ಯಾದಗಿರಿ: ‘ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿರುವ ಬೆಳೆ ಸಮೀಕ್ಷೆಯಲ್ಲಿ ಒಂದೇ ಒಂದು ಎಕರೆಯೂ ತಪ್ಪಿ ಹೋಗಬಾರದು. ಮೂರು ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಹಾನಿಯ ಮಾಹಿತಿಯನ್ನು ಕ್ರೋಡೀಕರಣ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ 10 ತಿಂಗಳ ಬಳಿಕ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆ ಆರಂಭದಲ್ಲಿ ಕೃಷಿ ಇಲಾಖೆಯ ಪ್ರಗತಿ ವಿವರ ಕೇಳಲಾಯಿತು. ಶಾಸಕ ಶರಣಗೌಡ ಕಂದಕೂರ ಅವರು ‘ಗುರುಮಠಕಲ್ ಕ್ಷೇತ್ರದಲ್ಲಿ ಬೆಳೆ ಹಾನಿ ಶೂನ್ಯ ಪ್ರಮಾಣದಲ್ಲಿ ತೋರಿಸಲಾಗಿದೆ. ಹಲವು ರೈತರು ಫೋನ್ ಕರೆ ಮಾಡಿ, ತಮ್ಮ ಜಮೀನಿನ ಸಮೀಕ್ಷೆ ಅಧಿಕಾರಿ ಬಂದಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಪ್ರಭಾವಿಗಳು ಸೂಚಿಸದ ಕಡೆಗಳಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಲೋಪವೂ ಕಂಡುಬರುತ್ತಿದೆ’ ಎಂದರು.
ಇದಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರೂ ಧ್ವನಿಗೂಡಿಸಿ, ‘ಕೃಷಿ, ಕಂದಾಯ ಮತ್ತು ತೋಟಗಾರಿಕೆ ಇಲಾಖೆಯವರು ಜಂಟಿಯಾಗಿ ಸಮೀಕ್ಷೆ ಮಾಡಬೇಕು. ಆದರೆ, ಒಂದೊಂದು ಇಲಾಖೆಯವರು ಪ್ರತ್ಯೇಕವಾಗಿ ತೆರಳುತ್ತಿದ್ದಾರೆ. ಇದರಿಂದ ರೈತರಲ್ಲಿ ಗೊಂದಲ ಆಗುತ್ತಿದೆ’ ಎಂದು ಸಚಿವರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ರೈತರು ಒಂದು ವರ್ಷ ಬೆಳೆ ಕಳೆದುಕೊಂಡರೆ ಅದರ ನಷ್ಟದಿಂದ ಹೊರಬರಲು ಮೂರ್ನಾಲ್ಕು ವರ್ಷಗಳು ಬೇಕಾಗುತ್ತದೆ. ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವ ರೈತನಿಗೆ ನಾವು ಕನಿಷ್ಠ ಮೊತ್ತವನ್ನು ನಷ್ಟ ಪರಿಹಾರವಾಗಿ ಕೊಡುತ್ತೇವೆ. ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ಮಾಡಿ, ವರದಿ ಕೊಡದಿದ್ದರೆ ರೈತರು ಕಚೇರಿಗೆ ಅಲೆದಾಡುವುದರಲ್ಲಿಯೇ ಪರಿಹಾರದ ಹಣವನ್ನು ಖರ್ಚು ಮಾಡಿಕೊಳ್ಳುತ್ತಾರೆ’ ಎಂದರು.
‘ಮೂರು ಇಲಾಖೆಯವರು ಸಮನ್ವಯದಿಂದ ಸಮೀಕ್ಷೆ ನಡೆಸಿ, 100 ಪರ್ಸೆಂಟ್ ರೈತರಿಗೆ ನ್ಯಾಯ ಸಿಗುವಂತೆ ಆಗಬೇಕು. ಸಮೀಕ್ಷೆ ಮುಗಿದ ಬಳಿಕ ಎಲ್ಲ ಶಾಸಕರು, ಅಧಿಕಾರಿಗಳು ಸಭೆ ನಡೆಸಿ ವರದಿಯನ್ನು ಪರಿಶೀಲಿಸಿದ ಬಳಿಕವೇ ಸರ್ಕಾರಕ್ಕೆ ಸಲ್ಲಿಸೋಣ’ ಎಂದು ಹೇಳಿದರು.
‘ಸರ್ಕಾರಿ ಯೋಜನೆಗಳ ಸಬ್ಸಿಡಿಗಾಗಿ ಬ್ಯಾಂಕ್‌ಗಳಿಗೆ ಅರ್ಜಿ ಹಾಕಿದವರ ಮಾಹಿತಿಯನ್ನು ಜಿಲ್ಲಾಧಿಕಾರಿಗಳೊಂದಿಗೆ ಹಂಚಿಕೊಳ್ಳಬೇಕು. ಸಾಲ ಕೊಡದಿರುವ ಬ್ಯಾಂಕ್ ಬಗ್ಗೆಯೂ ಗಮನಕ್ಕೆ ತರಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ಗುರುಮಠಕಲ್‌ನಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಹತ್ತಿ, ತೊಗರಿ ಬೆಳೆ ಹಾನಿಯಾಗಿದ್ದು, ಈಗಾಗಲೇ ಶೇ 70ರಷ್ಟು ಹಾನಿಯ ಸಮೀಕ್ಷೆ ಮುಗಿದಿದೆ. ಜಮೀನುಗಳಲ್ಲಿ ನೀರು ನಿಂತು, ಹಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಸಮೀಕ್ಷಾ ಕಾರ್ಯಕ್ಕೆ ಅಡ್ಡಿಯಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗುರ ಸ್ಪಷ್ಟನೆ ನೀಡಿದರು.
ಸಭೆಯಲ್ಲಿ ಸಂಸದ ಜಿ.ಕುಮಾರ್ ನಾಯಕ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ಎಸ್ಪಿ ಪೃಥ್ವಿಕ್ ಶಂಕರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ರೈತರ ಆತ್ಮಹತ್ಯೆಯ ಪ್ರಕರಣಗಳನ್ನು ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಪರಿಗಣಿಸಬೇಕು. ನಿಯಮಗಳ ಬದಲಾವಣೆಯ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಛಲವಾದಿ ನಾರಾಯಣಸ್ವಾಮಿ
ಹಳೇ ವೈರ್ ವಿದ್ಯುತ್ ಕಂಬಗಳ ಬದಲಾವಣೆಗೆ ಜೆಸ್ಕಾಂ ಅಧಿಕಾರಿಗಳಿಗೆ ಪತ್ರಗಳನ್ನು ಬರೆದರೂ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಇನ್ನು ಮುಂದೆ ಹೀಗೆ ಆಗಬಾರದುರಾಜಾ ವೇಣುಗೋಪಾಲ್ ನಾಯಕ ಶಾಸಕ
ಸಭೆಯಲ್ಲಿ ಸಚಿವರು ಶಾಸಕರು ಸೂಚಿಸಿರುವ ನಡಾವಳಿಗಳು ಕಟ್ಟು ನಿಟ್ಟಾಗಿ ಜಾರಿಗೆ ತಂದು ಜನರಿಗೆ ಉತ್ತಮ ಆಡಳಿತ ನೀಡಲಾಗುವುದು. ಅನುಪಾಲನ ವರದಿಯನ್ನು ತರಿಸಿಕೊಳ್ಳಲಾಗುವುದುಹರ್ಷಲ್ ಭೋಯರ್ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.