ADVERTISEMENT

ತೆರೆಮರೆಯತ್ತ ‘ಟಾಂಗಾ’ ಪಯಣ: ಸಾವಧಾನದ ಪ್ರಯಾಣದ ಮೇಲೆ ಆಧುನಿಕತೆಯ ಸವಾರಿ

ಬಸವರಾಜ ಸಂಪಳ್ಳಿ
Published 1 ಮಾರ್ಚ್ 2026, 2:30 IST
Last Updated 1 ಮಾರ್ಚ್ 2026, 2:30 IST
   

ವಿಜಯಪುರಕ್ಕೆ ಬರುವ ಪ್ರವಾಸಿಗರು ಸ್ಮಾರಕಗಳ ವೀಕ್ಷಣೆಗೆ ಆಟೋ, ಟಂಟಂ ಅಥವಾ ಕಾರುಗಳನ್ನು ಅವಲಂಭಿಸುವ ಬದಲು ಸಾಂಪ್ರಾಯಿಕ ಕುದುರೆ ‘ಟಾಂಗಾ’ ಏರಿದರೆ ಹೆಚ್ಚು ಅನುಕೂಲ. ‘ಅವಸರ’ದ ಬದಲು ‘ಸಾವಧಾನ’ದ ಬೆನ್ನೇರಿದ ಅನುಭವ ಖಂಡಿತಾ ‘ಟಾಂಗಾ’ ಸವಾರಿಯಿಂದ ಲಭಿಸುವುದು ನಿಶ್ಚಿತ.

ಹೌದು, ಟಾಂಗಾ ವಾಲಾಗಳು ಪ್ರವಾಸಿಗರ ಸಮಯವನ್ನು ಆಧರಿಸಿ ಅವರ ಬೇಕು, ಬೇಡಗಳಿಗೆ ಸ್ಪಂದಿಸುತ್ತಾರೆ. ಯಾವ ಸ್ಮಾರಕ ನೋಡಲೇ ಬೇಕು, ಯಾವುದು ಬೇಡ, ಆ ಸ್ಮಾರಕ ಕಟ್ಟಿಸಿದವರು ಯಾರು, ಯಾವಾಗ, ಯಾವ ಸ್ಮಾರಕದ ಬಳಿ ಎಷ್ಟು ಹೊತ್ತು ಇರುಬೇಕು, ಏನನ್ನು ನೋಡಬೇಕು ಎಂದು ಅವರೇ ನಮಗೆ ಸಂಕ್ಷಿಪ್ತವಾಗಿ ಹೇಳುತ್ತಾರೆ. ಹೀಗಾಗಿ ವಿಜಯಪುರಕ್ಕೆ ಬರುವ ಪ್ರವಾಸಿಗಳ ಪಾಲಿಕೆ ‘ಟಾಂಗಾವಾಲಾ’ಗಳೇ ಒಂದು ರೀತಿ ‘ಮಾರ್ಗದರ್ಶಿ’(ಗೈಡ್‌)ಗಳಿದ್ದಂತೆ.

ಇಡೀ ಐತಿಹಾಸಿಕ ನಗರದ ಗತವೈಭವವನ್ನು ತಾವು ತಿಳಿದಷ್ಟು, ತಮಗೆ ಕಂಡಷ್ಟನ್ನು ಪ್ರವಾಸಿಗರಿಗೆ ಸ್ವಾರಸ್ಯಕರವಾಗಿ ಹೇಳುವ ಜೊತೆಗೆ ‘ಬಿಜಾಪುರ’ದ ಜವಾರಿ ಊಟ ಸಿಗುವ ಲಿಂಗಾಯತ ಖಾನಾವಳಿ ಎಲ್ಲಿದೆ, ಬಿಳಿ ಜೋಳದ ರೊಟ್ಟಿ, ಶೇಂಗಾ ಚಟ್ನಿ, ಹೂರಣದ ಹೋಳಿಗೆ-ತುಪ್ಪದ ಊಟ ಎಲ್ಲಿ ಆಸ್ವಾದಿಸಬಹುದು. ಬಾಯಲ್ಲಿ ‘ಉರಿಗುಟ್ಟಿಸುವ’ ಸಾವಜಿ ಖಾನಾವಳಿ ಎಲ್ಲಿದೆ, ಸ್ವಾದಿಷ್ಟ ಬಿಜಾಪುರ ಬಿರಿಯಾನಿಗೆ ಹೇಳಿ ಮಾಡಿಸಿದ ಹೋಟೆಲ್‌ ಯಾವುದು, ಕೊಲ್ಹಾರ ಮೀನು, ಕೊಲ್ಹಾರ ಮೊಸರು ಸಿಗುವ ಹೋಟೆಲ್‌ ಯಾವುದು, ಒಳ್ಳೆಯ ಉಪಾಹಾರಕ್ಕೆ ಸೂಕ್ತವಾದ ಉಡುಪಿ ಹೋಟೆಲ್‌ ಯಾವುದು, ರುಚಿಕರವಾದ ‘ಬಿಜಾಪುರ ದ್ರಾಕ್ಷಿ’ ಎಲ್ಲಿ ಖರೀದಿಸಬೇಕು, ಉತ್ತಮ ವಸತಿಗೃಹ ಯಾವುದು ಎಂದು ಅವರೇ ಪರಿಚಯಿಸಿ, ಅಲ್ಲಿಗೆ ಕರೆದೊಯ್ದು ತಲುಪಿಸುತ್ತಾರೆ. ಅಷ್ಟೇ ಸುರಕ್ಷಿತವಾಗಿ ಊರಿಗೆ ಮರಳಲು ಎಷ್ಟು ಹೊತ್ತಿಗೆ ಬಸ್ಸು, ರೈಲು ಇವೆ ಎಂದು ತಿಳಿಸುವ ಜೊತೆಗೆ ನಿಲ್ದಾಣಗಳಿಗೆ ತಲುಪಿಸುವ ಮೂಲಕ ವಿಜಯಪುರದ ಬಗ್ಗೆ ಒಂದು ಅಭಿಮಾನ, ಅಕ್ಕರೆ ಮೂಡಿಸುತ್ತಾರೆ (ಹಾಗಂತ ಎಲ್ಲಾ ಟಾಂಗಾವಾಲಾಗಳಿಗೆ ಅನ್ವಯವಾಗದು).

ADVERTISEMENT

ಆದಿಲ್‌ ಶಾಹಿಗಳ ಕಾಲದ ಗುಮ್ಮಟ, ಮಹಲ್‌, ಬಾವಡಿ, ಕಮಾನು, ಮಸೀದಿ, ಕಬರ್‌ ತಾಣಗಳ ಬಳಿ ‘ಟಾಂಗಾ’ದಲ್ಲಿ ಸುತ್ತಾಡುವಾಗ ಕುದುರೆಗಳ ಲಯಭರಿತ ಹೆಜ್ಜೆ ಮನಸ್ಸಿಗೆ ಮುದು ನೀಡುವ ಜೊತೆಗೆ ಗತಕಾಲದ ರಾಜವೈಭವವನ್ನು ನೆನಪಿಸುವುದು ನಿಶ್ಚಿತ. ಅದರಲ್ಲೂ ಮಕ್ಕಳ ಮನಸ್ಸಿನಲ್ಲಿ ವಿಜಯಪುರದ ಕುದುರೆ ಗಾಡಿಯ ‘ಶೋಕಿ’ ಪಯಣ ಸದಾ ನೆನಪಿಟ್ಟುಕೊಳ್ಳಲೂ ಬಹುದು.

400ರಿಂದ 40ಕ್ಕೆ ಕುಸಿತ:

ಹೀಗೆ ಪ್ರವಾಸಿಗರನ್ನು ದಿನವಿಡೀ ಸುತ್ತಾಡಿಸಿ ಹೊಸ ಅನುಭವ ನೀಡುವ ‘ಟಾಂಗಾ’ಗಳನ್ನು ಇಂದಿಗೂ ವಿಜಯಪುರದ ರೈಲು ನಿಲ್ದಾಣ, ಗೋಳಗುಮ್ಮಟ, ಗಾಂಧಿಚೌಕಿ, ಜಾಮಿಯಾ ಮಸೀದಿ ಬಳಿ ಸಾಲು ಸಾಲಾಗಿ ನಿಂತಿರುವುದನ್ನು ನೋಡಬಹುದು.

ಆಟೋ ರಿಕ್ಷಾ, ಟಂಟಂ, ಕಾರು, ಬೈಕುಗಳ ಭರಾಟೆ ಎದುರು ಓಡಲಾಗದೇ ಟಾಂಗಾಗಳು ಹಿಂದುಳಿದಿವೆ. ಸ್ಥಳೀಯ ಜನರು, ಪ್ರವಾಸಿಗರು ಕೂಡ ಇವುಗಳ ಸವಾರಿಗೆ ಮೊದಲಿನಂತೆ ಆಸಕ್ತಿ ವಹಿಸುತ್ತಿಲ್ಲ. ಆಟೋ, ಟಂಟಂ ಅಥವಾ ಕಾರನ್ನೇರಿ ಸುತ್ತಾಡಿ ತಮ್ಮೂರಿಗೆ ಮರುಳುತ್ತಿದ್ದಾರೆ.

ದಿನವಿಡೀ ಸಾಲಾಗಿ ನಿಂತು, ಪ್ರವಾಸಿಗರಿಗಾಗಿ ಕಾಯುವ ಟಾಂಗಾವಾಲಾಗಳಿಗೆ ಮೊದಲಿನ ದುಡಿಮೆ ಈಗಿಲ್ಲ. ದಿನವೊಂದಕ್ಕೆ ಕನಿಷ್ಠ ಕೂಲಿ ಸಂಪಾದಿಸುವುದು ಕಷ್ಟದಾಯಕವಾಗಿದೆ.

‘ವಿಜಯಪುರದಲ್ಲಿ ದಶಕದ ಹಿಂದೆ 400ಕ್ಕೂ ಅಧಿಕ ಟಾಂಗಾಗಳು ಇದ್ದವು. ಸದ್ಯ ಕೇವಲ 40 ಟಾಂಗಾಗಳಿವೆ. ಪ್ರವಾಸಿಗರು ಟಾಂಗಾದಲ್ಲಿ ಹೆಚ್ಚು ಓಡಾಡುತ್ತಿಲ್ಲ. ಪರಿಣಾಮ ದುಡಿಮೆ ಇಲ್ಲದೇ ನಿಧಾನವಾಗಿ ಟಾಂಗಾಗಳು ಮರೆಯಾಗುತ್ತಿವೆ’ ಎಂದು ಗಾಂಧಿ ಚೌಕಿ ನಿಲ್ದಾಣದ ಟಾಂಗಾ ವಾಲಾ ಬಾಷಾಸಾಬ್ ಬಾಬುಸಾಬ್ ಇಂಡಿಕರ್ ಬೇಸರ ವ್ಯಕ್ತಪಡಿಸಿದರು.

‘ವಿಜಯಪುರದ ಈ ಹಿಂದಿನ ಅನೇಕ ರಾಜಕಾರಣಿಗಳು, ಅಧಿಕಾರಿಗಳು ರೈಲು, ಬಸ್ಸು ನಿಲ್ದಾಣಕ್ಕೆ ಹೋಗಲು ಹಾಗೂ ಬೆಂಗಳೂರಿನಿಂದ ರೈಲು, ಬಸ್ಸುಗಳಲ್ಲಿ ವಿಜಯಪುರಕ್ಕೆ ಬಂದಿಳಿದಾಗ ಮನೆಗೆ ಹೋಗಲು, ಅವರ ಕುಟುಂಬ, ಸ್ನೇಹಿತರು, ಅತಿಥಿಗಳನ್ನು ಕರೆದೊಯ್ಯಲು ಟಾಂಗಾಗಳನ್ನೇ ಅವಲಂಬಿಸಿದ್ದರು. ಅಷ್ಟೊಂದು ಬೇಡಿಕೆ, ಆದ್ಯತೆ ಟಾಂಗಾಗಳಿಗೆ ಒಂದು ಕಾಲದಲ್ಲಿತ್ತು’ ಎಂದು ಟಾಂಗಾವಾಲಾ ರಫೀಕ್ ಖಾದರ್ ಸಾಬ್ ಕಂದೀಲ್ ವಾಲೆ ನೆನಪಿಸಿಕೊಳ್ಳುತ್ತಾರೆ.

‘ನೆರೆಯ ಪಂಢರಪುರ, ಕೊಲ್ಲಾಪುರ, ಕಾತೇವಾಡದಿಂದ ಅತ್ಯುತ್ತಮ ತಳಿಯ ಕುದುರೆಗಳನ್ನು ತಂದು ಸಾಕುತ್ತಿದ್ದೆವು, ಅವುಗಳಿಗೆ ಪ್ರತಿದಿನ ಮೂಕಣಿ, ಕಡ್ಲಿ, ಹುರುಳಿಯನ್ನು ಆಹಾರವಾಗಿ ಕೊಟ್ಟು ಚಂದವಾಗಿ ಸಾಕಿಕೊಂಡಿರುತ್ತಿದ್ದೆವು. ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳಲ್ಲಿ ಕುದುರೆ ಸಾರೋಟಿನ ಮೆರವಣಿಗೆಗೆ ಕರೆದೊಯ್ದು, ಕೈತುಂಬ ಕೊಟ್ಟು ಕಳಿಸುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಅವು ವಿರಳವಾಗಿವೆ’ ಎನ್ನುತ್ತಾರೆ ಟಾಂಗಾವಾಲಾ ಸೈಪನ್ ಸಾಬ್ ಕೂಚಮನ್.

‘ಪ್ರತಿ ದಿನ ಕುದುರೆಯೊಂದನ್ನು ಸಾಕಲು ಕನಿಷ್ಠ ₹300 ಬೇಕಾಗುತ್ತದೆ. ಆದರೆ, ಟಾಂಗಾದಿಂದ ದಿನವೊಂದಕ್ಕೆ ₹500 ಸಂಪಾದನೆ ಆಗುತ್ತಿಲ್ಲ. ಇದರ ಬದಲು ಕೂಲಿ ಮಾಡುವುದೇ ಉತ್ತಮ’ ಎನ್ನುತ್ತಾರೆ ಗೊಳಗುಮ್ಮಟ ಟಾಂಗಾ ನಿಲ್ದಾಣದ ಟಾಂಗಾವಾಲಾ ಹಾಸಿಂಖಾನ್ ಹಕ್ಕಿಮ್‌.

‘40 ವರ್ಷಗಳಿಂದ ಟಾಂಗಾ ಓಡಿಸಿ ಬದುಕುತ್ತಿದ್ದೇನೆ. ಈ ಕೆಲಸ ಬಿಟ್ಟು ಬೇರೆ ಗೊತ್ತಿಲ್ಲ, ಕೊನೇ ಪಕ್ಷ ಕುದುರೆ ಸಾಕಲು ಬೇಕಾದ ಖರ್ಚು–ವೆಚ್ಚಕ್ಕಾದರೂ ಟಾಂಗಾ ಓಡಿಸಬೇಕಾದ ಪರಿಸ್ಥಿತಿ ಇದೆ. ಕುದುರೆ ಸಾಕಲೂ ಗಳಿಸಲಾಗದ ಕಾರಣ ಬಹಳಷ್ಟು ಜನ ಕುದುರೆ, ಗಾಡಿ ಎರಡನ್ನು ಮಾರಿದ್ದಾರೆ. ಇನ್ನು ಕೆಲವರು ಕುದುರೆ ಸತ್ತುಹೋದ ಬಳಿಕ ಕೆಲಸವನ್ನೇ ಬಿಟ್ಟಿದ್ದಾರೆ. ಗಾಡಿಗಳು ಅವರ ಮನೆ ಎದುರು ಹಾಳು ಬಿದ್ದಿವೆ’ ಎಂದು ಅವಲತ್ತುಕೊಂಡರು.

‘ಸಂಕಷ್ಟದಲ್ಲಿರುವ ಟಾಂಗಾವಾಲಾಗಳ ರಕ್ಷಣೆಗೆ ಸ್ಥಳೀಯ ಆಡಳಿತವಾಗಲಿ, ಸರ್ಕಾರವಾಗಲಿ ಮುಂದೆ ಬರುತ್ತಿಲ್ಲ. ನೇಪಥ್ಯಕ್ಕೆ ಸರಿಯುತ್ತಿರುವ ಟಾಂಗಾ ಪ್ರಯಾಣ ಉಳಿಸಿ, ಬೆಳೆಸಲು ಸರ್ಕಾರದಿಂದ ಪ್ರೋತ್ಸಾಹ ಅಗತ್ಯವಾಗಿದೆ’ ಎನ್ನುತ್ತಾರೆ ಅವರು.

‘ಸ್ಥಳೀಯ ವಿಜಯಪುರ ಮಹಾನಗರ ಪಾಲಿಕೆಯಿಂದ ಟಾಂಗಾವಾಲಾಗಳ ಪ್ರೋತ್ಸಾಹಕ್ಕೆ ಯೋಜನೆ ರೂಪಿಸುತ್ತೇವೆ ಎಂದು ಪ್ರತೀ ಬಾರಿ ಬಜೆಟ್‌ನಲ್ಲಿ ಘೋಷಣೆ ಮಾಡುತ್ತಾರೆ. ಆದರೆ, ಇದುವರೆಗೂ ಯಾವುದೇ ಸೌಲಭ್ಯ ಒದಗಿಸಿಲ್ಲ’ ಎಂದು ಹಾಸಿಂಖಾನ್ ಹಕ್ಕಿಮ್ ನಿರಾಸೆ ವ್ಯಕ್ತಪಡಿಸುತ್ತಾರೆ.

‘ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಸುನೀಲ್‌ಕುಮಾರ್‌ ಸೇರಿದಂತೆ ಅನೇಕರು ಟಾಂಗಾ ಉತ್ತೇಜನಕ್ಕಾಗಿ ಸ್ವತಃ ಅವರೇ ಟಾಂಗಾವನ್ನು ಏರಿ ಪ್ರವಾಸಿತಾಣಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ನವರಸರಪುರ ಉತ್ಸವ, ಚುನಾವಣೆ ಮತದಾನ ಜಾಗೃತಿ ಜಾಥಾ ಸೇರಿದಂತೆ ಪ್ರಮುಖ ಉತ್ಸವ, ಕಾರ್ಯಕ್ರಮಗಳಲ್ಲಿ ಇಂದಿಗೂ ಕುದುರೆ ಟಾಂಗಾಗಳನ್ನು ಶೋಕಿಗಾಗಿ ಬಳಸಿಕೊಳ್ಳುತ್ತಾರೆ. ಬೇರೆ ಸಂದರ್ಭದಲ್ಲಿ ನಮ್ಮನ್ನು ಕೇಳುವವರು ಇಲ್ಲ’ ಎನ್ನುತ್ತಾರೆ.

‘ವಿಜಯಪುರ ನಗರದ ಪ್ರವಾಸಿ ತಾಣಗಳ ವ್ಯಾಪ್ತಿಯಲ್ಲಿ ಟಾಂಗಾ ಸಂಚಾರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಆಟೋ, ಟಂಟಂ, ನಗರ ಸಾರಿಗೆ ಬಸ್ಸುಗಳ ಮೇಲೆ ಕೆಲವು ನಿರ್ಬಂಧ ವಿಧಿಸಬೇಕು, ಟಾಂಗಾ ಜೋನ್‌ ನಿಗದಿಪಡಿಸಬೇಕು. ಅಲ್ಲಿ ಬೇರೆ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಿ, ನಮ್ಮನ್ನು ಪ್ರೋತ್ಸಾಹಿಸಬೇಕು’ ಎನ್ನುತ್ತಾರೆ ಟಾಂಗಾವಾಲಾ ಹಾಸಿಂಖಾನ್ ಹಕ್ಕಿಮ್.

ಸರ್ಕಾರ ಸಾಂಪ್ರದಾಯಿಕ ಟಾಂಗಾ ಸಾರಿಗೆ ಉತ್ತೇಜನಕ್ಕೆ ಆದ್ಯತೆ ನೀಡಬೇಕಿದೆ. ಜೊತೆಗೆ ಟಾಂಗಾ ವಾಲಾಗಳ ಬದುಕು ಸುಧಾರಣೆಗೆ ಸಹಾಯಹಸ್ತ ಚಾಚಬೇಕಿದೆ. ಟಾಂಗಾ ಗತವೈಭವ ಮರುಕಳಿಸುವಂತೆ ಮಾಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.