ADVERTISEMENT

ವಿಜಯಪುರ: ನಿರೀಕ್ಷೆಯಂತೆ ಹಾಲಿ, ಮಾಜಿ ಶಾಸಕರಿಗೆ ಕಾಂಗ್ರೆಸ್ ಮಣೆ

ಇಂಡಿ, ಬಬಲೇಶ್ವರ, ಬಸವನ ಬಾಗೇವಾಡಿ, ಮುದ್ದೇಬಿಹಾಳಕ್ಕೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆ

ಬಸವರಾಜ ಸಂಪಳ್ಳಿ
Published 25 ಮಾರ್ಚ್ 2023, 9:59 IST
Last Updated 25 ಮಾರ್ಚ್ 2023, 9:59 IST
ಯಶವಂತರಾಯಗೌಡ ಪಾಟೀಲ
ಯಶವಂತರಾಯಗೌಡ ಪಾಟೀಲ   

ವಿಜಯಪುರ: ನಿರೀಕ್ಷೆಯಂತೆ ಜಿಲ್ಲೆಯ ಮೂವರು ಹಾಲಿ ಶಾಸಕರಿಗೆ ಹಾಗೂ ಒಬ್ಬ ಮಾಜಿ ಶಾಸಕರಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಮಾಡಲಾಗಿದೆ. ಆಡಳಿತರೂಢ ಬಿಜೆಪಿಗಿಂತ ಮೊದಲೇ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸುವ ಮೂಲಕ ತೀವ್ರ ಪೈಪೋಟಿಗೆ ಕಾಂಗ್ರೆಸ್‌ ಸಜ್ಜಾಗಿದೆ.

ಬಬಲೇಶ್ವರ ಕ್ಷೇತ್ರಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಇಂಡಿಗೆ ಹಾಲಿ ಶಾಸಕ ಯಶವಂತರಾಯಗೌಡ ಪಾಟೀಲ, ಬಸವನ ಬಾಗೇವಾಡಿಯಿಂದ ಶಿವಾನಂದ ಪಾಟೀಲ ಅವರ ಮರು ಸ್ಪರ್ಧೆಗೆ ವೇದಿಕೆ ಅಂತಿಮವಾಗಿದೆ. ಜೊತೆಗೆ ಮುದ್ದೇಬಿಹಾಳ ಕ್ಷೇತ್ರಕ್ಕೆ ಮಾಜಿ ಸಚಿವ ಸಿ.ಎಸ್‌.ನಾಡಗೌಡ ಅವರಿಗೂ ಮೊದಲ ಹಂತದಲ್ಲೇ ಟಿಕೆಟ್‌ ನೀಡಿರುವುದು ವಿಶೇಷ.

ಇಂಡಿ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಹೊರತಾಗಿ ಯಾರೊಬ್ಬರೂ ಆಕಾಂಕ್ಷಿಗಳಿರಲಿಲ್ಲ. ಹೀಗಾಗಿ ಟಿಕೆಟ್‌ ಹಂಚಿಕೆ ವಿಷಯದಲ್ಲಿ ಯಾವುದೇ ಗೊಂದಲವಿಲ್ಲದೇ ಇರುವುದು ರಾಜಕೀಯವಾಗಿ ಅನುಕೂಲವಾಗಿದೆ.

ADVERTISEMENT

ಇಂಡಿ ಕಾಂಗ್ರೆಸ್‌ನಲ್ಲಿ ಸದ್ಯ ಯಾವುದೇ ಭಿನ್ನಮತವೂ ಇಲ್ಲದೇ ಇರುವುದರಿಂದ ಗೌಡರ ಚುನಾವಣೆಗೆ ಯಾವುದೇ ಅಡ್ಡಿ ಆತಂಕವಿಲ್ಲದೇ ಒಗ್ಗಟ್ಟಿನಿಂದ ಮುನ್ನೆಡೆದಿದೆ. ಅಲ್ಲದೇ, ಫೆಬ್ರುವರಿಯಲ್ಲಿ ನಡೆದ ‘ಜನಧ್ವನಿ’ ಯಾತ್ರೆಯಲ್ಲೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯಶವಂತರಾಯಗೌಡರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮತದಾರರಿಗೆ ಮನವಿ ಮಾಡಿದ್ದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲರಿಗೆ ಬಬಲೇಶ್ವರದಿಂದಲೇ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಈಗಾಗಲೇ ಎಂ.ಬಿ.ಪಾಟೀಲರು ಕ್ಷೇತ್ರದಲ್ಲಿ ಜನಧ್ವನಿ ಯಾತ್ರೆ, ರೈತ ಸಮಾವೇಶ, ಗೃಹಲಕ್ಷ್ಮಿ ಸಮಾವೇಶವನ್ನು ಆಯೋಜಿಸಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

ಶಾಸಕ ಶಿವಾನಂದ ಪಾಟೀಲರಿಗೆ ಹಾಲಿ ಪ್ರತಿನಿಧಿಸುತ್ತಿರುವ ಬಸವನ ಬಾಗೇವಾಡಿಯಿಂದಲೇ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ. ವಿಜಯಪುರ, ಬಬಲೇಶ್ವರ ಮತ್ತ ಬಸವನ ಬಾಗೇವಾಡಿ ಸೇರಿದಂತೆ ಮೂರರಲ್ಲಿ ಯಾವುದಾದರು ಒಂದು ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ಕಲ್ಪಿಸುವಂತೆ ಅರ್ಜಿ ಸಲ್ಲಿಸಿದ್ದರು.

ಮಾಜಿ ಸಚಿವ ಸಿ.ಎಸ್‌.ನಾಡಗೌಡ ಅವರಿಗೆ ಮುದ್ದೇಬಿಹಾಳದಿಂದ ಸ್ಪರ್ಧಿಸಲು ಟಿಕೆಟ್‌ ನೀಡಲಾಗಿದೆ. ಕಳೆದ ತಿಂಗಳು ನಡೆದಿದ್ದ ‘ಪ್ರಜಾಧ್ವನಿ’ ಯಾತ್ರೆ ವೇಳೆ ಸಿದ್ದರಾಮಯ್ಯ ಅವರು ಸಿ.ಎಸ್‌.ನಾಡಗೌಡರ ಪರ ಮತಯಾಚಿಸಿದ್ದರು. ಕ್ಷೇತ್ರದ ಕಾಂಗ್ರೆಸ್‌ನ ಇನ್ನೊಬ್ಬ ಪ್ರಭಾವಿ ಮುಖಂಡ ಮಲ್ಲಿಕಾರ್ಜುನ ಮದರಿ ಅವರು ಈ ಸಂಬಂಧ ಮುನಿಸಿಕೊಂಡಿದ್ದು, ಟಿಕೆಟ್‌ ಘೋಷಣೆ ಆಗಿರುವುದರಿಂದ ಅವರ ಮುಂದಿನ ನಡೆಯೇನು ಎಂಬುದು ಕುತೂಹಲ ಮೂಡಿಸಿದೆ.

ನಾಲ್ಕು ಕ್ಷೇತ್ರಕ್ಕೆ ಅಂತಿಮವಾಗದ ಟಿಕೆಟ್‌

ವಿಜಯಪುರ ನಗರ, ದೇವರಹಿಪ್ಪರಗಿ, ಸಿಂದಗಿ ಮತ್ತು ನಾಗಠಾಣ ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿಲ್ಲ. ಈ ನಾಲ್ಕೂ ಕ್ಷೇತ್ರಗಳಲ್ಲೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಜೊತೆಗೆ ಯಾರಿಗೆ ಟಿಕೆಟ್‌ ನೀಡಬೇಕು ಎಂಬ ಸ್ಪಷ್ಟತೆ ಸಿಕ್ಕಿಲ್ಲ. ಎರಡನೇ ಹಂತದಲ್ಲಿ ಈ ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆಯಾಗುವ ನಿರೀಕ್ಷೆ ಇದೆ.

ದೇವರಹಿಪ್ಪರಗಿ ವಿಧಾನ ಕ್ಷೇತ್ರಕ್ಕೆ ವಿಧಾನ ಪರಿಷತ್‌ ವಿರೋಧ ಪಕ್ಷದ ಮಾಜಿ ನಾಯಕ ಎಸ್‌.ಆರ್‌.ಪಾಟೀಲ ಅವರಿಗೆ ಟಿಕೆಟ್‌ ನೀಡಲಾಗುತ್ತದೆ ಎಂಬ ಸುದ್ದಿ ಈಗಾಗಲೇ ಭಾರೀ ಸದ್ದು ಮಾಡಿದೆ. ಅಲ್ಲದೇ, ಈ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಾದ ಒಂಬತ್ತು ಜನ ಮುಖಂಡರು ಎಸ್‌.ಆರ್‌.ಪಾಟೀಲ ಆಗಮನಕ್ಕೆ ಆರಂಭದಲ್ಲೇ ವಿರೋಧ ದಾಖಲಿಸಿದ್ದಾರೆ.

ಹೀಗಾಗಿ ಕ್ಷೇತ್ರದ ಟಿಕೆಟ್‌ ಯಾರಿಗೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೂ ಡಾ.ಪ್ರಭುಗೌಡ ಪಾಟೀಲ ಮತ್ತು ಆನಂದಗೌಡ ದೊಡ್ಡಮನಿ, ಬಿ.ಎಸ್‌.ಪಾಟೀಲ ಯಾಳಗಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ವಿಜಯಪುರ ನಗರಕ್ಕೆ ಅಬ್ದುಲ್‌ ಹಮೀದ್‌ ಮುಶ್ರೀಫ್‌, ನಾಗಠಾಣ ಕ್ಷೇತ್ರಕ್ಕೆ ಮಾಜಿ ಶಾಸಕ ರಾಜು ಆಲಗೂರ, ಕಾಂತಾ ನಾಯಕ, ವಿಠಲ ಕಟಕದೋಂಡ, ಸಿಂದಗಿಗೆ ಅಶೋಕ ಮನಗೂಳಿ, ವಿಠಲ ಕೊಳ್ಳೂರ, ರಾಕೇಶ ಕಲ್ಲೂರ ಹೆಸರು ಪ್ರಬಲವಾಗಿ ಕೇಳಿಬರುತ್ತಿವೆ. ಯಾರ ಹೆಸರು ಅಂತಿಮವಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಇವುಗಳನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.