ADVERTISEMENT

ಶಹಾಪುರ: ಸಚಿವ ಶರಣಬಸಪ್ಪ ದರ್ಶನಾಪುರ ಮೇಲೆ ಬಜೆಟ್ ನಿರೀಕ್ಷೆಯ ಭಾರ

ಮೂಲ ಸೌಕರ್ಯ, ಶೈಕ್ಷಣಿಕ ಪ್ರಗತಿಗೆ ಶಹಾಪುರ ಕ್ಷೇತ್ರದ ಜನರ ಬೇಡಿಕೆ

ಟಿ.ನಾಗೇಂದ್ರ
Published 26 ಫೆಬ್ರುವರಿ 2026, 7:00 IST
Last Updated 26 ಫೆಬ್ರುವರಿ 2026, 7:00 IST
ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ. ಪ್ರವಾಹ ಬಂದಾಗೊಮ್ಮೆ ಮುಳುಗಡೆಯಾಗುತ್ತದೆ (ಸಂಗ್ರಹ ಚಿತ್ರ)
ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ. ಪ್ರವಾಹ ಬಂದಾಗೊಮ್ಮೆ ಮುಳುಗಡೆಯಾಗುತ್ತದೆ (ಸಂಗ್ರಹ ಚಿತ್ರ)   

ಶಹಾಪುರ: ಕಳೆದ ಬಜೆಟ್‌ನಲ್ಲಿ ಮೀಸಲಿಟ್ಟ ಯೋಜನೆಗಳ ಅನುದಾನದಲ್ಲಿ ಒಂದೆರಡು ಕಾಮಗಾರಿ ಅನುಷ್ಠಾನಗೊಂಡರೆ ಉಳಿದವು ಗೌಣವಾಗಿವೆ. ದೊಡ್ಡ ಕೈಗಾರಿಕೆಗಳು, ಶೈಕ್ಷಣಿಕ ಉನ್ನತಿ, ಯುವಕರಿಗೆ ಉದ್ಯೋಗ ಸೃಷ್ಟಿಸುವ ಯೋಜನೆಗಳು ಅನುಷ್ಠಾನಗೊಂಡಿಲ್ಲ ಎಂಬ ಕೂಗು ಕ್ಷೇತ್ರದ ಜನತೆಯಿಂದ ಕೇಳಿ ಬರುತ್ತಲಿದೆ.

ಕ್ಷೇತ್ರದಲ್ಲಿ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಇದೆ. ಅದರ ಅಡಿಯಲ್ಲಿ ರೈತರಿಗೆ ಅನುಕೂಲವಾಗುವ ವಿನೂತನ ಯೋಜನೆಗಳು ಬಂದಿಲ್ಲ. ಮುಖ್ಯವಾಗಿ ಹತ್ತಿ ಸಂಶೋಧನಾ ಕೇಂದ್ರ ಸ್ಥಾಪನೆ, ಹತ್ತಿ, ಮೆಣಸಿನಕಾಯಿ ಖರೀದಿ ಕೇಂದ್ರದ ಮಾರುಕಟ್ಟೆ ಇಲ್ಲವಾಗಿದೆ. ಅನ್ಯ ಜಿಲ್ಲೆಗೆ ರೈತರು ಮಾರಾಟಕ್ಕಾಗಿ ವಲಸೆ ಹೋಗುವಂತೆ ಆಗಿದೆ.

‘ಸಚಿವ ಶರಣಬಸಪ್ಪ ದರ್ಶನಾಪುರ ಅವರಿಗೆ ಕ್ಷೇತ್ರಕ್ಕೆ ಶಾಶ್ವತವಾದ ದೊಡ್ಡ ಯೋಜನೆಗಳನ್ನು ಬಜೆಟ್‌ನಲ್ಲಿ ಕಾಯ್ದಿರಿಸಿಕೊಂಡು ತರುವಲ್ಲಿ ಇಂದಿಗೂ ಸಾಧ್ಯವಾಗಿಲ್ಲ. ಅದರಲ್ಲಿ ತಾಲ್ಲೂಕಿನ ಹತ್ತಿಗೂಡೂರ- ಲಿಂಗಸೂಗೂರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ನಲುಗುವಂತೆ ಆಗಿದೆ. ಕಾಲುವೆ ಕೊನೆ ಭಾಗದ ರೈತರಿಗೆ ನೀರು ಮರೀಚಿಕೆಯಾಗಿದೆ. ನಗರ ಬೆಳೆದಂತೆ ಶಾಂತಿ ಸುವ್ಯವಸ್ಥೆಗಾಗಿ ಹೊಸದಾಗಿ ಗ್ರಾಮೀಣ ಪೊಲೀಸ್ ಠಾಣೆ ಸ್ಥಾಪನೆ, ಸಹಾಯಕ ಆಯುಕ್ತರ ಕಚೇರಿ, ವಕೀಲರ ಸಂಘಕ್ಕೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೊಡುವಲ್ಲಿ ಸಚಿವರು ಮುಗ್ಗರಿಸಿದ್ದಾರೆ’ ಎನ್ನುತ್ತಾರೆ ರೈತ ಮುಖಂಡ ಶರಣಪ್ಪ.

ADVERTISEMENT

ಕ್ಷೇತ್ರದಲ್ಲಿ ಸಾಕಷ್ಟು ಐತಿಹಾಸಿಕ ಹೆಜ್ಜೆ ಗುರುತುಗಳು ಇವೆ. ಪ್ರವಾಸೋದ್ಯಮ ಇಲಾಖೆಯ ಅಡಿಯಲ್ಲಿ ಶಿರವಾಳ, ಅಣಬಿ ಶಾಸನ, ವಿಭೂತಿಹಳ್ಳಿ ಕಾಲ ನಿರ್ಣಯದ ಕಲ್ಲುಗಳು ಜಾಗ, ಭೀಮರಾಯನಗುಡಿ ಬೂದಿ ದಿನ್ನೆ, ಕೊಳ್ಳೂರಿನ ವಜ್ರ ನಿಕ್ಷೇಪ ಸ್ಥಳ, ಹೆದ್ದಾರಿಗೆ ಹೊಂದಿಕೊಂಡಿರುವ ಬೆಟ್ಟಗಳ ಸಾಲಿನಲ್ಲಿ ಬುದ್ಧ ಮಲಗಿದ ದೃಶ್ಯ, ವನದುರ್ಗ ಕೋಟೆ ಸಂರಕ್ಷಣೆಗಾಗಿ ಪ್ರವಾಸೋದ್ಯಮ ಇಲಾಖೆಯ ಆಶ್ರಯದಲ್ಲಿ ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಿ ಎನ್ನುತ್ತಾರೆ ಇತಿಹಾಸ ಆಸಕ್ತರು.

ಆದರೆ, ವಿವಿಧ ಇಲಾಖೆಯ ಅಡಿಯಲ್ಲಿನ ಅನುದಾನವನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಶಹಾಪುರ ನಗರಕ್ಕೆ ಯುಜಿಡಿ ಯೋಜನೆ ಅನುಷ್ಠಾನ, ನಿರಂತರ ಕುಡಿಯುವ ನೀರಿನ ಯೋಜನೆ ಕಾಮಗಾರಿ, ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿ, ಕೆರೆಗೆ ನೀರು ತುಂಬಿಸುವ ಯೋಜನೆ, ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆ, ಶೈಕ್ಷಣಿಕ ಉನ್ನತಿಗಾಗಿ ವಿವಿಧ ವಸತಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಅನುದಾನ, ಶಹಾಪುರ ನಗರದಲ್ಲಿ ಅತ್ಯುತ್ತಮ ಕ್ರೀಡಾಂಗಣ ನಿರ್ಮಾಣ, ವಸತಿ ಯೋಜನೆ ಅಡಿಯಲ್ಲಿ ಸೂರು ವಂಚಿತರಿಗೆ ಮನೆ ನಿರ್ಮಿಸಲು ನಿವೇಶನ ಹಂಚಿಕೆ ಮಾಡಿದ್ದಾರೆ. ಎಲ್ಲಾ ಜಾತಿ, ಧರ್ಮದ ಮಠಗಳಿಗೆ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಹೊಳೆ ಹರಿಸಿದ್ದಾರೆ ಎನ್ನುವುದು ಸಾರ್ವತ್ರಿಕವಾಗಿ ಕೇಳಿ ಬರುತ್ತಲಿದೆ.

ಎಂಜಿನಿಯರಿಂಗ್ ಕಾಲೇಜಿಗೆ ಪ್ರಸ್ತಾವನೆ

‘ಕೆಕೆಆರ್‌ಡಿಬಿ ಅನುದಾನದ ಅಡಿಯಲ್ಲಿ ನಮ್ಮ ಕ್ಷೇತ್ರದಲ್ಲಿ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ. ಪ್ರತಿ ಪ್ರವಾಹ ಬಂದಾಗ ತಾಲ್ಲೂಕಿನ ಕೊಳ್ಳೂರ(ಎಂ) ಬಳಿಯ ಸೇತುವೆ ಮುಳಗಡೆಯಾಗಿ ಸುತ್ತಮುತ್ತಲಿನ ಹಳ್ಳಿಯ ಜನತೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹೀಗಾಗಿ ಸೇತುವೆ ಎತ್ತರಿಸಲಿಕ್ಕೆ ಅನುದಾನ. ಕೆರೆಗೆ ನೀರು ತುಂಬಿಸುವುದು ಏತ ನೀರಾವರಿ ಯೋಜನೆಗೆ ಇನ್ನಷ್ಟು ಅನುದಾನ ಒದಗಿಸಲು ಅಲ್ಲದೆ ಇನ್ನಷ್ಟು ಬೇರೆ ಕಾಮಗಾರಿಗಾಗಿ ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸುವಂತೆ ಬೇಡಿಕೆ ಪಟ್ಟಿಯನ್ನು ಬಜೆಟ್‌ನಲ್ಲಿ ಸಲ್ಲಿಸಿದೆ. ಕಾಯ್ದು ನೋಡಬೇಕು’ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ಕೆಂಭಾವಿ ತಾಲ್ಲೂಕು ರಚನೆಗೆ ಆಗ್ರಹ

ಶಹಾಪುರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬಹು ದಿನದ ಬೇಡಿಕೆ ಹಾಗೂ ಜನತೆ ಆಗ್ರಹವು ಆಗಿರುವ ಕೆಂಭಾವಿ ತಾಲ್ಲೂಕು ರಚನೆಯು ಪ್ರಸಕ್ತ ಬಜೆಟ್‌ನಲ್ಲಿ ಘೋಷಣೆಯಾಗಲಿ ಎನ್ನುವುದು ಅಲ್ಲಿನ ಜನತೆಯ ಆಗ್ರಹ ಆಗಿದೆ. ‘ಸರ್ಕಾರಿ ವಸತಿ ಶಾಲೆಗಳಿಗೆ ಕಟ್ಟಡ ನಿರ್ಮಾಣದ ಭಾಗ್ಯ. ನೀರಾವರಿ ಪ್ರದೇಶವಾಗಿದ್ದರಿಂದ ಯಾವುದೆ ಅಗ್ನಿ ಅವಘಡ ಉಂಟಾದರೆ ಅಗ್ನಿಶಾಮಕ ಠಾಣೆ ಬಸ್ ಡಿಪೋ ಸ್ಥಾಪನೆಯು ಮಾಡಬೇಕಾಗಿದೆ. ಅಲ್ಲದೆ ಮುದನೂರ ಗ್ರಾಮದಲ್ಲಿ ವಚನಕಾರರ ದೇವರ ದಾಸಿಮಯ್ಯ ಪ್ರಾಧಿಕಾರ ರಚನೆ ಏವೂರ ಮತ್ತು ಕೆಂಭಾವಿ ಭೊಗಣ್ಣ ದೇವಸ್ಥಾನಗಳನ್ನು ಪ್ರವಾಸೋದ್ಯಮ ಸ್ಥಳಗಳಾಗಿ ಘೋಷಣೆ ಮಾಡಬೇಕು’ ಎನುತ್ತಾರೆ ಜನತೆ.

ಕೆರೆಗೆ ನೀರು ತುಂಬಿಸುವುದು. ಕಾಲುವೆ ಜಾಲದ ನೀರು ವಂಚಿತ ಜಮೀನುಗಳಿಗೆ ನೀರು ಹರಿಸುವ ಯೋಜನೆಗಾಗಿ ಬಜೆಟ್‌ನಲ್ಲಿ ಹೆಚ್ಚಿನ ಅನುದಾನಕ್ಕೆ ಬೇಡಿಕೆಯ ಆಗ್ರಹದ ಪಟ್ಟಿ ಸಲ್ಲಿಸಲಾಗಿದೆ
–ಶರಣಬಸಪ್ಪ ದರ್ಶನಾಪುರ, ಸಚಿವ
ರೈತರು ಕೂಲಿ ಕಾರ್ಮಿಕರಿಗಾಗಿ ದೊಡ್ಡ ಯೋಜನೆ ರೂಪಿಸಿಕೊಂಡು ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸಬೇಕು ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕಳಪೆ ಕಾಮಗಾರಿ ನಿಯಂತ್ರಿಸಬೇಕು
–ಚೆನ್ನಪ್ಪ ಆನೇಗುಂದಿ, ಸಿಪಿಐ(ಎಂ) ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.