ADVERTISEMENT

ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ: ಡಾ. ಅಬ್ದುಲ್ ರಶೀದ್

​ಪ್ರಜಾವಾಣಿ ವಾರ್ತೆ
Published 2 ಮೇ 2021, 7:13 IST
Last Updated 2 ಮೇ 2021, 7:13 IST
ಡಾ. ಅಬ್ದುಲ್ ರಶೀದ್
ಡಾ. ಅಬ್ದುಲ್ ರಶೀದ್   

ಯಾದಗಿರಿ: ‘ಕೋವಿಡ್‌ ಬಂತೆಂದು ಯಾರೂ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ಮುಂಜಾಗ್ರತೆ, ವೈದ್ಯರು ಹೇಳುವ ನಿಯಮಗಳನ್ನು ಪಾಲಿಸಿದರೆ ಸಾಕು. ಸೋಂಕುಅನ್ನು ಗೆದ್ದ ಬೀಗಬಹುದು’

ಹೌದು ಹೀಗೆನ್ನುತ್ತಾರೆ ಕೋವಿಡ್‌ಗೆ ತುತ್ತಾಗಿ ಗೆದ್ದು ಬಂದ ಡಾ. ಅಬ್ದುಲ್ ರಶೀದ್ ಅವರು.

ಜಿಲ್ಲಾ ಆರೋಗ್ಯ ಅಧಿಕಾರಿ ಕಚೇರಿಯ ಅಸಂಕ್ರಾಮಿಕ ರೋಗಗಳ ವಿಭಾಗದ ಜಿಲ್ಲಾ ಸಂಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ರಶೀದ್‌ ಅವರಿಗೆ ಏಪ್ರಿಲ್‌ 11ರಂದು ಕೋವಿಡ್‌ ಇರುವುದು ಪತ್ತೆಯಾಯಿತು. ನಂತರ 7 ದಿನ ಆದ ಮೇಲೆ ಪರೀಕ್ಷೆ ಮಾಡಿಸಿಕೊಂಡಾಗ ನೆಗೆಟಿವ್‌ ವರದಿ ಬಂತು. ನಂತರ ಕೆಲ ದಿನ ವಿಶ್ರಾಂತಿ ಪಡೆದು ಈಗ ಕರ್ತವ್ಯಕ್ಕೆ ಮರಳಿದ್ದಾರೆ.

ADVERTISEMENT

‘ಕೋವಿಡ್‌ ದೃಢಪಟ್ಟ ಮೇಲೆ ಮನೆಯವರಿಂದ ಪ್ರತ್ಯೇಕವಾಗಿ ಹೋಂ ಕ್ವಾರಂಟೈನ್‌ ಆಗಿದ್ದೆ. ಈ ವೇಳೆ ನಮ್ಮ ಮೇಲಧಿಕಾರಿಗಳು, ಸಹದ್ಯೋಗಿಗಳು, ಸಂಬಂಧಿಕರು ಕರೆ ಧೈರ್ಯ ತುಂಬಿದರು. ಕೌನ್ಸೆಲಿಂಗ್‌ ಮಾಡಿದರು. ನನಗೂ ಆತ್ಮಸ್ಥೈರ್ಯ ಇದ್ದುದ್ದರಿಂದ ಕೋವಿಡ್‌ ಗೆದ್ದು ಬಂದೆ. ಪ್ರತಿ ಒಂದು ತಾಸಿಗೂ ಕೈಗಳನ್ನು ತೊಳೆದುಕೊಳ್ಳುತ್ತಿದ್ದೆ. ಉಸಿರಾಟ ಸರಾಗವಾಗಿ ಆಡಲು ಪ್ರಾಣಯಾಮ ಸಹಕಾರಿಯಾಗಿದೆ. ಇದರ ಮೂಲಕವಾಗಿ ಈಗ ಎರಡು ಮಾಸ್ಕ್‌ ಹಾಕಿಕೊಂಡು ಉಸಿರಾಡಲು ಕಷ್ಟವಾಗುತ್ತಿಲ್ಲ. ಕೆಲವರು ಮಾಸ್ಕ್‌ ಹಾಕಿಕೊಂಡರೆ ಉಸಿರಾಟ ಸಮಸ್ಯೆ ಆಗುತ್ತದೆ ಎಂದು ಹೇಳುತ್ತಾರೆ. ಆದರೆ, ನನಗೆ ಯಾವುದೇ ಸಮಸ್ಯೆ ಆಗಿಲ್ಲ’ ಎಂದು ತಿಳಿಸುತ್ತಾರೆ.

‘ಈಗ ಪ‍್ರಯೋಗಾಲಯದಲ್ಲಿ ಕೆಲಸ ಮಾಡುತ್ತಿರುವುದರಿಂದ ಪ್ರತಿ 15 ರಿಂದ 20 ನಿಮಿಷಕ್ಕೆ ಕೈ ತೊಳೆದುಕೊಳ್ಳುತ್ತಿದ್ದೇನೆ. ಸಹದ್ಯೋಗಿಗಳ ಜೊತೆಗೆ 1 ಮೀಟರ್‌ ಅಂತರ ಕಾಪಾಡಿಕೊಳ್ಳುತ್ತೇನೆ. ಮಾಸ್ಕ್‌ ಧರಿಸುತ್ತೇನೆ. ಈ ಮೂಲಕ ನನ್ನನ್ನು ಕೋವಿಡ್‌ನಿಂದ ಕಾಪಾಡಿಕೊಂಡಿದ್ದೇನೆ. ಹೀಗಾಗಿ ಜಿಲ್ಲೆಯ ಸಾರ್ವಜನಿಕರು ಬೇಕಾಬಿಟ್ಟಿ ಓಡಾಡದೇ ಮಾಸ್ಕ್‌ ಧರಿಸಬೇಕು. ಅಂತರ ಕಾಪಾಡಿಕೊಳ್ಳಬೇಕು. ಈ ಮೂಲಕ ಕೋವಿಡ್‌ ಮುಕ್ತ ಜಿಲ್ಲೆಗೆ ಪಣ ತೊಡಬೇಕು’ ಎಂದು ಮನವಿ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.