ADVERTISEMENT

PV Web Exclusive: ಕರ್ನಾಟಕದ ಊಟಿ ಜೋಗಿಮಟ್ಟಿಗೆ ಬೇಸಿಗೆಲಿ ಪ್ರವಾಸಿಗರಿಗೆ ನಿಷೇಧ

ಎಂ.ಎನ್.ಯೋಗೇಶ್‌
Published 10 ಫೆಬ್ರುವರಿ 2026, 5:15 IST
Last Updated 10 ಫೆಬ್ರುವರಿ 2026, 5:15 IST
<div class="paragraphs"><p>PV Web Exclusive: ಕರ್ನಾಟಕದ ಊಟಿ ಜೋಗಿಮಟ್ಟಿಗೆ ಬೇಸಿಗೆಲಿ ಪ್ರವಾಸಿಗರಿಗೆ ನಿಷೇಧ</p></div>

PV Web Exclusive: ಕರ್ನಾಟಕದ ಊಟಿ ಜೋಗಿಮಟ್ಟಿಗೆ ಬೇಸಿಗೆಲಿ ಪ್ರವಾಸಿಗರಿಗೆ ನಿಷೇಧ

   

ಚಿತ್ರದುರ್ಗ: ಕರ್ನಾಟಕದ ಊಟಿ ಎಂದೇ ಪ್ರಸಿದ್ಧಿ ಪಡೆದಿರುವ ‘ಜೋಗಿಮಟ್ಟಿ ವನ್ಯಜೀವಿಧಾಮ’ಕ್ಕೆ ಪ್ರವಾಸಿಗರ ಪ್ರವೇಶವನ್ನು ಅರಣ್ಯ ಇಲಾಖೆ ಸಂಪೂರ್ಣವಾಗಿ ನಿಷೇಧಿಸಿದೆ. ಬೇಸಿಗೆ ಅವಧಿಯಲ್ಲಿ ಆಗಾಗ್ಗೆ ಸಂಭವಿಸುತ್ತಿದ್ದ ಕಾಳ್ಗಿಚ್ಚು ತಪ್ಪಿಸುವುದಕ್ಕಾಗಿ ಇಲಾಖೆ ಈ ಕ್ರಮ ಕೈಗೊಂಡಿದೆ.

ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹಿರಿಯೂರು ತಾಲ್ಲೂಕುಗಳಲ್ಲಿ 10,000 ಹೆಕ್ಟೇರ್ ಪ್ರದೇಶವನ್ನು ಜೋಗಿಮಟ್ಟಿ ಗಿರಿಧಾಮ ವ್ಯಾಪಿಸಿದೆ. ಇದೇ ವ್ಯಾಪ್ತಿಯಲ್ಲಿ ಆಡುಮಲ್ಲೇಶ್ವರ ಎಂಬ ಕಿರು ಮೃಗಾಲಯವೂ ಇದೆ. ಇಲ್ಲಿಯೇ ಹಿಮವತ್ ಕೇದಾರ ಅಥವಾ ಹಿಮವತ್ ಕೆದ್ರ ಎಂಬ ಸಣ್ಣ ಜಲಪಾತಗಳಿದ್ದು ಮಳೆಗಾಲದಲ್ಲಿ ದರ್ಶನ ಭಾಗ್ಯ ನೀಡುತ್ತವೆ.

ADVERTISEMENT

ಕುರುಚಲು ಗಿಡಗಳಿಂದ ಆವೃತವಾಗಿರುವ ಅರಣ್ಯ ಪ್ರದೇಶಗಳಲ್ಲಿ ಜಿಂಕೆ, ಕಡವೆಗಳು ನೋಡ ಸಿಗುತ್ತವೆ. ಈ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ವರ್ಷದ ಎಲ್ಲಾ ಕಾಲದಲ್ಲೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಈ ಬಾರಿ ಬೇಸಿಗೆ ಪ್ರವೇಶಕ್ಕೂ ಮೊದಲೇ ಜೋಗಿಮಟ್ಟಿಗೆ ಪ್ರವಾಸಿಗರ ಪ್ರವೇಶವನ್ನು ಸ್ಥಗಿತಗೊಳಿಸಲಾಗಿದೆ. ಕಳೆದೆರಡು ತಿಂಗಳಿಂದ ಜೋಗಿಮಟ್ಟಿ ಅರಣ್ಯ ಪ್ರದೇಶ ಪ್ರವಾಸಿಗರಿಂದ ಮುಕ್ತಗೊಂಡಿದೆ.

ಕಳೆದ ವರ್ಷ ಕಾಳ್ಗಿಚ್ಚಿನಿಂದಾಗಿ ಜೋಗಿಮಟ್ಟಿಯ ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟುಹೋಗಿತ್ತು. ಇದನ್ನು ತಡೆಯುವುದಕ್ಕಾಗಿ ಅರಣ್ಯ ಇಲಾಖೆ ನಿಷೇಧ ಆದೇಶವನ್ನು ಜಾರಿಗೊಳಿಸಿದೆ. ನಿತ್ಯ ಮುಂಜಾನೆ ರಾಜ್ಯದ ವಿವಿಧೆಡೆಯಿಂದ ಬರುವ ಪ್ರವಾಸಿಗರು ಬೇಸರದಿಂದ ವಾಪಸ್‌ ತೆರಳುತ್ತಿದ್ದಾರೆ. ‘ಅರಣ್ಯ ಸಂರಕ್ಷಣೆಗಾಗಿ ಈ ಕ್ರಮ ಅನಿವಾರ್ಯವಾಗಿತ್ತು‘ ಎಂದು ಅರಣ್ಯಾಧಿಕಾರಿಗಳು ತಮ್ಮ ನಿಷೇಧ ಆದೇಶವನ್ನು ಸಮರ್ಥಿಸಿಕೊಂಡಿದ್ದಾರೆ.

ಜೋಗಿಮಟ್ಟಿ ಅರಣ್ಯ ಪ್ರದೇಶದಕ್ಕೆ ನಿತ್ಯ ಬೆಳಿಗ್ಗೆ 6 ಗಂಟೆಯಿಂದ 11 ಗಂಟೆವರೆಗೂ ಪ್ರವಾಸಿಗರಿಗೆ ಪ್ರವೇಶ ನೀಡಲಾಗುತ್ತಿತ್ತು. ಬೆಟ್ಟದ ಮೇಲ್ಭಾಗಕ್ಕೆ ಹೋದವರು ಮರಳಿ ಬರಲು ಮಧ್ಯಾಹ್ನ 12 ಗಂಟೆಯವರೆಗೂ ಅವಕಾಶವಿತ್ತು. ಆದರೆ ಮಧ್ಯಾಹ್ನದ ವೇಳೆ ಬಿರುಬಿಸಿಲಿದ್ದು ಕಿಡಿಗೇಡಿಗಳ ಕೃತ್ಯಕ್ಕೆ ಬೆಂಕಿ ತಗುಲುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಪ್ರವೇಶಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಜೋಗಿಮಟ್ಟಿ ಪ್ರವೇಶದ್ವಾರದಿಂದ ಬೆಟ್ಟದ ತುತ್ತತುದಿಗೆ ತಲುಪಲು 8 ಕಿ.ಮೀ ಕ್ರಮಿಸಬೇಕು. ಕಲ್ಲುಮಣ್ಣಿನ ಹಾದಿಯಲ್ಲಿ ನಿಧಾನವಾಗಿ ಚಲಿಸಬೇಕು. ಮಳೆಗಾಲದಲ್ಲಿ ವಾಹನಗಳ ಚಾಲನೆ ಕೊಂಚ ಕಷ್ಟವಾಗುತ್ತದೆ. ಬೆಟ್ಟದ ತಟದಿಂದ ತುದಿಯವರೆಗೆ ತಲುಪುವಷ್ಟರಲ್ಲಿ ಹಲವು ಪ್ರಾಣಿ, ಪಕ್ಷಿಗಳು ದರ್ಶನ ನೀಡುತ್ತವೆ.

ಊರಂಚಿನಲ್ಲೇ ಕಾಡು; ಕೋಟೆ, ಕೊತ್ತಲ, ಕಣಿವೆ, ಬುರುಜು, ಬತೇರಿಗಳಿಗೆ ಹೆಸರುವಾಸಿಯಾಗಿರುವ ಚಿತ್ರಕಲ್ಲುಗಳ ದುರ್ಗ (ಚಿತ್ರದುರ್ಗ) ತನ್ನ ಸುತ್ತಮುತ್ತಲೂ ಹಸಿರು ಪರಿಸರವನ್ನೇ ಮೈದುಂಬಿಕೊಂಡಿದೆ. ಬಂಗಾರ, ತಾಮ್ರ, ಮ್ಯಾಂಗನೀಸ್, ಕಬ್ಬಿಣದ ಅದಿರು, ಗ್ರಾನೈಟ್ ಖನಿಜಗಳನ್ನು ಒಡಲಾಳದಲ್ಲಿ ಹುದುಗಿಸಿಟ್ಟುಕೊಂಡಿರುವ ಚಿತ್ರದುರ್ಗ ಜಿಲ್ಲೆ ಪ್ರಾಕೃತಿಕ ಸಂಪನ್ಮೂಲಗಳು ಗಣಿಯಾಗಿ ಗುರುತಿಸಿಕೊಂಡಿದೆ. ಮಲೆನಾಡನ್ನೇ ನಾಚಿಸುವಂತ ಗಿರಿಧಾಮಗಳು ಪ್ರವಾಸಿಗರಿಗೆ ಕಾಶ್ಮೀರಕ್ಕೆ ಬಂದಂತಹ ಅನುಭವ ಕೊಡುತ್ತವೆ. ಏಷ್ಯಾಖಂಡದಲ್ಲೇ ಅತೀಹೆಚ್ಚು ವೇಗದ ಗಾಳಿ ಬೀಸುವ ಪ್ರದೇಶ ಎಂದು ಗುರುತಿಸಿಕೊಂಡಿರುವ ಕಾರಣದಿಂದಲೇ ಈ ಭಾಗದಲ್ಲಿ ಅತೀ ಹೆಚ್ಚು ಪವನ ಉತ್ಪಾದನೆಯಾಗುತ್ತಿದೆ.

ಮಲೆನಾಡು ಭಾಗ ನಿತ್ಯಹರಿದ್ವರ್ಣ ಕಾಡಿನಿಂದ ಹೆಸರುವಾಸಿಯಾಗಿದ್ದರೆ ಮಧ್ಯಕರ್ನಾಟಕ ಬಯಲು ಪ್ರದೇಶವು ಒಣ ಪರ್ಣಪಾತಿ ಕಾಡು, ಪೊದೆಸಸ್ಯಗಳಿಂದ ಆವೃತಗೊಂಡಿದೆ. ಅಪರೂಪದ ಕರಡಿಗಳ ವಾಸಸ್ಥಳವೂ ಆಗಿರುವ ದುರ್ಗದ ಅರಣ್ಯ ಪ್ರದೇಶ ಅಪರೂಪದ ಔಷಧೀಯ ಸಸ್ಯಗಳಿಂದ ಆವೃತವಾಗಿದೆ. ನಗರದಿಂದ ಕೇವಲ 2 ಕಿ.ಮೀ ದೂರ ಸಾಗಿದರೆ ಜೋಗಿಮಟ್ಟಿ ಮೀಸಲು ಅರಣ್ಯ ಪ್ರದೇಶ ಆರಂಭವಾಗುತ್ತದೆ. ಅಲ್ಲಿಂದ ಆರಂಭವಾಗುವ ಗಿರಿಗಳ ಸಾಲು ನೋಡುಗರಿಗೆ ಆನಂದ ತುಂಬುತ್ತದೆ.

ದುರ್ಗದ ಸುತ್ತಮುತ್ತಲಿನ ಅರಣ್ಯ ಪ್ರದೇಶಲ್ಲಿ ಹುಲಿಶಿಕಾರಿಯೂ ಇತ್ತು. ಬ್ರಿಟಿಷರು ಇಲ್ಲಿ ಶೋಕಿಗಾಗಿ ಹುಲಿ ಶಿಕಾರಿ ಮಾಡುತ್ತಿದ್ದರು. ಅದರ ಜೊತೆಗೆ ಸ್ಥಳೀಯ ಕುಟುಂಬಗಳು ಯಮರೂಪಿ ಹುಲಿಗಳಿಂದ ರೈತರನ್ನು, ಗೋಪಾಲಕರನ್ನು ಕಾಪಾಡಲು ಹಲವು ಹುಲಿ ಶಿಕಾರಿ ಮಾಡುತ್ತಿದ್ದರು. ಈಗಲೂ ಕೆಲ ಮನೆಗಳಲ್ಲಿ ಪೂರ್ವಜರು ಮಾಡುತ್ತಿದ್ದ ಹುಲಿಶಿಕಾರಿಯ ಛಾಯಾಚಿತ್ರಗಳನ್ನು ನೋಡಬಹುದು.

ಕ್ರಮೇಣ ಅರಣ್ಯ ಪ್ರದೇಶ ಒತ್ತುವರಿಯಾಗಿ ತೆಂಗು, ಅಡಿಕೆ ತೋಟಗಳಾಗಿ ಬದಲಾದ ನಂತರ ಹುಲಿಗಳು ಇಲ್ಲಿ ವಾಸಿಸುವುದು ಕಡಿಮೆಯಾಯಿತು. ತಂಪನ್ನೇ ಬಯಸುವ ಹುಲಿಗಳು ಬಿಸಿಲು ಹೆಚ್ಚಿರುವ ಈ ಭಾಗದಿಂದ ಬೇರೆಡೆಗೆ ತೆರಳಿದವು ಎಂಬ ಮಾಹಿತಿ ದೊರೆಯುತ್ತದೆ. ಆದರೂ ಪಶ್ಚಿಮಘಟ್ಟಗಳ ಚಾಚಿನಲ್ಲಿ ಚಿತ್ರದುರ್ಗದ ಗಿರಿಧಾಮವೂ ಸೇರಿಕೊಂಡಿರುವುದು ಸ್ಥಳೀಯರಿಗೆ ಹೆಮ್ಮೆಯ ಸಂಗತಿಯಾಗಿದೆ.

ಕರ್ನಾಟಕ ರಾಜ್ಯದ ಬಹುಮುಖ್ಯ ಆನೆ ಕಾರಿಡಾರ್‌ನ ಹಾದಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಲವು ಅರಣ್ಯ ಪ್ರದೇಶಗಳು ಹರಡಿಕೊಂಡಿವೆ. ಬನ್ನೇರುಘಟ್ಟ, ನಾಗರಹೊಳೆ, ಬಂಡಿಪುರ ಭಾಗದಿಂದ ಬರುವ ಆನೆಗಳು ದಾವಣಗೆರೆ ಜಿಲ್ಲೆಯ ಜಗಳೂರು, ಹೊಳಲ್ಕೆರೆ ಸಮೀಪದ ರಾಮಗಿರಿ, ಲೋಕದೊಳಲು ಮೂಲಕ ಹಿರಿಯೂರು ತಾಲ್ಲೂಕಿನ ವಿವಿ ಸಾಗರ ಜಲಾಶಯಕ್ಕೆ (ಮಾರಿಕಣಿವೆ) ಬರುತ್ತವೆ. ಅದೇ ಹಾದಿಯಲ್ಲಿ ವಾಪಸ್‌ ತೆರಳುತ್ತವೆ.

ಶತಮಾನಗಳಿಂದಲೂ ಆನೆಗಳು ಈ ಭಾಗಕ್ಕೆ ಬರುತ್ತಿದ್ದು ಇಲ್ಲಿ ಹರಡಿಸುವ ಅರಣ್ಯವೇ ಅವುಗಳಿಗೆ ಸ್ವಾಗತ ಕೋರುತ್ತಿದೆ. ಆದರೆ ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಗಳ ಹೆಸರಿನಲ್ಲಿ ಆನೆಗಳ ಹಾದಿಗೆ ಹಲವು ಅಡ್ಡಿ, ಆತಂಕಗಳೂ ಎದುರಾಗಿವೆ. ಆದರೂ ಆನೆಗಳು ಅದೇ ಮಾರ್ಗದಲ್ಲಿ ಮಾರಿಕಣಿವೆಯತ್ತ ಬರುತ್ತಿರುವ ಪ್ರಕ್ರಿಯೆ ಈಗಲೂ ಮುಂದುವರಿದಿದೆ.

ಅರಣ್ಯ ಪಾಲು ಬಳ್ಳಾರಿ ಪ್ರಾದೇಶಿಕ ವಿಭಾಗದ ವ್ಯಾಪ್ತಿಯಲ್ಲಿ ಚಿತ್ರದುರ್ಗ ವಿಭಾಗ ಅತೀ ಮುಖ್ಯವಾಗಿದ್ದು ಒಣ ಎಲೆಯುದುರುವ ಮತ್ತು ಕುರುಚಲು ಕಾಡುಗಳಿಂದ ಗಮನ ಸೆಳೆಯುತ್ತಿದೆ. ಬಳ್ಳಾರಿ ವಿಭಾಗದಲ್ಲಿ ಬರುವ ನಾಲ್ಕು ವನ್ಯಜೀವಿ ಅಭಯಾರಣ್ಯಗಳಲ್ಲಿ ಚಿತ್ರದುರ್ಗ ವಿಭಾಗದ ಜೋಗಿಮಟ್ಟಿ ವನ್ಯಜೀವಿ ಅಭಯಾರಣ್ಯ ಅತ್ಯಂತ ಪ್ರಮುಖವಾಗಿದೆ. ಚಿತ್ರದುರ್ಗ ವಿಭಾಗದಲ್ಲಿ 1,28,718 ಹೆಕ್ಟೇರ್‌ ಅರಣ್ಯ ಪ್ರದೇಶವಿದೆ. ಜಿಲ್ಲಾ ವ್ಯಾಪ್ತಿಯ 8,440 ಚ.ಕಿ.ಮೀ ಭೌಗೋಳಿಕ ವಿಸ್ತಾರದಲ್ಲಿ ಶೇ 15.25ರಷ್ಟು ಪಾಲು ಅರಣ್ಯ ಚಾಚಿಕೊಂಡಿದೆ. ಚಿತ್ರದುರ್ಗ ಮತ್ತು ಹಿರಿಯೂರು ಉಪ ವಿಭಾಗಗಳಾಗಿವೆ, ಮತ್ತು ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಹೊಳಲಕೆರೆ, ಹೊಸದುರ್ಗ ಮತ್ತು ಮೊಳಕಾಲ್ಮೂರು ಈ ಆರು ವಲಯಗಳಿವೆ.

ಚಿತ್ರದುರ್ಗ ಸುತ್ತಲೂ ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು ಇದರಿಂದ ವನ್ಯಜೀವಿಗಳ ಓಡಾಟಕ್ಕೆ ತೀವ್ರ ಅಡ್ಡಿಯುಂಟಾಗಿದೆ. ಇದು ಮಾನವ– ಪ್ರಾಣಿ ಸಂಘರ್ಷಕ್ಕೂ ಎಡೆಮಾಡಿಕೊಟ್ಟಿದೆ. ಜಿಲ್ಲೆಯ ಕುರುಚಲು ಅರಣ್ಯ ಪ್ರದೇಶ ಕರಡಿಗಳ ವಾಸಕ್ಕೆ ಯೋಗ್ಯವಾಗಿದ್ದು ಪದೇ ಪದೇ ಜನರ ಸಂಪರ್ಕಕ್ಕೆ ಬರುತ್ತಿವೆ. ಅವುಗಳು ಓಡಾಡುವ ಜಾಗದಲ್ಲಿ ಕೃಷಿ ಭೂಮಿ, ರಸ್ತೆಗಳು ಬಂದಿದ್ದು ಕರಡಿ ವಾಸಕ್ಕೆ ತೊಂದರೆಯುಂಟಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕರಡಿ ಸಾವಿನ ಪ್ರಕರಣಗಳು ದಿನೇ ದಿನೇ ಹೆಚ್ಚಳವಾಗುತ್ತಿವೆ.

‘ಬೇಸಿಗೆ ಮುಗಿಯುತ್ತಲೇ ಜೋಗಿಮಟ್ಟಿ ಸೌಂದರ್ಯ ವೀಕ್ಷಣೆಗೆ ಅವಕಾಶ ನೀಡುತ್ತೇವೆ. ಅಲ್ಲಿಯವರೆಗೂ ಕಾಡು ಸಂರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಅದಕ್ಕೆ ಪ್ರವಾಸಿಗರು ಸಹಕಾರ ನೀಡಬೇಕು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾ ನಾಯ್ಕ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.