
ಯಾದಗಿರಿ: ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಕಟ್ಟಡಗಳು ಖಾಲಿ ಇದ್ದರೂ ಹಲವು ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿರುವುದರಿಂದ ಸರ್ಕಾರಕ್ಕೆ ನಷ್ಟ ಆಗುತ್ತಿದ್ದು, ಕೂಡಲೇ ಖಾಸಗಿ ಕಟ್ಟಡಗಳಲ್ಲಿನ ಕಚೇರಿಗಳನ್ನು ಖಾಲಿ ಇರುವ ಸರ್ಕಾರಿ ಕಟ್ಟಡಗಳಿಗೆ ಸ್ಥಳಾಂತರಿಸಬೇಕು ಎಂದು ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಮುಖಂಡರು ಜಿಲ್ಲಾಧಿಕಾರಿಯ ಅಧಿಕಾರಿಯೊಬ್ಬರಿಗೆ ಸೋಮವಾರ ಮನವಿ ಸಲ್ಲಿಸಿದರು.
ಸಹಾಯಕ ನಿರ್ದೇಶಕರು, ಗ್ರೇಡ್-1 ಸಮಾಜ ಕಲ್ಯಾಣ ಇಲಾಖೆ, ಹಿರಿಯ ಉಪ ನೋಂದಣಾಧಿಕಾರಿಗಳ ಹಾಗೂ ವಿವಾಹ ನೋಂದಣಾಧಿಕಾರಿಗಳ ಕಚೇರಿ, ಜಿಲ್ಲಾ ವಿಮಾಧಿಕಾರಿಗಳ ಕಚೇರಿ, ವಿಶೇಷ ಭೂ ಸ್ವಾಧೀನಾದಿಕಾರಿಗಳ ಕಾರ್ಯಾಲಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿ ಇತರೆ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಜಿಲ್ಲಾ ಕೇಂದ್ರದಲ್ಲಿ ನಗರಸಭೆ ಮಳಿಗೆ, ಹಳೇ ಕೋರ್ಟ್ ಕಚೇರಿಗಳು ಖಾಲಿ ಬಿದ್ದಿವೆ. ಅಲ್ಲಿಯೇ ಬಾಡಿಗೆ ಕಚೇರಿಗಳನ್ನು ನಡೆಸಿದರೆ ಸರ್ಕಾರಕ್ಕೆ ಆಗುವ ನಷ್ಟ ತಪ್ಪುತ್ತದೆ. ಕಚೇರಿ ಸ್ಥಳಾಂತರ ಮಾಡುವಲ್ಲಿ ವಿಳಂಬ ಮಾಡಿದರೆ ಪ್ರತಿಭಟನೆ ಮಾಡಲಾಗುವುದು ಎಂದಿದ್ದಾರೆ.
ಈ ವೇಳೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಮುಷ್ಟೂರ, ಉಪಾಧ್ಯಕ್ಷ ಶಿವಕುಮಾರ ಮೇದಾ, ಪ್ರಧಾನ ಕಾರ್ಯದರ್ಶಿ ಬಂಗಾರಪ್ಪ ನಾಯಕ, ಖಜಾಂಚಿ ಆಂಜಿನೇಯ ಬಳಿಚಕ್ರ, ಪ್ರಮುರಾದ ಮರಿಲಿಂಗ ಹೊನಗೇರಾ, ಮಲ್ಲಣ್ಣಗೌಡ ಹೋರುಂಚಾ, ಸಾಬಣ್ಣ ಹೊನಗೇರಾ, ರಮೇಶ ಶೆಟ್ಟಿ, ಈಶ್ವರ ದಂಡಗುಂಡ, ರಾಜು ಆಶನಾಳ, ದೇವಿಂದ್ರಪ್ಪ ಹತ್ತಿಕುಣಿ, ಮಲ್ಲಪ್ಪ ಬಳಿಚಕ್ರ ಸೇರಿ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.