
ವಿಜಯಪುರ: ಅನ್ನದಾತರು ತಮ್ಮ ಹೊಲದಲ್ಲಿ ಬೆಳೆದ ಪಪ್ಪಾಯಿ, ಪೇರಲ, ಕಬ್ಬು, ಅಡಿಕೆ, ಬಾಳೆ, ಬಗೆಬಗೆಯ ತರಕಾರಿಗಳನ್ನು ಒಂದು ತಕ್ಕಡಿಯಲ್ಲಿ ಇಟ್ಟು, ತಮ್ಮ ಭೂಮಿಗೆ ನೀರೊದಗಿಸಿದ ಸಚಿವ ಎಂ.ಬಿ.ಪಾಟೀಲ ಅವರನ್ನು ಇನ್ನೊಂದು ತಕ್ಕಡಿಯಲ್ಲಿ ಕೂರಿಸಿ ಪ್ರೀತಿಯ ತುಲಾಭಾರ ನೆರವೇರಿಸುವ ಮೂಲಕ ಋಣಭಾರ ತೀರಿಸಿದರು.
ತಿಕೋಟಾ ತಾಲ್ಲೂಕಿನ ಸಾತಲಿಂಗಯ್ಯ ಶಂಕರಯ್ಯ ಹಿರೇಮಠ ಅವರ ತೋಟದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಭಾನುವಾರ ಏರ್ಪಡಿಸಿದ್ದ ರೈತ ಕ್ಷೇತೋತ್ಸವದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲರಿಗೆ ರೈತರು ತಾವು ಬೆಳೆದ ಬೆಳೆಗಳಿಂದ ತುಲಾಭಾರ ಮಾಡಿ ಗಮನ ಸೆಳೆದರು.
ಈ ಹಿಂದೆ 2013-18ರಲ್ಲಿ ಎಂ.ಬಿ.ಪಾಟೀಲರು ಜಲಸಂಪನ್ಮೂಲ ಸಚಿವರಾಗಿ ತಿಕೋಟಾ ಪ್ರದೇಶಕ್ಕೆ ನೀಡಿರುವ ಕೊಡುಗೆ ಅಮೂಲ್ಯ. ಅವರ ಆಸಕ್ತಿಯಿಂದಾಗಿ ರೈತರ ಬಾಳು ಹಸನಾಗಿದೆ, ಒಂದು ಕಾಲದ ಬರಡು ಭೂಮಿ ಹಸಿರಿನಿಂದ ಕಂಗೊಳಿಸುತ್ತಿದೆ, ಒಕ್ಕಲು ಭೂಮಿಯಲ್ಲಿ ಪಪ್ಪಾಯಿ, ಪೇರಲೆ, ಕಬ್ಬು, ತರಕಾರಿ, ಅಡಿಕೆ, ಬಾಳೆ ನಳನಳಿಸುತ್ತಿವೆ. ಈಗಲೂ ಅವರ ಪ್ರಯತ್ನಗಳಿಂದಾಗಿ ಹಲವು ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ. ಈ ಕಾರಣಕ್ಕೆ ಅವರ ಉಪಕಾರವನ್ನು ಇಲ್ಲಿನ ರೈತರು ಮರೆಯದೇ ಅವರನ್ನು ಆಹ್ವಾನಿಸಿ, ತಾವು ಬೆಳೆದ ಬೆಳೆಗಳಿಂದಲೇ ಪ್ರೀತಿಯ ತುಲಾಭಾರ ನೆರವೇರಿಸಿದರು. ಸಾವಿರಾರು ರೈತರು ಮತ್ತು ಮಹಿಳೆಯರು ತುಲಾಭಾರಕ್ಕೆ ಸಾಕ್ಷಿಯಾದರು.
ತುಲಾಭಾರ ಸ್ವೀಕರಿಸಿ ಮಾತನಾಡಿದ ಎಂ. ಬಿ.ಪಾಟೀಲ, ‘ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ನೀರಾವರಿ ಸೌಲಭ್ಯದಿಂದ ಮಾತ್ರ ಸಾಧ್ಯ. ನನಗೆ ದೊರೆತ ಅವಕಾಶದಲ್ಲಿ ಕೈಲಾದಷ್ಟು ಇದನ್ನು ತವರು ಜಿಲ್ಲೆಯ ಜನರಿಗೆ ಮಾಡಿದ್ದೇನೆ. ಬಂಗಾರಕ್ಕಿಂತ ಕೃಷಿ ಉತ್ಪನ್ನಗಳಿಂದ ತುಲಾಭಾರ ಮಾಡಿರುವುದು ಅತೀವ ಸಂತಸ ತಂದಿದೆ' ಎಂದರು.
‘ಹಿಂದೆ ನೀರಾವರಿ ಸಚಿವನಾಗಿದ್ದಾಗ ನಡೆಸಿದ ಕಾನೂನು ಸಮರಗಳು ಮತ್ತು ಹೊರಬಂದ ತೀರ್ಪುಗಳದ್ದೇ ಒಂದು ದೊಡ್ಡ ಗ್ರಂಥವಾಗುತ್ತವೆ. ಶಾಸಕನಾಗಿ, ಸಚಿವನಾಗಿ ನನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಆತ್ಮಸಂತೃಪ್ತಿ ನನ್ನದಾಗಿದೆ’ ಎಂದು ಹಳೆಯ ಘಟನೆಗಳನ್ನು ಮೆಲುಕು ಹಾಕಿದರು.
ಹಿರೇಮಠದ ಶಿವಬಸವ ಶಿವಾಚಾರ್ಯ ಶ್ರೀಗಳು, ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು, ಗುಣದಾಳು ಹಿರೇಮಠದ ಡಾ.ವಿವೇಕಾನಂದ ದೇವರು, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಚೂನ್ನಪ್ಪ ಪೂಜೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.