ADVERTISEMENT

ದೇವರಹಿಪ್ಪರಗಿ | ಬೇಸಿಗೆ ಆರಂಭ: ಆತಂಕ ತಂದ ನೀರಿನ ಅಭಾವ 

ಅಮರನಾಥ ಹಿರೇಮಠ
Published 29 ಫೆಬ್ರುವರಿ 2024, 5:52 IST
Last Updated 29 ಫೆಬ್ರುವರಿ 2024, 5:52 IST
ಅಂಬಳನೂರ ಗ್ರಾಮದಲ್ಲಿ ಬಾಲಕಿಯೊಬ್ಬಳು ಕೈಗಾಡಿ ಮೂಲಕ ತೋಟದ ಭಾವಿಯಿಂದ ನೀರು ತರುತ್ತಿರುವುದು.  
ಅಂಬಳನೂರ ಗ್ರಾಮದಲ್ಲಿ ಬಾಲಕಿಯೊಬ್ಬಳು ಕೈಗಾಡಿ ಮೂಲಕ ತೋಟದ ಭಾವಿಯಿಂದ ನೀರು ತರುತ್ತಿರುವುದು.     

ದೇವರಹಿಪ್ಪರಗಿ: ಕೆಲವು ವರ್ಷಗಳಿಂದ ನೀರಿನ ಕುರಿತು ನಿರಾಂತಕದಿಂದ ಇದ್ದ ಜನತೆಗೆ ಈ ವರ್ಷ ಬೇಸಿಗೆಯ ಆರಂಭದಿಂದಲೇ ನೀರಿನ ಅಭಾವದ ಆತಂಕ ಕಾಡುತ್ತಿದೆ. ತಾಲ್ಲೂಕಿನ 16ಕ್ಕೂ ಹೆಚ್ಚಿನ ಗ್ರಾಮಗಳ ಕುಡಿಯುವ ನೀರಿನ ಅಭಾವ ತಡೆಗಟ್ಟಲು ತಾಲ್ಲೂಕು ಆಡಳಿತ ಸಜ್ಜಾಗಬೇಕಿದೆ.

ಪ್ರತಿ ಬಾರಿ ಬೇಸಿಗೆ ಆರಂಭಗೊಳ್ಳುತ್ತಿದಂತೆಯೇ ಕುಡಿಯುವ ನೀರಿನ ಮೂಲಗಳಾದ ಕೆರೆ, ಬಾವಿ, ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿರುವುದು ಸಾಮಾನ್ಯ. ಅದಾಗ್ಯೂ ಬೇಸಿಗೆ ಆರಂಭದಲ್ಲಿ ಬೀಳುವ ಅಕಾಲಿಕ ಮಳೆಗಳು ಹಾಗೂ ಸರ್ಕಾರ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಹರಿಸಿದ ಪರಿಣಾಮ ನೀರಿನ ತೊಂದರೆ ಹಲವಾರು ವರ್ಷಗಳಿಂದ ಕಾಡಿದ್ದಿಲ್ಲ. ಆದರೆ ಈ ವರ್ಷ ಮಳೆಯ ಅಭಾವದಿಂದ ನೀರಿನ ಲಭ್ಯತೆಯ ಪ್ರಮಾಣ ಕಡಿಮೆಯಾಗಿದೆ. ಇದು ಜಿಲ್ಲೆಯ ವಿವಿಧ ಕಾಲುವೆಗಳ ನೀರಿಗೂ ಅನ್ವಯವಾಗುತ್ತಿದೆ. ಇದರಿಂದ ತಾಲ್ಲೂಕಿನ 16ಕ್ಕೂ ಹೆಚ್ಚು ಗ್ರಾಮಗಳಲ್ಲಿ ಫೆಬ್ರುವರಿ ತಿಂಗಳ ಅಂತ್ಯಕ್ಕೆ ನೀರಿನ ಬರ ಕಾಡಲಾರಂಭಿಸಿದೆ.

ತಾಲ್ಲೂಕಿನ ಹಿಟ್ನಳ್ಳಿ, ಹಿಟ್ನಳ್ಳಿ ತಾಂಡಾ (ಚಂದಾ ನಗರ), ಗಂಗನಳ್ಳಿ, ಜಾಲವಾದ, ಇಬ್ರಾಹಿಂಪುರ, ಕೋರವಾರ, ನಾಗರಾಳ ಡೋಣ, ಸಾತಿಹಾಳ, ಭೈರವಾಡಗಿ, ಆಲಗೂರ, ಕೆಸರಟ್ಟಿ, ಅಂಬಳನೂರ, ಕೊಂಡಗೂಳಿ, ಬಿ.ಬಿ.ಇಂಗಳಗಿ, ಹುಣಶ್ಯಾಳ, ಹಂಚಲಿ ಗ್ರಾಮಗಳಲ್ಲಿ ಈಗಾಗಲೇ ನೀರಿನ ಅಭಾವ ತಲೆದೋರಿದ್ದು, ಬೇಸಿಗೆಯಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ.

ADVERTISEMENT

ಕುಡಿಯವ ನೀರಿನ ಲಭ್ಯತೆ ಮತ್ತು ಬೇಸಿಗೆಯ ಕುರಿತು ಅಂಬಳನೂರ ಗ್ರಾಮದ ಸಂಗನಗೌಡ ಪಾಟೀಲ ಮಾತನಾಡಿ, ಈಗಲೇ ನಮ್ಮ ಗ್ರಾಮದಲ್ಲಿ 5 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಉಳಿದ ಬಳಕೆ ನೀರಿಗಾಗಿ ಗ್ರಾಮದಲ್ಲಿರುವ ಏಕೈಕ ಸೇದುವ ಬಾವಿಯೇ ಆಧಾರ. ಜೊತೆಗೆ ಗ್ರಾಮದಿಂದ ದೂರದಲ್ಲಿ ಇರುವ ತೋಟದ ಬಾವಿಗಳಿಂದ ಮಹಿಳೆಯರು ಮತ್ತು ಮಕ್ಕಳು ಕೈಗಾಡಿಯ ಮೂಲಕ ನೀರು ತರುತ್ತಾರೆ. ಕೆಲವು ಸಮಯ ತೋಟದ ಮಾಲೀಕರು ಬೇಸತ್ತು ನೀರು ನೀಡದೇ ಸಂದರ್ಭಗಳು ಬಂದಿವೆ.

ಇದು ನಮ್ಮ ಗ್ರಾಮಸ್ಥರಿಗೆ ಸಹಜವೇನಿಸಿದೆ. ಸರ್ಕಾರಗಳು ಕುಡಿಯುವ ನೀರಿಗಾಗಿ ಸಾಕಷ್ಟು ಯೋಜನೆ ತಂದಿದ್ದರೂ ನಮ್ಮ ಗ್ರಾಮದಲ್ಲಿ ಮಾತ್ರ ಪ್ರತಿವರ್ಷ ಬೇಸಿಗೆಯ ಬಿರುಬಿಸಿಲಿನ ಜೊತೆಗೆ ನೀರಿನ ತಾಪತ್ರಯ ತಪ್ಪಿದ್ದಲ್ಲ ಎಂದು ಮಾಹಿತಿ ನೀಡುತ್ತಾರೆ.

ಮಳೆಗಾಲದ ಅಭಾವದಿಂದಾಗಿ ಗ್ರಾಮಗಳ ಜನತೆ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ, ತಾಲ್ಲೂಕು ಆಡಳಿತಗಳು ಸಜ್ಜಾಗಿವೆ. ಅದಕ್ಕಾಗಿ ಚಿಮ್ಮಲಗಿ ಹಾಗೂ ಮುಳವಾಡ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲು ಆರಂಭಿಸಿದೆ. ಆದರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಿಸಿಲಿನ ಪ್ರಖರತೆಗೆ ಕೆರೆಗೆ ಹರಿಸಿದ ಅಲ್ಪ ಪ್ರಮಾಣದ ನೀರು ಮಳೆಗಾಲದ ಆರಂಭದವರೆಗೆ ಇರುತ್ತದೆಯೇ ಎಂಬ ಆತಂಕ ಹಾಗೂ ಚರ್ಚೆ ಗ್ರಾಮಸ್ಥರಲ್ಲಿ ಆರಂಭವಾಗಿದೆ.

ಹೇಗೆ ಇರಲಿ ಈ ವರ್ಷದ ಬೇಸಿಗೆ ನೀರಿನ ತಾಪತ್ರಯ ಮೂಡದೇ ಇರಲಿ ಎನ್ನುತ್ತಾರೆ ತಾಲ್ಲೂಕಿನ ಪ್ರಗತಿಪರ ರೈತರಾದ ಶಂಕರಗೌಡ ಕೋಟಿಖಾನಿ (ಹರನಾಳ), ಅಜೀಜ್ ಯಲಗಾರ (ದೇವರ ಹಿಪ್ಪರಗಿ), ಬಸವರಾಜ ಕಲ್ಲೂರ (ಮುಳಸಾವಳಗಿ), ಚನ್ನಪ್ಪ ಕಾರಜೋಳ (ನಿವಾಳಖೇಡ), ಹಾಗೂ ಗುರುಬಸಯ್ಯ ಹಿರೇಮಠ (ಮುಳಸಾವಳಗಿ).

ತಾಲ್ಲೂಕಿನ ಗ್ರಾಮಗಳಲ್ಲಿ ಎದುರಾಗುವ ಕುಡಿಯುವ ನೀರಿನ ಬರವನ್ನು ಎದುರಿಸಲು ತಾಲ್ಲೂಕು ಆಡಳಿತ ಎಲ್ಲ ರೀತಿಯಿಂದ ಸಜ್ಜಾಗಿದೆ. ಅದಕ್ಕಾಗಿ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ

ಪ್ರಕಾಶ ಸಿಂದಗಿ. ತಹಶೀಲ್ದಾರ್‌, ದೇವರಹಿಪ್ಪರಗಿ.

ಖಾಸಗಿ ಬಾವಿ, ಕೊಳವೆ ಬಾವಿ ಬಳಕೆಗೆ ಸೂಚನೆ ನೀರಿನ ಅಭಾವವಾಗದಂತೆ ಮುನ್ನಚ್ಚರಿಕೆ ಟ್ಯಾಂಕರ್‌ ಮೂಲಕ ಪೂರೈಕೆಗೆ ಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.