ADVERTISEMENT

ಯಾದಗಿರಿ: ಎಚ್‌ಐವಿ ಪಾಸಿಟಿವಿಟಿ ದರ ಇಳಿಕೆ

ಜಿಲ್ಲೆಯಲ್ಲಿ ಈ ವರ್ಷ 161 ಜನರಿಗೆ ಎಚ್‌ಐವಿ ಸೋಂಕು ಪತ್ತೆ

ಬಿ.ಜಿ.ಪ್ರವೀಣಕುಮಾರ
Published 3 ಡಿಸೆಂಬರ್ 2024, 5:17 IST
Last Updated 3 ಡಿಸೆಂಬರ್ 2024, 5:17 IST
<div class="paragraphs"><p>ಎಚ್‌ಐವಿ ಪಾಸಿಟಿವ್</p></div>

ಎಚ್‌ಐವಿ ಪಾಸಿಟಿವ್

   

(ಐಸ್ಟೋಕ್ ಚಿತ್ರ)

ಯಾದಗಿರಿ: ಜಿಲ್ಲೆಯಲ್ಲಿ 2010 ರಿಂದ 2024 ರವರೆಗೆ 5,62,714 ಮಂದಿಗೆ ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 5,083 ಎಚ್‌ಐವಿ ಸೋಂಕಿತರು ಧೃಡಪಟ್ಟಿದ್ದಾರೆ. ಪ್ರಸ್ತುತ ಪಾಸಿಟಿವಿಟಿ ದರ ಶೇ 0.30 ರಷ್ಟಿದೆ.

ADVERTISEMENT

ಇದೇ ಅವಧಿಯಲ್ಲಿ 4,94,070 ಗರ್ಭಿಣಿಯರಿಗೆ ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು, 317 ಜನ ಎಚ್‌ಐವಿ ಸೋಂಕಿತರು ಧೃಢಪಟ್ಟಿದ್ದಾರೆ. ಪ್ರಸ್ತುತ ಪಾಸಿಟಿವಿಟಿ ದರ ಶೇ 0.01 ರಷ್ಟಿದೆ.

2024-25 ಸಾಲಿಗೆ 53,168 ಸಾಮಾನ್ಯ ಜನರಿಗೆ ಎಚ್‌ಐವಿ ಪರೀಕ್ಷೆ ಮಾಡಿದ್ದು, ಅದರಲ್ಲಿ 161 ಜನರಿಗೆ ಎಚ್‌ಐವಿ ಸೋಂಕು ಧೃಢಪಟ್ಟಿದೆ. ಪಾಸಿಟಿವಿಟಿ ದರ ಶೇ 0.30 ರಷ್ಟಿದೆ, 23,717 ಗರ್ಭಿಣಿಯರ ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ ಮೂವರಿಗೆ ಸೋಂಕು ಧೃಢಪಟ್ಟಿದೆ. ಎಲ್ಲರೂ ಎಆರ್‌ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಸಿಟಿವಿಟಿ ದರ 0.01ರಷ್ಟಿದೆ.

ಜಿಲ್ಲೆಯಿಂದ ಬೆಂಗಳೂರು, ಪುಣೆ, ಮುಂಬೈ, ಹೈದರಾಬಾದ್‌ ಮುಂತಾದ ಕಡೆಗೆ ವಲಸೆ ಹೋಗುವುದರಿಂದಲೂ ಎಚ್‌ಐವಿ ಹೆಚ್ಚಳವಾಗಿ ಮಾರಕವಾಗಿ ಪರಿಣಮಿಸಿದೆ. ಗುಳೆ ಹೋಗಿ ಬಂದ ವೇಳೆ ಗರ್ಭಿಣಿಯರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದು ಒಂದು ಕಾರಣವಾಗಿದೆ.

ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಎಚ್‌ಐವಿ/ಏಡ್ಸ್ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲೆಯಲ್ಲಿ ಹಲವಾರು ಚಟುವಟಿಕೆಗಳು ನಡೆಯುತ್ತಿವೆ. 2 ಡಿಎಸ್‌ಆರ್‌ಸಿ ಕೇಂದ್ರಗಳು ಮತ್ತು 2 ರಕ್ತ ಶೇಕರಣಾ ಘಟಕಗಳಿವೆ. 1 ರಕ್ತನಿಧಿ ಕೇಂದ್ರ, ಗ್ರಾಮೀಣ ಮಟ್ಟದಲಿ ಪ್ರಾಥಮಿಕ ಕೇಂದ್ರವಾರು 47 ಎಫ್‌ಐಸಿಟಿಸಿ ಪರೀಕ್ಷಾ ಕೇಂದ್ರಗಳಿವೆ. ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ 4 ಎಚ್‌ಐವಿ ಪರೀಕ್ಷಾ ಕೇಂದ್ರಗಳಿವೆ.

ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ವತಿಯಿಂದ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಗೆ ಎಚ್‌ಐವಿ ಮತ್ತು ಏಡ್ಸ್‌ ಬಗ್ಗೆ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ.

3,288 ಜನರಿಗೆ ಚಿಕಿತ್ಸೆ:

2011ರಿಂದ ಜಿಲ್ಲೆಯ ಎಆರ್‌ಟಿ ಕೇಂದ್ರದಲ್ಲಿ 6,207 ಜನ ಎಚ್‌ಐವಿ ಸೋಂಕಿತರು ಚಿಕಿತ್ಸೆಗಾಗಿ ನೋಂದಣಿಯಾಗಿದ್ದು, ಅದರಲ್ಲಿ 5,880 ಜನಕ್ಕೆ ಆಂಟಿರೆಟ್ರೋವೈರಲ್ ಥೆರಪಿ (ಎಆರ್‌ಟಿ) ಚಿಕಿತ್ಸೆ ನೀಡಲಾಗಿದೆ. ಅದರಲ್ಲಿ ಪ್ರಸ್ತುತ 3,288 ಜನ ಜೀವಂತವಾಗಿದ್ದು, ಎಆರ್‌ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಪುರುಷರು 1,275, ಮಹಿಳೆಯರು 1,750, ಲಿಂಗತ್ವ ಅಲ್ಪಸಂಖ್ಯಾತರು 12, 141 ಬಾಲಕರು, 110 ಬಾಲಕಿಯರು ಸೇರಿ 3,288 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಲ್ಲಿಯವರೆಗೆ ಜಿಲ್ಲೆಯಲ್ಲಿ 1,831 ಜನ ಎಚ್ಐವಿ ಸೋಂಕಿತರು ಸಾವನ್ನಪ್ಪಿದ್ದಾರೆ. 319 ಎಚ್ಐವಿ ಸೋಂಕಿತ ತಾಯಂದಿರ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 11 ಮಕ್ಕಳಿಗೆ ಎಚ್ಐವಿ ಸೋಂಕು ದೃಢಪಟ್ಟಿದೆ. ಆ ಎಲ್ಲಾ 11 ಮಕ್ಕಳಿಗೆ ಎಆರ್‌ಟಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

‘ಸರಿಯಾದ ಮಾರ್ಗದಲ್ಲಿ ಹಕ್ಕುಗಳನ್ನು ಪಡೆಯೋಣ: ನನ್ನ ಆರೋಗ್ಯ, ನನ್ನ ಹಕ್ಕು’ ಎನ್ನುವುದು 2024ರ ಏಡ್ಸ್‌ ದಿನಾಚರಣೆಯ ಘೋಷ ವಾಕ್ಯವಾಗಿದೆ.

ಜಿಲ್ಲೆಯಲ್ಲಿ ಪ್ರಸ್ತುತ ವರ್ಷಗಳಲ್ಲಿ ಎಚ್ಐವಿ ನಿಯಂತ್ರಣದಲ್ಲಿದ್ದು ಪಾಸಿವಿಟಿ ದರವೂ ಇಳಿಕೆಯಾಗಿದೆ. ಜಾಗೃತಿ ಮತ್ತು ಸಕಾಲಕ್ಕೆ ಚಿಕಿತ್ಸೆ ಪಡೆಯುವುದರಿಂದ ಕಡಿಮೆಯಾಗುತ್ತಿದೆ
ಡಾ.ಮಹೇಶ ಬಿರಾದಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ‌
ಜಿಲ್ಲೆಯಲ್ಲಿ ಎಚ್‌ಐವಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ. 6 ಐಸಿಟಿಸಿ ಕೇಂದ್ರಗಳು 1 ನೋಡಲ್ ಎಆರ್‌ಟಿ ಕೇಂದ್ರ 5 ಉಪ ಎಆರ್‌ಟಿ ಕೇಂದ್ರಗಳಿವೆ
ಡಾ.ಸಂಜೀವಕುಮಾರ ರಾಯಚೂರಕರ್‌ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ನಿಯಂತ್ರಣಾಧಿಕಾರಿ

18–40 ವಯಸ್ಸಿನವರಲ್ಲಿ ಎಚ್‌ಐವಿ!

ಜಿಲ್ಲೆಯಲ್ಲಿ ಕೋವಿಡ್‌ ನಂತರ 18–40 ವಯಸ್ಸಿನವರಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗುತ್ತಿದೆ. ಇದು ಆರೋಗ್ಯ ಇಲಾಖೆ ಅಧಿಕಾರಿಗಳಲ್ಲಿ ಆತಂಕ ಉಂಟು ಮಾಡಿದೆ. ‘ಜಿಲ್ಲೆಯಲ್ಲಿ ಯುವ ಸಮೂಹ ಎಚ್‌ಐವಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಈ ಹಿಂದೆ ಅನಕ್ಷರತೆ ಇತರೆ ಆರೋಗ್ಯ ಇಲಾಖೆ ಕಾರಣದಿಂದ ಗೊತ್ತಿಲ್ಲದೇ ಎಚ್‌ಐವಿ ಹರಡುತ್ತಿತ್ತು. ಈಗ ಅಕ್ಷರಸ್ಥರೆ ಈ ಸೋಂಕಿಗೆ ಒಳಗಾಗುತ್ತಿರುವುದು ಆತಂಕಕಾರಿ. ಅದರಲ್ಲೂ ಅವಾಹಿತರೇ ಪತ್ತೆಯಾಗುತ್ತಿದ್ದಾರೆ. ಅಲ್ಲದೇ ಸರ್ಕಾರ ಅವರ ಸಂಗಾತಿಗಳನ್ನು ಪತ್ತೆ ಮಾಡುವ ಗುರಿ ನೀಡಿದ್ದು ಇದು ಸವಾಲಾಗಿ ಪರಿಣಮಿಸಿದೆ’ ಎಂದು ಆರೋಗ್ಯ ಇಲಾಖೆ ನೀಡುವ ಮೂಲಗಳ ಮಾಹಿತಿಯಾಗಿದೆ. ‘ವಲಸೆ ಹೋದವರು ಎಚ್‌ಐವಿಗೆ ಹೆಚ್ಚಾಗಿ ತುತ್ತಾಗುತ್ತಿದ್ದಾರೆ. ಆದರೆ ಈಗ ಜಾಗೃತಿ ಬಂದರೂ ಯುವ ಸಮೂಹ ಇನ್ನೂ ಜಾಗೃತಗೊಳ್ಳದಿರುವುದು ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.