ADVERTISEMENT

PV Web Exclusive | ರಾಮನಗರ: ಕಾಡಾನೆ–ಮಾನವ ಸಂಘರ್ಷಕ್ಕೆ ಕೊನೆ ಎಂದು...?

ಬೆಂಗಳೂರು ದಕ್ಷಿಣ ಜಿಲ್ಲೆ: ಏರುಗತಿಯಲ್ಲಿ ಕಾಡಾನೆ ದಾಳಿ ಸಾವು–ನೋವು; ಆನೆ ಕಾಟಕ್ಕೆ ಬೇಸತ್ತು ಜಮೀನು ಪಾಳು ಬಿಡುತ್ತಿರುವ ರೈತರು

ಓದೇಶ ಸಕಲೇಶಪುರ
Published 24 ಡಿಸೆಂಬರ್ 2025, 4:04 IST
Last Updated 24 ಡಿಸೆಂಬರ್ 2025, 4:04 IST
   

ರಾಮನಗರ: ‘ಆನೆಗಳಿರುವ ಕಾಡಂಚಿನಲ್ಲೇ ನಾವು ಬದುಕುತ್ತಿದ್ದರೂ ನಮ್ಮ ಮತ್ತು ಅವುಗಳ ನಡುವೆ ಸಂಘರ್ಷ ಇರಲಿಲ್ಲ. ಸಾವು–ನೋವು ದೂರದ ಮಾತು ಬಿಡಿ. ಜಮೀನಿನಲ್ಲಿ ನಮ್ಮ ಪಾಡಿಗೆ ಕೃಷಿ ಮತ್ತು ತೋಟಗಾರಿಕೆ ಮಾಡುತ್ತಿದ್ದೆವು. ಜಮೀನಿಗೆ ಹೋದವರ ಕಣ್ಣಿಗೆ ಕಾಡಾನೆಗಳ ದರ್ಶನವಾಗುತ್ತಿದ್ದದ್ದು ಅಪರೂಪ. ನಾವು ನಮ್ಮ ಗಡಿ ದಾಟಿ ಕಾಡಿನತ್ತ ಹೋಗುತ್ತಿರಲಿಲ್ಲ. ಅವುಗಳೂ ಅಷ್ಟೆ. ತಮ್ಮ ಆವಾಸಸ್ಥಾನ ಬಿಟ್ಟು ಊರು ಕಡೆಗೆ ಕಾಲಿಡುತ್ತಿರಲಿಲ್ಲ. ಆದರೆ, ಎರಡು ದಶಕದಿಂದೀಚೆಗೆ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಕಾಡಾನೆ–ಮಾನವ ಸಂಘರ್ಷ ತಾರಕಕ್ಕೇರಿದೆ. ಕಾಡಂಚಿನ ಜನ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವಂತಾಗಿದೆ. ಈ ಸಂಘರ್ಷ ಕೊನೆಯಾಗುವುದು ಯಾವಾಗ...?

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿರುವ ಕನಕಪುರ ತಾಲ್ಲೂಕಿನ ಕೂನೂರು ಗ್ರಾಮದ ರೈತ ಶಿವಕುಮಾರ್ ಅವರು ಕಾಡಾನೆ ಮತ್ತು ಮಾನವ ಸಂಘರ್ಷದ ಪರಿಣಾಮವನ್ನು ನೋವಿನಿಂದ ಹಂಚಿಕೊಳ್ಳುತ್ತಲೇ, ಈ ಸಂಘರ್ಷಕ್ಕೆ ಕೊನೆಯೇ ಇಲ್ಲವೇನೊ ಎಂಬ ಅನುಮಾನ ವ್ಯಕ್ತಪಡಿಸುತ್ತಾ ಆಡಿದ ಹತಾಶೆಯ ಮಾತುಗಳಿವು.

ಊರಿನ ರಸ್ತೆಗೆ ಹೊಂದಿಕೊಂಡಂತಿರುವ ಶಿವಕುಮಾರ್ ಮನೆಯ ಬಾಗಿಲು ತೆಗೆದರೆ, ಎದುರಿಗಿರುವ ತಮ್ಮ ಜಮೀನಿಗೆ ಹೊಂದಿಕೊಂಡಂತೆ  ಸದ್ದಿಲ್ಲದೆ ಹರಿಯುವ ಅರ್ಕಾವತಿ ನದಿ ಕಾಣುತ್ತದೆ. ಮನೆಯ ಹಿಂದಕ್ಕೆ ಸ್ವಲ್ಪ ದೃಷ್ಟಿ ಹಾಯಿಸಿದರೆ ಕಾಡು ಸಿಗುತ್ತದೆ. ಬನ್ನೇರುಘಟ್ಟ ಅರಣ್ಯದಿಂದ ತಾಲ್ಲೂಕಿನ ಕಬ್ಬಾಳು, ಅಚ್ಚಲು ಅರಣ್ಯಕ್ಕೆ ಬರುವ ಕಾಡಾನೆಗಳ ಹಿಂಡು, ಇವರ ಮನೆಯ ಹಿಂದಿನ ಕಾಡಿನ ಮೂಲಕವೇ ಬಂದು ನದಿ ದಾಟಿ ಕೆರಳಾಳುಸಂದ್ರ ಗುಡ್ಡದ ಮಾರ್ಗವಾಗಿ ತಮ್ಮ ಆವಾಸಸ್ಥಾನವಾದ ಬಿಳಿಕಲ್ಲು ಬೆಟ್ಟ ಸೇರಿಕೊಳ್ಳುತ್ತವೆ.

ADVERTISEMENT

ಆದರೆ, ತಿಂಗಳ ಹಿಂದೆ ಶಿವಕುಮಾರ್ ಮನೆ ಎದುರು ನದಿ ದಾಟುತ್ತಿದ್ದ ನಾಲ್ಕು ಆನೆಗಳ ಪೈಕಿ, ಎರಡು ಆನೆಗಳು ಅಸುನೀಗಿದವು. ಕಬ್ಬಾಳು ಬೆಟ್ಟದಲ್ಲಿ ಕಾಣಿಸಿಕೊಂಡಿದ್ದ ಈ ಆನೆಗಳನ್ನು ಆನೆ ಕಾರ್ಯಪಡೆ ಸಿಬ್ಬಂದಿ ಮರಳಿ ಕಾಡಿಗೆ ಓಡಿಸುವ ಸಲುವಾಗಿ ಕಾರ್ಯಾಚರಣೆ ಕೈಗೊಂಡಾಗ, ಈ ಆನೆಗಳು ಕೂನೂರು ಬಳಿ ಮಧ್ಯರಾತ್ರಿ ನದಿ ದಾಟಲು ನೀರಿಗಿಳಿದಿದ್ದವು. ಅರ್ಧ ದೂರ ಸಾಗಿದ್ದ ಆನೆಗಳ ದಂತ, ಸೊಂಡಿಲು ಹಾಗೂ ಕಾಲುಗಳಿಗೆ ನೀರೇ ಕಾಣದಂತೆ ಆವರಿಸಿರುವ ಜೊಂಡು (ಜಲಕಳೆ) ಸುತ್ತಿಕೊಂಡಿದ್ದರಿಂದ ನೀರಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದವು.

14 ವರ್ಷದಲ್ಲಿ 48 ಸಾವು

ಕಾಡಾನೆಗಳ ಈ ದುರಂತ ಅಂತ್ಯದ ಜೊತೆಗೆ ಕಾಡಾನೆಗಳಿಂದ ದಾಳಿಗೊಳಗಾಗಿ ತಮ್ಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಲಿಯಾದವರ ಸಾವಿಗೂ ಸಾಕ್ಷಿದಾರರಂತಿರುವ ಶಿವಕುಮಾರ್ ಪ್ರಶ್ನೆಯಲ್ಲಿ, ಈ ಸಂಘರ್ಷದಲ್ಲಿ ಮನುಷ್ಯನಷ್ಟೇ ಕಾಡಾನೆಗಳು ಬಾಧಿತವಾಗಿವೆ ಎಂಬ ಧ್ವನಿಯೂ ಕಾಣುತ್ತಿತ್ತು. ಅಂದಹಾಗೆ, ಜಿಲ್ಲೆಯಲ್ಲಿ ಕಳೆದ 14 ವರ್ಷದಲ್ಲಿ ಕಾಡಾನೆ ದಾಳಿಯಲ್ಲಿ 48 ಜನ  ಜೀವ ಕಳೆದುಕೊಂಡಿದ್ದಾರೆ. 150ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇವರಲ್ಲಿ ಶಾಶ್ವತ ಅಂಗವಿಕಲರು, ಭಾಗಶಃ ಅಂಗವಿಕಲರು ಹಾಗೂ ಅಲ್ಪ ಗಾಯಾಳುಗಳೂ ಇದ್ದಾರೆ. ಮತ್ತೊಂದೆಡೆ ಕಾಡಾನೆ ಸೇರಿದಂತೆ ವನ್ಯಜೀವಿ ಹಾವಳಿ ತಡೆಗೆ ಮನುಷ್ಯ ನಿರ್ಮಿತ ಸುರಕ್ಷತಾ ಕ್ರಮಗಳು ಸೇರಿದಂತೆ ಇತರ ಕಾರಣಗಳಿಂದಾಗಿ, ಜಿಲ್ಲೆಯಲ್ಲಿ ಕಳೆದೊಂದು ದಶಕದಲ್ಲಿ 15 ಆನೆಗಳು ಮೃತಪಟ್ಟಿವೆ.

ಜಿಲ್ಲೆಯಲ್ಲಿ ಮಾನವ ಮತ್ತು ಕಾಡಾನೆಗಳ ನಡುವಣ ಸಂಘರ್ಷಕ್ಕೆ ಕೊನೆ ಇಲ್ಲದಂತಾಗಿದೆ. ನಾಲ್ಕು ದಿನಗಳ ಹಿಂದೆಯಷ್ಟೇ ಹಾರೋಹಳ್ಳಿಯಲ್ಲಿ ರೈತರೊಬ್ಬರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದು ಸೇರಿದಂತೆ, 2025ನೇ ವರ್ಷಾಂತ್ಯಕ್ಕೆ ಮೂವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಈ ಪೈಕಿ ಒಬ್ಬರು ಅರಣ್ಯ ಇಲಾಖೆಯ ಆನೆ ಕಾರ್ಯಪಡೆಯ ಸಿಬ್ಬಂದಿಯೂ ಇದ್ದಾರೆ. ಕಳೆದ ಒಂದೂವರೆ ದಶಕದಿಂದ ಆನೆಗಳಿಗೆ ಬಲಿಯಾಗಿರುವವರಲ್ಲಿ ಬಹುತೇಕರು ಕಾಡಂಚಿನಲ್ಲಿರುವ ರೈತರು. ತಮ್ಮ ಕೃಷಿ ಮತ್ತು ತೋಟಗಳಲ್ಲಿ ಫಸಲು ಕಾಯುವುದಕ್ಕಾಗಿ ರಾತ್ರಿ ತೋಟದಲ್ಲೇ ಕಾವಲು ಕಾಯುವವರು, ನಸುಕಿನಲ್ಲಿ ಜಮೀನು ಕೆಲಸಕ್ಕೆ ಹೋಗುವವರು, ಕೂಲಿ ಕಾರ್ಮಿಕರು, ದನ ಮೇಯಿಸುವವರು, ಆನೆ ಕಾಟವಿರುವ ಪ್ರದೇಶದ ರಸ್ತೆಯಲ್ಲಿ ಹೋಗುತ್ತಿದ್ದವರು ಸಹ ಆನೆ ದಾಳಿಗೆ ತಮ್ಮ ಜೀವ ತೆತ್ತಿದ್ದಾರೆ.

ಕಾಡಾನೆಯಿಂದಾಗಿ ಸಂಭವಿಸುವ ಸಾವಿಗೆ ಸರ್ಕಾರ ಪರಿಹಾರದ ದಯೆ ತೋರಿದೆ. ಕಾಡಾನೆ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಕಾಯಂ ಸಿಬ್ಬಂದಿ ಮೃತಪಟ್ಟರೆ ₹50 ಲಕ್ಷ ಪರಿಹಾರ, ಹೊರಗುತ್ತಿಗೆ ಸಿಬ್ಬಂದಿ ಮೃತಪಟ್ಟರೆ ₹25 ಲಕ್ಷ, ರೈತ ಅಥವಾ ಇತರರು ಮೃತಪಟ್ಟರೆ ₹20 ಲಕ್ಷ ಪರಿಹಾರವನ್ನು ನಿಗದಿಪಡಿಸಿದೆ. ಜಿಲ್ಲೆಯಲ್ಲಿ ಇದುವರೆಗೆ ಕಾಡಾನೆ ದಾಳಿಯಿಂದಾಗಿ ಮೃತಪಟ್ಟಿರುವವರ ಪಟ್ಟಿಯಲ್ಲಿ ರೈತರೇ ಹೆಚ್ಚಾಗಿದ್ದಾರೆ. ಹಾಗಾಗಿ, ಸರ್ಕಾರ ನಿಗದಿಪಡಿಸಿರುವ ಪರಿಹಾರ ಕೂಡ ಅಲ್ಪ ಎನ್ನುವ ರೈತರು, ಯಾರೇ ಸತ್ತರೂ ಪರಿಹಾರವು ಏಕರೂಪದಲ್ಲಿರಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದಾರೆ.

ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ಕಾಡಾನೆ

ಹೋದ ಜೀವ ಬರುವುದೇ?

‌‘ನಮ್ಮಮ್ಮ ಬದುಕಿದ್ದಾಗ ಕುಟುಂಬದ ವಾರ್ಷಿಕ ಆದಾಯ ನಾಲ್ಕೈದು ಲಕ್ಷ ಇತ್ತು. ಹೈನುಗಾರಿ, ರೇಷ್ಮೆ ಕೃಷಿ ಜೊತೆಗೆ ಜಮೀನಿನಲ್ಲಿ ರಾಗಿ ಸೇರಿದಂತೆ ಇತರ ತರಕಾರಿ ಬೆಳೆಯುತ್ತಿದ್ದೆವು. ನಮ್ಮಮ್ಮ ಕಾಡಾನೆಗೆ ಬಲಿಯಾದ ಬಳಿಕ ಕುಟುಂಬದ ಆರ್ಥಿಕ ಸ್ಥಿತಿ ತಲೆಕೆಳಗಾಯಿತು. ಅರಣ್ಯ ಇಲಾಖೆಯವರು ₹7.50 ಲಕ್ಷ ಪರಿಹಾರದ ಜೊತೆಗೆ ತಂದೆಗೆ ತಿಂಗಳಿಗೆ ₹2 ಸಾವಿರ ಮಾಸಾಶನ ಕೊಡುತ್ತಿದ್ದಾರೆ. ಕಾಡಾನೆ ದಾಳಿ ನಮ್ಮ ಕುಟುಂಬದ ನೆಮ್ಮದಿಯನ್ನೇ ಕಸಿದುಕೊಂಡಿತು. ಪರಿಹಾರದಿಂದ ಹೋದ ಜೀವ ಬಂದಿತೇ?’ ಎಂದು ಚನ್ನಪಟ್ಟಣ ತಾಲ್ಲೂಕಿನ ಚನ್ನಿಗನಹೊಸಹಳ್ಳಿಯ ರಾಜೇಶ್ ತೋಡಿಕೊಂಡರು.

ರಾಜೇಶ್ ಅವರ ತಾಯಿ 60 ವರ್ಷದ ಚನ್ನಮ್ಮ ಅವರು 2022ರ ಆಗಸ್ಟ್ 9ರಂದು ತೋಟದ ಮನೆಗೆ ಸಂಜೆ 7 ಗಂಟೆ ಸುಮಾರಿಗೆ ಹಾಲು ಕರೆಯಲು ಹೋದಾಗ, ಕಾಡಾನೆ ದಾಳಿ ನಡೆಸಿ ಕೊಂದಿತ್ತು. ಘಟನೆ ಬಳಿಕ ಅವರ ಕುಟುಂಬದ ಆರ್ಥಿಕ ಲೆಕ್ಕಾಚಾರ ಬುಡಮೇಲಾಗಿದೆ. ‘ತಾಯಿ ತೀರಿಕೊಂಡ ಬಳಿಕ ಕುಟುಂಬದ ಕೃಷಿ ಹಾಗೂ ಹೈನುಗಾರಿಕೆ ಚಟುವಟಿಕೆ ನಿಂತಿದೆ. ನಾನು ತರಕಾರಿ ವ್ಯಾಪಾರ ಮಾಡುತ್ತಿರುವೆ. ಕಾಡಾನೆ ಕಾಟದಿಂದ ಜಮೀನಿನಲ್ಲಿ ಬೆಳೆ ಬೆಳೆಯಲಾಗದ ಸ್ಥಿತಿ ಇದೆ’ ಎಂದು ರಾಜೇಶ್ ಪರಿಸ್ಥಿತಿಯನ್ನು ತೆರೆದಿಟ್ಟರು.

ಆನೆಗಳ ಆವಾಸಸ್ಥಾನ

ರಾಜಧಾನಿಗೆ ಹೊಂದಿಕೊಂಡಂತಿರುವ ಹಿಂದಿನ ರಾಮನಗರ ಜಿಲ್ಲೆಯು ಇದೀಗ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರುನಾಮಕರಣಗೊಂಡಿದೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ರಾಜಧಾನಿ ಬೆಂಗಳೂರು ಒಂದು ಕಡೆ ಬೆಂಗಳೂರು ಜಿಲ್ಲಾ ಕೇಂದ್ರಕ್ಕೆ ಹತ್ತಿರವಾಗುತ್ತಿದೆ. ಮತ್ತೊಂದೆಡೆ ವನ್ಯಜೀವಿಗಳ ಹಾವಳಿಯೂ ಮಿತಿ ಮೀರುತ್ತಿದೆ. ಬನ್ನೇರುಘಟ್ಟ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹಾಗೂ ಉಳಿದೆರಡು ಬೆಂಗಳೂರು ದಕ್ಷಿಣ ಜಿಲ್ಲಾ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.ಜಿಲ್ಲೆಯಲ್ಲಿ ಬನ್ನೇರುಘಟ್ಟ ಅರಣ್ಯ ಪ್ರದೇಶ, ಕಾವೇರಿ ವನ್ಯಜೀವಿಧಾಮದ ಜೊತೆಗೆ ಬೆಟ್ಟಗುಡ್ಡಗಳಿಂದ ಆವೃತ್ತವಾಗಿದೆ. ಗಡಿಭಾಗದಲ್ಲಿ ಕಾವೇರಿ ನದಿ, ಜಿಲ್ಲೆಯೊಳಗೆ ಅರ್ಕಾವತಿ, ವೃಷಭಾವತಿ, ಕಣ್ವ ನದಿಗಳು ಹರಿಯುತ್ತವೆ. ಇದರಿಂದಾಗಿ ಜಿಲ್ಲೆಯು ಕಾಡಾನೆಗಳ ಆವಾಸ ಸ್ಥಾನವಾಗಿದೆ. ಜೊತೆಗೆ, ಅತಿ ಹೆಚ್ಚು ಕಾಡಾನೆ–ಮಾನವ ಸಂಘರ್ಷ ಹೆಚ್ಚಾಗಿರುವ ಜಿಲ್ಲೆ ಎಂಬ ಹಣೆಪಟ್ಟಿ ಇತ್ತೀಚೆಗೆ ಬಂದಿದೆ.

‘ಕಾವೇರಿ ವನ್ಯಜೀವಿಧಾಮದ ಜೊತೆಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ಚಾಚಿಕೊಂಡಿರುವ ಕನಕಪುರ ತಾಲ್ಲೂಕಿನಲ್ಲೇ ಕಾಡಾನೆ ದಾಳಿ ಪ್ರಕರಣಗಳು ಹೆಚ್ಚು. ಜಿಲ್ಲೆಯಲ್ಲಿ ಕಳೆದ 7 ವರ್ಷಗಳಲ್ಲಿ ಕಾಡಾನೆಗಳ ದಾಳಿಯಿಂದ ಮೃತಪಟ್ಟಿರುವ 25 ಮಂದಿ ಪೈಕಿ, 21 ಮಂದಿ ಕನಪುರದವರೇ ಆಗಿದ್ದಾರೆ. ಜನವಸತಿ ಮತ್ತು ಕೃಷಿ ಪ್ರದೇಶಕ್ಕೆ ಹೊಂದಿಕೊಂಡಂತೆ ಅರಣ್ಯವಿರುವುದರಿಂದ ಕಾಡಾನೆಗಳು ಆಹಾರ ಅರಸಿ ಊರಿನತ್ತ ಬರುವುದು ಸಾಮಾನ್ಯವಾಗಿದೆ. ಈ ವೇಳೆ, ಕಾಡಾನೆ ದಾಳಿಗೆ ರೈತರು ಸಿಲುಕಿ ಸಾಯುವ ಮತ್ತು ಗಾಯಗೊಳ್ಳುವ ಘಟನೆಗಳು ಸಂಭವಿಸುತ್ತವೆ. ಆನೆ ತಡೆಯಲು ರೈಲ್ವೆ ಬ್ಯಾರಿಕೇಡ್, ಸೋಲಾರ್ ವಿದ್ಯುತ್ ಬೇಲಿ, ವಾಪಸ್ ಕಾಡಿಗೆ ಓಡಿಸಲು ಆನೆ ಕಾರ್ಯಪಡೆ ಇದ್ದರೂ ಕಾಡಾನೆಗಳ ನಾಡು ಪ್ರವೇಶ ಮಾತ್ರ ಹೆಚ್ಚುತ್ತಲೇ ಇದೆ’ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು.

31,485 ಬೆಳೆಹಾನಿ ಪ್ರಕರಣ

ಜಿಲ್ಲೆಯಲ್ಲಿ 2012ರಿಂದ ಕಾಡಾನೆಗಳಿಂದ ಆಗುತ್ತಿರುವ ಬೆಳೆಹಾನಿ ಏರುಗತಿಯಲ್ಲೇ ಸಾಗುತ್ತಿದೆ. ಅರಣ್ಯ ಇಲಾಖೆಯ ವರದಿ ಪ್ರಕಾರ, ಕಳೆದ 13 ವರ್ಷದಲ್ಲಿ ಜಿಲ್ಲೆಯಲ್ಲಿ 31,485 ಬೆಳೆಹಾನಿ ಪ್ರಕರಣಗಳು ವರದಿಯಾಗಿವೆ. 2012–13ನೇ ಸಾಲಿನಲ್ಲಿ 3,728 ಪ್ರಕರಣಗಳು ವರದಿಯಾಗಿದ್ದರೆ, 2023–24ನೇ ಸಾಲಿನಲ್ಲಿ 5,144 ಪ್ರಕರಣಗಳು ದಾಖಲಾಗಿವೆ. ಅತಿ ಹೆಚ್ಚು ಬೆಳೆ ಹಾನಿಯಾದ ವರ್ಷವಿದು. ಇನ್ನು 2024–25ರಲ್ಲಿ 2,586 ವರದಿಯಾಗಿವೆ. ಜಿಲ್ಲೆಯಲ್ಲಿ 2020–21ನೇ ಸಾಲಿನಿಂದ 2024–25ರವರೆಗೆ 1,520 ಬೆಳೆಹಾನಿ ಪ್ರಕರಣಗಳು ದಾಖಲಾಗಿವೆ.  

ಆನೆಗಳ ಹಾವಳಿಯಿಂದಾಗಿ ಯಾವಾಗ ಬೆಳೆ ಹಾನಿ ಮತ್ತು ನಷ್ಟ ಹೆಚ್ಚತೊಡಗಿದಾಗ, ಅರಣ್ಯ ಇಲಾಖೆಯು ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ 61 ಬೆಳೆಗಳನ್ನು ಬೆಳೆಹಾನಿ ಪರಿಹಾರ ವ್ಯಾಪ್ತಿಗೆ ಸೇರಿಸಿದೆ. ಆನೆ ಹಾವಳಿ ಪ್ರದೇಶಕ್ಕೆ ಅನುಗುಣವಾಗಿ ಬೆಳೆಗಳನ್ನು ಸೇರಿಸಲಾಗಿದೆ. ಕೆಲ ವರ್ಷಗಳ ಹಿಂದೆ ಮಾವು ಸೇರಿದಂತೆ 7 ತೋಟಗಾರಿಕೆ ಬೆಳೆಗಳು ಹಾನಿ ವ್ಯಾಪ್ತಿಗೆ ಬಂದಿವೆ. ಬೆಳೆಗಳಿಗೆ 2016ರಲ್ಲಿದ್ದ ಪರಿಹಾರದ ಮೊತ್ತವನ್ನು 2022 ಮತ್ತು 2025ರಲ್ಲಿ ಪರಿಷ್ಕರಿಸಿ ದ್ವಿಗುಣಗೊಳಿಸಲಾಗಿದೆ.

ಭತ್ತ, ಜೋಳ, ಮೆಕ್ಕೆಜೋಳ, ಸಜ್ಜೆ, ರಾಗಿ, ತೊಗರಿ, ಹೆಸರು, ಉದ್ದು, ಕಬ್ಬು, ಹತ್ತಿ, ಶೇಂಗಾ, ಸೂರ್ಯಕಾಂತಿ, ಸೋಯಾ, ಎಳ್ಳು, ಹುಚ್ಚೆಳ್ಳು, ಕಂಬು, ಬಟಾಣಿ, ಹಲಸಂದೆ, ಅವರೆಕಾಯಿ, ಹಾಗಲಕಾಯಿ, ಬದನೆಕಾಯಿ, ನುಗ್ಗೆಕಾಯಿ, ಗೆಡ್ಡೆಕೋಸು, ಬೆಂಡೆಕಾಯಿ, ಮೂಲಂಗಿ, ಹೀರೆಕಾಯಿ, ಪಡವಲಕಾಯಿ, ತೊಂಡೆಕಾಯಿ, ಹೂಕೋಸು, ಬೀಟ್‌ರೂಟ್, ಈರುಳ್ಳಿ, ಟೊಮ್ಯಾಟೊ, ಆಲೂಗೆಡ್ಡೆ, ಬೀನ್ಸ್, ಕ್ಯಾರೆಟ್, ಅರಿಶಿನ, ಕಲ್ಲಂಗಡಿ, ಹಸಿ ಮೆಣಸಿನಕಾಯಿ, ದಪ್ಪ ಮೆಣಸಿನಕಾಯಿ, ಶುಂಠಿ, ನವಣೆ, ಎಲೆಕೋಸು, ಕೊತಂಬರಿ, ಏಲಕ್ಕಿ, ಮೆಣಸು, ಹರಳು, ಮೆಂತ್ಯ ಸೊಪ್ಪು, ನಿಂಬೆ, ಚೆಂಡು ಮಲ್ಲಿಗೆ, ಕಾಕಡ ಹೂವು, ಕನಕಾಂಬರ, ಸೇವಂತಿ, ತೆಂಗು, ಅಡಿಕೆ, ಮಾವು, ಸಪೋಟ, ಸೀಬೆ, ಹಲಸು, ದಾಳಿಂಬೆ, ಸೀತಾಫಲ, ಹಿಪ್ಪುನೇರಳೆ, ಕಾಫಿ ಸೇರಿದಂತೆ ಇನ್ನೂ ಹಲವು ಬೆಳೆಗಳು ಪರಿಹಾರದ ವ್ಯಾಪ್ತಿಗೆ ಬರಲಿವೆ.

ಕಾಡಾನೆಗಳು ಮಾಡುವ ಆಸ್ತಿ ನಷ್ಟಕ್ಕೆ ಇಲಾಖೆ 2020ನೇ ಸಾಲಿನಿಂದ ಪರಿಹಾರ ನೀಡುತ್ತಿದೆ. ಮನೆ ಅಥವಾ ಕಟ್ಟಡದ ಕಾಂಪೌಂಡ್, ಗೇಟ್, ಬೋರ್‌ವೆಲ್, ಪೈಪ್‌ಲೈನ್, ಡ್ರಿಪ್‌ಲೈನ್, ಶೆಡ್‌ ಸೇರಿದಂತೆ ಇತರ ಆಸ್ತಿ ನಷ್ಟಗಳು ಪರಿಹಾರ ವ್ಯಾಪ್ತಿಗೆ ಬರಲಿವೆ. ನಷ್ಟದ ಪ್ರಮಾಣಕ್ಕೆ ಅನುಗುಣವಾಗಿ ಹಿಂದೆ ಗರಿಷ್ಠ ₹10 ಸಾವಿರದವರೆಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು 2022ರಲ್ಲಿ ₹20 ಸಾವಿರಕ್ಕೆ ಹೆಚ್ಚಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ₹74.61 ಲಕ್ಷ ಪರಿಹಾರ ಪಾವತಿಸಲಾಗಿದೆ.

ಜಮೀನು ಗುತ್ತಿಗೆಗೆ ಆಗ್ರಹ

ಕಾಡಾನೆಗಳ ಹಾವಳಿಯಿಂದ ಆಗುತ್ತಿರುವ ಜೀವಹಾನಿ ಮತ್ತು ಬೆಳೆಹಾನಿಗೆ ಬೇಸತ್ತಿರುವ ಅರಣ್ಯದಂಚಿನ ರೈತರು ಬೇಸತ್ತಿದ್ದಾರೆ ಕೃಷಿ ಮತ್ತು ತೋಟಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ಒಂದು ಕಾಲದಲ್ಲಿ ಬದುಕಿಗೆ ಆಧಾರವಾಗಿದ್ದ ತಮ್ಮ ಜಮೀುನುಗಳನ್ನು ಕಾಡಾನೆ ಕಾಟದಿಂದಾಗಿ ಪಾಳುಬಿಟ್ಟು ಬೇರೆ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಹಲವರು ಹಳ್ಳಿ ಬಿಟ್ಟು ಪಟ್ಟಣ ಮತ್ತು ನಗರ ಸೇರಿಕೊಂಡಿದ್ದಾರೆ. ಕೆಲವರು ಗಾರ್ಮೆಂಟ್ಸ್, ಕಾರ್ಖಾನೆಗಳಲ್ಲಿ ಕೆಲಸಕ್ಕೆ ಸೇರಿದ್ದಂತೆ, ಉಳಿದವರು ಕೂಲಿ ಕಾರ್ಮಿಕರಾಗಿದ್ದಾರೆ. ಹೀಗಾಗಿ, ಕಾಡಾನೆ ಪೀಡಿತ ರೈತರು‌ ಇತ್ತೀಚೆಗೆ ಪ್ರತಿಭಟನೆ ನಡೆಸುವಾಗ ಅರಣ್ಯ ಇಲಾಖೆಗೆ ವಿಭಿನ್ನವಾದ ಆಗ್ರಹ ಮಾಡುತ್ತಿದ್ದಾರೆ.

ಆನೆ ಕಾಟದಿಂದಾಗಿ ಕಾಡಂಚಿನ ರೈತರು ಪಾಳು ಬಿಟ್ಟಿರುವ ಜಮೀನನ್ನು ಅರಣ್ಯ ಇಲಾಖೆ ಗುತ್ತಿಗೆಗೆ ಪಡೆದು, ವಾರ್ಷಿಕವಾಗಿ ಜಮೀನು ಮಾಲೀಕರಿಗೆ ಇಂತಿಷ್ಟು ಮೊತ್ತವನ್ನು ನೀಡಬೇಕು. ಇದರಿಂದಾಗಿ, ಜಮೀನಿದ್ದೂ ಕೃಷಿ ಅಥವಾ ತೋಟಗಾರಿಕೆ ಮಾಡಿ ಬದುಕು ಕಟ್ಟಿಕೊಳ್ಳಲಾಗದೆ ಅತಂತ್ರವಾಗಿರುವ ರೈತರಿಗೆ ಆರ್ಥಿಕ ಆಸರೆ ಸಿಕ್ಕಂತಾಗುತ್ತದೆ. ಇಲಾಖೆಗೂ ಜಮೀನಿಗೆ ಬರುವ ಆನೆಗಳ ಕಾರ್ಯಾಚರಣೆ ನಡೆಸುವ ಕಾಟ ತಪ್ಪುತ್ತದೆ. ಸಾವು–ನೋವು ಸಹ ಇಳಿಕೆಯಾಗುತ್ತದೆ ಎಂಬ ವಾದವನ್ನು ರೈತರು ತಮ್ಮ ಪ್ರತಿ ಪ್ರತಿಭಟನೆಯಲ್ಲೂ ಅಧಿಕಾರಿಗಳ ಮುಂದಿಡುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳು, ಕಾರ್ಯಸಾಧುವಲ್ಲದ ಆಗ್ರಹವಿದು. ಈ ರೀತಿ ಒಂದು ಕಡೆ ಮಾಡಿದರೆ ರಾಜ್ಯದಾದ್ಯಂತ ಮಾಡಬೇಕಾಗುತ್ತದೆ. ಕಾಡಾನೆ ಹಾವಳಿ ತಡೆಗೆ ಇದು ಶಾಶ್ವತ ಪರಿಹಾರವಾಗಲಾರದು ಎಂದು ರೈತರ ಆಗ್ರಹವನ್ನು ನಯವಾಗಿಯೇ ತಿರಸ್ಕರಿಸುತ್ತಾ ಬಂದಿದ್ದಾರೆ.

ಅರಣ್ಯ ಇಲಾಖೆ ಎಂದರೆ ಅರಣ್ಯ, ಅರಣ್ಯ ಉತ್ಪನ್ನ ಹಾಗೂ ವನ್ಯಜೀವಿಗಳ ಸಂರಕ್ಷಣೆ ಮಾಡುವ ಇಲಾಖೆ. ಆದರೆ, ಕಳೆದ ಒಂದೂವರೆ ದಶಕದಲ್ಲಿ ಹೆಚ್ಚಾಗಿರುವ ಕಾಡಾನೆ ಸೇರಿದಂತೆ ಇತರ ವನ್ಯಜೀವಿಗಳ ಹಾವಳಿಯಿಂದಾಗಿ ಇಲಾಖೆಯ ಕಾರ್ಯವೈಖರಿಯಲ್ಲೂ ಭಾರಿ ಬದಲಾವಣೆಯಾಗಿದೆ. ಬೇರೆಲ್ಲಾ ಕೆಲಸಗಳಿಗಿಂತ ಹೆಚ್ಚಾಗಿ ವನ್ಯಜೀವಿಗಳ ಅದರಲ್ಲೂ ಕಾಡಾನೆ ಹಾವಳಿ ನಿಯಂತ್ರಣವೇ ದೊಡ್ಡ ಕೆಲಸವಾಗಿದೆ. ಇದಕ್ಕಾಗಿ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ವ್ಯಯವಾಗುತ್ತಿದೆ. ಆನೆ ಕಾರ್ಯಪಡೆ ಸಿಬ್ಬಂದಿ, ಆನೆ ಸೆರೆ ಕಾರ್ಯಾಚರಣೆ, ರೈಲ್ವೆ ಬ್ಯಾರಿಕೇಡ್, ಸೋಲಾರ್ ವಿದ್ಯುತ್ ತಂತಿ ಅಳವಡಿಕೆ, ಆನೆಯಿಂದಾಗುವ ಸಾವು–ನೋವು, ಬೆಳೆ ಹಾನಿ–ನಷ್ಟದ ಪರಿಹಾರಕ್ಕಾಗಿ ಇಲಾಖೆಯ ಬಜೆಟ್‌ ಸಹ ಹಿಗ್ಗುತ್ತಿದೆ. ಇಷ್ಟಾದರೂ ಕಾಡಾನೆ–ಮಾನವ ಸಂಘರ್ಷ ಮಾತ್ರ ಏರುಗತಿಯಲ್ಲೇ ಇದೆ!

ಅಂಕಿ ಅಂಶ-1

₹50 ಲಕ್ಷ: ಕಾಡಾನೆ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಕಾಯಂ ಸಿಬ್ಬಂದಿ ಮೃತಪಟ್ಟರೆ ಸಿಗುವ ಪರಿಹಾರ

₹25 ಲಕ್ಷ: ಕಾಡಾನೆ ಓಡಿಸುವ ಕಾರ್ಯಾಚರಣೆಯಲ್ಲಿ ಹೊರಗುತ್ತಿಗೆ ಸಿಬ್ಬಂದಿ ಮೃತಪಟ್ಟರೆ ನೀಡುವ ಪರಿಹಾರ

₹5 ಸಾವಿರ: ಮೃತ ಸಿಬ್ಬಂದಿ ಕುಟುಂಬದ ಒಬ್ಬರಿಗೆ ನೀಡುವ ಮಾಸಿಕ ಪಿಂಚಣಿ

₹20 ಲಕ್ಷ: ಕಾಡಾನೆ ದಾಳಿಯಿಂದ ಸಾರ್ವಜನಿಕರು ಮೃತಪಟ್ಟರೆ ಕೊಡುವ ಪರಿಹಾರ

₹4 ಸಾವಿರ: ಮೃತರ ಕುಟಂಬದ ಒಬ್ಬರಿಗೆ ಐದು ವರ್ಷದವರೆಗೆ ಸಿಗುವ ಮಾಸಿಕ ಪಿಂಚಣಿ

₹10 ಲಕ್ಷ: ಕಾಡಾನೆ ದಾಳಿಯಿಂದ ಶಾಶ್ವತ ಅಂಗವಿಕಲತೆ ಉಂಟಾದ ಸಿಗುವ ಪರಿಹಾರ

₹5 ಲಕ್ಷ: ಭಾಗಶಃ ಅಂಗವಿಕಲತೆಗೆ ಪರಿಹಾರ

₹60 ಸಾವಿರ: ಕಾಡು ಪ್ರಾಣಿಗಳಿಂದ ಗಾಯಗೊಂಡರೆ ಸಿಗುವ ಗರಿಷ್ಠ ಪರಿಹಾರ

₹20 ಸಾವಿರ: ಕಾಡಾನೆ ದಾಳಿಯಿಂದಾಗುವ ಆಸ್ತಿ ನಷ್ಟದ ಪ್ರತಿ ಪ್ರಕರಣಕ್ಕೆ ಪರಿಹಾರ

ವರ್ಷಸಾವುಗಾಯಾಳು
2012–13713
2013–14415
2014–15525
2015–162
2016–17321
2017–18114
2018–1923
2019–2032
2020–21217
2021–2232
2022–23215
2023–2478
2024–2554
2025–263-
Total48149

ಅಂಕಿ ಅಂಶಗಳು-2

31,485: ಕಳೆದ 13 ವರ್ಷಗಳಲ್ಲಿ ವರದಿಯಾದ ಬೆಳೆಹಾನಿ ಪ್ರಕರಣ

₹16.36 ಕೋಟಿ: ಬೆಳೆಹಾನಿಗೆ ಪಾವತಿಸಿರುವ ಪರಿಹಾರ

1,520: ವರದಿಯಾದ ಆಸ್ತಿ ನಷ್ಟ ಪ್ರಕರಣ

₹74.61 ಲಕ್ಷ: ಆಸ್ತಿ ನಷ್ಟಕ್ಕೆ ಪಾವತಿಸಿರುವ ಪರಿಹಾರ

₹20 ಸಾವಿರ: ಆಸ್ತಿ ನಷ್ಟ ಪ್ರಕರಣಕ್ಕೆ ನೀಡುವ ಗರಿಷ್ಠ ಪರಿಹಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.