ADVERTISEMENT

ಬೆಳೆ ಹಾನಿ: ವಿಶೇಷ ಪರಿಹಾರ ಪ್ಯಾಕೇಜ್‌ ನೀಡುವಂತೆ ಎಂ.ಬಿ.ಪಾಟೀಲ ಆಗ್ರಹ

ವಿಜಯಪುರ ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ದಾಕ್ಷಿ,ತೊಗರಿಗೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 14:40 IST
Last Updated 8 ಡಿಸೆಂಬರ್ 2021, 14:40 IST
ಎಂ.ಬಿ. ಪಾಟೀಲ
ಎಂ.ಬಿ. ಪಾಟೀಲ   

ವಿಜಯಪುರ: ಅಕಾಲಿಕ ಮಳೆಯಿಂದ ದ್ರಾಕ್ಷಿ, ತೊಗರಿ ಬೆಳೆ ಶೇ 90ರಷ್ಟು ಹಾನಿಯಾಗಿದ್ದು, ನಷ್ಠಕ್ಕೊಳಗಾದ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್‌ ನೀಡಬೇಕು ಎಂದು ಮಾಜಿ ಜಲ ಸಂಪನ್ಮೂಲ ಸಚಿವ, ಶಾಸಕ ಎಂ.ಬಿ.ಪಾಟೀಲ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಯು ಹೂವು, ಕಾಯಿಯಾಗುವ ಸಮಯದಲ್ಲಿ ಸುರಿದಿರುವ ಮಳೆ, ಮೋಡ ಮುಸುಗಿದ ವಾತಾರವಣ, ಮಂಜಿನಿಂದ ಉದುರಿದ್ದು, ರೈತರಿಗೆ ಭಾರೀ ಪ್ರಮಾಣದಲ್ಲಿ ನಷ್ಠವಾಗಿದೆ ಎಂದರು.

ಕಟಾವಿಗೆ ಬಂದಿದ್ದ ತೊಗರಿ ಕಾಳುಗಳು ಗಿಡದಲ್ಲೇ ಕಪ್ಪಗಿ, ಮೊಳಕೆಯಾಗಿವೆ. ಇದರಿಂದಲೂ ರೈತರು ತೀವ್ರ ನಷ್ಟ ಅನುಭವಿಸಿದ್ದಾರೆ ಎಂದು ಹೇಳಿದರು.

ADVERTISEMENT

ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಜಂಟಿಯಾಗಿ ಈಗಾಗಲೇ ದ್ರಾಕ್ಷಿ ತೋಟಗಳಿಗೆ ಭೇಟಿ ನೀಡಿ ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸುತ್ತಿದೆ. ಸಮೀಕ್ಷಾ ವರದಿಅತ್ಯಂತ ವೈಜ್ಞಾನಿಕವಾಗಿರಬೇಕು. ಯಾವೊಬ್ಬ ರೈತರ ಹೆಸರೂ ಬಿಟ್ಟುಹೋಗಬಾರದು ಮತ್ತು ಗೊಂದಲ, ಆಕ್ಷೇಪಕ್ಕೆ ಕಾರಣವಾಗಬಾರದು ಎಂದು ಒತ್ತಾಯಿಸಿದರು.

ದ್ರಾಕ್ಷಿ, ತೊಗರಿ ಸೇರಿದಂತೆ ಇತರೆ ಬೆಳೆಹಾನಿಗೆ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು ಹಾಗೂ ಬೆಳಗಾವಿ ಅಧಿವೇಶದಲ್ಲಿ ಈ ಕುರಿತು ಸರ್ಕಾರದ ಗಮನ ಸೆಳೆದು, ರೈತರಿಗೆ ಆಗಿರುವ ನಷ್ಟಕ್ಕೆ ವಿಶೇಷ ಪರಿಹಾರ ನೀಡುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.

ದ್ರಾಕ್ಷಿ ಬೆಳೆಗೆ ಪರಿಹಾರ ಮೊತ್ತ ಸರಿಯಾಗಿ ಲಭಿಸುತ್ತಿಲ್ಲ ಎಂಬ ದೂರುಗಳಿವೆ. ವಿಮಾ ಕಂಪನಿಗಳಿಗೆ ಸರ್ಕಾರ ಈ ಸಂಬಂಧ ಕಟ್ಟುನಿಟ್ಟಿನ ಸೂಚನೆ ನೀಡಿ, ಪೂರ್ಣ ಪ್ರಮಾಣದ ವಿಮಾ ಮೊತ್ತ ಒದಗಿಸಿಕೊಡಲು ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ರೈತರು ಸಹ ಪ್ರತಿ ವರ್ಷ ಬೆಳೆ ವಿಮೆ ಮಾಡಿಸಬೇಕು. ಈ ಹಿಂದಿನ ವರ್ಷಗಳಲ್ಲಿ ಬೆಳೆ ಹಾನಿಯಾದ ರೈತರಿಗೆ ಗರಿಷ್ಠ ವಿಮಾ ಮೊತ್ತ ಲಭಿಸಿದೆ. ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆ ವಿಮೆ ಬಗ್ಗೆ ರೈತರಿಗೆ ಹೆಚ್ಚಿನ ಅರಿವು ಮೂಡಿಸಿ, ಎಲ್ಲ ರೈತರು ಬೆಳೆ ವಿಮೆ ವ್ಯಾಪ್ತಿಗೆ ಒಳಪಡುವಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಮುಖಂಡರಾದ ಬಸವರಾಜ ದೇಸಾಯಿ, ಡಾ.ಮಹಾಂತೇಶ ಬಿರಾದಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.