ADVERTISEMENT

ಶುದ್ಧ ನೀರಿನ ಘಟಕಗಳ ಬಂದ್: ಶುದ್ಧ ನೀರಿಗಾಗಿ ತಪ್ಪದ ಅಲೆದಾಟ

ಪ್ರಕಾಶ ಎನ್.ಮಸಬಿನಾಳ
Published 12 ಮೇ 2019, 20:00 IST
Last Updated 12 ಮೇ 2019, 20:00 IST
ಬಸವನಬಾಗೇವಾಡಿಯ ಬಸವ ಜನ್ಮ ಸ್ಮಾರಕ ಮುಂಭಾಗದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ
ಬಸವನಬಾಗೇವಾಡಿಯ ಬಸವ ಜನ್ಮ ಸ್ಮಾರಕ ಮುಂಭಾಗದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ   

ಬಸವನಬಾಗೇವಾಡಿ: ಪಟ್ಟಣದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯ ಉದ್ದೇಶದೊಂದಿಗೆ, ವಿವಿಧೆಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ ನಿರ್ವಹಣೆ ಮಾತ್ರ ಸಮರ್ಪಕವಾಗಿಲ್ಲ.

ಘಟಕಗಳ ನಿರ್ವಹಣೆ ಸರಿಯಾಗಿ ಇಲ್ಲದ ಕಾರಣ ವಿವಿಧೆಡೆ ಘಟಕಗಳು ಬಂದ್ ಆಗಿವೆ. ಇದರಿಂದ ಜನರು ಶುದ್ಧ ಕುಡಿಯುವ ನೀರಿಗಾಗಿ ಪಟ್ಟಣದ ಇತರ ಘಟಕಗಳಿಗೆ ಅಲೆದು ಸುಸ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಬಸವ ಜನ್ಮಸ್ಮಾರಕ ಮುಂಭಾಗ, ನಂದಿ ತರಕಾರಿ ಮಾರುಕಟ್ಟೆ ಆವರಣ, ಬಸವೇಶ್ವರ ದೇವಸ್ಥಾನದ ಹೊರ ಆವರಣಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್ ಆಗಿದ್ದರೂ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ದುರಸ್ತಿ ಮಾಡಲು ಮುಂದಾಗದೇ ಇರುವುದಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ADVERTISEMENT

ಇಲ್ಲಿನ ಬಸವ ಜನ್ಮ ಸ್ಮಾರಕದ ಮುಂಭಾಗದ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿ ಒಂದು ತಿಂಗಳು ಗತಿಸಿದೆ. ಬಸವ ಜನ್ಮ ಸ್ಮಾರಕಕ್ಕೆ ಬರುವ ಭಕ್ತರಿಗೆ ಹಾಗೂ ಈ ಭಾಗದ ಬಡಾವಣೆಗಳ ಜನ ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ.

ನಂದಿ ಮಾರುಕಟ್ಟೆ ಆವರಣದಲ್ಲಿ ಬಂದ್ ಆಗಿದ್ದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸಲಾಗಿತ್ತು. ಮತ್ತೆ ಕೆಲ ದಿನಗಳಿಂದ ಘಟಕದಲ್ಲಿ ನೀರು ಬಾರದೇ ಇರುವುದರಿಂದ ತರಕಾರಿ ವ್ಯಾಪಾರಸ್ಥರು, ಗ್ರಾಹಕರು ಶುದ್ಧ ನೀರಿನಿಂದ ವಂಚಿತರಾಗಿದ್ದಾರೆ.

ಮಾರುಕಟ್ಟೆ ಪ್ರದೇಶದಲ್ಲಿನ ಬಸವೇಶ್ವರ ದೇವಸ್ಥಾನದ ಹೊರ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವು ವ್ಯಾಪಾರಸ್ಥರು ಸೇರಿದಂತೆ ಇತರರಿಗೆ ಹೆಚ್ಚು ಉಪಯುಕ್ತವಾಗಿದೆ. ಈ ಘಟಕದಲ್ಲಿ ಕೆಲ ದಿನಗಳಿಂದ ನೀರು ಬರುವುದು ಸ್ಥಗಿತಗೊಂಡಿದೆ.

ಬೆಳಿಗ್ಗೆಯೇ ಪಟ್ಟಣದ ಕೆಲ ಮನೆಯವರು ಸೈಕಲ್, ಬೈಕ್ ಸೇರಿದಂತೆ ವಿವಿಧ ವಾಹನಗಳಲ್ಲಿ ಶುದ್ಧ ನೀರಿಗಾಗಿ ಮೂರು ಘಟಕಗಳತ್ತ ಬಂದು ನಿರಾಸೆಯಿಂದ ಮನೆಗೆ ಮರುಳುತ್ತಿದ್ದಾರೆ.

ಮನೆಗೆ ಶುದ್ಧ ನೀರು ತೆಗೆದುಕೊಂಡು ಹೋಗಬೇಕು ಎಂದುಕೊಂಡು ಮೂರು ಘಟಕಗಳಿಗೆ ತೆರಳಿದ್ದರೂ ನೀರು ಸಿಗಲಿಲ್ಲ. ಬೇಸಿಗೆಯಲ್ಲಿ ಶುದ್ಧ ಕುಡಿಯುವ ನೀರಿನ ಅಗತ್ಯ ಹೆಚ್ಚಿದೆ. ಅದನ್ನು ಅರಿತುಕೊಂಡು ಶುದ್ಧ ಕುಡಿಯುವ ನೀರಿನ ಘಟಕದ ಸಮರ್ಪಕ ನಿರ್ವಹಣೆಗೆ ಅಧಿಕಾರಿಗಳು ಮುಂದಾಗಬೇಕಿದೆ ಎಂದು ಖಾಸಗಿ ಶುದ್ಧ ನೀರಿನ ಘಟಕದಲ್ಲಿ ನೀರು ಪಡೆಯಲು ಬಂದಿದ್ದ ಕೆಲ ಜನರು ಆಗ್ರಹಿಸಿದರು.

ನಂದಿ ಮಾರುಕಟ್ಟೆಯಲ್ಲಿನ ಶುದ್ಧ ಕುಡಿಯುವನೀರಿನ ಘಟಕದಲ್ಲಿ ವಾರ ಇಲ್ಲವೇ ಹದಿನೈದು ದಿನಗಳಿಗೊಮ್ಮೆ ನೀರು ಬರುತ್ತದೆ. ನಿರಂತರವಾಗಿ ನೀರು ಬರುವಂತೆ ಗಮನ ಹರಿಸಬೇಕಿದೆ ಎಂದು ಬಸವರಾಜ ಬಿಜಾಪುರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.