ADVERTISEMENT

ಪುಕ್ಕಟೆ ಗಿರಾಕಿಗಳಿಂದ ಬಬಲೇಶ್ವರ ಸಮಾವೇಶ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 2:48 IST
Last Updated 27 ಡಿಸೆಂಬರ್ 2025, 2:48 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ‘ಬಬಲೇಶ್ವರದಲ್ಲಿ ಡಿಸೆಂಬರ್ 29ರಂದು ನಡೆಯುವ ಸಮಾವೇಶದ ಹಿಂದಿರುವವರು ಪುಕ್ಕಟ್ಟೆ ಗಿರಾಕಿಗಳು, ಅವರೇನು ರೊಕ್ಕ ಖರ್ಚು ಮಾಡಲ್ಲ, ತಾವು ಎಂಎಲ್‌ಎ ಆಗಬೇಕು ಅಂತಾ ಮಾಡುತ್ತಿದ್ದಾರೆ. ಅಲ್ಲಿ ಅವು ಎಂದೂ ಎಂಎಲ್‌ಎ ಆಗಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಸಮಾವೇಶ ಮಾಡಲು ಹೊರಟಿರುವವರೆಲ್ಲರೂ ಸಚಿವ ಶಿವಾನಂದ ಪಾಟೀಲ ಮನೆಯಲ್ಲಿರುವ ಗಿರಾಕಿಗಳು, ಶಿವಾನಂದ ಪಾಟೀಲ ನಮ್ಮ ರಾಜಕೀಯ ಗುರು ಎನ್ನುವ ಗಿರಾಕಿಗಳು, ಪಾಪ ಸ್ವಾಮೀಜಿಗಳಿಂದ ಪತ್ರಿಕಾಗೋಷ್ಠಿ ಮಾಡಿಸಿದ್ದಾರೆ. ಇವುಗಳನ್ನು ತೆಗೆದುಕೊಂಡು ನಾವು ಬಬಲೇಶ್ವರಕ್ಕೆ ಹೋಗುವುದಿಲ್ಲ’ ಎಂದು ಹೇಳಿದರು.

‘ಸಚಿವ ಎಂ.ಬಿ.ಪಾಟೀಲರು ಲಿಂಗಾಯತ, ವೀರಶೈವ ಒಡೆಯುವ ಕೆಲಸವನ್ನು ಮಾಡಬಾರದು. ಇದನ್ನು ನಾನು ಒಪ್ಪುವುದಿಲ್ಲ. ಅದನ್ನು ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಇನ್ಮುಂದೆ ಹಿಂದೂ ಧರ್ಮಕ್ಕೆ ಬೈದರೆ ನಾನು ಬಬಲೇಶ್ವರದಲ್ಲಿ ಪ್ರತ್ಯಕ್ಷನಾಗುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

₹275 ಕೋಟಿ ಅನುದಾನ:

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಯತ್ನಾಳ ಅನುದಾನ ತಂದಿದ್ದರು, ಈಗ ತರಲಿ ನೋಡೋಣ’ ಎಂದು ಮೊನ್ನೆ ಕೆಲವರು ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ. ಆದರೆ, ಈಗಲೂ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೂ ನಾನು ₹275 ಕೋಟಿ ಅನುದಾನ ವಿಜಯಪುರಕ್ಕೆ ತಂದಿದ್ದೇನೆ. ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ₹108 ಕೋಟಿ ವೆಚ್ಚದ ಟೆಂಡರ್‌ ಆಗಿದೆ. ನಗರಾಭಿವೃದ್ಧಿ ಇಲಾಖೆಯಿಂದ ₹80 ಕೋಟಿ ಅನುದಾನ ತಂದಿರುವೆ’ ಎಂದು ತಿರುಗೇಟು ನೀಡಿದರು.

‘ಈ ಹಿಂದೆ ಬಿಜೆಪಿಯಲ್ಲಿ ಶಾಸಕರಾಗಿದ್ದರು ಗುಂಟಾ ಪ್ಲಾಟ್ ಮಾಡುವುದು ಬಿಟ್ಟು, ಬೇರೇನೂ ಮಾಡಿಲ್ಲ. ಅದೇ ನಾನು ಮಾಡಿಸಿರುವ ರಸ್ತೆಗಳು ಏಳೆಂಟು ವರ್ಷಗಳಾದರೂ ಹಾಳಾಗಿಲ್ಲ. ಇಡೀ ವಿಜಯಪುರ ಸುಂದರವಾಗಿವೆ, ನಗರ ಸುಧಾರಣೆ ಆಗುತ್ತಿದೆ. ಮೊನ್ನೆ ಹೊಸ ಬಸ್‌ಗಳು ಬಂದಿವೆ’ ಎಂದರು.

‘ಅಭಿವೃದ್ಧಿ ವಿಚಾರದಲ್ಲಿ ಎಂ.ಬಿ.ಪಾಟೀಲರಿಗೆ ಸಹಕಾರ ನೀಡಿದ್ದೇನೆ. ನೀರಾವರಿ ಮಾಡಿದಾಗ ಅವರಿಗೆ ಗೌರವ ಕೊಟ್ಟು ಭಗೀರಥ ಎಂದಿದ್ದೇವೆ. ಅದರಲ್ಲಿ ತಪ್ಪೇನಿಲ್ಲ. ಆದರೆ, ಟೀಕೆ ಮಾಡೋರಿಗೆ ಉದ್ಯೋಗ ಇಲ್ಲ’ ಎಂದು ಕುಟುಕಿದರು.

‘ಮನೆಯಿಂದ ಉಪ್ಪಿಟ್ಟು ತರುವ ಅಯೋಗ್ಯರ ಕೈಯಲ್ಲಿ ವಿಜಯೇಂದ್ರ ಬಿಜೆಪಿಯನ್ನು ಕೊಟ್ಟಿದ್ದಾನೆ. ಅವೊಬ್ಬ ವಿಜಯೇಂದ್ರ-ಇವರು ಗಜೇಂದ್ರ’ ಎಂದು ಕಿಚಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.