ADVERTISEMENT

ಯಾದಗಿರಿ: ಮೇ 19ರಿಂದ ಜಿಲ್ಲೆ ಸಂಪೂರ್ಣ ಲಾಕ್‌ಡೌನ್

ತರಕಾರಿ, ದಿನಸಿ ಅಂಗಡಿಗಳಲ್ಲಿ ಮುಗಿಬಿದ್ದ ಜನತೆ

​ಪ್ರಜಾವಾಣಿ ವಾರ್ತೆ
Published 18 ಮೇ 2021, 8:02 IST
Last Updated 18 ಮೇ 2021, 8:02 IST
ಯಾದಗಿರಿಯ ರೈಲ್ವೆ ಸ್ಟೇಷನ್ ರಸ್ತೆಯ ತರಕಾರಿ ಮಾರುಕಟ್ಟೆ, ಶುಭಾಷ ವೃತ್ತದ ಸಮೀಪ ಜನಜಂಗುಳಿಯಿಂದ ತುಂಬಿತ್ತು.
ಯಾದಗಿರಿಯ ರೈಲ್ವೆ ಸ್ಟೇಷನ್ ರಸ್ತೆಯ ತರಕಾರಿ ಮಾರುಕಟ್ಟೆ, ಶುಭಾಷ ವೃತ್ತದ ಸಮೀಪ ಜನಜಂಗುಳಿಯಿಂದ ತುಂಬಿತ್ತು.   

ಯಾದಗಿರಿ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಮೇ 19 ಬೆಳಿಗ್ಗೆ 6 ರಿಂದ ಮೇ 22 ರ ಬೆಳಿಗ್ಗೆ 6 ಗಂಟೆವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ತರಕಾರಿ, ದಿನಸಿ ಅಂಗಡಿಗಳಲ್ಲಿ ಮಂಗವಾರ ಜನ ಜಂಗುಳಿಯಿಂದ ತುಂಬಿತ್ತು.

ಬೆಳಿಗ್ಗೆಯಿಂದ ತರಕಾರಿ, ದಿನಸಿ ಅಂಗಡಿಗಳ ಮುಂದೆ ಜನರು ಮುಗಿ ಬಿದ್ದಿದ್ದರು.

ಅಂತರ ಮಾಯ: ನಗರದ ವಿವಿಧ ತರಕಾರಿ ಮಾರುಕಟ್ಟೆ, ದಿನಸಿ ಅಂಗಡಿಗಳಲ್ಲಿ ಜನರು ಅಂತರ ಮರೆತು ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು. ಒಬ್ಬರ ಮೇಲೆ ಒಬ್ಬರು ಮುಗಿಬಿದ್ದು, ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು.

ADVERTISEMENT

ಮಾಸ್ಕ್ ಇಲ್ಲ: ಕೆಲವರು ಮಾಸ್ಕ್ ಧರಿಸದೇ ರಾಜರೋಷವಾಗಿ ಮಾರುಕಟ್ಟೆ, ರಸ್ತೆಗಳಲ್ಲಿ ಸಂಚಾರ ಮಾಡುತ್ತಿದ್ದರು.

ತರಕಾರಿ ದರ ದುಪ್ಪಟ್ಟು: ತರಕಾರಿ ಅಂಗಡಿಗಳಲ್ಲಿ ಎಂದಿಗಿಂತ ತರಕಾರಿ ಬೆಲೆಯಲ್ಲಿ ದುಪ್ಪಟ್ಟು ಆಗಿತ್ತು. ಜನರು ಮುಗಿಬಿದ್ದಿರುವುದನ್ನು ನೋಡಿದ ತರಕಾರಿ ವ್ಯಾಪಾರಿಗಳು ವಿವಿಧ ಕಾಯಿಪಲ್ಯೆಗಳ ದರ ಏರಿಕೆ ಮಾಡಿದ್ದರು. ಸಾಮಾನ್ಯ ದಿನಗಳಲ್ಲಿ ಕೆಜಿ ಟೊಮೆಟೊ ₹20 ಇದ್ದರೆ, ಸಂಪೂರ್ಣ ಲಾಕ್ ಡೌನ್ ಪರಿಣಾಮ ಕೆಜಿಗೆ ₹ 40 ಗೆ ಏರಿಕೆಯಾಗಿತ್ತು. ಹಸಿ ಮೆಣಸಿನಕಾಯಿ ಕೆಜಿಗೆ ₹160 ಏರಿಕೆಯಾಗಿದೆ. ಮೂರು ದಿನ ಬಂದ್ ಇರುವ ಕಾರಣ ಗ್ರಾಹಕರು ಗೊಣಗಿಕೊಂಡರೂ ಅನಿವಾರ್ಯವಾಗಿ ವ್ಯಾಪಾರಿಗಳು ಹೇಳಿದ ದರಕ್ಕೆ ಖರೀದಿ ಮಾಡಿದರು.

ಅಂಗಡಿಗಳು ಒಂದು ಗಂಟೆ ಹೆಚ್ಚುವರಿ ಓಪನ್:
ಪ್ರತಿ ದಿನ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಗೆ ಎಲ್ಲ ಅಗತ್ಯ ವಸ್ತುಗಳ ಅಂಗಡಿಗಳನ್ನು ಮುಚ್ಚಲಾಗುತ್ತಿತ್ತು. ಆದರೆ, ಮಂಗಳವಾರ ಬೆಳಿಗ್ಗೆ 11 ಗಂಟೆಯಾದರೂ ಗ್ರಾಹಕರು ಅಂಗಡಿಗಳ ಬಳಿ ಖರೀದಿಗೆ ನಿಂತಿದ್ದರಿಂದ ಒಂದು ಗಂಟೆ ಹೆಚ್ಚುವರಿ ವ್ಯಾಪಾರ ಮಾಡಿದರು.

ರಸ್ತೆಯಲ್ಲಿಯೂ ಜನಜಂಗುಳಿ: ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರು ಮನೆಯಿಂದ ಹೊರ ಬಂದ ಕಾರಣ ವಿವಿಧ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚು ಇತ್ತು. ಸಾರ್ವಜನಿಕರ ಓಡಾಟವೂ ಹೆಚ್ಚಾಗಿತ್ತು.

'ತರಕಾರಿ ಮಾರುಕಟ್ಟೆಯಲ್ಲಿ ಜನರು ಕೋವಿಡ್ ನಿಯಮಗಳನ್ನು ಮರೆತು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ಯಾವ ಅಧಿಕಾರಿ, ಪೊಲೀಸರು ಗಮನಹರಿಸಿಲ್ಲ. ದಿನಸಿ ಅಂಗಡಿ ಬಳಿಯೂ ಜನ ಹೆಚ್ಚು ಸೇರಿದ್ದರು. ಇದು ಕೋವಿಡ್ ಹೆಚ್ಚಲು ಕಾರಣವಾಗಬಹುದು. ಯಾವುದೇ ನಿಯಂತ್ರಣವಿಲ್ಲದಿದ್ದರಿಂದ ಕೋವಿಡ್ ನಿಯಮ ಗಾಳಿಗೆ ತೂರಲಾಗಿದೆ' ಎಂದು ಗ್ರಾಹಕ ಸುನಿಲ್ ಪಾಟೀಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.