ADVERTISEMENT

ಯಾದಗಿರಿ: ಹಿಂದೂ ಮಹಾಗಣಪತಿಗೆ ಅದ್ದೂರಿ ವಿದಾಯ

ಭವ್ಯ ಶೋಭಾಯಾತ್ರೆ; ಗಜಮುಖನ ವೈಭವಕ್ಕೆ ಹರಿದು ಬಂದ ಭಕ್ತಗಣ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 7:06 IST
Last Updated 14 ಸೆಪ್ಟೆಂಬರ್ 2025, 7:06 IST
ಯಾದಗಿರಿಯಲ್ಲಿ ಶನಿವಾರ ಹಿಂದೂ ಮಹಾಗಣಪತಿ ಮೂರ್ತಿ ವಿಸರ್ಜನೆಯ ಶೋಭಾಯಾತ್ರೆ ನಡೆಯಿತು
ಯಾದಗಿರಿಯಲ್ಲಿ ಶನಿವಾರ ಹಿಂದೂ ಮಹಾಗಣಪತಿ ಮೂರ್ತಿ ವಿಸರ್ಜನೆಯ ಶೋಭಾಯಾತ್ರೆ ನಡೆಯಿತು   

ಪ್ರಜಾವಾಣಿ ಚಿತ್ರಗಳು: ರಾಜಕುಮಾರ ನಳ್ಳಿಕರ

ಯಾದಗಿರಿ: ಇಲ್ಲಿನ ತುಳಜಾ ಭವಾನಿ ದೇವಸ್ಥಾನ ಸಮೀಪ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿ ಮೂರ್ತಿ ವಿಸರ್ಜನೆಯ ಶೋಭಾಯಾತ್ರೆ ಶನಿವಾರ ವಿಜೃಂಭಣೆಯಿಂದ ಜರುಗಿತು. ಯುವಕ–ಯುವತಿಯರು, ಮಕ್ಕಳು ಸೇರಿ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗಿಯಾಗಿ ಹುಮ್ಮಸ್ಸಿನಿಂದ ಕುಣಿದು ಕುಪ್ಪಳಿಸಿದರು.

ಬೃಹತ್ ಮಂಟಪದಲ್ಲಿ ಮಹಾಭಾರತ ಬರೆಯುವ ಶೈಲಿಯಲ್ಲಿನ ಗಣೇಶನ ದೊಡ್ಡ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಶೋಭಾಯಾತ್ರೆಗೂ ಮುನ್ನ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಕೈಂಕರ್ಯಗಳು ನಡೆದವು. ಮಹಾಮಂಗಳಾರತಿ ಜರುಗುವು ‌ಹೊತ್ತಿಗೆ ಮಧ್ಯಾಹ್ನವಾಯಿತು.

ADVERTISEMENT

ಅಲಂಕೃತ ತೆರೆದ ವಾಹನದಲ್ಲಿ ಗಣಪನನ್ನು ಕೂರಿಸುತ್ತಿದ್ದಂತೆ ‘ಗಣಪತಿ ಬಪ್ಪ ಮೋರಯಾ’, 'ಮಂಗಲ ಮೂರ್ತಿ ಮೋರಯಾ’, ‘ಜೈ ಶ್ರೀರಾಮ್’ ಜಯ ಘೋಷಗಳು ಅನುರಣಿಸಿದವು. ಯುವಕರ ಕೈಯಲ್ಲಿ ಕೇಸರಿ ಧ್ವಜಗಳು ಹಾರಾಡಿದವು. ಅಯೋಧ್ಯೆಯ ಬಾಲ ರಾಮನ ಮಾದರಿಯ ಮೂರ್ತಿಯೂ ಗಮನಸೆಳೆಯಿತು.

ಮೆರವಣಿಗೆಯು ಮಹರ್ಷಿ ವಾಲ್ಮೀಕಿ ವೃತ್ತ, ನೇತಾಜಿ ಸುಭಾಷ್ ವೃತ್ತ, ಶಾಸ್ತ್ರಿ ವೃತ್ತ, ಕೋರ್ಟ್ ರಸ್ತೆ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಕನಕ ವೃತ್ತ, ಡಾ.ಬಾಬು ಜಗಜೀವನರಾಂ ವೃತ್ತ, ಗಾಂಧಿ ವೃತ್ತ, ಚಕ್ಕರಕಟ್ಟ, ಮೈಲಾಪುರ ಅಗಸಿ ಮೂಲಕ ಸಾಗಿ ಬಳಿಕ ದೊಡ್ಡ ಕೆರೆಯವರೆಗೂ ಸಾಗಿತು.

ದೆಹಲಿಯಿಂದ ಬಂದಿದ್ದ ಹನುಮಂತ, ಜಾಂಬವಂತ, ನರಸಿಂಹ ಅವತಾರದ ಗೊಂಬೆಗಳ ಕುಣಿತ, ಡೊಳ್ಳು, ಚಂಡೆ, ತಮಟೆ, ಹುಲಿ ಕುಣಿತ, ಕರಾವಳಿಯ ನೃತ್ಯ ಶೋಭಾಯಾತ್ರೆಗೆ ಮೆರುಗು ತಂದುಕೊಟ್ಟವು. ಮಹಿಳೆಯರು ಮತ್ತು ಯುವತಿಯರು ಕೇಸರಿ ಶಾಲು, ಕೈಯಲ್ಲಿ ಕೇಸರಿ ಧ್ವಜ ಹಿಡಿದು ಚಂಡೆ, ತಮಟೆ ವಾದನಕ್ಕೆ ಕುಣಿಯುತ್ತಾ ಸಂಭ್ರಮಿಸಿದರು. 

ಶೋಭಾಯಾತ್ರೆಯಲ್ಲಿ ಡಿ.ಜೆ ಸಂಗೀತ ಪ್ರಮುಖ ಆಕರ್ಷಣೆಯಾಗಿತ್ತು. ಅಬ್ಬರಿಸುವ ಸಂಗೀತದಲ್ಲಿ ಸಾವಿರಾರು ಜನರು ಕುಣಿದಾಡಿದರು. ವೃತ್ತಗಳು, ಅಗಲವಾದ ರಸ್ತೆಗಳ ಅಲ್ಲಲ್ಲಿ ಕೇಸರಿ ಧ್ವಜಗಳನ್ನು ಹಿಡಿದ ಯುವಕರು, ಸುತ್ತಲೂ ತಿರುಗಿಸುತ್ತಿದ್ದರೆ ನೂರಾರು ಯುವಕರು ವೃತ್ತಾಕಾರವಾಗಿ ಕುಳಿತು ಜೈಯ ಘೋಷ ಹಾಕಿದರು. 

ಜಿಲ್ಲೆಯ ಮೂಲೆಮೂಲೆಯಿಂದ ಹರಿದುಬಂದ ಜನ ಗಜಮುಖನ ವೈಭವಕ್ಕೆ ಸಾಕ್ಷಿಯಾದರು. ಶೋಭಯಾತ್ರೆ ಸಾಗಿದ ರಸ್ತೆ ಎರಡೂ ಬದಿಯಲ್ಲಿ, ಕಟ್ಟಡಗಳ ಮೇಲೆ ಸಾರ್ವಜನಿಕರು ನಿಂತು ಯಾತ್ರೆಯ ಸಂಭ್ರವನ್ನು ಕಣ್ತುಂಬಿಕೊಂಡರು. ಕೆಲವರು ವಿಡಿಯೊಗಳನ್ನು ಮಾಡಿ ಬಂಧುಗಳೊಂದಿಗೆ ಹಂಚಿಕೊಂಡರೆ, ಮತ್ತೆ ಕೆಲವರು ಸೆಲ್ಫಿ ತೆಗೆದುಕೊಂಡರು. 

ಶೋಭಯಾತ್ರೆ ಸಾಗುವ ಮಾರ್ಗದಲ್ಲಿ ವಾಹನಗಳ ಸುಗಮ ಸಂಚಾರಕ್ಕಾಗಿ ಪೊಲೀಸರು ಸಾಹಸ ಪಡುತ್ತಿದ್ದರು. ಯಾತ್ರೆ ಸಾಗುವ ರಸ್ತೆಯ ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳ ಸಂಚಾರವನ್ನು ತಡೆದು, ಬೇರೊಂದು ರಸ್ತೆಗಳಲ್ಲಿ ತೆರಳುವಂತೆ ಸೂಚಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಯಿತು.

ಯಾದಗಿರಿಯಲ್ಲಿ ಶನಿವಾರ ನಡೆದ ಹಿಂದೂ ಮಹಾಗಣಪತಿ ಮೂರ್ತಿ ವಿಸರ್ಜನೆಯ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ
ಯಾದಗಿರಿಯಲ್ಲಿ ಶನಿವಾರ ಹಿಂದೂ ಮಹಾಗಣಪತಿ ಮೂರ್ತಿ ವಿಸರ್ಜನೆಯ ಶೋಭಾಯಾತ್ರೆಯಲ್ಲಿ ಹುಲಿ ಕುಣಿತ ಪ್ರದರ್ಶಿಸಿದ ಕಲಾವಿದರು

ಯಾದಗಿರಿಯಲ್ಲಿ ಶನಿವಾರ ನಡೆದ ಹಿಂದೂ ಮಹಾಗಣಪತಿ ಮೂರ್ತಿ ಶೋಭಾಯಾತ್ರೆಯಲ್ಲಿ ಕುಣಿದು ಸಂಭ್ರಮಿಸದ ಜನಸ್ತೋಮ   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.