ADVERTISEMENT

PV Web Exclusive | ಈ ವಿಷಯದಲ್ಲಿ ಬಳ್ಳಾರಿಯೇ ಶ್ರೀಮಂತ ಜಿಲ್ಲೆ

ಆರ್. ಹರಿಶಂಕರ್
Published 2 ಫೆಬ್ರುವರಿ 2026, 4:51 IST
Last Updated 2 ಫೆಬ್ರುವರಿ 2026, 4:51 IST
<div class="paragraphs"><p>ಬಳ್ಳಾರಿ ಡಿಎಂಎಫ್‌ನ ಎಐ ಚಿತ್ರ&nbsp;</p></div>

ಬಳ್ಳಾರಿ ಡಿಎಂಎಫ್‌ನ ಎಐ ಚಿತ್ರ 

   

ಬಳ್ಳಾರಿ: ರಾಜ್ಯದ ಎಲ್ಲ ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್‌)ಗಳಿಗೆ ಈ ವರೆಗೆ ಒಟ್ಟು ₹4828.34 ಕೋಟಿ ಸಿಕ್ಕಿದೆ. ಇದರಲ್ಲಿ ಬಳ್ಳಾರಿ ಜಿಲ್ಲೆಯೊಂದಕ್ಕೆ ಸಿಕ್ಕ ಮೊತ್ತ ₹2623.82 ಕೋಟಿ. ಹೀಗಾಗಿ ಡಿಎಂಎಫ್‌ ವಿಚಾರದಲ್ಲಿ ಬಳ್ಳಾರಿ ಜಿಲ್ಲೆ ರಾಜ್ಯದ ಯಾವುದೇ ಜಿಲ್ಲೆಗಿಂತಲೂ ಅತ್ಯಂತ ಶ್ರೀಮಂತ ಜಿಲ್ಲೆ.    

ಡಿಎಂಎಫ್‌ ಹಣವನ್ನು ಆಯಾ ಜಿಲ್ಲೆಗಳಲ್ಲಿ ಗಣಿಗಾರಿಕೆ ಕಾರ್ಯಾಚರಣೆಯ ಪ್ರಭಾವಕ್ಕೆ ಒಳಗಾದ ಪ್ರದೇಶಗಳಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. ಹಾಗೆ ನೋಡಿದರೆ, ಸಾವಿರಾರು ಕೋಟಿ ಹಣವನ್ನು ಡಿಎಂಎಫ್‌ನಲ್ಲಿ ಹೊಂದಿರುವ ಬಳ್ಳಾರಿಯು ಇಷ್ಟು ಹೊತ್ತಿಗೆ ಗಮನಾರ್ಹ ಅಭಿವೃದ್ಧಿಯಾಗಬೇಕಾಗಿತ್ತು. ಆದರೆ, ಹಾಗೆಲ್ಲ ಸುಲಭಕ್ಕೆ, ಹೇಗೆಂದರೆ ಹಾಗೆ ಈ ಹಣ ಬಳಸಲು ಸಾಧ್ಯವಿಲ್ಲ. ಅದಕ್ಕೆಂದೇ ಪ್ರತ್ಯೇಕ ನಿಯಮಾವಳಿ, ಕಾನೂನುಗಳಿವೆ. 

ADVERTISEMENT

ಹಾಗಾದರೆ, ಡಿಎಂಎಫ್‌ ಎಂದರೇನು, ಯಾವಾಗ ಸ್ಥಾಪನೆಯಾಯಿತು, ಬಳ್ಳಾರಿಗೆ ಮಾತ್ರ ಇಷ್ಟು ಹಣ ಸಿಗಲು ಕಾರಣವೇನು, ಬೇರೆ ಜಿಲ್ಲೆಗಳಲ್ಲಿ ಎಷ್ಟು ಹಣವಿದೆ, ಡಿಎಂಎಫ್‌ನ ಮೂಲ ಉದ್ದೇಶವೇನು, ಹಣವಿದ್ದರೂ ಬಳಸಲಾಗದ ಪರಿಸ್ಥಿತಿ ಏಕೆ... ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.    

ಡಿಎಂಎಫ್‌ ಎಂದರೇನು?

ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್‌)ಗಳು ಶಾಸನಬದ್ಧ, ಲಾಭರಹಿತ ಟ್ರಸ್ಟ್‌ಗಳಾಗಿವೆ. 2015ರಲ್ಲಿ ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) (ಎಂಎಂಡಿಆರ್‌) ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ದೇಶದ ಎಲ್ಲ ಜಿಲ್ಲೆಗಳಲ್ಲಿ ಡಿಎಂಎಫ್‌ಗಳನ್ನು ಸ್ಥಾಪಿಸಲು ಭಾರತ ಸರ್ಕಾರ ಅವಕಾಶ ಕಲ್ಪಿಸಿದೆ. ಗಣಿಗಾರಿಕೆ ಸಂಬಂಧಿತ ಚಟುವಟಿಕೆಗಳಿಂದ ಪ್ರಭಾವಿತವಾದ ಪ್ರದೇಶಗಳು, ಜನಸಮುದಾಯದ ಹಿತಾಸಕ್ತಿ ಮತ್ತು ಕಲ್ಯಾಣಕ್ಕಾಗಿ ಎಲ್ಲ ಡಿಎಂಎಫ್‌ಗಳು ‘ಪ್ರಧಾನ ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ (ಪಿಎಂಕೆಕೆವೈ)’ ಅಡಿಯಲ್ಲಿ ಯೋಜನೆಗಳನ್ನು ರೂಪಿಸಿ, ಜಾರಿಗೆ ತರುತ್ತವೆ. 

ಎಲ್ಲಿಂದ ಹಣ?: ಪ್ರತಿ ಜಿಲ್ಲೆಗಳ ಮುಖ್ಯ ಖನಿಜ ( ಚಿನ್ನ, ಕಬ್ಬಿಣ, ಮ್ಯಾಂಗನೀಸ್‌, ಸುಣ್ಣದ ಕಲ್ಲು, ಲ್ಯಾಟರೇಟ್‌ ರೀತಿಯ ಅದಿರು) ಮತ್ತು ಉಪ ಖನಿಜ (ಮರಳು, ಕಟ್ಟಡ ಕಲ್ಲು,ಸ್ಫಟಿಕ ಶಿಲೆ, ಎಂ.ಸ್ಯಾಂಡ್‌, ಡೋಲಾಮೈಟ್‌, ಗ್ರಾನೈಟ್‌ ಇತ್ಯಾದಿ)ಗಳ ಗುತ್ತಿಗೆದಾರರರು ತಾವು ಉತ್ಪಾದಿಸುವ ಪ್ರಮಾಣದ ಆಧಾರದ ಮೇಲೆ ರಾಜ್ಯ ಸರ್ಕಾರಕ್ಕೆ ರಾಯಧನ ಪಾವತಿಸುತ್ತಾರೆ. ರಾಯಧನದ ಒಂದು ಭಾಗವವನ್ನು ಡಿಎಂಫ್‌ಗಳಿಗೆ ಸಂದಾಯ ಮಾಡುತ್ತಾರೆ.

ಯಾವುದಕ್ಕೆ ಬಳಕೆ: ಕುಡಿಯುವ ನೀರು, ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ ಮತ್ತು ಗಣಿಗಾರಿಕೆ ಪೀಡಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯಂತಹ ಕಲ್ಯಾಣ ಯೋಜನೆಗಳಿಗೆ ಮಾತ್ರವೇ ಡಿಎಂಎಫ್‌ಗಳು ಹಣವನ್ನು ಖರ್ಚು ಮಾಡಬೇಕು. 

ಹೇಗೆ ಬಳಸಬೇಕು: ಗಣಿಗಾರಿಕೆಯಿಂದ ತೀವ್ರ ಹಾನಿಗೊಳಗಾದ ಪ್ರದೇಶ (ಆದ್ಯತೆ ವಲಯಕ್ಕೆ)ಗಳಿಗೆ ಡಿಎಂಎಫ್‌ನ ಶೇ 70 ಹಣವನ್ನು, ಪ್ರಭಾವ ಕಡಿಮೆ ಇರುವ ವಲಯಗಳಿಗೆ ಶೇ 30ರಷ್ಟು ಹಣವನ್ನು ಬಳಸಲು 2024ರ ತಿದ್ದುಪಡಿ ಮಾರ್ಗಸೂಚಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. 

ಬಳ್ಳಾರಿಗೇ ಏಕೆ ಅಧಿಕ ಹಣ?

ಬಳ್ಳಾರಿ ಜಿಲ್ಲೆಯು ಕಬ್ಬಿಣ, ಮ್ಯಾಂಗನೀಸ್‌ನಂಥ ಮುಖ್ಯ ಖನಿಜಗಳನ್ನು, ಭಾರಿ ಪ್ರಮಾಣದ ಗಣಿಗಳನ್ನು ತನ್ನ ಒಡಲಲ್ಲಿಟ್ಟುಕೊಂಡಿದೆ. ಅಂದಾಜು 15204.39 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ವಾರ್ಷಿಕ 4 ಸಾವಿರ ಕೋಟಿಗೂ ಅಧಿಕ ರಾಯಧನ ಸರ್ಕಾರಕ್ಕೆ ಸಂದಾಯವಾಗುತ್ತಿದೆ. ಈ ಪೈಕಿ ನಿರ್ದಿಷ್ಟ ಪ್ರತಿಶತದಷ್ಟು ಹಣವನ್ನು ಡಿಎಂಎಫ್‌ಗಳಿಗೆ ನೀಡಲಾಗುತ್ತದೆ. ಆದ್ದರಿಂದಲೇ ಬಳ್ಳಾರಿ ಡಿಎಂಎಫ್‌ ಹೆಚ್ಚಿನ ಹಣ ಸಂಗ್ರಹವಾಗುತ್ತಿದೆ. 

2022–23ರಲ್ಲಿ ₹358.42 ಕೋಟಿ, 2023–24ರಲ್ಲಿ ₹503.26 ಕೋಟಿ, 2024–25ರಲ್ಲಿ 571.16 2025–26ರ ಡಿಸೆಂಬರ್‌ ಆರಂಭದ ಹೊತ್ತಿಗೆ ₹439.47 ಕೋಟಿ ಹಣ ಬಳ್ಳಾರಿ ಡಿಎಂಎಫ್‌ಗೆ ಸಂಗ್ರಹವಾಗಿದೆ. ಸದ್ಯ ಬಳ್ಳಾರಿ ಡಿಎಂಎಫ್‌ನಲ್ಲಿ ₹2623.82 ಕೋಟಿ ಇದೆ. ರಾಜ್ಯದ ಯಾವುದೇ ಡಿಎಂಎಫ್‌ನಲ್ಲೂ ಇಷ್ಟು ಹಣ ಇಲ್ಲ. 

ಬಳ್ಳಾರಿ ಡಿಎಂಎಫ್‌ನಲ್ಲಿ ಯಥೇಚ್ಛ ಹಣವಿರುವ ಕಾರಣಕ್ಕೇ ಇಲ್ಲಿಗೆ ಕೆಎಎಸ್‌ ಶ್ರೇಣಿಯ ಅಧಿಕಾರಿಯನ್ನು ನಿಯೋಜಿಸಿ, ಉಸ್ತುವಾರಿ ನೀಡಲಾಗಿದೆ.   

ಬಳ್ಳಾರಿ ನಂತರದ ಸ್ಥಾನದಲ್ಲಿ ಚಿತ್ರದುರ್ಗ (₹553.03 ಕೋಟಿ), ಕಲಬುರಗಿ (₹579.80 ಕೋಟಿ), ವಿಜಯನಗರ (265.48 ಕೋಟಿ) ಇವೆ. 

ರಾಜ್ಯ ರಾಜಧಾನಿ ಬೆಂಗಳೂರಿನ ಡಿಎಂಎಫ್‌ನಲ್ಲಿ ₹54.73 ಕೋಟಿ, ಬೆಂಗಳೂರು ಗ್ರಾಮಾಂತರದಲ್ಲಿ ₹42.74 ಕೋಟಿ, ಮೈಸೂರು ಡಿಎಂಎಫ್‌ನಲ್ಲಿ ₹3.43ಕೋಟಿ, ದಕ್ಷಿಣ ಕನ್ನಡ ಡಿಎಂಎಫ್‌ನಲ್ಲಿ ₹19.19 ಕೋಟಿ ಹಣವಿದೆ.

ಉಳಿದ ಜಿಲ್ಲೆಗಳ ಡಿಎಂಎಫ್‌ನಲ್ಲಿ ಎಷ್ಟು ಹಣವಿದೆ ಎಂಬುದನ್ನು ತಿಳಿಯಲು ಈ ಲಿಂಕ್‌ ಕ್ಲಿಕ್‌ ಮಾಡಿ :  https://dmft.karnataka.gov.in/Portal/ 

ಹಣ ಬಳಸಲಾಗದ ಸ್ಥಿತಿ 

ಡಿಎಂಎಫ್‌ ಹಣ ಬಳಸಲು ಕೇಂದ್ರ ಸರ್ಕಾರವು 2024ರಲ್ಲಿ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಇದನ್ನು ರಾಜ್ಯ ಸರ್ಕಾರ ಒಪ್ಪಿಕೊಳ್ಳಬೇಕು ಅಥವಾ ತಿದ್ದುಪಡಿ ಮಾಡಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಆದರೆ, ಈ ವರೆಗೆ ರಾಜ್ಯ ಸರ್ಕಾರದಿಂದ ಈ ಕೆಲಸ ಆಗಿಲ್ಲ. ಹೀಗಾಗಿ ಡಿಎಂಎಫ್‌ಗಳಲ್ಲಿ ಹೊಸದಾಗಿ ಕ್ರಿಯಾ ಯೋಜನೆಗಳೂ ಆಗಿಲ್ಲ. ಯೋಜನೆಗಳೂ ಜಾರಿಗೆ ಬರುತ್ತಿಲ್ಲ. 

ಡಿಎಂಎಫ್‌ನಲ್ಲಿ ಶ್ರೀಮಂತ ರಾಜ್ಯಗಳು

ಒಡಿಶಾ–₹28,953.90 ಕೋಟಿ, ಛತ್ತೀಸಗಡ – ₹13,984.69 ಕೋಟಿ ಜಾರ್ಖಂಡ್‌–₹13,764.81 ಕೋಟಿ, ರಾಜಸ್ಥಾನ ₹10,199.77 ಕೋಟಿ, ಮಧ್ಯಪ್ರದೇಶ ₹7,755.91 ಕೋಟಿ ಹಣವನ್ನುವಿದೆ. ಕರ್ನಾಟಕದಲ್ಲಿ ₹4828.34 ಕೋಟಿ ಇರುವುದಾಗಿ ಡಿಎಂಎಫ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.