ADVERTISEMENT

ವಿಜಯಪುರ | ಆಲಮೇಲ, ಇಂಡಿ ಸರಗಳ್ಳತನ ಪ್ರಕರಣ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 2:37 IST
Last Updated 1 ಮಾರ್ಚ್ 2026, 2:37 IST
ವಿಜಯಪುರ ಜಿಲ್ಲೆಯ ಆಲಮೇಲ ಮತ್ತು ಇಂಡಿಯಲ್ಲಿ ನಡೆದ ಸರಗಳ್ಳನತ ಪ್ರಕರಣಕ್ಕೆ ಬಳಸಿದ್ದ ಎರಡು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ
ವಿಜಯಪುರ ಜಿಲ್ಲೆಯ ಆಲಮೇಲ ಮತ್ತು ಇಂಡಿಯಲ್ಲಿ ನಡೆದ ಸರಗಳ್ಳನತ ಪ್ರಕರಣಕ್ಕೆ ಬಳಸಿದ್ದ ಎರಡು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ   

ವಿಜಯಪುರ: ಜಿಲ್ಲೆಯ ಆಲಮೇಲ ಮತ್ತು ಇಂಡಿಯಲ್ಲಿ ಜನತೆಯನ್ನು ಬೆಚ್ಚಿಬೀಳಿಸಿದ್ದ ಪ್ರತ್ಯೇಕ ಸರಗಳ್ಳತನ ಪ್ರಕರಣಗಳನ್ನು ಜಿಲ್ಲಾ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕ ಸೇರಿ ಮೂವರನ್ನು ಬಂಧಿಸಿ, ₹2.30 ಲಕ್ಷ  ಮೌಲ್ಯದ ಬಂಗಾರದ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಸರಗಳ್ಳತನ ಪ್ರಕರಣಗಳ ಪತ್ತೆ ಹೆಚ್ಚಲು ಎರಡು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು. ಆರೋಪಿಗಳ ಗುರುತು ಪತ್ತೆ ಸೇರಿ ಎಲ್ಲ ರೀತಿ ಮಾಹಿತಿಯನ್ನು ಕಲೆ ಹಾಕುವಲ್ಲಿ ತನಿಖಾ ತಂಡಗಳು ಯಶಸ್ವಿಯಾಗಿವೆ. ಪುಣೆಯ ದೀಪಕ ಪರಶುರಾಮ ಮಾಳಿ, ಪುಣೆ ನಿವಾಸಿ, ಕಲಬುರಗಿ ಮೂಲದ ಪ್ರಕಾಶ ರಾಮಚಂದ್ರ ಮಾತಂಗಿ ಎಂಬುವವರೇ ಬಂಧಿತ ಆರೋಪಿಗಳು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ADVERTISEMENT

ಪ್ರಕರಣಗಳ ವಿವರ:

ಫೆ.8ರಂದು ಬೆಳಗ್ಗೆ ಆಲಮೇಲ ಬಸ್‌ ನಿಲ್ದಾಣದಲ್ಲಿ ಬೈಕ್‌ನಲ್ಲಿ ಬಂದಿದ್ದ ಆರೋಪಿಗಳು ಸವಿತಾ ಕಾಶಿರಾಯ ತೊರವಿ ಎಂಬುವರ ಕೊರಳಿಗೆ ಕೈ ಹಾಕಿ ಕೊರಳಲ್ಲಿದ್ದ ₹1.15 ಲಕ್ಷ ಮೌಲ್ಯದ ಬಂಗಾರದ ಮಂಗಳಸೂತ್ರವನ್ನು ದೋಚಿ ಪರಾರಿಯಾಗಿದ್ದರು. ಅದೇ ರೀತಿ ಇಂಡಿ ಬಸ್ ನಿಲ್ದಾಣದಲ್ಲಿ ಸರಗಳ್ಳತನ ಪ್ರಕರಣಗಳು ವರದಿಯಾಗಿದ್ದವು.

ಈ ಪ್ರಕರಣಗಳ ಪತ್ತೆಗೆ ಹೆಚ್ಚುವರಿ ಎಸ್‌ಪಿ ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ಇಂಡಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಸದಾಶಿವ ಕಟ್ಟಿಮನಿ, ಸಿಂದಗಿ ಸಿಪಿಐ ನಾನಾಗೌಡ ಪೊಲೀಸ್ ಪಾಟೀಲ, ಇಂಡಿ ಇನ್‌ಸ್ಪೆಕ್ಟರ್ ಪ್ರದೀಪ ಬಿಸೆ ಮತ್ತು ಆಲಮೇಲ ಪಿಎಸ್ಐ ಅರವಿಂದ ಅಂಗಡಿ ನೇತೃತ್ವದಲ್ಲಿ ತನಿಖಾ ತಂಡಗಳನ್ನು ರಚಿಸಲಾಗಿತ್ತು.

ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಒಟ್ಟು ಐವರು ಸೇರಿಕೊಂಡು ವಿಜಯಪುರದ ಗಾಂಧಿ ಚೌಕ್ ಠಾಣಾ ವ್ಯಾಪ್ತಿಯಲ್ಲಿ ಒಂದು ಬೈಕ್‌ ಹಾಗೂ ಸೋಲಾಪುರ ಸದರ್‌ ಬಜಾರ ಠಾಣಾ ವ್ಯಾಪ್ತಿಯಲ್ಲಿ ಒಂದು ಬೈಕ್‌ ಕಳ್ಳತನ ಮಾಡಿದ್ದರು. ಈ ಎರಡು ಬೈಕ್‌ಗಳನ್ನು ಬಳಸಿಯೇ ಇಂಡಿ ಹಾಗೂ ಆಲಮೇಲದಲ್ಲಿ ಸರಗಳ್ಳತನ ಮಾಡಿರುವುದನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಇನ್ನುಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.