ADVERTISEMENT

PV Web Exclusive: ಚಿಕ್ಕಬಳ್ಳಾಪುರದಲ್ಲಿ ಕೈಗಾರಿಕಾ ಕ್ರಾಂತಿಗೆ ಹೆಜ್ಜೆ

10 ಸಾವಿರ ಎಕರೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅಧಿಸೂಚನೆ

ಡಿ.ಎಂ.ಕುರ್ಕೆ ಪ್ರಶಾಂತ
Published 8 ಫೆಬ್ರುವರಿ 2026, 8:48 IST
Last Updated 8 ಫೆಬ್ರುವರಿ 2026, 8:48 IST
<div class="paragraphs"><p>ಜಂಗಮಕೋಟೆ ಹೋಬಳಿಯಲ್ಲಿ ಜಮೀನು ವಶ ವಿರೋಧಿಸಿ ರೈತರ ಪ್ರತಿಭಟನೆ</p></div>

ಜಂಗಮಕೋಟೆ ಹೋಬಳಿಯಲ್ಲಿ ಜಮೀನು ವಶ ವಿರೋಧಿಸಿ ರೈತರ ಪ್ರತಿಭಟನೆ

   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೈಗಾರಿಕೀಕರಣದ ಪರ್ವ ದೊಡ್ಡ ಮಟ್ಟದಲ್ಲಿ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮತ್ತು ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು 7,856.37 ಎಕರೆ ಭೂ ಪ್ರದೇಶಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. 

ಅಲ್ಲದೆ 2,278.10 ಎಕರೆಯನ್ನು ಕರ್ನಾಟಕ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಸ್ವಾಧೀನಕ್ಕೆ ಪಡೆಯಲಾಗಿದ್ದು ಈ ಭೂ ಮಾಲೀಕರಿಗೆ ಪರಿಹಾರ ವಿತರಣೆ ಸಹ ಪ್ರಗತಿಯಲ್ಲಿದೆ.

ADVERTISEMENT

ಹೀಗೆ ಅಂತಿಮ ಅಧಿಸೂಚನೆ ಮತ್ತು ಪ್ರಾಥಮಿಕ ಅಧಿಸೂಚನೆ ಸೇರಿ ಜಿಲ್ಲೆಯಲ್ಲಿ 10,134 ಎಕರೆಯು ಕೈಗಾರಿಕೀಕರಣದ ಹಂತದಲ್ಲಿ ಇವೆ. ಪ್ರಾಥಮಿಕ ಅಧಿಸೂಚನೆಯ ಹಂತದಲ್ಲಿರುವ ಈ ಯೋಜನೆಗಳು ಯಾವುದೇ ಅಡೆತಡೆಗಳು ಇಲ್ಲದೆ ಜಾರಿಯಾದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಕೈಗಾರಿಕಾ ಬೆಳವಣಿಗಳು ಆಗಲಿವೆ. ಆ ಮೂಲಕ ಉದ್ಯೋಗ ಸೃಷ್ಟಿಯಾಗಲಿದೆ ಎನ್ನುವ ಆಶಾವಾದ ಗರಿಗೆದರಿದೆ.

ಮುಂದಿನ ನಾಲ್ಕೈದು ವರ್ಷಗಳಲ್ಲಿ ಚಿಕ್ಕಬಳ್ಳಾಪುರವು ಕೈಗಾರಿಕೀಕರಣದ ವಿಚಾರದಲ್ಲಿ ಪ್ರಮುಖ ಪ್ರದೇಶವಾಗುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸುವರು.

ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಾದ ಕೋಲಾರ, ಬೆಂಗಳೂರು ದಕ್ಷಿಣ (ರಾಮನಗರ) ಮತ್ತು ತುಮಕೂರು ಜಿಲ್ಲೆಯಲ್ಲಿ ಕೈಗಾರಿಕೀಕರಣವು ವೇಗವಾಗಿ ಬೆಳೆಯುತ್ತಿದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾತ್ರ ಇಲ್ಲಿಯವರೆಗೆ ಕೈಗಾರಿಕೀಕರಣ ಬೆಳವಣಿಗೆಗಳು ದೊಡ್ಡ ಮಟ್ಟದಲ್ಲಿ ಆಗಿರಲಿಲ್ಲ. 

ಗೌರಿಬಿದನೂರು ತಾಲ್ಲೂಕಿನ ಕುಡುಮಲಕುಂಟೆಯಲ್ಲಿ ಮಾತ್ರ ಕೈಗಾರಿಕಾ ಪ್ರದೇಶವಿದೆ. ಕುಡುಮಲಕುಂಟೆ ಹೊರತುಪಡಿಸಿದರೆ ಜಿಲ್ಲೆಯ ಯಾವ ಭಾಗದಲ್ಲಿಯೂ ಕೈಗಾರಿಕೆಗಳಿಗೆ ವೇಗ ದೊರೆತಿರಲಿಲ್ಲ.

ಡಾ.ಎಂ.ಸಿ.ಸುಧಾಕರ್ ಚಿಂತಾಮಣಿ ಶಾಸಕರಾಗಿದ್ದ ವೇಳೆ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಶಂಕುಸ್ಥಾಪನೆ ನಡೆದಿತ್ತು. ಆ ನಂತರದ ದಿನಗಳಲ್ಲಿ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಿಂದ ಹಿನ್ನಡೆ ಆಯಿತು. ಈಗ ಮತ್ತೆ ಸ್ವಕ್ಷೇತ್ರದಲ್ಲಿ ಕೈಗಾರಿಕೆಗಳನ್ನು ಬೆಳೆಸುವ ದೊಡ್ಡ ಗುರಿಯನ್ನು ಸಚಿವರು ಹೊಂದಿದ್ದಾರೆ.  

ಜಂಗಮಕೋಟೆ ಹಬ್‌: ಶಿಡ್ಲಘಟ್ಟ ತಾಲ್ಲೂಕಿನ ಜಂಗಮ ಕೋಟೆ ಹೋಬಳಿಯ ಸಂಜೀವಪುರ, ತೋಟ್ಲಗಾನಹಳ್ಳಿ, ಅರಿಕೆರೆ, ಬಸವಾ‍ಪಟ್ಟಣ, ಹೊಸಪೇಟೆ, ಚೊಕ್ಕೊಂಡನಹಳ್ಳಿ, ಯದ್ದಲತಿಪ್ಪೇನಹಳ್ಳಿ, ಕುಲುಮೆ ಹೊಸೂರು, ನಡಪಿನಾಯಕನಹಳ್ಳಿ, ತಾದೂರು, ಯಣ್ಣಂಗೂರು, ದೇವಗಾನಹಳ್ಳಿ, ಗೊಲ್ಲಹಳ್ಳಿ ಗ್ರಾಮಗಳ ಬಳಿ 2,823 ಎಕರೆಯಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ.  

ಈ ಯೋಜನೆ ಕಾರ್ಯಗತವಾದರೆ ಶಿಡ್ಲಘಟ್ಟ ತಾಲ್ಲೂಕಿಗೆ ಬೃಹತ್ ಪ್ರಮಾಣದಲ್ಲಿ ಜಾರಿಯಾದ ಕೈಗಾರಿಕಾ ಯೋಜನೆ ಇದಾಗುತ್ತದೆ. ಜಂಗಮಕೋಟೆ ಹೋಬಳಿಯ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಮೀಪವಾಗುತ್ತದೆ. ಈ ಹೋಬಳಿಯ ಅಮರಾವತಿ ಬಳಿಯೇ ಬೆಂಗಳೂರು ಉತ್ತರ ವಿವಿ ಕ್ಯಾಂಪಸ್ ನಿರ್ಮಾಣಕ್ಕೆ ಶಂಕು ಸ್ಥಾಪನೆ ನಡೆದಿದೆ. ಈ ಎಲ್ಲ ಬೆಳವಣಿಗೆಗಳು ಕೃಷಿಯೇ ಪ್ರಧಾನವಾಗಿರುವ ಶಿಡ್ಲಘಟ್ಟ ತಾಲ್ಲೂಕಿನ ಆರ್ಥಿಕ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ.

ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಬಾಗೇಪಲ್ಲಿಯಲ್ಲಿ ಈ ಹಿಂದೆ ಕೈಗಾರಿಕೀಕರಣಕ್ಕೆ ನಡೆದ ಪ್ರಯತ್ನಗಳು ವಿಫಲವಾಗಿವೆ. ನೆರೆಯ ಆಂಧ್ರಪ್ರದೇಶದಲ್ಲಿ ಕೊರಿಯಾ ದೇಶದ ಕಿಯಾ ಮೋಟರ್ಸ್ ಈಗಾಗಲೇ ದೊಡ್ಡ ಕೈಗಾರಿಕಾ ಘಟಕಗಳನ್ನು ಹೊಂದಿದೆ. ಅವರು ನೆರೆಯ ಬಾಗೇಪಲ್ಲಿಯಲ್ಲಿ ತಮ್ಮ ನೆಲೆ ವಿಸ್ತರಿಸಲು ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಸಹ ಮಾಡಿದ್ದರು. ಆದರೆ ಆ ಯಾವ ಯೋಜನೆಗಳು ಕಾರ್ಯರೂಪಕ್ಕೆ ಬರಲಿಲ್ಲ. 

15 ವರ್ಷಗಳ ಹಿಂದೆ ಇಲ್ಲಿ ಕೈಗಾರಿಕೆಗಳಿಗಾಗಿ ಭೂಮಿ ಗುರುತಿಸಲಾಗಿತ್ತು. ಆದರೆ ಯೋಜನೆಗಳ ಕಾರ್ಯಗತವಾಗಿರಲಿಲ್ಲ. ಈಗ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕೈಗಾರಿಕೀಕರಣಕ್ಕೆ ಮತ್ತೆ ಜಮೀನು ಗುರುತಿಸಲಾಗಿದೆ. ಕೊಂಡರೆಡ್ಡಿ ಪಲ್ಲಿ ಬಳಿ 684 ಎಕರೆ ಜಮೀನು ಗುರುತಿಸಲಾಗಿದೆ.  

ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿರುವ ಗೌರಿಬಿದನೂರು ತಾಲ್ಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶ ಈಗಾಗಲೇ ಅಭಿವೃದ್ಧಿ ಹೊಂದಿದೆ. ಇಲ್ಲಿ 820 ಎಕರೆಯಲ್ಲಿ ಮೂರನೇ ಹಂತದ ಘಟಕ ವಿಸ್ತರಣೆಗೆ ಹೆಜ್ಜೆ ಇಡಲಾಗಿದೆ.

ಕೆಲವೇ ವರ್ಷಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೈಗಾರಿಕೆಗಳು ದೊಡ್ಡ ಮಟ್ಟದಲ್ಲಿ ಬೆಳೆಯಲಿವೆ ಎನ್ನುತ್ತಾರೆ ಕೈಗಾರಿಕಾ ಇಲಾಖೆ ಅಧಿಕಾರಿಗಳು.

ಜಂಗಮಕೋಟೆ ಹೋಬಳಿಯಲ್ಲಿ ಜಮೀನು ವಿಚಾರವಾಗಿ ಭೂಸ್ವಾಧೀನ ಅಧಿಕಾರಿ ಜೊತೆ ರೈತರ ಚರ್ಚೆ

ಜಂಗಮಕೋಟೆ ಸುತ್ತ ಹಗ್ಗಜಗ್ಗಾಟ

ಜಂಗಮಕೋಟೆ ಸುತ್ತಮುತ್ತ ಕೈಗಾರಿಕೆ ಪ್ರದೇಶ ಅಭಿವೃದ್ಧಿಗೆ ಜಮೀನು ಗುರುತಿಸಲಾಗಿದೆ. ಈ ಜಮೀನನ್ನು ಸಂಪೂರ್ಣವಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಬೇಕು ಎಂದು ಕೆಲವು ರೈತರು ಮತ್ತು ರೈತ ಸಂಘಟನೆಯ ಮುಖಂಡರು ಹೋರಾಟ ನಡೆಸಿದ್ದಾರೆ.

ಕೆಐಎಡಿಬಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ರಚಿಸಿಕೊಂಡಿದ್ದಾರೆ. ಮತ್ತೊಂದೆಡೆ ಕೆಲವು ರೈತರು, ರೈತ ಸಂಘಟನೆಗಳು ಜಮೀನು ನೀಡುತ್ತೇವೆ, ಉತ್ತಮ ಪರಿಹಾರ ನೀಡಿ ಎಂದು ಹೋರಾಟ ನಡೆಸುತ್ತಿವೆ. ಹೀಗೆ ಜಮೀನು ನೀಡುವ ವಿಚಾರದಲ್ಲಿಯೇ ಪರ ವಿರೋಧವಿದೆ. 

‘ಐದಾರು ವರ್ಷದಲ್ಲಿ ಚಿತ್ರಣವೇ ಬದಲು’

ಚಿಕ್ಕಬಳ್ಳಾಪುರ ಸರ್‌.ಎಂ.ವಿಶ್ವೇಶ್ವರಯ್ಯ ಅವರು ಹುಟ್ಟಿದ ಜಿಲ್ಲೆ. ಇಂತಹ ಜಿಲ್ಲೆ ಕೈಗಾರಿಕೀಕರಣದಲ್ಲಿ ಹಿಂದುಳಿದಿದೆ. ಆದರೆ ಈಗ ಕೈಗಾರಿಕೆಗಳ ಸ್ಥಾಪನೆಗೆ ಜಮೀನು ಗುರುತಿಸಲಾಗುತ್ತಿದೆ. ಮುಂದಿನ ಐದಾರು ವರ್ಷಗಳಲ್ಲಿ ಕೈಗಾರಿಕೆಗಳ ವಿಚಾರವಾಗಿ ಜಿಲ್ಲೆಯ ಚಿತ್ರಣವೇ ಬದಲಾಗಲಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ.ಶಿವಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

1985ರಲ್ಲಿ ಚಿಕ್ಕಬಳ್ಳಾಪುರದಲ್ಲಿ 96 ಎಕರೆಯಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣವಾಗಿತ್ತು. 2010ರ ನಂತರ ಗೌರಿಬಿದನೂರಿನ ಕುಡುಮಲಕುಂಟೆ ಮತ್ತು ಚಿಂತಾಮಣಿ ತಾಲ್ಲೂಕಿನ ಮಸ್ತೇನಹಳ್ಳಿಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾದವು. ಆ ನಂತರ ಕೈಗಾರಿಕೆಗಳ ವಿಚಾರದಲ್ಲಿ ಜಿಲ್ಲೆಯು ತೀವ್ರವಾಗಿ ಹಿಂದುಳಿದಿದೆ ಎಂದು ಹೇಳಿದರು. 

ಜಿಲ್ಲಾ ಉಸ್ತುವಾರಿ ಸಚಿವರ ದೂರದೃಷ್ಟಿ ಫಲವಾಗಿ ಈಗ ಕೈಗಾರಿಕೆಗಳ ಸ್ಥಾಪನೆಗೆ ಹೆಜ್ಜೆ ಇಟ್ಟಿದ್ದೇವೆ. ಜಿಲ್ಲಾಧಿಕಾರಿ ಅವರು ಸಹ ಈ ಬಗ್ಗೆ ಸ್ಪಂದಿಸಿದ್ದಾರೆ ಎಂದರು.

ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಸಂಬಂಧಿಸಿದ ಕೈಗಾರಿಕೆಗಳು ಸ್ಥಾಪನೆಯಾಗಲಿವೆ. ದೇಶದ ವಿವಿಧ ಭಾಗಗಳಲ್ಲಿರುವ ತೋಟಗಾರಿಕಾ ಉತ್ಪನ್ನಗಳಿಗೆ ಸಂಬಂಧಿಸಿದ ಕೈಗಾರಿಕೆಗಳ ಜೊತೆ ನಾವು ಮಾತುಕತೆ ನಡೆಸಿದ್ದೇವೆ. ಅವರನ್ನು ಜಿಲ್ಲೆಗೆ ಆಹ್ವಾನಿಸಿದ್ದೇವೆ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.