾಮೀಣ ಪ್ರದೇಶದಲ್ಲೂ ಪತ್ರಿಕಾ ವರದಿಗಾರರು ಇದ್ದಾರೆ. ಪತ್ರಕರ್ತರು ಜನಮಿತ್ರರಾಗಿ ಕೆಲಸ ಮಾಡಬೇಕು’ ಎಂದರು.

‘ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಇಂದು ಎಷ್ಟೇ ಬರೆದರೂ ಯಾವುದೇ ಪರಿಣಾಮ ಆಗುತ್ತಿಲ್ಲ, ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

ಡಿ.ವೈ.ಎಸ್.ಪಿ. ಬಸವರಾಜ ಯಲಿಗಾರ, ಪಾಲಿಕೆ ಆಯುಕ್ತ‌ ವಿಜಯಕುಮಾರ ಮೆಕ್ಕಳಕಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಪ್ರಮುಖರಾದ ಭವಾನಿಸಿಂಗ್ ಠಾಕೂರ್, ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಬೆಣ್ಣೂರ, ಪತ್ರಕರ್ತರಾದ ಮೋಹನ ಕುಲಕರ್ಣಿ, ಮಹೇಶ ಶೆಟಗಾರ, ಗುರು ಲೋಕೋರೆ, ಇಂದುಶೇಖರ ಮಣ್ಣೂರ, ಅಶೋಕ ಯಡಹಳ್ಳಿ ಕೆ.ಕೆ. ಕುಲಕರ್ಣಿ, ಕೌಶಲ್ಯ ಪನಾಳಕರ ಇದ್ದರು.

ಇಂದು ಎಲ್ಲ ಕ್ಷೇತ್ರಗಳ ಜೊತೆ ಮಾಧ್ಯಮ ಕ್ಷೇತ್ರಕ್ಕೂ ಕೃತಕ ಬುದ್ಧಿಮತ್ತೆ(ಎಐ) ಆಗಮನವಾಗಿದ್ದು ಸಾಕಷ್ಟು ಬದಲಾವಣೆ ಆಗುತ್ತಿದೆ. ಇದರ ಬಗ್ಗೆ ಪತ್ರಕರ್ತರಿಗೆ ಅರಿವು ಬೇಕು
ಎಂ.ಬಿ.ಪಾಟೀಲ ಸಚಿವ 
ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ಸಮತೋಲದಿಂದ ಕೆಲಸ ಮಾಡಲು ನಾಲ್ಕನೇ ಅಂಗವಾಗಿ ಪತ್ರಿಕಾರಂಗ ಅಗತ್ಯ. ನಿಷ್ಠಾವಂತ ಪ್ರಾಮಾಣಿಕ ಪತ್ರಕರ್ತರ ಅಗತ್ಯ ಇದೆ 
ಶಿವಾನಂದ ಪಾಟೀಲ ಸಚಿವ

ಸುಳ್ಳು ಜೊಳ್ಳು ಪತ್ರಕರ್ತರಿಗೆ ಕಡಿವಾಣ ಅಗತ್ಯ:

ಸುಳ್ಳು ಜೊಳ್ಳು ಕ್ರಿಮಿನಲ್ ಪತ್ರಕರ್ತರ ಸಂಖ್ಯೆ ಹೆಚ್ಚಾಗಿದ್ದು ಅಂತವರಿಗೆ ಪತ್ರಕರ್ತರ ಸಂಘ ಕಡಿವಾಣ ಹಾಕಬೇಕಿದೆ. ಜೊತೆಗೆ ನೈಜ ಪತ್ರಕರ್ತರನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿಯೂ ಸಂಘಕ್ಕೆ ಇದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು. ಪತ್ರಿಕಾ ಮಾಧ್ಯಮ ಕ್ಷೇತ್ರದ ಗುಣಮಟ್ಟ ಮೌಲ್ಯ ಕುಸಿಯುತ್ತಿದೆ. ಪತ್ರಕರ್ತರು ತಮ್ಮನ್ನು ತಾವು ಆತ್ಮ ವಿಮರ್ಶೆಗೆ ಒಳಪಡಿಸಬೇಕಾಗಿದೆ  ನಮ್ಮಲ್ಲೇ ಎಚ್ಚರಿಕೆಗಳು ಇರಬೇಕು ನಮ್ಮಲ್ಲೇ ಒಬ್ಬ ನ್ಯಾಯಾಧೀಶ ಇರಬೇಕು ಎಂದರು. ಸುಳ್ಳು ಸುದ್ದಿಗಳ ಹಾವಳಿ ತಡೆಗೆ ರಾಜ್ಯ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ನಿಜವಾದ ಪತ್ರಕರ್ತರಿಗೆ ಸುಳ್ಳು ಸುದ್ದಿಗಳ ನಡುವೆ ನೈಜ ಸುದ್ದಿ ಹುಡುಕಿ ತೆಗೆದು ಪ್ರಕಣಿಸಬೇಕಾದ ಸವಾಲು ಇದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.