ADVERTISEMENT

ಜನರಿಗೆ ವಿಷ ಉಣಿಸುತ್ತಿರುವ ಕಲಬೆರಕೆ ದಂಧೆ! ಗಡಿ ಜಿಲ್ಲೆ ಕೋಲಾರದಲ್ಲಿ ಅವ್ಯಾಹತ

ಹಾಲು, ಬೆಣ್ಣೆ, ತುಪ್ಪ, ಚಹಾ ಪುಡಿ, ಖಾರದ ಪುಡಿ ಕಲಬೆರಕೆ ಮಾಫಿಯಾ

ಕೆ.ಓಂಕಾರ ಮೂರ್ತಿ
Published 20 ಫೆಬ್ರುವರಿ 2026, 2:31 IST
Last Updated 20 ಫೆಬ್ರುವರಿ 2026, 2:31 IST
<div class="paragraphs"><p>ಹಾಲಿನ ಕಲಬೆರಕೆ ಪತ್ತೆ!</p></div>

ಹಾಲಿನ ಕಲಬೆರಕೆ ಪತ್ತೆ!

   

ಕೋಲಾರ: ರಾಜ್ಯದಲ್ಲಿ ದೊಡ್ಡ ದೊಡ್ಡ ನಗರಗಳಿಂದ ಹಿಡಿದು ಪುಟ್ಟ ಹಳ್ಳಿಗಳಲ್ಲೂ ಆಹಾರ ಪದಾರ್ಥಗಳ ಕಲಬೆರಕೆ ದಂಧೆ ನಡೆಯುತ್ತಿದ್ದು, ಅಪರೂಪಕ್ಕೊಂದು ಪ್ರಕರಣ ಹೊರಬರುತ್ತಿವೆ. ಅದರಲ್ಲೂ ಗಡಿ ಜಿಲ್ಲೆ ಕೋಲಾರದಲ್ಲಿ ಈ ದಂಧೆ ಮಿತಿಮೀರುತ್ತಿದೆ.

ಪ್ರಮುಖವಾಗಿ ಹಾಲಿನ ಕಲಬೆರಕೆ, ಕಳಪೆ ದರ್ಜೆಯ ಕುಡಿಯುವ ನೀರು ಬಾಟಲಿಗಳ ಪೂರೈಕೆ, ಬೆಣ್ಣೆ, ತುಪ್ಪ ಕಲಬೆರಕೆ, ಖಾರದ ಪುಡಿ, ಟೊಮೆಟೊ ಸಾಸ್‌, ಉಪ್ಪು, ಚಹಾ ಪುಡಿ ಕಲಬೆರಕೆ ಎಗ್ಗಿಲ್ಲದೆ ನಡೆಯುತ್ತಿದೆ. ಕಳೆದ ಒಂದೂವರೆ ತಿಂಗಳಲ್ಲಿ ಜಿಲ್ಲೆಯಲ್ಲಿ ಮೂರು ಕಡೆ ಹಾಲಿನ ಕಲಬೆರಕೆ ದಂಧೆ ಪತ್ತೆಯಾಗಿದೆ.  

ಈ ಕಲಬೆರಕೆ ಜಾಲ ಬೃಹತ್‌ ಮಟ್ಟದಲ್ಲಿ  ಬೆಳೆದಿದ್ದು, ಗುಣಮಟ್ಟ ಪರೀಕ್ಷೆ ಕೊರತೆಯಿಂದ ದಂಧೆಕೋರರಿಗೆ ಹಣ ಗಳಿಸಲು ಸುಲಭದ ಮಾರ್ಗ ಸಿಕ್ಕಿದಂತಾಗಿದೆ, ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.

ಹಾಲಿಗೆ ಕಾಸ್ಟಿಂಗ್‌ ಸೋಡಾ, ಹಾಲಿನ ಪುಡಿ, ಯೂರಿಯಾ ಹಾಗೂ ಇತರ ರಾಸಾಯನಿಕ ಪುಡಿಗಳನ್ನು ಮಿಶ್ರಣ ಮಾಡಿ ಮಾರಾಟ ಮಾಡುತ್ತಾರೆ. ಈಚೆಗೆ ಕಡಿಮೆ ವಯಸ್ಸಿನವರಲ್ಲೇ ಹೃದಯಾಘಾತ, ಕ್ಯಾನ್ಸರ್‌, ಮೂತ್ರಪಿಂಡ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಆಹಾರ ಪದಾರ್ಥದ ಕಲಬೆರಕೆಯೂ ಪ್ರಮುಖ ಕಾರಣ ಎನ್ನುತ್ತಾರೆ ವೈದ್ಯರು.

ರಾಜ್ಯದ ಕೆಲವೆಡೆ ಬಾಟಲಿಗಳಲ್ಲಿನ ನೀರು ಕಳಪೆ ಗುಣಮಟ್ಟದಿಂದ ಕೂಡಿರುವುದು ನಿಜವೆಂದು ಈಚೆಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಕೂಡ ಒಪ್ಪಿಕೊಂಡಿದ್ದರು.

ರಾಜ್ಯದ ವಿವಿಧೆಡೆ ಖಾಸಗಿ ಡೇರಿಗಳು 30ಕ್ಕೂ ಅಧಿಕ ಬ್ರ್ಯಾಂಡ್‌ ಹೆಸರಿನಲ್ಲಿ ಹಾಲನ್ನು ಮಾರಾಟ ಮಾಡುತ್ತಿವೆ. ಖಾಸಗಿ ಬ್ರ್ಯಾಂಡ್‌ಗಳ ಹಾವಳಿ ಹೆಚ್ಚುತ್ತಿದ್ದು, ಎಫ್‌ಎಸ್‌ಎಸ್‌ಎಐ ಮಾನದಂಡ ಅನುಸರಿಸುತ್ತಿಲ್ಲವೆಂದು ಕೋಲಾರದ ಕೋಮುಲ್‌ ಸೇರಿದಂತೆ ಹಾಲಿನ ಒಕ್ಕೂಟಗಳೇ ದೂರುತ್ತಿವೆ. ಕೆಎಂಎಫ್‌ ಈ ಹಿಂದೆ ನಡೆಸಿದ್ದ ಅಧ್ಯಯನವೊಂದರಲ್ಲಿ ಖಾಸಗಿ ಡೇರಿಗಳು ಹಾಲಿನ ಗುಣಮಟ್ಟ ಕಾಪಾಡಿಕೊಳ್ಳದಿರುವುದು ಗೊತ್ತಾಗಿತ್ತು.

ಕೋಲಾರ ಜಿಲ್ಲೆಗೆ ಹೊಸೂರು, ಈರೋಡ್‌, ಚಿತ್ತೂರಿನಿಂದ ಖಾಸಗಿ ಡೇರಿಗಳ ಹಾಲು ದೊಡ್ಡಮಟ್ಟದಲ್ಲಿ ಸರಬರಾಜು ಆಗುತ್ತಿದೆ. ಮುಳಬಾಗಿಲು, ಬಂಗಾರಪೇಟೆ, ಕೆಜಿಎಫ್‌ ಸೇರಿದಂತೆ ವಿವಿಧ ಭಾಗಗಳಲ್ಲಿ ಖಾಸಗಿ ಡೇರಿಗಳು ಮತ್ತು ಹಾಲು ಸಂಗ್ರಹ ಕೇಂದ್ರಗಳಲ್ಲಿ ಕಲಬೆರಕೆ ನಡೆಯುತ್ತಿದೆ.  

ಹಾಲಿಗೆ ವಿಷಕಾರಿ ಅಂಶ ಬೆರೆಸಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ಆರೋಪ ಕೇಳಿ ಬಂದ ಕಾರಣ ಕಳೆದ ವಾರ ಕೆಲ ಕೇಂದ್ರಗಳ ಮೇಲೆ ಜಿಲ್ಲಾಧಿಕಾರಿ ಎಂ.ಆರ್.ರವಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್‌ ಮಾರ್ಗದರ್ಶನದಲ್ಲಿ ಆಹಾರ ಸುರಕ್ಷತಾ ಇಲಾಖೆಯ 30 ವಿಶೇಷ ತಂಡಗಳಿಂದ 30 ಕಡೆ ಏಕಕಾಲಕ್ಕೆ ದಾಳಿ ನಡೆಸಲಾಗಿತ್ತು. ಆಗ ಮುಳಬಾಗಿಲು ತಾಲ್ಲೂಕಿನ ಸಿ.ಕೊರವನೂರು ಗ್ರಾಮದ ಖಾಸಗಿ ಹಾಲಿನ ಸಂಗ್ರಹಣಾ ಕೇಂದ್ರಗಳಲ್ಲಿ ಕಲಬೆರಕೆ ಹಾಲಿನ ದಂಧೆ ನಡೆಯುತ್ತಿರುವುದು ಪತ್ತೆಯಾಗಿತ್ತು. ಮಧ್ಯರಾತ್ರಿ ನಡೆದ ಈ ಕಾರ್ಯಾಚರಣೆಯಲ್ಲಿ‌ ಬೊಲೇರೊ ವಾಹನವನ್ನು ತಡೆದು ತಪಾಸಣೆ ನಡೆಸಿದ್ದು, 28 ಕ್ಯಾನ್‌ಗಳಲ್ಲಿ ತುಂಬಿದ್ದ ಸುಮಾರು 1,120 ಲೀಟರ್ ಕಲಬೆರಕೆ ಹಾಲನ್ನು ಪತ್ತೆ ಹಚ್ಚಿ ಜಫ್ತಿ ಮಾಡಲಾಗಿದೆ. ವಾಹನದ ಚಾಲಕ ಹಾಗೂ ಮಾಲೀಕನ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಯಾವುದೇ ದಾಖಲೆಗಳಿಲ್ಲದ ಹಾಗೂ ಸಂಶಯಾಸ್ಪದವಾಗಿ ಕಂಡುಬಂದ 40 ಹಾಲಿನ ಮಾದರಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಮಾದರಿಗಳನ್ನು ಬೆಂಗಳೂರಿನ ರಾಜ್ಯ ಆಹಾರ ಪ್ರಯೋಗಾಲಯಕ್ಕೆ ವೈಜ್ಞಾನಿಕ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ.

ಕೆಜಿಎಫ್‌ ತಾಲ್ಲೂಕಿನಲ್ಲಿ ಕಳೆದ ವರ್ಷ ಕಲಬೆರಕೆ ಹಾಲಿನ ಜಾಲವನ್ನು ಆಹಾರ ಸುರಕ್ಷತೆ  ಇಲಾಖೆ ಪತ್ತೆ ಹಚ್ಚಿದ್ದು, ಹೆಚ್ಚುವರಿ ಜಿಲ್ಲಾಧಿಕಾರಿ ನ್ಯಾಯಾಲಯ ₹ 4.25 ಲಕ್ಷ ದಂಡ ಕೂಡ ವಿಧಿಸಿತ್ತು.  ರಿಸಿಮಾಲ್ಡೆಕ್ಸ್‌ ಮಾಲ್ಟೊಡೆಕ್ಸ್‌ಟ್ರಿನ್‌ ಎಂಬ ಪುಡಿ, ಗೆಣಸಿನಪುಡಿಯನ್ನು ಹಾಲಿಗೆ ಬೆರೆಸುತ್ತಿರುವುದೂ ಪತ್ತೆಯಾಗಿತ್ತು. ರೈತರಿಂದ ಹಾಲು ಸಂಗ್ರಹಿಸಿ ಖಾಸಗಿ ಡೇರಿಗೆ ಹಾಕುವ ಏಜೆಂಟರ ಕೈವಾಡ ಇರುವುದೂ ಗೊತ್ತಾಗಿತ್ತು. ಹಾಲು ಒಕ್ಕೂಟದ ಸಂಘಗಳಲ್ಲಿ ತಿರಸ್ಕೃತಗೊಳ್ಳುವ ಗುಣಮಟ್ಟವಿಲ್ಲದ ಹಾಲನ್ನು ಖಾಸಗಿ ಡೇರಿಗಳು ಖರೀದಿಸುತ್ತವೆ.

ಬಹುತೇಕ ದಿನಸಿ ಅಂಗಡಿಗಳಲ್ಲಿ ಖಾಸಗಿ ಡೇರಿಗಳ ಹಾಲಿನ ಪೊಟ್ಟಣ ಮಾರಾಟ ಮಾಡುತ್ತಾರೆ. ಹಾಲಿನ ಒಕ್ಕೂಟದವರಿಗಿಂತ ಹೆಚ್ಚಿನ ದರ ಸಿಗುತ್ತದೆ ಎಂದು ಕೆಲ ಹೈನುಗಾರರು ಖಾಸಗಿ ಡೇರಿಗೆ ಹಾಲು ಮಾರಾಟ ಮಾಡುತ್ತಾರೆ. ರಸ್ತೆ ಬದಿ ಅಂಗಡಿ, ಚಹಾ ಅಂಗಡಿ, ಹೋಟೆಲ್‌ಗಳಲ್ಲಿ, ಹಾಸ್ಟೆಲ್‌, ಪಿ.ಜಿಗಳಲ್ಲಿ ಇದೇ ಹಾಲು ಖರೀದಿಸಿ ಚಹಾ, ಕಾಫಿ ಮಾಡಿಕೊಡುತ್ತಾರೆ.

ಕಳೆದ ವರ್ಷ ಮಾಲೂರಿನಲ್ಲಿ ಖಾಸಗಿ ಕಂಪನಿಯ ತುಪ್ಪದ ಮಳಿಗೆ ಮೇಲೆ ದಾಳಿ ನಡೆಸಿ ಬೆಂಗಳೂರಿನ ಪಬ್ಲಿಕ್‌ ಹೆಲ್ತ್‌ ಇನ್‌ಸ್ಟಿಟ್ಯೂಟ್‌ (ಪಿಎಚ್‌ಐ) ಪ್ರಯೋಗಾಲಯದಲ್ಲಿ ಮಾದರಿ ಪರೀಕ್ಷಿಸಿದಾಗ ಅಸುರಕ್ಷಿತ ಎಂಬ ವರದಿ ಬಂದಿತ್ತು. ಜೇನುತುಪ್ಪವನ್ನೂ ಪರೀಕ್ಷೆಗೆ ಒಳಪಡಿಸಿದ್ದು, ಗುಣಮಟ್ಟವಿಲ್ಲ ಎಂಬ ವರದಿ ಬಂದಿತ್ತು ಎಂದು ಹೇಳುತ್ತಾರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಜಿಲ್ಲಾ ಅಂಕಿತಾಧಿಕಾರಿ ಡಾ.ರಾಕೇಶ್‌.

ಅಡುಗೆ ಎಣ್ಣೆಯೂ ಕಲಬೆರಕೆ: ಕಾರ್ಖಾನೆ, ಮಿಲ್‌, ಸಣ್ಣಪುಟ್ಟ ಘಟಕಗಳಲ್ಲಿ ಪ್ಯಾಕ್‌ ಆಗಿ ಮಾರುಕಟ್ಟೆಗೆ ಬರುವ ಹಾಗೂ ಮಾರುಕಟ್ಟೆಯಲ್ಲಿ ಚಿಲ್ಲರೆಯಾಗಿ ಸಿಗುವ ಅಡುಗೆ ಎಣ್ಣೆಯು ಶೇ 50ರಿಂದ 80ರಷ್ಟು ಕಲಬೆರಕೆಯಿಂದ ಕೂಡಿರುವ ಬಗ್ಗೆ ವಿಜ್ಞಾನಿಗಳು, ಆಹಾರ ತಜ್ಞರು ಹಾಗೂ ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಸಿರುವ ಪರೀಕ್ಷೆಯೂ ಅದನ್ನು ದೃಢಪಡಿಸಿದೆ.
ಮಾಲೂರಿನಲ್ಲಿ ಕಲಬೆರಕೆ ಅಡುಗೆ ಎಣ್ಣೆ ಮಳಿಗೆ ಮೇಲೆ ದಾಳಿ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಕೋರ್ಟ್‌ನಲ್ಲಿ ₹ 4.98 ಲಕ್ಷ ದಂಡ ವಿಧಿಸಲಾಗಿತ್ತು. ಅಡುಗೆ ಎಣ್ಣೆ ಕಳಪೆ ಗುಣಮಟ್ಟದಿಂದ ಕೂಡಿರುವ ವರದಿ ಬಂದಿತ್ತು.

 ಪೆಟ್ರೋಲಿಯಂ ಉಪ ಉತ್ಪನ್ನ ‘ಮಿನರಲ್‌ ಆಯಿಲ್‌’ (ವೈಟ್‌ ಆಯಿಲ್‌ ಅಥವಾ ಪ್ಯಾರಾಪಿನ್‌ ಆಯಿಲ್‌) ಅನ್ನು ಅಡುಗೆ ಎಣ್ಣೆಗೆ ಬೆರೆಸಲಾಗುತ್ತದೆ. ಜಾನುವಾರುಗಳ ಕೊಬ್ಬಿನಿಂದ ತೆಗೆದ ಎಣ್ಣೆಯನ್ನು ಸೇರಿಸಿ ಮಾರಾಟ ಮಾಡುತ್ತಿರುವ ದಂಧೆಯೂ ನಡೆಯುತ್ತಿದೆ. ಆಂಧ್ರದಲ್ಲಿ ಈ ದಂಧೆ ಪತ್ತೆಯಾಗಿ ಕಿಡಿಗೇಡಿಗಳನ್ನು ಬಂಧಿಸಲಾಗಿತ್ತು.  

ಚಿಲ್ಲರೆಯಾಗಿ ಅಡುಗೆ ಎಣ್ಣೆ ಮಾರಾಟ ಮಾಡುವಂತಿಲ್ಲ. ಆದರೂ ಅಂಗಡಿಗಳಲ್ಲಿ ಮಾರಾಟ ಮಾಡುವುದನ್ನು ಕಾಣಬಹುದು. ಹೋಟೆಲ್‌, ರಸ್ತೆ ಬದಿ ಅಂಗಡಿಗಳಲ್ಲಿ ಬಳಸಿದ ಅಡುಗೆ ಎಣ್ಣೆಯನ್ನೇ ಪದೇಪದೇ ಬಳಸುತ್ತಿರುವ ಸಂಬಂಧ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ.

******

ಅಧಿಕಾರಿಗಳ ಕಾಟಾಚಾರದ ತಪಾಸಣೆ

ADVERTISEMENT

ಸಿಬ್ಬಂದಿ ಕೊರತೆ, ಕಡಿಮೆ ಪರೀಕ್ಷೆ

ಕೋಲಾರ ಜಿಲ್ಲೆಯಲ್ಲಿ ಯಥೇಚ್ಛವಾಗಿ ಖಾಸಗಿ ಡೇರಿಗಳ ಹಾಲು, ತುಪ್ಪ ಮಾರಾಟವಾಗುತ್ತಿದೆ. ಆದರೆ, ಗುಣಮಟ್ಟ ಪರೀಕ್ಷೆ ನಡೆಯುವುದು ತೀರಾ ಕಡಿಮೆ. ಇದಕ್ಕೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಾರಣ.
ಇಲಾಖೆಯಿಂದ ಪ್ರತಿ ತಾಲ್ಲೂಕಿನಲ್ಲಿ ಪ್ರತಿ ತಿಂಗಳು 25 ಸಮೀಕ್ಷಾ ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಆ ಕೆಲಸ ನಡೆಯುತ್ತಿಲ್ಲ. ಆರೋಗ್ಯ ಇಲಾಖೆಯೂ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಇಲಾಖೆ ಅಧಿಕಾರಿಗಳು ಅಂಗಡಿ, ಮಳಿಗೆ, ಘಟಕಗಳಿಗೆ ಭೇಟಿ ನೀಡಿ ಆಹಾರ ತಯಾರಿಕೆ, ಗುಣಮಟ್ಟ, ಸುರಕ್ಷತೆ‌, ಪ್ಯಾಕಿಂಗ್, ಸಾಗಣೆ, ಅವಧಿ, ಮಾರಾಟದ ಬಗ್ಗೆ ತಪಾಸಣೆ ನಡೆಸಬೇಕು. ಅನುಮಾನ ಬಂದಲ್ಲಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಬೇಕು. ಕಳಪೆಯಾಗಿದ್ದರೆ, ಅಸುರಕ್ಷಿತವಾಗಿದ್ದರೆ ದಂಡ ವಿಧಿಸಬೇಕು, ನಂತರ ಕಾನೂನಾತ್ಮಕ ಕ್ರಮ ವಹಿಸಬೇಕು.  

ಕಾರ್ಯಪಡೆ ರಚನೆಗೆ ಸೂಚನೆ: ಪ್ರತಿ ತಾಲ್ಲೂಕಿನಲ್ಲಿ ತಹಶೀಲ್ದಾರ್, ಪೊಲೀಸ್‌ ಇನ್‌ಸ್ಪೆಕ್ಟರ್‌, ತಾಲ್ಲೂಕು ಪಂಚಾಯಿತಿ ಇಒ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳನ್ನು ಒಳಗೊಂಡ ವಿಶೇಷ ಕಾರ್ಯಪಡೆ (ಟಾಸ್ಕ್ ಫೋರ್ಸ್‌) ರಚಿಸಿ, ಅನಧಿಕೃತ ಹಾಲು ಸಂಗ್ರಹಣಾ ಕೇಂದ್ರಗಳ ವಿರುದ್ಧ ಸಮರ ಸಾರಲು ಕೋಲಾರ ಜಿಲ್ಲಾಧಿಕಾರಿ ಎಂ.ಆರ್.ರವಿ ಸೂಚಿಸಿದ್ದಾರೆ.
*******

ದಾಳಿ ನಡೆಸಲು ಸೂಚನೆ ನೀಡಿದ್ದೇನೆ

ಕೋಲಾರ ಜಿಲ್ಲೆಯಲ್ಲಿ ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಕಲಬೆರಕೆ ಹಾಲು ಮತ್ತು ಅಶುದ್ಧ ಕುಡಿಯುವ ನೀರು ಪೂರೈಕೆದಾರರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದೇನೆ.  ಹಾಲಿನಲ್ಲಿ ವಿಷಕಾರಕ ಅಂಶಗಳನ್ನು ಬೆರೆಸುವುದು ಅತ್ಯಂತ ಗಂಭೀರ ಅಪರಾಧ. ಇಂತಹ ಕೇಂದ್ರಗಳ ಮೇಲೆ ದಾಳಿ ನಡೆಸಿ ಅವುಗಳನ್ನು ತಕ್ಷಣವೇ ಮುಚ್ಚಲು ಆದೇಶಿಸಿದ್ದೇನೆ. ಬಿಸಿಯೂಟ ತಯಾರಿಕೆಗೆ ಬಳಸುವ ಹಾಲು ಮತ್ತು ನೀರಿನ ಗುಣಮಟ್ಟವನ್ನು ಕಡ್ಡಾಯವಾಗಿ ಪರೀಕ್ಷಿಸಬೇಕು. ‌ವಿಶೇಷವಾಗಿ ಮಕ್ಕಳಿಗೆ ಪೂರೈಕೆಯಾಗುವ ಹಾಲು ಮತ್ತು ನೀರಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗುವುದಿಲ್ಲ. ಇಂತಹ ಕೃತ್ಯದಲ್ಲಿ ತೊಡಗಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ಪರವಾನಗಿ ರದ್ದುಪಡಿಸುವುದಲ್ಲದೇ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು

ಎಂ.ಆರ್.ರವಿ, ಜಿಲ್ಲಾಧಿಕಾರಿ, ಕೋಲಾರ
 
***********

ಎಂ.ಆರ್.ರವಿ, ಜಿಲ್ಲಾಧಿಕಾರಿ, ಕೋಲಾರ

ಬಾಟಲಿ ನೀರಲ್ಲೂ ಗೋಲ್‌ಮಾಲ್

ಕೋಲಾರ ಜಿಲ್ಲೆಯ ವಿವಿಧೆಡೆ ಮಾರಾಟ ಮಾಡುತ್ತಿರುವ ಕೆಲ ಬ್ರ್ಯಾಂಡ್‌ಗಳ ಬಾಟಲಿ ನೀರು ಕುಡಿಯಲು ಯೋಗ್ಯವಾಗಿಲ್ಲ, ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬ ವರದಿಗಳು ಬರುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿವೆ. ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಇಲಾಖೆ ಜಿಲ್ಲೆ ಕೆಲವೆಡೆ ಬಾಟಲಿ ನೀರಿನ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಈ ಅಂಶ ಪತ್ತೆಯಾಗಿದೆ. ಪ್ರಮುಖವಾಗಿ ಶ್ರೀನಿವಾಸಪುರ ಹಾಗೂ ಕೋಲಾರ ತಾಲ್ಲೂಕಿನ ಘಟಕದಲ್ಲಿನ ಬಾಟಲಿ ನೀರನ್ನು ಆಹಾರ ಸುರಕ್ಷತೆ ಇಲಾಖೆಯ ಜಿಲ್ಲಾ ಅಂಕಿತಾಧಿಕಾರಿ ಡಾ.ರಾಕೇಶ್‌ ನೇತೃತ್ವದಲ್ಲಿ ಪ್ರಯೋಗಾಲಯದಲ್ಲಿ ವಿಶ್ಲೇಷಣೆಗೆ ಒಳಪಡಿಸಿದಾಗಿ ಕಳಪೆ ಗುಣಮಟ್ಟದಿಂದ ಕೂಡಿರುವುದು ಗೊತ್ತಾಗಿದೆ.

‘ಎರಡೂ ಕಡೆ ಬಾಟಲಿ ನೀರಿನ ಮಾದರಿ ಪಡೆದು ಪರೀಕ್ಷೆಗೆ ಒಳಪಡಿಸಿದಾಗ ಕಳಪೆಯಿಂದ ಕೂಡಿರುವುದು ಪತ್ತೆಯಾಗಿದೆ. ಒಂದು ಕಡೆ ನೀರು ಕುಡಿಯಲು ಅಸುರಕ್ಷಿತ ಎಂಬ ವರದಿ ಬಂದರೆ, ಮತ್ತೊಂದು ಕಡೆ ಕಳಪೆ ಗುಣಮಟ್ಟದಿಂದ ಕೂಡಿರುವುದು ಪತ್ತೆಯಾಗಿದೆ. ಮೈಸೂರಿನ ಸಿಎಫ್‌ಟಿಆರ್‌ಐಗೆ ಕಳಿಸಿ ಮರುಪರಿಶೀಲನೆ ಮಾಡಿಸುವುದಾಗಿ ಆ ಎರಡೂ ಘಟಕದವರು ನಮಗೆ ಬರೆದುಕೊಟ್ಟಿದ್ದಾರೆ’ ಎಂದು ಹೇಳುತ್ತಾರೆ ಡಾ.ರಾಕೇಶ್‌.

ಅಸುರಕ್ಷಿತ ಮತ್ತು ಕಳಪೆ ಗುಣಮಟ್ಟದ ನೀರಿನ ಬಾಟಲಿಗಳನ್ನು ಪೂರೈಸುವ ಕಂಪನಿಗಳ ಪಟ್ಟಿಯನ್ನೂ ಈಚೆಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಬಿಡುಗಡೆ ಮಾಡಿದ್ದರು. ಬಾಟಲಿಗಳಲ್ಲಿನ ನೀರಿನ 255 ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ 95 ಮಾದರಿಗಳು ಅಸುರಕ್ಷಿತ, 88 ಮಾದರಿಗಳು ಕಳಪೆ ಗುಣಮಟ್ಟದ್ದೆಂದು ವರದಿಯಾಗಿವೆ. 72 ಮಾದರಿಗಳು ಮಾತ್ರ ಸುರಕ್ಷಿತ ಆಗಿದ್ದವು ಎಂಬುದಾಗಿ ಹೇಳಿದ್ದರು.
 

*******

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.