
ಸಾಂದರ್ಭಿಕ ಚಿತ್ರಗಳು
ಮಹದಾಯಿ, ಕಳಸಾ– ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ರೈತ ಸೇನಾ ಕರ್ನಾಟಕ ಸಮಿತಿಯು ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಆರಂಭಿಸಿದ ಹೋರಾಟ ಹತ್ತು ವರ್ಷಗಳನ್ನು ಪೂರ್ಣಗೊಳಿಸಿ, ಹನ್ನೊಂದನೇ ವರ್ಷಕ್ಕೆ ಕಾಲಿಟ್ಟಿದೆ. ನರಗುಂದ ವೇದಿಕೆಯಲ್ಲಿ 2015ರ ಜುಲೈ 16ರಿಂದ ಹೋರಾಟ ಆರಂಭಗೊಂಡಿದ್ದು, ಅಲ್ಲಿಂದ ಇಲ್ಲೀವರೆಗೆ ವಿಭಿನ್ನ ಪ್ರತಿಭಟನೆಗಳ ಜತೆಗೆ ಹಲವು ಕಾನೂನಾತ್ಮಕ ಹೋರಾಟಗಳನ್ನೂ ನಡೆಸಿದೆ. ಆದರೆ, ರೈತರ ನಿರೀಕ್ಷೆಗಳಿಗೆ ಆಳುವ ಸರ್ಕಾರಗಳು ಕವಡೆಕಾಸಿನ ಕಿಮ್ಮತ್ತು ಕೊಡುತ್ತಿಲ್ಲ ಎಂದು ಮುಖಂಡರು ಕಿಡಿಕಾರಿದ್ದಾರೆ.
‘ನರಗುಂದ ವೇದಿಕೆಯಿಂದ ಪ್ರಾರಂಭಗೊಂಡ ಕುಡಿಯುವ ನೀರಿನ ಹಕ್ಕಿನ ಹೋರಾಟ ಇಂದಿಗೂ ಮುಂದುವರಿದಿದೆ. ಇದು ಹೋರಾಟ ಅಷ್ಟೇ ಅಲ್ಲ, ನಮ್ಮ ಅಸ್ತಿತ್ವವೂ ಹೌದು. ತಾರ್ಕಿಕ ಅಂತ್ಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ’ ಎಂದು ರೈತ ಸೇನಾ ಕರ್ನಾಟಕ ಸಮಿತಿ ಸಂಸ್ಥಾಪಕ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದ್ದಾರೆ.
ಉತ್ತರ ಕರ್ನಾಟಕದ ರಾಜಕಾರಣಿಗಳು ಸ್ವಾರ್ಥಿಗಳು. ರೈತರಿಗಾಗಿ ಕೆಲಸ ಮಾಡುವ ಇಚ್ಛೆ ಹೊಂದಿಲ್ಲ. ಮಹದಾಯಿ ಹೋರಾಟದ ಕಿಚ್ಚು ದೆಹಲಿವರೆಗೆ ವ್ಯಾಪಿಸಿದೆ. ಆದರೆ, ಸಮಸ್ಯೆ ಇಂದಿಗೂ ಬಗೆಹರಿದಿಲ್ಲ. ನರೇಂದ್ರ ಮೋದಿ ಅವರ ಜತೆಗೆ ಉತ್ತಮ ಒಡನಾಟ ಹೊಂದಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ಮಹದಾಯಿ ಸಮಸ್ಯೆ ಬಗೆಹರಿಸಲು ತಕ್ಷಣದ ಕ್ರಮವಹಿಸುವಂತೆ ಪ್ರಧಾನಮಂತ್ರಿ ಬಳಿ ವಿಷಯ ಪ್ರಸ್ತಾಪಿಸುತ್ತಿಲ್ಲ ಎಂಬುದು ರೈತ ಮುಖಂಡರ ದೂರು.
‘2015ರ ಜುಲೈ 16ರಂದು ರೈತ ಹೋರಾಟ ಪ್ರಾರಂಭ ಆಯಿತು. 2015ರ ಆಗಸ್ಟ್ 24ರಂದು ನಡೆದ ಮೂರು ರಾಜ್ಯಗಳ ಮುಖಂಡರ ಜತೆಗೆ ನಡೆಸಿದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಮ್ಮ ಸಮಸ್ಯೆಗೆ ಸರಿಯಾಗಿ ಸ್ಪಂದಿಸಲಿಲ್ಲ. ಇದಕ್ಕೆ ಕಾರಣ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ’ ಎಂದು ಸೊಬರದಮಠ ನೇರವಾಗಿ ಆರೋಪ ಮಾಡಿದರು.
ನಂತರ, 2018ರ ಆಗಸ್ಟ್ 14ಕ್ಕೆ ಟ್ರಿಬ್ಯುನಲ್ ಆದೇಶ ಆಯಿತು. ಅದರಂತೆ ಒಟ್ಟು 13.42 ಟಿಎಂಸಿ ಅಡಿ ನೀರು ಹಂಚಿಕೆಯಾಯಿತು. ಇದರಲ್ಲಿ 8 ಟಿಎಂಸಿ ಅಡಿ ಪವರ್ ಪ್ರಾಜೆಕ್ಟ್‌ಗೆ, 5.42 ಟಿಎಂಸಿ ಅಡಿ ಕುಡಿಯುವ ನೀರಿಗೆ; ಇದರಲ್ಲಿ 3.9 ಟಿಎಂಸಿ ಅಡಿ ನೀರನ್ನು ತತ್‌ಕ್ಷಣವೇ ಬಳಸಲು ಅನುಮತಿ ನೀಡಿ, ಆದೇಶ ಮಾಡಿತ್ತು. ಎಲ್ಲ ಷರತ್ತುಗಳ ಅನುಸಾರ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಪರವಾನಗಿ ಕೊಡಬೇಕು ಅಂತ ಹೇಳಿತ್ತು.
‘ಇದಕ್ಕೆ ಸಂಬಂಧಪಟ್ಟಂತೆ 2019ರೊಳಗೆ ಅಧಿಸೂಚನೆ ಪ್ರಕಟವಾಯಿತು. ಇದಕ್ಕಾಗಿ ರೈತ ಸೇನಾ ಕರ್ನಾಟಕದಿಂದಲೂ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹಾಕಲಾಗಿತ್ತು. ಬಳಿಕ ಏನೇನು ದಾಖಲೆಗಳು ಬೇಕಿದೆಯೋ ಎಲ್ಲವನ್ನೂ ರಾಜ್ಯ ಸರ್ಕಾರ ಕೊಟ್ಟಿತ್ತು. ಆದರೂ ವನ್ಯಜೀವಿ ಪ್ರಾಧಿಕಾರದವರು ಟೈಗರ್ ಕಾರಿಡಾರ್ ಎಂದು ವರದಿ ಹಾಕಿದರು. ಈ ಸಂಬಂಧ ಜನವರಿ 17ರಂದು ವನ್ಯಜೀವಿ ಪ್ರಾಧಿಕಾರದ ಡಾ. ಕೌಶಿಕಾ ಹರಿಣಿ ವೇಣುಗೋಪಾಲ್ ಮತ್ತು ತಂಡದ ಸದಸ್ಯರು ಬಂದು ಕಳಸಾ ಮತ್ತು ಹಳತಾರ ನಾಲೆಯನ್ನು ವೀಕ್ಷಣೆ ಮಾಡಿ ಹೋದರು. ಈ ಯೋಜನೆಯಿಂದ ವನ್ಯಜೀವಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ; ಕುಡಿಯಲು ನೀರು ಕೊಡಲು ಅಡ್ಡಿ ಇಲ್ಲ ಎಂದು ಬಳಿಕ ಅವರು ವರದಿ ಕೊಟ್ಟಿದ್ದಾರೆ’ ಎಂದು ಸೊಬರಮಠ ತಿಳಿಸಿದರು.
ಇದಾದ ನಂತರ ಅರಣ್ಯ ಮತ್ತು ಪರಿಸರ ಇಲಾಖೆಯವರು ನಮಗೆ ಅನುಮತಿ ಕೊಡುತ್ತಿಲ್ಲ ಅಂತ ಹೇಳಿ ರೈತರು ಮತ್ತೇ ಹೋರಾಟ ಆರಂಭಿಸಿದರು. ಸುಪ್ರೀಂ ಕೋರ್ಟ್ ಕದ ಕೂಡ ತಟ್ಟಿದರು. ಅಲ್ಲಿ 2025ರ ಸೆಪ್ಟೆಂಬರ್ 16ರಂದು ವಿಚಾರಣೆ ನಡೆಸಿದ ಸಿಜೆಐ ಗವಾಯಿ ಅವರು ಎರಡೂ ಸರ್ಕಾರಗಳನ್ನು ಬೈದು, ಅರ್ಜಿ ವಜಾ ಮಾಡಿತು ಎಂದು ತಿಳಿಸಿದ್ದಾರೆ.
ಬಳಿಕ ಡಿ.1 ಮತ್ತು 2ರಂದು ಬೆಂಗಳೂರಿನ ಕೋರಮಂಗಲದಲ್ಲಿರುವ ಕೇಂದ್ರೀಯ ಅರಣ್ಯ ಭವನದ ಎದುರು ಬಂಡೂರ ಯೋಜನೆಗೆ ಅನುಮತಿ ಕೊಡಬೇಕು ಎಂದು ಆಗ್ರಹಿಸಿ ರೈತ ಸೇನಾ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದ್ದರು. ಆಗ ಅಧಿಕಾರಿಗಳು ಬಂದು, ‘ಅರ್ಜಿ ಪರಿಶೀಲನೆ ಮಾಡಿದ್ದೇವೆ, ಅನುಮತಿ ಕೊಡಲು ಸಮಸ್ಯೆ ಇಲ್ಲ. 10 ಷರತ್ತುಗಳಿಗೆ ಸಂಬಂಧಿಸಿದಂತೆ ಎಲ್ಲ ದಾಖಲಾತಿಗಳನ್ನು ರಾಜ್ಯ ಸರ್ಕಾರ ಸಲ್ಲಿಸಿದೆ. ಕೇಂದ್ರದವರು ಮತ್ತೊಮ್ಮೆ ಪರಿಶೀಲಿಸಿದ ನಂತರ ಅನುಮತ ಸಿಗಲಿದೆ’ ಎಂದು ಹೇಳಿ ಹೋದರು. ಆದರೆ, ಕೇಂದ್ರದವರು ಇನ್ನೂ ಮೂರ್ನಾಲ್ಕು ದಾಖಲಾತಿ ಒದಗಿಸಿಲ್ಲ ಎಂದು ಕುಂಟು ನೆಪ ಹೇಳಿ ಮತ್ತೇ ಹಳೆರಾಗ ತೆಗೆದಿದ್ದಾರೆ ಎಂದು ರೈತರು ಅಸಹನೆ ಹೊರಹಾಕಿದ್ದಾರೆ.
‘ಮಹದಾಯಿ, ಕಳಸಾ– ಬಂಡೂರಿ ವಿಷಯದಲ್ಲಿ ಬಿಜೆಪಿಯೇ ಹೆಚ್ಚು ರಾಜಕಾರಣ ಮಾಡುತ್ತಿದೆ. ಈ ಹಿಂದೆ ಕೇಂದ್ರ ಮತ್ತು ಮಹಾರಾಷ್ಟ್ರ, ಗೋವಾ, ಕರ್ನಾಟಕ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇತ್ತು. ಆಗ ಒಂದೇ ಒಂದು ಕಾಗದ ಪತ್ರವನ್ನು ಅರಣ್ಯ ಭವನ ಅಥವಾ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿಲ್ಲ. ಇದು ಬೇಕಂತಲೇ ಮಾಡಿದ ಕೆಲಸ’ ಎಂದು ಸೊಬರದಮಠ ಕಿಡಿಕಾರಿದರು.
‘ಬಿಜೆಪಿಯವರು ಹೋರಾಟಕ್ಕಾಗಿ, ರಾಜಕೀಯಕ್ಕಾಗಿ ಮಹದಾಯಿ, ಕಳಸಾ ಬಂಡೂರಿ ಹೋರಾಟವನ್ನು ಇಟ್ಟುಕೊಂಡಿದ್ದಾರೆ. ಈ ವಿಷಯದಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿಯವರೇ ಹೆಚ್ಚು ಬಳಕೆ ಮಾಡಿಕೊಂಡಿದ್ದಾರೆ. ಈಗಲೂ ಇದನ್ನು ಬಿಜೆಪಿಯವರೇ ಬಳಸಿಕೊಳ್ಳುತ್ತಿದ್ದಾರೆ’ ಎಂದು ಮತ್ತೇ ದೂರಿದರು.
ಕೇಂದ್ರದವರ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಸರಿಯಾದ ಉತ್ತರ ಕೊಟ್ಟಿದೆ. ಆದರೂ, ಯೋಜನೆ ಅನುಷ್ಠಾನವನ್ನು ವಿನಾಕಾರಣವಾಗಿ ಮುಂದೂಡುತ್ತಿದೆ. ಈ ಸಂಬಂಧ ಕೇಂದ್ರೀಯ ಅರಣ್ಯ ಭವನದ ಅಧಿಕಾರಿಗಳ ಮೇಲೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದರು.
‘ನಾನು ರಾಜ್ಯ ಸರ್ಕಾರದ ಪರ ಅಥವಾ ವಿರೋಧವಾಗಿ ಇಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಈ ವಿಚಾರದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಎಲ್ಲ ದಾಖಲಾತಿಗಳನ್ನು ಸರಿಯಾದ ಸಮಯದಲ್ಲಿ ಸಲ್ಲಿಸಿದೆ. 54 ಹೆಕ್ಟೇರ್ ಮೀಸಲಿಟ್ಟ ಅರಣ್ಯ ಪ್ರದೇಶವನ್ನು ಕೇಂದ್ರಕ್ಕೆ ಹಸ್ತಾಂತರ ಮಾಡಿದೆ. ಮುಂಜಾಗ್ರತೆಗಾಗಿ ಕಳಸಾ, ಬಂಡೂರಕ್ಕಾಗಿ ₹60 ಕೋಟಿ ಹಣ ಕೂಡ ಮೀಸಲಿಟ್ಟಿದೆ’ ಎಂದು ಹೇಳಿದರು.
––––
ಗದಗ ಜಿಲ್ಲೆಯ ನರಗುಂದದಲ್ಲಿ ನಡೆದಿರುವ ಮಹದಾಯಿ ಹೋರಾಟದಲ್ಲಿ ರೈತಸೇನಾ ಅಧ್ಯಕ್ಷ ವೀರೇಶ ಸೊಬರದಮಠ ಪಾಲ್ಗೊಂಡಿದ್ದಾರೆ
ಅಧಿಕಾರಿಗಳು, ರಾಜಕಾರಣಿಗಳಿಂದಲೇ ಸಮಸ್ಯೆ ಜೀವಂತ: ಕಿಡಿ
‘ಸ್ವಾತಂತ್ರ್ಯ ಬಂದು ಏಳು ದಶಕಗಳಾಗಿವೆ. ಆದರೆ ನಾವು ಇನ್ನೂ ನೀರು ಕೊಡಿ ಎಂದು ಕೇಳುವ ಪರಿಸ್ಥಿತಿಯಲ್ಲಿದ್ದೇವೆ. ಇದು ನಾಚಿಕೆಗೇಡಿನ ಸಂಗತಿ. ಮಹದಾಯಿ ಯೋಜನೆ ದೊಡ್ಡ ಸಮಸ್ಯೆ ಏನಲ್ಲ. ಇದನ್ನು ನಿಜವಾಗಿಯೂ ದೊಡ್ಡ ಸಮಸ್ಯೆ ಮಾಡಿಟ್ಟಿರುವುದು ಅಧಿಕಾರಿಗಳು ಮತ್ತು ರಾಜಕಾರಣಿಗಳು’ ಎಂದು ರೈತ ಸೇನೆ ಕರ್ನಾಟಕ ಸಮಿತಿಯ ಸಂಚಾಲಕ ವಿರುಪಾಕ್ಷಗೌಡ ಪಾಟೀಲ ಕಿಡಿಕಾರಿದ್ದಾರೆ.
‘ಕುಡಿಯುವ ನೀರಿಗಾಗಿ 2015ರಿಂದ ಹಗಲು ರಾತ್ರಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಆದರೂ, ಸರ್ಕಾರ ಅನಗತ್ಯವಾಗಿ ವಿಳಂಬ ಮಾಡುತ್ತಿದೆ. ನೆಪಗಳನ್ನು ಇಟ್ಟುಕೊಂಡು ಸಮಸ್ಯೆ ಮುಂದುವರಿಸುತ್ತಿದ್ದಾರೆ. ಯೋಜನೆಗೆ ಅನುಮತಿ ಕೊಡಲು ಟೈಗರ್ ಕಾರಿಡಾರ್ ನೆಪ ಹೇಳುತ್ತಿದ್ದಾರೆ. ಆದರೆ, ಆ ಭಾಗದಲ್ಲಿ ಈಗಾಗಲೇ ಸಾಕಷ್ಟು ಗಣಿಗಾರಿಕೆ ನಡೆದಿದೆ. ರಾಜಕಾರಣಿಗಳ ರೆಸಾರ್ಟ್‌ಗಳು ತಲೆ ಎತ್ತಿವೆ. ಅವುಗಳಿಗೆ ಅನುಮತಿ ಕೊಟ್ಟಿದ್ದು ಯಾರು’ ಎಂದು ಪ್ರಶ್ನಿಸಿದರು.
‘ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಮತ್ತು ನಾಲ್ಕು ಜಿಲ್ಲೆಗಳ 11 ತಾಲ್ಲೂಕುಗಳಿಗೆ ಕುಡಿಯುವ ನೀರನ್ನು ಮಾನವೀಯತೆ ದೃಷ್ಟಿಯಿಂದ ಕೇಳಿದರೂ ಕೊಡುತ್ತಿಲ್ಲ. ಇದೇ ನೀರನ್ನು ಉದ್ಯಮಿಗಳು ಕೇಳಿದ್ದರೆ ತಕ್ಷಣವೇ ಕೊಡುತ್ತಿದ್ದರು. ರೈತರು ಕಿಕ್‌ಬ್ಯಾಕ್ ಕೊಡದ ಕಾರಣ ನಮ್ಮ ಬೇಡಿಕೆಗೆ ಸ್ಪಂದನೆ ಸಿಗುತ್ತಿಲ್ಲ’ ಎಂದು ಆರೋಪ ಮಾಡಿದರು.
ಕುಡಿಯುವ ನೀರಿಗಾಗಿ ದೀರ್ಘ ಕಾಲದ ಹೋರಾಟ ನಡೆದಿದೆ. ಇಲ್ಲೀವರೆಗೆ ಅದರ ಲಾಭವನ್ನು ಈ ಭಾಗದ ಸಂಸದರು, ಶಾಸಕರು ಪಡೆದಿದ್ದಾರೆ. ಆದರೆ, ನೀರು ಮಾತ್ರ ಹರಿಯಲಿಲ್ಲ. ನಮಗೆ ಕಾನೂನು ಪ್ರಕಾರವೇ ನೀರು ಬರಬೇಕಿದೆ. ಆದರೆ, ಲೋಕಸಭಾ ಸದಸ್ಯರು ಕೇಂದ್ರದಲ್ಲಿ ಧ್ವನಿ ಎತ್ತುತ್ತಿಲ್ಲ ಎಂದು ದೂರಿದರು.
ಡಿಪಿಆರ್, ಗೆಜೆಟ್ ಆಗಿದೆ. ಟೆಂಡರ್ ಆಗಿದೆ. ಇಷ್ಟಾದರೂ ನಮ್ಮ ಹೋರಾಟಕ್ಕೆ ಇಂದಿಗೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಮಹದಾಯಿ, ಕಳಸಾ ಬಂಡೂರಿ ವಿಚಾರವಾಗಿ ಯಾರೂ ಧ್ವನಿ ಎತ್ತುತ್ತಿಲ್ಲ. ಎಲ್ಲರೂ ಬರೀ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ವಿಳಂಬ ಮಾಡದೇ ಇರುವ ಅಡೆತಡೆಗಳನ್ನು ನಿವಾರಿಸಿ, ಅತಿ ಶೀಘ್ರದಲ್ಲಿ ನೀರನ್ನು ತಂದು ಕೊಡಬೇಕು. ಅಲ್ಲೀವರೆಗೆ, ನಮ್ಮ ಹೋರಾಟ ನಿಲ್ಲುವುದಿಲ್ಲ. ಇಲ್ಲವಾದರೆ, ಹೋರಾಟ ಉಗ್ರ ಸ್ವರೂಪ ಪಡೆಯುವುದು ನಿಶ್ಚಿತ ಎಂದು ರೈತರು ಎಚ್ಚರಿಸಿದ್ದಾರೆ.
ನರಗುಂದದ ಕಳಸಾಬಂಡೂರಿ, ಮಹದಾಯಿ ನಿರಂತರ ಧರಣಿ ವೇದಿಕೆಯಲ್ಲಿ ಮಂಗಳವಾರ ರೈತರ ಬೇಡಿಕೆಗಳಿಗೆ ಆಗ್ರಹಿಸಿ ತಹಶೀಲ್ದಾರ್ ಶ್ರೀಶೈಲ ತಳವಾರ ಅವರಿಗೆ ಮನವಿ ಸಲ್ಲಿಸಲಾಯಿತು
ರಾಜಕೀಯ ದುರುದ್ಧೇಶವಿಲ್ಲ: ಕೇಂದ್ರ ಸಚಿವ ಜೋಶಿ
‘ಮಹಾದಾಯಿ, ಕಳಸಾ ಬಂಡೂರಿ ಯೋಜನೆ ಕುರಿತಾಗಿ ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆಯು ಕೆಲವೊಂದು ಸ್ಪಷ್ಟನೆ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ರಾಜ್ಯ ಸರ್ಕಾರದಿಂದ ಉತ್ತರ ಬಂದ ಬಳಿಕ ಪರಿಸರ ಇಲಾಖೆ ಜತೆಗೆ ಚರ್ಚಿಸಿ, ಮಹದಾಯಿ ಯೋಜನೆ ಅನುಷ್ಠಾನಕ್ಕೆ ಪರವಾನಗಿ ಕೊಡಿಸಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಅವರು ಈಚೆಗೆ, ನವಲಗುಂದ ಪಟ್ಟಣದಲ್ಲಿ ರೈತರೊಂದಿಗೆ ಮಾತನಾಡಿ, ‘ಯೋಜನೆ ಅನುಷ್ಠಾನ ಕುರಿತಾಗಿ ಯಾವುದೇ ರಾಜಕೀಯ ದುರುದ್ಧೇಶವಿಲ್ಲ. ನವಲಗುಂದ, ನರಗುಂದ ಭಾಗದ ರೈತರು ನಿರಂತರ ಹೋರಾಟ ನಡೆಸುತ್ತಿದ್ದು, ಪರಿಸರ ಇಲಾಖೆಯಿಂದ ಅನುಮತಿ ದೊರೆತ ತಕ್ಷಣವೇ ಕೇಂದ್ರ ಅಧಿಸೂಚನೆ ಹೊರಡಿಸಲಿದೆ’ ಎಂದು ಭರವಸೆ ನೀಡಿದ್ದರು.
‘ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆ ಅನುಷ್ಠಾನದಲ್ಲಿ ಸಮಸ್ಯೆಯಾಗಿದ್ದು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ. ನಾವು ಆಡಳಿತಕ್ಕೆ ಬಂದ ನಂತರ ಶೇ 95ರಷ್ಟು ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದೇವೆ’ ಎಂದು ಹೇಳಿದ್ದಾರೆ.
–––––
ಪ್ರಲ್ಹಾದ ಜೋಶಿ
ಕಳಸಾ-ಬಂಡೂರಿ ವಿಳಂಬ: ಮುಖ್ಯಮಂತ್ರಿಯಿಂದ ಸುಳ್ಳು ಆರೋಪ– ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ
‘ಕಳಸಾ-ಬಂಡೂರಿ ಯೋಜನೆ ವಿಷಯ ಸದ್ಯ ರಾಷ್ಟ್ರೀಯ ವನ್ಯಜೀವಿ ಮಂಡಳಿ ಹಾಗೂ ಸುಪ್ರೀಂ ಕೋರ್ಟ್ ಮುಂದೆ ಇದ್ದು, ರಾಜ್ಯ ಸರ್ಕಾರ ಸೂಕ್ತವಾದ ವಾದ ಮಂಡಿಸದೇ ಮತ್ತು ಸಂಬಂಧಪಟ್ಟ ಮಾಹಿತಿಯನ್ನು ಒದಗಿಸದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ತಿಳಿಸಿದ್ದಾರೆ.
‘ಕಳಸಾ-ಬಂಡೂರಿ ಯೋಜನೆ ಭಾರತೀಯ ಜನತಾ ಪಾರ್ಟಿ ಹಾಗೂ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಾಗಿದೆ. ಈ ಯೋಜನೆಗೆ ಆರಂಭದಿಂದಲೂ ಗೋವಾ ಸರ್ಕಾರ ತನ್ನ ವಿರೋಧವನ್ನು ವ್ಯಕ್ತಪಡಿಸುತ್ತ ಬಂದಿದ್ದು, 2004ರಿಂದ 2014ವರೆಗೆ ಅಸ್ತಿತ್ವದಲ್ಲಿದ್ದ ಅಂದಿನ ಯುಪಿಎ ಸರ್ಕಾರ ಗೋವಾ ರಾಜ್ಯದಲ್ಲಿದ್ದ ಕಾಂಗ್ರೆಸ್ ಸರ್ಕಾರದ ಮನ ಒಲಿಸದೇ ಈ ವ್ಯಾಜ್ಯವನ್ನು ನ್ಯಾಯಾಧೀಕರಣಕ್ಕೆ ಒಪ್ಪಿಸಿದ್ದು ವಿಳಂಬಕ್ಕೆ ಮೂಲ ಕಾರಣವಾಗಿದೆ. ಹೀಗಾಗಿ ಇದಕ್ಕೆ ನೇರ ಹೊಣೆ ಕಾಂಗ್ರೆಸ್ ಸರ್ಕಾರವಾಗಿದೆ’ ಎಂದು ತಿಳಿಸಿದ್ದಾರೆ.
‘ನ್ಯಾಯಾಧೀಕರಣ ತೀರ್ಪು 2018ರ ಆಗಸ್ಟ್‌ನಲ್ಲಿ ಬಂದ ನಂತರ, ಕೇಂದ್ರದ ಎನ್‌ಡಿಎ ಸರ್ಕಾರ ಹಾಗೂ ರಾಜ್ಯದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯೋಜನೆ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ರಾಜ್ಯದ ಜನಕ್ಕೆ ತಿಳಿದ ಸಂಗತಿಯಾಗಿದೆ’ ಎಂದು ಹೇಳಿದ್ದಾರೆ.
‘ಮಹದಾಯಿ ನ್ಯಾಯಾಧೀಕರಣ ತೀರ್ಪಿನಂತೆ ಯೋಜನೆಯ ವಿಸ್ತೃತ ವರದಿಯನ್ನು ಕೇಂದ್ರ ಜಲ ಆಯೋಗ ಸಲ್ಲಿಸಿ, ಅದು ಅನುಮೋದನೆ ಪಡೆದಿರುವುದು ಭಾರತೀಯ ಜನತಾ ಪಾರ್ಟಿಯ ಇಚ್ಛಾಶಕ್ತಿಯ ದ್ಯೋತಕವಾಗಿದೆ. ಈ ಎಲ್ಲಾ ವಿಷಯಗಳು ರಾಜ್ಯದ ಮುಖ್ಯಮಂತ್ರಿಗೆ ಗೊತ್ತಿದ್ದರೂ ಅನವಶ್ಯಕವಾಗಿ ಕಳಸಾ-ಬಂಡೂರಿ ಯೋಜನೆ ಬಗ್ಗೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿರುವುದು ಸರಿಯಲ್ಲ’ ಎಂದು ಹೇಳಿದ್ದಾರೆ.
––––
ಸುದೀರ್ಘ ನಾಲ್ಕು ದಶಕಗಳ ಹೋರಾಟ
ಗದಗ, ಬೆಳಗಾವಿ, ಧಾರವಾಡ, ಬಾಗಲಕೋಟೆ ಸೇರಿದಂತೆ ನಾಲ್ಕು ಜಿಲ್ಲೆಯ 11 ತಾಲ್ಲೂಕಿನಲ್ಲಿ ಹರಿಯುತ್ತಿರುವ ಮಲಪ್ರಭಾ ನದಿಗೆ ಮಹದಾಯಿ ನದಿ ಹಾಗೂ ಕಳಸಾ ಬಂಡೂರಿ ನಾಲೆಗಳನ್ನು ಜೋಡಿಸಿ ಈ ಭಾಗದ ಜಮೀನುಗಳಿಗೆ ನೀರಾವರಿ ರೂಪಿಸುವ ಮಹದಾಯಿ, ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕಾಗಿ ರೈತರು ಸುದೀರ್ಘ ನಾಲ್ಕು ದಶಕಗಳಿಂದ ರೈತರು ಹೋರಾಟ ನಡೆಸುತ್ತಿದ್ದಾರೆ.
ಪ್ರಾಂಭದಲ್ಲಿ ಕಳಸಾ ಬಂಡೂರಿ ನಾಲೆ ಜೋಡಿಸಬೇಕು ಎಂದು ರೈತರು ಹೋರಾಟ ನಡೆಸಿದರು. 25 ವರ್ಷಗಳ ಹಿಂದೆ ಮುಖಂಡ ವಿಜಯ ಕುಲಕರ್ಣಿ ನೇತೃತ್ವದಲ್ಲಿ ಕಳಸಾ ಬಂಡೂರಿಯ 7.32 ಟಿಎಂಸಿ ಅಡಿ ನೀರು ಪಡೆಯಲು ನರಗುಂದದಲ್ಲಿ ಹೋರಾಟ ನಡೆಯಿತು. ಈ ಹೋರಾಟದಲ್ಲಿ ಈಗಿನ ಬಿಜೆಪಿ ಮುಖಂಡರು ಹಾಗೂ ಮಾಜಿ ಮುಖ್ಯಮಂತ್ರಿಗಳು ಭಾಗವಹಿಸಿ ಇದರ ಲಾಭ ಪಡೆದರು. ಇವರಲ್ಲಿ ಬಸವರಾಜ ಬೊಮ್ಮಾಯಿ, ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ, ಸಿ.ಸಿ.ಪಾಟೀಲ, ಪಿ.ಸಿ.ಗದ್ದಿಗೌಡ್ರ ಪ್ರಮುಖರು.
ಆ ಹೋರಾಟದ ಫಲವಾಗಿ ಅಂದಿನ ನೀರಾವರಿ ಮಂತ್ರಿ ಕೆ.ಎಸ್.ಈಶ್ವರಪ್ಪ ಕಳಸಾ ಬಂಡೂರಿ ಕಾಮಗಾರಿಗೆ ಭೂಮಿಪೂಜೆ ನಡೆಸಿದ್ದರು. ಆದರೆ, ಗೋವಾ ರಾಜ್ಯದ ತಕರಾರಿನಿಂದ ಯೋಜನೆ ನನೆಗುದಿಗೆ ಬಿದ್ದಿತು.
‘ಕಳಸಾ ಬಂಡೂರಿ ರಾಜ್ಯ ಸರ್ಕಾರವೇ ಅನುಷ್ಠಾನ ಮಾಡಬಹುದಾದ ಯೋಜನೆ. ಆದರೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಆರೋಪ, ಪ್ರತ್ಯಾರೋಪ ಮಾಡುತ್ತ ರೈತರನ್ನು ವಂಚಿಸುತ್ತಿವೆ’ ಎಂದು ಕಳಸಾ ಬಂಡೂರಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ವಿಜಯ ಕುಲಕರ್ಣಿ ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.