ADVERTISEMENT

ಪ್ರತಿದಿನ ₹300 ಕೋಟಿ ಸಾಲ ಮಾಡುತ್ತಿರುವುದೇ ರಾಜ್ಯ ಸರ್ಕಾರದ ಸಾಧನೆ: ನಿಖಿಲ್ ಕಿಡಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 13:27 IST
Last Updated 16 ಫೆಬ್ರುವರಿ 2026, 13:27 IST
<div class="paragraphs"><p>ನಿಖಿಲ್ ಕುಮಾರಸ್ವಾಮಿ</p></div>

ನಿಖಿಲ್ ಕುಮಾರಸ್ವಾಮಿ

   

ವಿಜಯಪುರ: ‘ಸಾವಿರ ದಿನದ ಸರ್ಕಾರ ಎಂದು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದಲ್ಲಿ ಪ್ರತಿ ವರ್ಷ ₹1 ಲಕ್ಷ ಕೋಟಿ ಸಾಲ ಮಾಡಲಾಗುತ್ತಿದೆ. ಪ್ರತಿ ದಿನಕ್ಕೆ ₹ 300 ಕೋಟಿ ಸಾಲ ಆಗ್ತಿದೆ. ಇಂದಿನ‌ ರಾಜ್ಯದ ಮುಖ್ಯಮಂತ್ರಿಗಳ ಆಡಳಿತ ವೈಖರಿ ಪ್ರತಿ ವರ್ಷ ಕೂಡ ₹ 1 ಲಕ್ಷ ಕೋಟಿ ಸಾಲದಲ್ಲಿದೆ. ಇಲ್ಲಿಯವರೆಗೆ ₹ 7 ಲಕ್ಷ ಕೋಟಿ ಸಾಲ ಮಾಡಿದೆ. ಈ ಸಾಲದ ಹೊರೆ ನಮ್ಮ ತಲೆಯ ಮೇಲೆ ಹಾಕುತ್ತಿದ್ದಾರೆ. ನಮ್ಮ ಮೇಲೆ ಸಾಲ ಹೊರೆಸುತ್ತಿರುವುದೇ ನಮಗೆ ಕೊಟ್ಟ ರಾಜ್ಯ ಸರ್ಕಾರದ ದೊಡ್ಡ ಕೊಡುಗೆಯಾಗಿದೆ’ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಪ್ರತಿನಿತ್ಯ ಕುರ್ಚಿ ಕಿತ್ತಾಟದಿಂದಲೇ ಕಾಲ‌ ಕಳೆಯುತ್ತಿದ್ದಾರೆ. ಇದರಿಂದಾಗಿ ಸಂಪದ್ಭರಿತ ರಾಜ್ಯ ಬಡವಾಗುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಬಿಜೆಪಿ ಮೈತ್ರಿ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಜೆಡಿಎಸ್‌–ಬಿಜೆಪಿ ಮೈತ್ರಿ ಗಟ್ಟಿಯಾಗಿದೆ. ಕೆಲ ನಾಯಕರಿಂದ ಅಲ್ಪಸ್ವಲ್ಪ ಅಪಸ್ವರ ಇರಬಹುದು ಎಲ್ಲವೂ ಸರಿಹೋಗುತ್ತದೆ’ ಎಂದರು.

ಜನತಾ ಸಮಾವೇಶ: ‘ಜೆಡಿಎಸ್‌ ಸ್ಥಾಪನೆಯಾಗಿ 25 ವರ್ಷವಾಗಿರುವುದರಿಂದ ನಾಡಿನಾದ್ಯಂತ ಬೆಳ್ಳಿಹಬ್ಬ ಆಚರಿಸಲಾಗುತ್ತಿದೆ. ಫೆ.27 ರಂದು ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಏಳು ಜಿಲ್ಲೆಗಳ ಕಿತ್ತೂರು ಕರ್ನಾಟಕದ ಜನತಾ ಸಮಾವೇಶ ವಿಜಯಪುರದಲ್ಲಿ ಆಯೋಜಿಸಲಾಗುತ್ತಿದೆ’ ಎಂದರು.

‘ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸೇರಿದಂತೆ ಪ್ರಮುಖ ನಾಯಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಿತ್ತೂರು ಕರ್ನಾಟಕ ಭಾಗದ ಸುಮಾರು ಒಂದು ಲಕ್ಷ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ದೇವೇಗೌಡರು ಕಟ್ಟಿ ಬೆಳೆಸಿದ ಪ್ರಾದೇಶಿಕ ಪಕ್ಷ ಜೆಡಿಎಸ್‌ ನಾಯಕರನ್ನು ತಯಾರು ಮಾಡುವ ಕಾರ್ಖಾನೆ. ಇನ್ನೂ ಸಹ ಜೆಡಿಎಸ್ ಪಕ್ಷ ಸದೃಢವಾಗಿದೆ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಜೆಡಿಎಸ್‌ ತನ್ನ ಜಾತ್ಯತೀತ ಧೋರಣೆಯಿಂದ ಹಿಂದೆ ಸರಿದಿಲ್ಲ’ ಎಂದು ಹೇಳಿದರು.

‘ಜನತಾದಳ ಪಕ್ಷ ಸರ್ವ ಜನಾಂಗಕ್ಕೂ, ಸರ್ವ ಸಮಾಜಕ್ಕೂ ನ್ಯಾಯ ಒದಗಿಸಿದೆ, ಪಕ್ಷ ತನ್ನದೇ ಶಕ್ತಿ, ತನ್ನ ವರ್ಚಸ್ಸನ್ನು ಉಳಿಸಿಕೊಂಡಿದೆ. ಭ್ರಷ್ಟ ಕಾಂಗ್ರೆಸ್ ಪಕ್ಷವನ್ನು ಹೊಡೆದೋಡಿಸಲು ಬಿಜೆಪಿಯ ಜೊತೆಗೆ ಸೇರಿದ್ದೇವೆ’ ಎಂದು ಹೇಳಿದರು.

ಕೊಡುಗೆ ಅಪಾರ: ‘ವಿಜಯಪುರ ಜಿಲ್ಲೆಗೂ ದೇವೇಗೌಡರಿಗೂ ಅವಿನಾಭಾವ ಸಂಬಂಧವಿದೆ. ಆಲಮಟ್ಟಿ ಎತ್ತರಕ್ಕೆ ದೇವೇಗೌಡರು ಕೊಡುಗೆ ಕೊಟ್ಟಿದ್ದಾರೆ. ಜಿಲ್ಲೆಯ ಜನತೆ ಮುಂದಿನ ಚುನಾವಣೆಯಲ್ಲಿ ನಮಗೆ ಆಶೀರ್ವದಿಸಲಿದ್ದಾರೆ’ ಎಂದರು.

‘ಚುನಾವಣೆಯ ಗೆಲುವು ಸೋಲು ನಾಯಕತ್ವವನ್ನು ನಿರ್ಣಯಿಸುವುದಿಲ್ಲ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಈಗಾಗಲೇ ಮೊದಲ ಹಂತದಲ್ಲಿ ರಾಜ್ಯದಾದ್ಯಂತ ಸಂಚರಿಸಿ ಕೆಲಸ ಮಾಡಿದ್ದೇನೆ’ ಎಂದು ಹೇಳಿದರು.

ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ದೇವಾನಂದ ಚಹ್ವಾಣ, ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಮಾಡಗಿ, ಮುಖಂಡರಾದ ವೆಂಕಟರಾವ್ ನಾಡಗೌಡ, ಬಿ.ಡಿ.ಪಾಟೀಲ, ಅಪ್ಪುಗೌಡ ಪಾಟೀಲ, ಮಲ್ಲಿಕಾರ್ಜುನ ಯಂಡಿಗೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.