ADVERTISEMENT

ಗುಂಡಲಗೇರಾ: ಶುದ್ಧ ಕುಡಿವ ನೀರಿನ ಘಟಕಕ್ಕೆ ಗ್ರಹಣ

ಪ್ರಾಥಮಿಕ, ಪ್ರೌಢಶಾಲೆಗಳಲ್ಲಿಲ್ಲ ಶುದ್ಧ ಕುಡಿವ ನೀರು, ಶೌಚಾಲಯ ವ್ಯವಸ್ಥೆ

ಭೀಮಶೇನರಾವ ಕುಲಕರ್ಣಿ
Published 9 ಫೆಬ್ರುವರಿ 2021, 0:48 IST
Last Updated 9 ಫೆಬ್ರುವರಿ 2021, 0:48 IST
ಹುಣಸಗಿ ತಾಲ್ಲೂಕಿನ ಗುಂಡಲಗೇರಾ ಗ್ರಾಮದ ಬಳಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಮುಳ್ಳುಕಂಟಿಗಳಿಂದ ಮುಚ್ಚಿಹೋಗಿರುವುದು
ಹುಣಸಗಿ ತಾಲ್ಲೂಕಿನ ಗುಂಡಲಗೇರಾ ಗ್ರಾಮದ ಬಳಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಮುಳ್ಳುಕಂಟಿಗಳಿಂದ ಮುಚ್ಚಿಹೋಗಿರುವುದು   

ಗುಂಡಲಗೇರಾ (ಹುಣಸಗಿ): ಸರ್ಕಾರ ಹಣ ಖರ್ಚು ಮಾಡಿದರೂ ಕೂಡಾ ತಳ ಮಟ್ಟದಲ್ಲಿ ಸಮರ್ಪಕವಾಗಿ ಸದ್ಬಳಕೆಯಾಗುವದಿಲ್ಲ ಎನ್ನುವ ಮಾತು ಈ ಗುಂಡಲಗೇರಾ ಗ್ರಾಮದಲ್ಲಿ ಸತ್ಯ ಎನ್ನುವಂತಾಗಿದೆ. ಲಕ್ಷಾಂತರ ಹಣ ಖರ್ಚು ಮಾಡಿ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು ಎನ್ನುವ ಸರ್ಕಾರದ ಯೋಜನೆ ಹಳ್ಳ ಹಿಡಿಯುವ ಮೂಲಕ ಗ್ರಾಮಕ್ಕೆ
ಸೌಲಭ್ಯ ಇಲ್ಲದಂತಾಗಿದೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ಕೋಳಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮವು ಸುಮಾರು 1 ಸಾವಿರ ಮನೆಗಳನ್ನು ಹೊಂದಿದ್ದು, 3 ಸಾವಿರ ಜನಸಂಖ್ಯೆ ಹೊಂದಿದೆ. 5 ಗ್ರಾಮ ಪಂಚಾಯಿತಿ ಸದಸ್ಯರು ಚುನಾಯಿತರಾಗಿದ್ದಾರೆ. ಕಳೆದ 2 ದಿನಗಳ ಹಿಂದೆ ಹುಣಸಗಿ ಕೆಂಭಾವಿ ಮುಖ್ಯರಸ್ತೆಯಿಂದ ಗ್ರಾಮದವರೆಗೂ ಡಾಂಬರ್ ರಸ್ತೆ ನಿರ್ಮಿಸಲಾಗಿದೆ.

ಕಳೆದ 5 ವರ್ಷಗಳ ಹಿಂದೆ 2016ನೇ ಸಾಲಿಯಲ್ಲಿಯೇ ಗುಂಡಲಗೇರಾ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾಗಿದ್ದು, ಸಂಬಂಧಿಸಿದ ಗುತ್ತಿಗೆದಾರರು ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ಈ ಶುದ್ಧ ಕುಡಿಯುವ ನೀರಿನ ಘಟಕಕ್ಕಾಗಿ ಕೊಠಡಿ ನಿರ್ಮಿಸಿದ್ದಾರೆ. ಆದರೆ ಇಲ್ಲಿಯವರೆಗೂ ಘಟಕಕ್ಕೆ ಯಾವುದೇ ಸಾಮಗ್ರಿಗಳನ್ನು ತಂದು ಅಳವಡಿಸಿಲ್ಲ. ಅಲ್ಲದೇ ಇದಕ್ಕೆ ಜಲಮೂಲದ ಸಂಪರ್ಕವೇ
ಕಲ್ಪಿಸಿಲ್ಲ ಎಂದು ಗ್ರಾಮದ ಶಾಂತಗೌಡ ಕವಿತಾಳ ಹಾಗೂ ಭೀಮನಗೌಡ ಬಿರಾದಾರ ದೂರಿದ್ದಾರೆ.

ADVERTISEMENT

ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಿವೆ. ಇಲ್ಲಿರುವ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯ ಕೊರತೆ ಇದ್ದು, ನೀರಿಗಾಗಿ ಪರದಡುವಂತಾಗಿದೆ ಎಂದು ಶಾಲೆಯ ಮುಖ್ಯಶಿಕ್ಷಕಿ ವಿದ್ಯಾ ಹಿಪ್ಪರಗಿ ಎಂದು ತಿಳಿಸಿದರು.

ಅಲ್ಲದೇ ಸರ್ಕಾರಿ ಪ್ರೌಢಶಾಲೆ ವಿಶಾಲವಾದ ಮೈದಾನವಿದ್ದು, ಸುತ್ತಲೂ ಕಂಪೌಂಡ್ ಗೋಡೆ ನಿರ್ಮಿಸುವುದು ಅಗತ್ಯವಿದೆ. ಕಂಪೌಂಡ ಇಲ್ಲದೇ ಇರುವುದರಿಂದಾಗಿ ರಾತ್ರಿ ಸಮಯದಲ್ಲಿ ಕೆಲ ಕಿಡಿಗೇಡಿಗಳು ಶಾಲಾ ಕೋಣೆಗಳಲ್ಲಿ ನುಗ್ಗಿ ಜೂಜಾಟವಾಡಿ ಗಲೀಜು ಮಾಡಿದ ಪ್ರಸಂಗಗಳು ಕೂಡಾ ನಡೆದಿವೆ ಎಂದು ತಿಳಿದು ಬಂದಿದೆ. ಅಲ್ಲದೇ ಶೌಚಾಲಯ ಕೂಡಾ ಬಳಕೆಗೆ ಯೋಗ್ಯವಿಲ್ಲದಂತಾಗಿದೆ.

ಶಾಲಾ ಆವಣದಲ್ಲಿ ವಿದ್ಯಾರ್ಥಿ ಗಳಿಗಾಗಿ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ತೊಟ್ಟಿ ನಿರ್ಮಿಸಿದ್ದು, ಅದಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ನೀರಿನ ಸಂಪರ್ಕ ಕಲ್ಪಿಸುವುದು ಅಗತ್ಯವಿದೆ ಎನ್ನುತ್ತಾರೆ ಗ್ರಾಮದ ಬಸವರಾಜ ನೀರಲಗಿ.

ಇಲ್ಲಿರುವ ಶಾಲಾ ರಸ್ತೆ ಮಳೆಗಾ ಲದಲ್ಲಿ ಕೆಸರು ಗದ್ದೆಯಂತಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ನೀರಾವರಿ ಕಲ್ಪಿಸಲಿ: ಈ ಗ್ರಾಮದ ಮುಂದೆಯೇ ಸುಮಾರು 10 ಸಾವಿರ ಕ್ಯುಸೆಕ್ಸ್ ನೀರು ಹರಿಯುವ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಕಾಲುವೆ ಹರಿದು ಹೋಗಿದೆ. ಆದರೆ ಈ ಗ್ರಾಮವು ನೀರಾವರಿಯಿಂದ ವಂಚಿತವಾಗಿದೆ. ಆದ್ದರಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೂದಿಹಾಳ ಏತ ನೀರಾವರಿ ಶೀಘ್ರವೇ ಅನುಷ್ಟಾನವಾಗಬೇಕು ಎಂದು ಒತ್ತಾಯಿಸುತ್ತಾರೆ ಗ್ರಾಮಸ್ಥ ರಾದ ಬಸವರಾಜ ಬಿರಾದಾರ ಹಾಗೂ ಸಿ.ಆರ್.ಪಾಟೀಲ.

*
ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ಜತೆ ಮಾತನಾಡುತ್ತೇನೆ. ಶೀಘ್ರದಲ್ಲೇ ಘಟಕ ಆರಂಭಿಸಲಾಗುವುದು.
-ಅಣ್ಣಪ್ಪಗೌಡ ಇಬ್ರಾಹಿಂಪುರ, ಗ್ರಾ.ಪಂ ಅಧ್ಯಕ್ಷ, ಕೋಳಿಹಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.