ADVERTISEMENT

PV Web Exclusive: ಹಾವೇರಿಯಲ್ಲಿ ಹತ್ತಿ ಸಾಮ್ರಾಜ್ಯ ಪತನ; ಪಾಳುಬಿದ್ದ ಮಾರುಕಟ್ಟೆ

ಸಂತೋಷ ಜಿಗಳಿಕೊಪ್ಪ
Published 16 ಜನವರಿ 2026, 1:30 IST
Last Updated 16 ಜನವರಿ 2026, 1:30 IST
<div class="paragraphs"><p>ಹಾವೇರಿ ಗುತ್ತಲ ರಸ್ತೆಯಲ್ಲಿರುವ ಹತ್ತಿ ಮಾರುಕಟ್ಟೆ</p></div>

ಹಾವೇರಿ ಗುತ್ತಲ ರಸ್ತೆಯಲ್ಲಿರುವ ಹತ್ತಿ ಮಾರುಕಟ್ಟೆ

   

ಹಾವೇರಿ: ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಮಾರುಕಟ್ಟೆಗಳಲ್ಲಿ ಹೆಸರು ಮಾಡಿದ್ದ ಹಾವೇರಿಯ ‘ಹತ್ತಿ ಮಾರುಕಟ್ಟೆ’, ಇದೀಗ ತನ್ನ ನೈಜ ಕಳೆಯನ್ನು ಕಳೆದುಕೊಂಡು ಪಾಳು ಬಿದ್ದ ರೀತಿಯಲ್ಲಿ ಅವಸಾನದತ್ತ ಹೆಜ್ಜೆ ಇರಿಸುತ್ತಿದೆ.

‘ಹತ್ತಿ ಕಣಜ’ವೆಂದು ಖ್ಯಾತಿ ಪಡೆದಿದ್ದ ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿಯ ರೈತರು, ಹತ್ತಿ ಬೆಳೆಯಿಂದ ವಿಮುಖರಾಗಿ ಮೆಕ್ಕೆಜೋಳದತ್ತ ಮುಖ ಮಾಡಿದ್ದಾರೆ. ಒಂದುಕಾಲದಲ್ಲಿ ಜಿಲ್ಲೆಯ ಬಹುಪಾಲು ಪ್ರದೇಶವನ್ನು ಆವರಿಸಿ ರೈತರ ಬಾಳಿಗೆ ‘ಬಿಳಿ ಬಂಗಾರ’ವಾಗಿ ಮಿಂಚಿದ್ದ ಹತ್ತಿ, ಇದೀಗ ಜಿಲ್ಲೆಯ ರೈತರಿಂದ ಕೈ ತಪ್ಪುತ್ತಿದೆ.

ADVERTISEMENT

ಜಿಲ್ಲೆಯಲ್ಲಿ ಹತ್ತಿ ಹೆಚ್ಚಾಗಿ ಬೆಳೆಯುತ್ತಿದ್ದ ಕಾಲದಲ್ಲಿ, ಹಾವೇರಿಯ ಗುತ್ತಲ ರಸ್ತೆಯ ವೃತ್ತದಿಂದ ಎಪಿಎಂಸಿ ಮಾರುಕಟ್ಟೆವರೆಗಿನ ರಸ್ತೆಯ ಎರಡೂ ಬದಿಯಲ್ಲೂ ಹತ್ತಿ ಹಂಡಿಗೆಗಳು ಕಣ್ಣಿಗೆ ಕಾಣುತ್ತಿದ್ದವು. ರಸ್ತೆಯಲ್ಲೆಲ್ಲ ಹತ್ತಿ ಹಾರಾಡುತ್ತಿತ್ತು. ಹತ್ತಿ ಮಾರುಕಟ್ಟೆಯ ವ್ಯಾಪಾರಿಗಳು, ಹಮಾಲಿಗಳು ಹಾಗೂ ಕೂಲಿ ಕಾರ್ಮಿಕರಿಗೆ ಊಟಕ್ಕೂ ಸಮಯವಿಲ್ಲದಂತೆ ಕೆಲಸವಿತ್ತು. ಇದೇ ರಸ್ತೆ ಇದೀಗ, ಹತ್ತಿ ಹಂಡಿಗೆ ಇಲ್ಲದೇ ಖಾಲಿ ಖಾಲಿಯಾಗಿದೆ. ಹತ್ತಿ ವ್ಯಾಪಾರಿಗಳು, ವ್ಯಾಪಾರವಿಲ್ಲದೇ ಒಂದೊಂದು ಮಳಿಗೆಗಳನ್ನು ಮುಚ್ಚುತ್ತಿದ್ದಾರೆ.150 ಮಳಿಗೆ ಇದ್ದ ಮಾರುಕಟ್ಟೆಯಲ್ಲಿ ಈಗ ಕೇವಲ 10 ಮಳಿಗೆಗಳು ಮಾತ್ರ ಉಳಿದುಕೊಂಡಿವೆ. ಮಳಿಗೆ ಬಂದ ಮಾಡಿದ ಹಲವರು, ಬೇರೆ ಉದ್ಯೋಗ ಮಾಡುತ್ತಿದ್ದಾರೆ.

ಹಾವೇರಿ ಗುತ್ತಲ ರಸ್ತೆಯಲ್ಲಿರುವ ಹತ್ತಿ ಮಾರುಕಟ್ಟೆ

ಒಂದು ಕಾಲದಲ್ಲಿ ಕೃಷಿ ಕ್ಷೇತ್ರದಲ್ಲಿ ‘ಬಿಳಿ ಬಂಗಾರ’ವಾಗಿದ್ದ ಹತ್ತಿ, ಈಗಾಗಲೇ ಜಿಲ್ಲೆಯಿಂದ ವಿಮುಖವಾಗುವ ಹಂತಕ್ಕೆ ಬಂದಿದೆ. ಅಲ್ಲಲ್ಲಿ ಕೆಲ ರೈತರು ಮಾತ್ರ ಹತ್ತಿ ಬೆಳೆಯುತ್ತಿದ್ದು, ಅವರು ಸಹ ಹಾವೇರಿಯ ಬದಲು ಬೇರೆ ಬೇರೆ ಮಾರುಕಟ್ಟೆಗೆ ಹತ್ತಿ ಕೊಂಡೊಯ್ದು ಮಾರುತ್ತಿದ್ದಾರೆ. ಇದೇ ಕಾರಣಕ್ಕೆ ಹಾವೇರಿ ಗುತ್ತಲ ರಸ್ತೆಯಲ್ಲಿರುವ ಹತ್ತಿ ಮಾರುಕಟ್ಟೆ ಬಿಕೊ ಎನ್ನುತ್ತಿದೆ.

ಅಂದಿನ ಕಾಲದಲ್ಲಿ ನಿತ್ಯವೂ ಹತ್ತಿ ಹಂಡಿಗೆಗಳಿಂದ ತುಂಬಿರುತ್ತಿದ್ದ ಮಾರುಕಟ್ಟೆಯಲ್ಲಿ ಇದೀಗ, ನೋಡಲು ಸಹ ಹಂಡಿಗೆ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಮಾರುಕಟ್ಟೆಯ ಬಹುತೇಕ ಮಳಿಗೆಗಳಿಗೆ ಬೀಗ ಹಾಕಲಾಗಿದ್ದು, ಸ್ವಚ್ಛತೆ ಮಾಡುವವರಿಲ್ಲದೇ ಅದರ ಮುಂದೆ ಕಸದ ರಾಶಿ ಬಿದ್ದಿದೆ. ಮಾರುಕಟ್ಟೆಯಲ್ಲಿರುವ ಕೆಲ ಮಳಿಗೆಯವರು ಮಾತ್ರ ಪ್ರತಿ ಸೋಮವಾರ ಹಾಗೂ ಗುರುವಾರಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುತ್ತಿದ್ದಾರೆ.

ಈ ಅವಧಿಯಲ್ಲಿಯೂ ಹತ್ತಿ ಹಂಡಿಗೆಗಳ ಸಂಖ್ಯೆ ಎರಡಂಕಿಯೂ ದಾಟುತ್ತಿಲ್ಲ. ‘ಕಡಿಮೆ ಹಂಡಿಗೆ’ ಎಂಬ ಕಾರಣಕ್ಕೆ ಹಮಾಲರು ಸಹ ಮಾರುಕಟ್ಟೆಗೆ ಬರುತ್ತಿಲ್ಲ. ಮಾಲೀಕರೇ ರೈತರ ಹಂಡಿಗೆಗಳನ್ನು ಹೊತ್ತು, ಮಳಿಗೆಯೊಳಗೆ ಇಟ್ಟುಕೊಂಡು ಮರು ಮಾರಾಟಕ್ಕಾಗಿ ಜಾತಕ ಪಕ್ಷಿ ರೀತಿಯಲ್ಲಿ ಕಾಯುತ್ತಿದ್ದಾರೆ. ಮಳಿಗೆಯ ನಿರ್ವಹಣೆಗೆ ಮಾಡಿದ ಖರ್ಚು ಸಹ ವಾಪಸು ಬರುತ್ತಿಲ್ಲವೆಂಬ ಅಳಲು ಮಾಲೀಕರದ್ದಾಗಿದೆ.

ಹತ್ತಿ ಇಲ್ಲದ ಮಾರುಕಟ್ಟೆ ಖಾಸಗಿ ವಾಹನಗಳ ನಿಲುಗಡೆಗೆ ಜಾಗವಾಗಿದೆ. ಕಿಡಿಗೇಡಿಗಳ ಮದ್ಯದ ಪಾರ್ಟಿ ಹಾಗೂ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿದೆ.

ಹಾವೇರಿ ಗುತ್ತಲ ರಸ್ತೆಯಲ್ಲಿರುವ ಹತ್ತಿ ಮಾರುಕಟ್ಟೆ ಬಿಕೊ ಎನ್ನುತ್ತಿರುವ ದೃಶ್ಯ

ಕಾರ್ಮಿಕರ ಕೊರತೆ, ನಿರ್ವಹಣೆ ವೆಚ್ಚ ಹೆಚ್ಚಳ: ಕೃಷಿ ಕ್ಷೇತ್ರದಲ್ಲಿಯೂ ಕಷ್ಟುಪಟ್ಟು ಹೆಚ್ಚು ಸಮಯ ಕಾದು ಲಾಭ ಪಡೆಯುವ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ. ಹಲವು ಕಾರಣಗಳಿಂದ ಕೃಷಿ ಮಾಡಲು ಕಾರ್ಮಿಕರೂ ಸಿಗುತ್ತಿಲ್ಲ. ಇದರಿಂದಾಗಿ ರೈತರು, ಕಡಿಮೆ ಸಮಯದಲ್ಲಿ ಯಾವುದೇ ಕೆಲಸವಿಲ್ಲದೇ ಕೈಗೆ ಬರುವ ಬೆಳೆಗಳತ್ತ ವಾಲಿದ್ದಾರೆ.

ಹತ್ತಿ ಬೆಳೆಯಬೇಕಾದರೆ ನಿರ್ವಹಣೆ ವೆಚ್ಚ ಹೆಚ್ಚು, ಕಾರ್ಮಿಕರು ಬೇಕು. ಆದರೆ, ಹಣ ಹಾಗೂ ಕಾರ್ಮಿಕರ ಕೊರತೆಯಿಂದಾಗಿ ರೈತರು ಹತ್ತಿ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ಹತ್ತಿ ಬೆಳೆಯುವ ಜಾಗದಲ್ಲಿ ಮೆಕ್ಕೆಜೋಳ ಬಂದಿದ್ದು, ಇದೀಗ ಹಾವೇರಿಯಲ್ಲೆಲ್ಲ ಮೆಕ್ಕೆಜೋಳವೇ ಜೋರಾಗಿದೆ.

ಹತ್ತಿ ಬೆಳೆ ಇಲ್ಲದಿದ್ದರಿಂದ ಜಿನ್ನಿಂಗ್ ಮಿಲ್‌ಗಳು ಬಾಗಿಲು ಮುಚ್ಚಿವೆ. ಕೆಲ ಜಿನ್ನಿಂಗ್ ಮಿಲ್‌ಗಳು ಮಾತ್ರ ಅಲ್ಲಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಹತ್ತಿ ಖರೀದಿಸಲು ಪಡಿಪಾಟಲು ಅನುಭವಿಸುತ್ತಿವೆ.

‘47 ವರ್ಷದಿಂದ ನಾನು ಹತ್ತಿ ವ್ಯಾಪಾರ ಮಾಡುತ್ತಿದ್ದೇನೆ. ಅಂದು ಯಾರಾದರೂ ಬಂದರೆ ಮಾತನಾಡಲು ಸಮಯ ಇರುತ್ತಿರಲಿಲ್ಲ. ಮಳಿಗೆಯಲ್ಲೇ ಮಲಗುವಷ್ಟು ಕೆಲಸ ಇರುತ್ತಿತ್ತು. ಆದರೆ, ಈಗ ಮಳಿಗೆಯಲ್ಲಿ ಯಾರೂ ಇಲ್ಲ. ಆಗಾಗ ರೈತರು ಬಂದರಷ್ಟೇ ನಮಗೆ ಹತ್ತಿ ಸಿಗುತ್ತದೆ. ಮಳಿಗೆ ಇರುವುದರಿಂದ, ಮನೆಯಲ್ಲಿ ಕುಳಿತುಕೊಳ್ಳಲು ಮನಸ್ಸಾಗುವುದಿಲ್ಲ. ಅದಕ್ಕಾಗಿ ಮಳಿಗೆಗೆ ಬಂದು ಕುಳಿತು, ಹಳೇ ದಿನಗಳನ್ನು ನೆನಪು ಮಾಡಿಕೊಳ್ಳುತ್ತೇನೆ’ ಎಂದು ಹತ್ತಿ ವ್ಯಾಪಾರಿ ಶಿವಯೋಗಪ್ಪ ಮತ್ತೀಹಳ್ಳಿ ಹೇಳಿದರು.

‘ಅಂದು ಲಕ್ಷ್ಮಿ ತಳಿ ಹತ್ತಿ, ಎಕರೆಗೆ 20 ಕ್ವಿಂಟಲ್ ಇಳುವರಿ ಕೊಡುತ್ತಿತ್ತು. ಗುತ್ತಲ, ಮೈಲಾರ ಭಾಗದಲ್ಲಿ ಡಿಸಿಎಚ್ 32 ಹತ್ತಿ ಹೆಸರು ಮಾಡಿತ್ತು. ಇಂದಿಗೂ ಕೆಲ ರೈತರು ಈ ಹತ್ತಿ ಬೆಳೆಯುತ್ತಾರೆ. ಜಯಂಧರ ಹತ್ತಿ, ಬಿಟಿ... ಸಾಲು ಸಾಲು ತಳಿಗಳು ಬಂದವು. ಆದರೆ, ಹತ್ತಿ ಕೃಷಿಗೆ ಕಾರ್ಮಿಕರ ಕೊರತೆ ಎದುರಾಯಿತು. ನಂತರ, ರೈತರು ಒಬ್ಬೊಬ್ಬರೇ ಹತ್ತಿ ಬೆಳೆಯುವುದನ್ನು ಬಂದ್ ಮಾಡಿದರು. ಈಗ ಹತ್ತಿ ಬೆಳೆಯನ್ನು ಅಲ್ಲಲ್ಲಿ ಹುಡುಕುವ ಸ್ಥಿತಿ ಬಂದಿದೆ’ ಎಂದರು.

‘1956ರಲ್ಲಿ ಹತ್ತಿ, ಶೇಂಗಾ, ಒಣ ಮೆಣಸಿನಕಾಯಿ ಬೆಳೆ ವಿಪರೀತವಾಗಿತ್ತು. ತಮಿಳುನಾಡು, ಆಂಧ್ರಪ್ರದೇಶ, ಹೊರ ರಾಜ್ಯದಿಂದಲೇ ಜನ ಖರೀದಿಸಲು ಬರುತ್ತಿದ್ದರು. ಹೋಟೆಲ್, ಖಾನಾವಳಿ ಎಲ್ಲವೂ ಭರ್ತಿಯಾಗಿರುತ್ತಿದ್ದವು. ಈಗ ಅವೆಲ್ಲವೂ ಮಾಯವಾಗಿವೆ. ಪಾಳು ಬಿದ್ದ ಮಳಿಗೆಗಳು ಕಣ್ಣಲ್ಲಿ ನೀರು ತರಿಸುತ್ತಿವೆ. ಸಾವಿರಾರೂ ಜನರಿಗೆ ಅನ್ನ ಹಾಕುತ್ತಿದ್ದ ಮಾರುಕಟ್ಟೆ, ಈಗ ಅನಾಥವಾಗಿ ನಿಂತುಕೊಂಡಿದೆ’ ಎಂದರು.

ಹತ್ತಿ ವ್ಯಾಪಾರ ಅವಸಾನದತ್ತ ಸಾಗಿರುವುದರಿಂದ, ಮಾರುಕಟ್ಟೆಯ ಜಾಗವನ್ನು ಡಿ–ನೋಟಿಫಿಕೇಷನ್ ಮಾಡಿಸಿ ಮೂಲ ಮಾಲೀಕರಿಗೆ ಹಂಚಿಕೆ ಮಾಡಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ. ಇದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಯೂ ಶುರುವಾಗಿದೆ.

ಹಾವೇರಿ ಗುತ್ತಲ ರಸ್ತೆಯಲ್ಲಿರುವ ಹತ್ತಿ ಮಾರುಕಟ್ಟೆ ಬಿಕೊ ಎನ್ನುತ್ತಿರುವ ದೃಶ್ಯ

ಬಯಲು ಸೀಮೆಯಲ್ಲಿ ಮೆಟ್ಟಿನಿಂತಿದ್ದ ಹತ್ತಿ ಸಾಮ್ರಾಜ್ಯ: ಏಕ ದಳ, ದ್ವಿದಳ, ಆಹಾರ ಧಾನ್ಯ ಬೆಳೆಯಲ್ಲಿ ಮಾತ್ರ ಆಸಕ್ತಿ ತೋರುತ್ತಿದ್ದ ಹಾವೇರಿ ಜಿಲ್ಲೆಯ ರೈತರು, ವಾಣಿಜ್ಯ ಬೆಳೆಯಾದ ಹತ್ತಿ ಬೆಳೆಯತ್ತ ಒಲವು ತೋರಿಸಿದ್ದರು. ಬಯಲು ಸೀಮೆ ಪ್ರದೇಶ ಹೆಚ್ಚಿರುವ ಹಾವೇರಿಯ ಹಲವು ಕಡೆಗಳಲ್ಲಿ ‘ಬಿಳಿ ಬಂಗಾರ’ದ ಫಸಲು, ರೈತರಲ್ಲಿ ಮೋಡಿ ಮಾಡಿತ್ತು. ಕ್ರಮೇಣ ಇಡೀ ಜಿಲ್ಲೆಯೇ ಹತ್ತಿ ಕಣಜವಾಗಿ ಮಾರ್ಪಟ್ಟಿತ್ತು.

ಹಾವೇರಿ ಮಾತ್ರವಲ್ಲದೇ ಹೊರ ಜಿಲ್ಲೆ, ಹೊರ ರಾಜ್ಯ ಹಾಗೂ ಹೊರ ದೇಶಗಳಿಂದಲೇ ಹಾವೇರಿಗೆ ಬರುತ್ತಿದ್ದ ವ್ಯಾಪಾರಿಗಳು, ಇಲ್ಲಿಯ ರೈತರ ಹತ್ತಿಯನ್ನು ಕೊಂಡೊಯ್ಯುತ್ತಿದ್ದರು. ಆದರೆ, ಈಗ ಹತ್ತಿಯೇ ಇಲ್ಲವಾಗಿದೆ. ಹತ್ತಿ ಬೆಳೆಯುತ್ತಿದ್ದ ಬಯಲು ಸೀಮೆಯ ಜಮೀನುಗಳಲ್ಲಿ ಈಗ ಮೆಕ್ಕೆಜೋಳ ತಲೆಎತ್ತಿದೆ.

‘ಬೀಜಗಳ ಆಯ್ಕೆ, ಗೊಬ್ಬರ, ಕಳೆ, ಔಷಧಿ... ಹೀಗೆ ನಾನಾ ರೀತಿಯಲ್ಲಿ ಹತ್ತಿ ಬೆಳೆಯ ಪೋಷಣೆ ಮಾಡಬೇಕು. ಆಗಾಗ ಬರುವ ರೋಗಗಳಿಗೂ ಉಪಚಾರ ಮಾಡಬೇಕು. ಇದಕ್ಕೆ ಹೆಚ್ಚು ಹಣ ಹಾಗೂ ಸಮಯ ಬೇಕು. ಇದೇ ಕಾರಣಕ್ಕೆ ರೈತರು, ಹತ್ತಿ ಬೆಳೆಯಿಂದ ವಿಮುಖವಾಗುತ್ತಿದ್ದಾರೆ. ಕಡಿಮೆ ಖರ್ಚು ಹಾಗೂ ಕಡಿಮೆ ಕೆಲಸವಿರುವ ಮೆಕ್ಕೆಜೋಳ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ’ ಎಂದು ಸಂಗೂರಿನ ರೈತ ಚಂದ್ರಶೇಖರ ಹೇಳಿದರು.

ಜಿಲ್ಲೆಯ ಹತ್ತಿ ಬೆಳೆ ಪ್ರದೇಶದ ಬಗ್ಗೆ ಮಾಹಿತಿ ನೀಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ, ‘2025ನೇ ಸಾಲಿನ ಮುಂಗಾರಿನಲ್ಲಿ ಜಿಲ್ಲೆಯ 40,000 ಹೆಕ್ಟೇರ್‌ನಲ್ಲಿ ಹತ್ತಿ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ರೈತರು ನಿರಾಸಕ್ತಿ ತೋರಿದ್ದರಿಂದ ಕೇವಲ 11,525 ಹೆಕ್ಟೇರ್‌ನಲ್ಲಿ ಮಾತ್ರ ಈಗ ಹತ್ತಿ ಬೆಳೆಯಲಾಗಿದೆ. ಬೀಜ ಹಾಗೂ ಗೊಬ್ಬರ ಲಭ್ಯವಿದ್ದರೂ ಹತ್ತಿ ಬೆಳೆಯಲು ರೈತರು ಆಸಕ್ತಿ ತೋರಿಸುತ್ತಿಲ್ಲ’ ಎಂದರು.

ಮೆಕ್ಕೆಜೋಳ ಹೆಚ್ಚಳ: ಜಿಲ್ಲೆಯಲ್ಲಿ 2025ನೇ ಸಾಲಿನ ಮುಂಗಾರಿನಲ್ಲಿ 2,06,338 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿ ರೈತರು ಮೆಕ್ಕೆ ಜೋಳ ಬೆಳೆದಿದ್ದಾರೆ. ಈಗ 2,48,493 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ.

ಹಾವೇರಿ ಗುತ್ತಲ ರಸ್ತೆಯಲ್ಲಿರುವ ಹತ್ತಿ ಮಾರುಕಟ್ಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.