
ಶಿವಮೊಗ್ಗದಿಂದ ಭದ್ರಾ ಜಲಾಶಯ, ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯಕ್ಕೆ ಹೋಗುವ ಹಾದಿಯಲ್ಲಿ ಸೋಗಾನೆಯ ವಿಮಾನ ನಿಲ್ದಾಣ ದಾಟಿ ಮುಂದೆ ಸಾಗುತ್ತಿದ್ದಂತೆಯೇ ಲಕ್ಕಿನಕೊಪ್ಪ ಸರ್ಕಲ್‌ನ ಬಳಿಯ ತೋಟದ ನಡುವೆ ಕೆಂಪು ಕಟ್ಟಡವೊಂದು ದಾರಿಹೋಕರ ಗಮನ ಸೆಳೆಯುತ್ತದೆ. ಸುತ್ತಲಿನ ತೋಟಗಳ ನಡುವೆ ಒಂದಷ್ಟು ಭಿನ್ನವಾಗಿ ಕಾಣುವ ಈ ಕಟ್ಟಡ ‘ಅಮೂಲ್ಯ ಶೋಧ’ ಹೆಸರಿನ ಮ್ಯೂಸಿಯಂ.
ವಿಶೇಷವೆಂದರೆ ಇಡೀ ದೇಶದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ಏಕೈಕ ಮ್ಯೂಸಿಯಂ ಇದು. ಹೆಸರಿಗೆ ತಕ್ಕಂತೆ ಅಮೂಲ್ಯ ವಸ್ತುಗಳೇ ಇಲ್ಲಿ ನೋಡಲು ಕಾಣಸಿಕ್ಕುತ್ತವೆ.
ಈ ಮ್ಯೂಸಿಯಂನ ಸ್ಥಾಪನೆಯ ಸಾಹಸಗಾಥೆಯ ಅರಸುತ್ತಾ ಹೋದರೆ ಆಗಿನ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಪಟ್ಟಣದಲ್ಲಿ ಐದು ದಶಕಗಳ ಹಿಂದೆ ಅರಳಿದ್ದ ಪ್ರೇಮಕಥನವೊಂದರ ನೆನಪಿನ ಬುತ್ತಿ ಬಿಚ್ಚಿಕೊಳ್ಳುತ್ತದೆ.
ಅದು ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಬೇರೆ ಬೇರೆ ಕಾಲೇಜುಗಳಲ್ಲಿ ದಶಕಗಳ ಕಾಲ ಮಕ್ಕಳಿಗೆ ಇತಿಹಾಸದ ಪಾಠ ಹೇಳಿಕೊಟ್ಟ ಖಂಡೋಬರಾವ್ ಹಾಗೂ ಯಶೋಧಾ ದಂಪತಿಯ ಪ್ರೇಮ ಕಥನ..
ಎಚ್. ಖಂಡೋಬರಾವ್ ಅಪ್ಪ ಹನುಮಂತರಾವ್ ನಿವೃತ್ತ ಸೈನಿಕ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ದೇವಣಗಾಂವ್‌ನವರು. ನಿವೃತ್ತಿಯ ನಂತರ ಬೆಂಗಳೂರಿನ ಮಾಗಡಿ ಸಮೀಪದ ಗುಡೇಮಾರನಹಳ್ಳಿಯಲ್ಲಿ ನೆಲೆಸಿದ್ದರು. ನಂತರ ಮೈಸೂರು ಲಾನ್ಸರ್ಸ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿ ಪತ್ನಿ, ನಾಲ್ವರು ಮಕ್ಕಳೊಂದಿಗೆ ಶಿವಮೊಗ್ಗಕ್ಕೆ ವಾಸ್ತವ್ಯ ಬದಲಿಸಿದ್ದರು.
1960ರ ದಶಕದಲ್ಲಿ ಭದ್ರಾ ಜಲಾಶಯದ ಹಿನ್ನೀರಿನಿಂದ ಊರು ಮುಳುಗಿದ ನಂತರ ಯಶೋಧಾ ಅವರ ಕುಟುಂಬ ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರದಿಂದ ಶಿವಮೊಗ್ಗಕ್ಕೆ ಬಂದು ನೆಲೆಸಿತ್ತು.
ಅದು 70ರ ದಶಕ. ಶಿವಮೊಗ್ಗದ ಓಲ್ಡ್‌ಬಾರ್‌ಲೈನ್‌ನ ಅಪ್ಪಾಜಿರಾವ್ ಕಾಂಪೌಂಡ್‌ನಲ್ಲಿ ಅಕ್ಕಪಕ್ಕದ ಮನೆಯಲ್ಲಿ ಖಂಡೋಬರಾವ್–ಯಶೋಧಾ ವಾಸವಿದ್ದರು. ಸಹ್ಯಾದ್ರಿ ಕಾಲೇಜಿನಲ್ಲಿ ಇತಿಹಾಸದಲ್ಲಿ ಎಂಎ ಓದುತ್ತಿದ್ದ ಈ ಇಬ್ಬರ ನಡುವೆ ಪ್ರೀತಿ ಮೊಳೆತಿತ್ತು. ಅದು ಹೆಮ್ಮರವಾಗಿ ಮದುವೆ ನಿರ್ಧಾರದ ಹಾದಿಗೆ ಹಿರಿಯರಿಂದ ಕೆಂಪು ನಿಶಾನೆ ಸಿಕ್ಕಿತು. ಆಗ ಮನೆ ಬಿಟ್ಟು ಹೋಗಿ ಇಲ್ಲಿನ ಮೀನಾಕ್ಷಿ ಭವನದ ಗೆಳೆಯರ ಸಹಕಾರದಿಂದ ( ಮೀನಾಕ್ಷಿ ಭವನದ ಮಾಲೀಕ ರಾಮಚಂದ್ರರಾಯರ ಭಾಮೈದ ನಾರಾಯಣಾಚಾರ್, ಶ್ರೀನಿಧಿ ಸಿಲ್ಕ್ಸ್‌ನ ಅಶ್ವತ್ಥನಾರಾಯಣ ಶೆಟ್ಟಿ,ಡಾ.ಅಶೋಕ ಪೈ) 1971ರಲ್ಲಿ ಭದ್ರಾವತಿ ಸಮೀಪದ ಸುಣ್ಣದಳ್ಳಿಯ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಇಬ್ಬರೂ ಮದುವೆ ಆಗಿದ್ದರು.
ಒಕ್ಕಲಿಗ ಹುಡುಗಿ, ಮರಾಠರ ಹುಡುಗನ ನಡುವಿನ ಪ್ರೀತಿ, ಮನೆಯವರ ವಿರೋಧ, ಮದುವೆ, ಅದಕ್ಕೆ ಗೆಳೆಯರ ಒತ್ತಾಸೆ ಆ ಕಾಲದಲ್ಲಿ ತುಂಗೆಯ ದಂಡೆಗೆ ಮಾತ್ರ ಸೀಮಿತವಾಗಿದ್ದ ಪುಟ್ಟ ನಗರ ಶಿವಮೊಗ್ಗದ ಜನರ ಗಮನ ಸೆಳೆದಿತ್ತು. ಕೋಟೆ ರಸ್ತೆ, ಗಾಂಧಿ ಬಜಾರ್‌ನ ಪೇಟೆ ಬೀದಿ, ಕೋಟೆ ಆಂಜನೇಯನ ಗುಡಿಯ ಪೌಳಿ, ಭೀಮನ ಮಡುವಿನ ಬಳಿ ನದಿ ದಂಡೆಯ ಅರಳೀಕಟ್ಟೆ, ವಾಸವಿ ರಸ್ತೆಯ ವಠಾರ ಹೀಗೆ ನಾಲ್ಕು ಜನರು ಕುಳಿತ ಕಡೆಯಲ್ಲೆಲ್ಲ ಈ ಜೋಡಿಯದ್ದೇ ಸುದ್ದಿ. ಸಂಪ್ರದಾಯದ ಸೀಮೋಲ್ಲಂಘನೆಯದ್ದೇ ಪಿಸುಮಾತು.
ಅಂದು ಜಾತಿಯ ಸಂಕೋಲೆ ಕಳಚಿ ಬಾಳ್ವೆಯ ಹಾದಿಯಲ್ಲಿ ಹೆಜ್ಜೆ ಹಾಕಿದ್ದ ಖಂಡೋಬರಾವ್ ಹಾಗೂ ಯಶೋಧಾ ದಂಪತಿ ನಡುವಿನ ಅನೋನ್ಯತೆ, ಪ್ರೀತಿ, ಒಬ್ಬರಿಗೊಬ್ಬರು ಜೀವ ಕೊಡುವಷ್ಟು ಭಾವ ಕಂಡು ಶಿವಮೊಗ್ಗದ ಯುವ ಮನಸ್ಸುಗಳು ಮೆಚ್ಚುಗೆಯ ನೋಟ ಬೀರುತ್ತಿದ್ದವು.
ಮುಂದೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ನ್ಯಾಷನಲ್ ಜೂನಿಯರ್ ಕಾಲೇಜು ಹಾಗೂ ಕಮಲಾ ನೆಹರೂ ಕಾಲೇಜಿನಲ್ಲಿ ಇಬ್ಬರೂ ಉಪನ್ಯಾಸಕರಾಗಿ ಕೆಲಸ ಆರಂಭಿಸಿ, ಸಾರ್ಥಕ ಬದುಕು ಕಟ್ಟಿಕೊಂಡು ಮನೆಯವರ ಮುನಿಸು ಮರೆಸಿ ಮನ ಗೆದ್ದರು. ಅದೆಲ್ಲವೂ ಈಗ ಗತ.
ಶಿವಮೊಗ್ಗ ಸಮೀಪದ ಲಕ್ಕಿನಕೊಪ್ಪದಲ್ಲಿರುವ ಅಮೂಲ್ಯಶೋಧ ಮ್ಯೂಸಿಯಂ ಕಟ್ಟಡ
ಯಶೋಧಾ ಹಾಗೂ ಖಂಡೋಬರಾವ್ ದಂಪತಿ
ಮದುವೆ ಆದ ಕೆಲ ವರ್ಷಗಳ ದಾಂಪತ್ಯದಲ್ಲಿ ಇಬ್ಬರು ಗಂಡು ಮಕ್ಕಳು ಹುಟ್ಟಿದರು. 90ರ ದಶಕದ ಆರಂಭದಲ್ಲಿ ಯಶೋಧಾ ಅವರಿಗೆ ತೀವ್ರ ಆರೋಗ್ಯದ ಸಮಸ್ಯೆ ಎದುರಾಯಿತು. ಕಿಡ್ನಿ ವಿಫಲವಾಯಿತು. ಪತ್ನಿಯ ದೇಖರೇಕಿಗೆ ಮುಂದಾದ ಖಂಡೋಬರಾವ್, ಯಂತ್ರವನ್ನೇ ಮನೆಗೆ ತಂದಿಟ್ಟುಕೊಂಡು ಪತ್ನಿಗೆ ಡಯಾಲಿಸಿಸ್ ಮಾಡತೊಡಗಿದರು. ಆದರೆ ಆರೋಗ್ಯದಲ್ಲಿ ಸುಧಾರಣೆ ಕಾಣದೇ ಕಿಡ್ನಿ ಬದಲಾವಣೆ ಅನಿವಾರ್ಯ ಎಂದಾಗ ಸ್ವತಃ ಖಂಡೋಬರಾವ್ ಪತ್ನಿಗೆ ತಮ್ಮದೊಂದು ಕಿಡ್ನಿ ಕೊಟ್ಟಿದ್ದರು. ಆಗ ಮತ್ತೊಮ್ಮೆ ಪ್ರೀತಿ ಗೆದ್ದಿತು.
ಮುಂದೆ 2007ರಲ್ಲಿ ಯಶೋಧಾ ಅವರ ಆರೋಗ್ಯ ಮತ್ತೆ ಕೈಕೊಟ್ಟಿತು. ಅವರು ಮತ್ತೆ ಚೇತರಿಸಿಕೊಳ್ಳಲಿಲ್ಲ. ಖಂಡೋಬರಾವ್ ಅವರ ಪ್ರಾರ್ಥನೆ ಫಲಿಸಲಿಲ್ಲ. ಪತ್ನಿ ಯಶೋಧಾ ಅವರ ಅಗಲಿಕೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಮ್ಮ ಒಲವಿನ ಹಾದಿಯ ನೆನಪನ್ನು ಸದಾ ಆರ್ದ್ರವಾಗಿಟ್ಟುಕೊಳ್ಳಲು ಮುಂದಾದರು. ಆಗ ಮೊಳೆತದ್ದು ಈ ’ಅಮೂಲ್ಯ ಶೋಧ’ ಮ್ಯೂಸಿಯಂ.
ದಂಪತಿ ಇತಿಹಾಸದ ಶಿಕ್ಷಕರಾಗಿದ್ದರಿಂದ ಹಳೆಯ ನೋಟು, ನಾಣ್ಯ, ಸ್ಟ್ಯಾಂಪ್, ಪ್ರಾಚ್ಯ ವಸ್ತುಗಳ ಸಂಗ್ರಹದ ಹವ್ಯಾಸ ಹೊಂದಿದ್ದರು. ಖಂಡೋಬರಾವ್ ಉಪನ್ಯಾಸಕರಾಗಿ ಗಳಿಸಿದ್ದು, ನಿವೃತ್ತಿಯಿಂದ ಬಂದ ಹಣ ಎಲ್ಲವನ್ನೂ ಸೇರಿಸಿ ಲಕ್ಕಿನಕೊಪ್ಪದ ಬಳಿ ಇದ್ದ ತಮ್ಮ ನಾಲ್ಕು ಎಕರೆ ತೋಟದಲ್ಲಿ ಅದೇ ವರ್ಷ ಮ್ಯೂಸಿಯಂ ಆರಂಭಿಸಿದರು. ಈ ಪ್ರೇಮ ಸೌಧಕ್ಕೆ ಈಗ ಎರಡು ದಶಕದ ಹೊಸ್ತಿಲಲ್ಲಿದೆ.
ಶಿವಮೊಗ್ಗ ಸಮೀಪದ ಲಕ್ಕಿನಕೊಪ್ಪದಲ್ಲಿರುವ ಅಮೂಲ್ಯಶೋಧ ಮ್ಯೂಸಿಯಂನ ಒಳನೋಟ
ನಾಣ್ಯ ದರ್ಶಿನಿ, ಮಲೆನಾಡು ದರ್ಶನಿ ಹಾಗೂ ಭಾರತ ದರ್ಶಿನಿ ಎಂಬ ಮೂರು ವಿಭಾಗಗಳಲ್ಲಿ ಅಮೂಲ್ಯ ಶೋಧ ವಸ್ತು ಸಂಗ್ರಹಾಲಯವಿದೆ. ಆನೆ, ಸೂರ್ಯ ಚಿಹ್ನೆಗಳ ಒಳಗೊಂಡ ಕ್ರಿಸ್ತಪೂರ್ವ 8ನೇ ಶತಮಾನ ಪಂಚ್ ಮಾರ್ಕ್ ನಾಣ್ಯಗಳು ಉತ್ತಮ ಗುಣಮಟ್ಟದಿಂದ ಕೂಡಿವೆ. ಕುಶಾನರ ಆರಂಭದ ಕಾಲದ ಶಿವನ ಚಿತ್ರ, ಕಾನಿಷ್ಕನ ಕಾಲದ ಬುದ್ಧನ ಚಿತ್ರ ಇರುವ ತಾಮ್ರದ ನಾಣ್ಯಗಳು, ಅಶೋಕನ ಕಾಲ, ಗುಪ್ತರ ಕಾಲದ ಬೆಳ್ಳಿಯ ನಾಣ್ಯಗಳು, ಆಗಿನ ಕಾಲದಲ್ಲಿ ಇಂಡೋ–ಸಾರ್ಸೆರಿಯನ್ ರಾಜರ ಮುಖದ ಬೆಳ್ಳಿಯ ನಾಣ್ಯಗಳು ಅಮೂಲ್ಯ ಶೋಧದ ಸಂಗ್ರಹದಲ್ಲಿವೆ.
ದೇಶದ ಮೊಟ್ಟ ಮೊದಲ ನಾಣ್ಯಗಳ ನೊಡಬೇಕಾದರೆ ಇಲ್ಲಿಗೆ ಬರಬೇಕು. 500 ವರ್ಷಗಳ ಹಿಂದಿನ ದೇವರ ಮೂರ್ತಿಗಳು ಇಲ್ಲಿವೆ. ಪ್ರಾಚ್ಯ ಲಿಪಿಗಳನ್ನು ಓದುವ ಕಲೆ ರೂಢಿಸಿಕೊಂಡಿದ್ದ ಖಂಡೋಬರಾವ್ ಪುರಾತನ ವಸ್ತುಗಳು ಎಲ್ಲಿಯೇ ಸಿಕ್ಕಿದರೂ ಅವುಗಳನ್ನು ಖರೀದಿಸಿ ತರುತ್ತಿದ್ದರು. ಅದರ ಫಲವಾಗಿ ಮಲೆನಾಡಿನ ಜನರು ಅನಾದಿಕಾಲದಿಂದಲೂ ಬಳಸುತ್ತಿದ್ದ ಮರದ ಸಾಮಗ್ರಿಗಳು, ಕೃಷಿ ಪದ್ಧತಿ, ಜನಜೀವನ, ಬದುಕಿನ ರೀತಿ ಬಿಂಬಿಸುವ ಪರಿಕರಗಳನ್ನು ಮ್ಯೂಸಿಯಂನಲ್ಲಿ ಕಾಣಬಹುದಾಗಿದೆ. ಭಾರತವನ್ನು ಆಳಿದ ರಾಜ ಮಹಾರಾಜರು ಬಳಸುತ್ತಿದ್ದ ಉಡುಪು, ಕತ್ತಿ, ತಲಾರಿ, ಈಟಿ, ಭರ್ಜಿ, ನಗಾರಿ, ಕಹಳೆಗಳು. ತಾಳೆಗರಿ, ಗ್ರಾಮಾಫೋನ್, ರೇಡಿಯೊ, ಸಂಗೀತ ಪರಿಕರ, ಹಳೆಯ ವೈವಿಧ್ಯಮಯ ಸಾಮಗ್ರಿಗಳು ಇಲ್ಲಿವೆ.
ಕೃಷ್ಣದೇವರಾಯ ತನ್ನ ಆಡಳಿತದ ಅವಧಿಯಲ್ಲಿ ತಿರುಪತಿಗೆ ಹೋದಾಗ ಅಲ್ಲಿ ತಿಮ್ಮಪ್ಪನಿಗೆ ಕನಕಾಭಿಷೇಕ ಮಾಡಿಸಿ ಅದರ ನೆನಪಿಗೆ ಬಂಗಾರದ ನಾಣ್ಯ ಟಂಕಿಸುತ್ತಾರೆ. ಮುಂದೆ ಸದಾಶಿವರಾಯನ, ದೇವರಾಯರ ಕಾಲಕ್ಕೆ ಹಂಪಿಯಲ್ಲಿ ವಿರೂಪಾಕ್ಷ ಮುಖ್ಯ ಆಗುತ್ತಾನೆ. ವಿಜಯನಗರ ಸಾಮ್ರಾಜ್ಯದಲ್ಲಿ ಶೈವ ಹಾಗೂ ವೈಷ್ಣವ ಪಂಥದ ಬದಲಾವಣೆಗಳ ಇತಿಹಾಸದ ಹಾದಿಯನ್ನು ಅಮೂಲ್ಯ ಶೋಧದಲ್ಲಿನ ಸಂಗ್ರಹದ ನಾಣ್ಯಗಳ ರೂಪದಲ್ಲಿ ನೋಡಬಹುದು. ಕೇಂದ್ರ ಸರ್ಕಾರ ಬೇರೆ ಬೇರೆ ಕಾಲದಲ್ಲಿ ಬಿಡುಗಡೆ ಮಾಡಿದ ಅಪರೂಪದ ಬೆಳ್ಳಿಯ ನಾಣ್ಯಗಳು, ಟಿಪ್ಪು ಸುಲ್ತಾನ ಕಾಲದ 1 ಹಾಗೂ 2 ರುಪೀಸ್, ಶಿವ–ಪಾವರ್ತಿ ಜೊತೆಗೆ ಟಂಕಿಸಿದ ಹೈದರಿ ಹೆಸರಿನ ನಾಣ್ಯ, ಟಿಪ್ಪು ಕಾಲದ ಪರ್ಶಿಯನ್ ಮಾದರಿಯ ನಾಣ್ಯಗಳು ಇಲ್ಲಿವೆ. ಬನವಾಸಿಯ ಚುಟುಗಳ ಕಾಲದ ಸೀಸದ ನಾಣ್ಯ, ಚಂದ್ರವಳ್ಳಿಯಲ್ಲಿ ಹಾನಗಲ್ ಕದಂಬರ ಕಾಲದ ಹನುಮಂತನ ಚಿತ್ರದ ನಾಣ್ಯ, ಬನವಾಸಿ ಶಾರ್ದೂಲ, ಗೋವಾ ಕದಂಬರ ಶಾರ್ದೂಲದ ಚಿತ್ರ, ಕನ್ನಡ ಲಿಪಿಯ ನಾಣ್ಯಗಳು ಕಾಣಸಿಗುತ್ತವೆ. ಇವು ಕರ್ನಾಟಕದವರು ಗೋವಾಗೆ ಹೋಗಿ ಆಳ್ವಿಕೆ ಮಾಡಿದ ಕುರುಹು ಆಗಿವೆ.
ಕಾಳುಮೆಣಸು, ಏಲಕ್ಕಿ, ಲವಂಗ ಖರೀದಿಯ ಬದಲಿಗೆ ರೋಮನ್ನರು ಕೊಡುತ್ತಿದ್ದ ಬೆಳ್ಳಿ ನಾಣ್ಯಗಳ ಜೊತೆಗೆ ಕಾಳುಮೆಣಸಿನ ರಾಣಿ, ಗೇರುಸೊಪ್ಪೆಯ ಚೆನ್ನಬೈರಾದೇವಿ, ಸಾಳುವಮಲ್ಲನ ಕಾಲದ ನಾಣ್ಯ, ಪರಿಕರಗಳು ಇಲ್ಲಿವೆ.
ಅಮೂಲ್ಯ ಶೋಧದಲ್ಲಿ ಕೆಳದಿ ಸಾಮ್ರಾಜ್ಯದ ಪ್ರಸಿದ್ಧ ಅರಸ ಶಿವಪ್ಪನಾಯಕನ ಅರಮನೆ ತದ್ರೂಪ ನೋಡುಗರ ಮನ ಸೂರೆಗೊಳ್ಳುತ್ತದೆ. ಮ್ಯೂಸಿಯಂನ ಒಳಗೆ ಇಟ್ಟಿರುವ ಪತ್ನಿ ಯಶೋಧಾ ಅವರ ದೊಡ್ಡ ಭಾವಚಿತ್ರ ಅವರ ಪ್ರೇಮದ ಪರಿಯನ್ನು ಬಿಂಬಿಸುತ್ತದೆ.
ಶಿವಮೊಗ್ಗ ಸಮೀಪದ ಲಕ್ಕಿನಕೊಪ್ಪದಲ್ಲಿರುವ ಅಮೂಲ್ಯಶೋಧ ಮ್ಯೂಸಿಯಂ ಕಟ್ಟಡದ ಹೊರಾಂಗಣದ ನೋಟ
ಇಲ್ಲಿಗೆ ಭಾನುವಾರದಿಂದ ಮಂಗಳವಾರದವರೆಗೆ ಮೂರು ದಿನ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರುತ್ತದೆ. ದೂರದಿಂದ ಬಂದವರಿಗೆ ಅಲ್ಲಿ ಕ್ಯಾಂಟಿನ್ ಸೌಲಭ್ಯವೂ ಇದೆ.ಮ್ಯೂಸಿಯಂನ ಭದ್ರತೆಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದು, ಇಬ್ಬರು ಕಾವಲುಗಾರರಿಗೆ ಸ್ವಂತ ಖರ್ಚಿನಲ್ಲೇ ವೇತನ ಕೊಡುತ್ತಿದ್ದಾರೆ.
‘ದೇವರು ದೊಡ್ಡವನು. ಇಲ್ಲಿಯವರೆಗೂ ಇದೆಲ್ಲವನ್ನೂ ಅವನೇ ರಕ್ಷಣೆ ಮಾಡಿದ್ದಾನೆ. ನಾವೇನೂ ಮಾಡಿಲ್ಲ’ ಎಂದು ಹೇಳುವ ಖಂಡೋಬರಾವ್ ಸದ್ಯ ಶಿವಮೊಗ್ಗದ ಗಾಂಧಿನಗರದ ಮುಖ್ಯರಸ್ತೆಯಲ್ಲಿ ಇಬ್ಬರು ಪುತ್ರರೊಂದಿಗೆ ವಾಸವಿದ್ದಾರೆ.
ಶಿವಮೊಗ್ಗ ಸಮೀಪದ ಲಕ್ಕಿನಕೊಪ್ಪದಲ್ಲಿರುವ ಅಮೂಲ್ಯಶೋಧ ಮ್ಯೂಸಿಯಂನ ಒಳನೋಟ
‘ದೇಶದ ವಿವಿಧೆಡೆ ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆ, ಖಾಸಗಿ ಟ್ರಸ್ಟ್‌ಗಳು ಮ್ಯೂಸಿಯಂಗಳನ್ನು ಮಾಡಿವೆ. ಆದರೆ ಇಷ್ಟು ಚೆನ್ನಾಗಿರುವ ಏಕವ್ಯಕ್ತಿ ಮ್ಯೂಸಿಯಂ ಇಡೀ ದೇಶದಲ್ಲಿಯೇ ಇಲ್ಲ’ ಎಂದು ಶಿವಮೊಗ್ಗದ ಹವ್ಯಾಸಿ ನಾಣ್ಯ ಸಂಗ್ರಹಕಾರರೂ ಆದ ಹಿರಿಯ ಪತ್ರಕರ್ತ ಎಸ್.ವಿ.ಚಂದ್ರಕಾಂತ್ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಪ್ರವಾಸೋದ್ಯಮ ಇಲಾಖೆಗೆ ಮನ್ನಣೆ ಕೊಟ್ಟರೆ ಅಮೂಲ್ಯ ಶೋಧಕ್ಕೆ ಹೆಚ್ಚು ಶಕ್ತಿ ತುಂಬಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು, ಇತಿಹಾಸ ಆಸಕ್ತರು ಇಲ್ಲಿಗೆ ಬರುವ ಜೊತೆಗೆ ಮುಂದಿನ ಪೀಳಿಗೆಗೆ ಉಳಿಯಲಿದೆ ಎಂದು ಚಂದ್ರಕಾಂತ್ ಕಳಕಳಿ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.