ADVERTISEMENT

ಯಾದಗಿರಿ| ಹೂಗಾರ ಸಮುದಾಯದ ಬೇಡಿಕೆ ಸಿಎಂ ಗಮನಕ್ಕೆ ತರುವೆ: ಚನ್ನಾರೆಡ್ಡಿ ಪಾಟೀಲ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 6:21 IST
Last Updated 12 ನವೆಂಬರ್ 2025, 6:21 IST
ಯಾದಗಿರಿಯಲ್ಲಿ ಮಂಗಳವಾರ ನಡೆದ ಶರಣ ಹೂಗಾರ ಮಾದಯ್ಯ ಜಯಂತಿಯ ಮೆರವಣಿಗೆಯಲ್ಲಿ ಕುಂಭ ಹೊತ್ತ ಮಹಿಳೆಯರು
ಯಾದಗಿರಿಯಲ್ಲಿ ಮಂಗಳವಾರ ನಡೆದ ಶರಣ ಹೂಗಾರ ಮಾದಯ್ಯ ಜಯಂತಿಯ ಮೆರವಣಿಗೆಯಲ್ಲಿ ಕುಂಭ ಹೊತ್ತ ಮಹಿಳೆಯರು   

ಯಾದಗಿರಿ: ‘ಹೂಗಾರ ಸಮಾಜ ಶ್ರೇಷ್ಠ ಸಮಾಜವಾಗಿದ್ದು, ಗ್ರಾಮೀಣ ಭಾಗದಲ್ಲಿ ದೇವರ ಪೂಜೆಯನ್ನು ಮಾಡಿಕೊಂಡು ಸಾಗುತ್ತಿದ್ದಾರೆ. ಸಮಾಜದ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಮನಕ್ಕೆ ತರುತ್ತೇನೆ’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.

ಇಲ್ಲಿನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಅಖಿಲ ಕರ್ನಾಟಕ ಹೂಗಾರ ಮಹಾಸಭಾ ಸಂಘ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಶರಣ ಹೂಗಾರ ಮಾದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಸರ್ಕಾರಿ ಕಚೇರಿಗಳಲ್ಲಿ ಹೂಗಾರ ಮಾದಯ್ಯ ಅವರ ಜಯಂತಿ ಆಚರಿಸುವ ಬೇಡಿಕೆ ಇರಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ’ ಎಂದರು.

‘ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದರೆ ಸರ್ಕಾರವೂ ಕಣ್ಣು ತೆರೆದು ಸಮಾಜದ ಬೇಡಿಕೆಗಳಿಗೆ ಕಿವಿಯಾಗಲಿದೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಹೀಗಾಗಿ, ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿನ ಸಮಾಜದ ಮುಖಂಡರು ಆಯಾ ಶಾಸಕರನ್ನು ಭೇಟಿಯಾಗಿ, ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಬೇಕು’ ಎಂದು ಹೇಳಿದರು.

ADVERTISEMENT

‘ಸಮಾಜದ ಮುಖಂಡರು ಸಿಎ ನಿವೇಶನ ಗುರುತಿಸಿ ತಮ್ಮ ಹೆಸರಿಗೆ ಮಾಡಿಕೊಳ್ಳಬೇಕು. ಆ ಬಳಿಕ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು. ತಮ್ಮ ಸಮಾಜಕ್ಕೆ ಬೇಕಾದ ಅಗತ್ಯ ಸೌಕರ್ಯಗಳನ್ನು ನೀಡಲು ಸದಾ ಸಿದ್ಧವಾಗಿದ್ದೇನೆ’ ಎಂದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಹೂಗಾರ ಮಾತನಾಡಿ, ‘ಪ್ರತಿ ಊರಿನಲ್ಲಿ ಹೂಗಾರ ಸಮಾಜದ ನಾಲ್ಕೈದು ಮನೆಗಳು ಇರುತ್ತವೆ. ಹನುಮಾನ ಮಂದಿರದಲ್ಲಿ ಪೂಜೆ ಕಾರ್ಯದಲ್ಲಿ ತೊಡಗಿ, ಹೂವುಗಳನ್ನು ಕಟ್ಟಿ ಮನೆ–ಮನೆಗೆ ಕೊಡುವ ಕಾಯಕದಲ್ಲಿ ನಿರತವಾಗಿದ್ದೇವೆ’ ಎಂದರು.

‘ಅತ್ತ ಮೇಲ್ವರ್ಗವಲ್ಲದ, ಇತ್ತ ಕೆಳವರ್ಗವಲ್ಲದ ಹೂಗಾರ ಸಮಾಜವು ಮಧ್ಯದಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ಸಾಂವಿಧಾನಿಕ ಸವಲತ್ತುಗಳು ಹಾಗೂ ಸರ್ಕಾರದ ಯೋಜನೆಗಳಿಂದ ವಂಚಿತ ಆಗುತ್ತಿದ್ದೇವೆ. ನಮ್ಮಿಂದ ಮತಗಳನ್ನು ಪ‍ಡೆದ ಸರ್ಕಾರಗಳು ಸಹ ನಮ್ಮ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರತಿ ಸರ್ಕಾರ ಬಂದಾಗ ನಾವು ಮತಗಳನ್ನು ಹಾಕುತ್ತಿದ್ದೇವೆ. ದಲಿತರ ನೋವುಗಳು ಕಾಣಿಸುತ್ತಿವೆ. ಆದರೆ, ಹಿಂದುಳಿದ ವರ್ಗದಲ್ಲಿರುವ ನಮ್ಮ ಸಣ್ಣ ಸಮಾಜದ ನೋವುಗಳನ್ನು ಜನಪ್ರತಿನಿಧಿಗಳ ಕಣ್ಣಿಗೆ ಕಾಣಿಸುತ್ತಿಲ್ಲ. ನಮಗೆ ಆರ್ಥಿಕ, ಸಾಮಾಜಿಕ, ರಾಜಕೀಯ ಶಕ್ತಿ ಇಲ್ಲ, ಜನಸಂಖ್ಯೆಯ ಬಲವೂ ಇಲ್ಲ. ಹೂವುಗಳನ್ನು ಕಟ್ಟಿ ಮಾರುವುದು ಬಿಟ್ಟರೆ ಬೇರೆ ವೃತ್ತಿ ಗೊತ್ತಿಲ್ಲ’ ಎಂದರು.

‘ಸಮಾಜದ ಏಳಿಗೆಗೆ ಜಿಲ್ಲಾ ಕೇಂದ್ರ ಸೇರಿದಂತೆ ಪ್ರತಿಯೊಂದು ತಾಲ್ಲೂಕು ಕೇಂದ್ರದಲ್ಲಿ ಹೂಗಾರ ಸಮುದಾಯ ಭವನಕ್ಕೆ ನಿವೇಶನಗಳನ್ನು ನೀಡಿ, ಸಮುದಾಯ ಭವನಗಳಿಗೆ ಅನುದಾನವೂ ನೀಡಬೇಕು. ಘೋಷಣೆಯಾಗಿರುವ ಹೂಗಾರ ಅಭಿವೃದ್ಧಿ ನಿಗಮಕ್ಕೆ ₹ 100 ಕೋಟಿ ಅನುದಾನ ನೀಡಬೇಕು. ಸರ್ಕಾರಿ ಕಚೇರಿಗಳಲ್ಲಿ ಹೂಗಾರ ಮಾದಯ್ಯ ಜಯಂತಿ ಆಚರಣೆ ಮಾಡಬೇಕು’ ಎಂದು ಮನವಿ ಮಾಡಿದರು.

ಮುದನೂರಿನ ಕೋರಿಸಿದ್ದೇಶ್ವರ ಶಾಖಾ ಮಠದ ಸಿದ್ದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಹೆಡಗಿಮದ್ರಾ ಶಾಂತಮಲ್ಲಿಕಾರ್ಜುನ ಪಂಡಿತರಾಧ್ಯ ಶಿವಾಚಾರ್ಯರು, ಅಬ್ಬೆತುಮಕೂರಿನ ವಿಶ್ವಾರಾಧ್ಯ ಸಿದ್ದಸಂಸ್ಥಾನದ ಶಿವಶೇಖರ ಸ್ವಾಮೀಜಿ, ಶಹಾಪುರ ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ, ಚರಬಸವೇಶ್ವರ ಸಂಸ್ಥಾನದ ಶರಣು ಜಿ. ಗದ್ದಿಗೆ, ಮಹಾಲಕ್ಷ್ಮಿ ಶಕ್ತಿಪೀಠ ನದಿಸಿನ್ನೂರಿನ ಗುರುದೇವ ಶರಣರು, ಬೆಂಗಳೂರಿನ ಚೇತನ ಗೂರುಜಿ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಭೀಮಣ್ಣ ಹೂಗಾರ, ಮೈಲಾರಲಿಂಗೇಶ್ವರ ದೇವಸ್ಥಾನದ ಪೀಠಾಧಿಪತಿ ಶರಣಪ್ಪ ಪೂಜಾರ, ಪಟ್ಟದ ಪೂಜಾರಿ ಗಿರಿಮಲ್ಲಪ್ಪ ಪೂಜಾರ, ಬಸವಣ್ಣ ದೇವಸ್ಥಾನದ ಚನ್ನ‍ಪ್ಪ ಪೂಜಾರಿ, ಬಿಜೆಪಿ ಮುಖಂಡ ರಾಚಣ್ಣಗೌಡ ಮುದ್ನಾಳ, ಸಂಘದ ಪ್ರಮುಖರಾದ ಸಂಗಮೇಶ ಹೂಗಾರ, ಮಾನಪ್ಪ ಹೂಗಾರ, ಸೂರ್ಯಕಾಂತ ಪುಲಾರಿ, ಪ್ರಕಾಶ ಪುಲಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಂಘದ ಗೌರವ ಅಧ್ಯಕ್ಷ ಖಂಡಪ್ಪ ಪೂಜಾರ ಸ್ವಾಗತಿಸಿದರು.

ಅದ್ದೂರಿ ಮೆರವಣಿಗೆ

ನಗರದ ಪದವಿ ಕಾಲೇಜು ಸಮೀಪದಿಂದ ಅಲಂಕೃತ ವಾಹನದಲ್ಲಿ ಶರಣ ಹೂಗಾರ ಮಾದಯ್ಯ ಭಾವಚಿತ್ರದ ಮೆರವಣಿಗೆಯು ಅದ್ದೂರಿಯಾಗಿ ನಡೆಯಿತು. ಖಾಸಾಮಠದ ಶಾಂತವೀರ ಮುರುಘಾರಾಜೇಂದ್ರ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಡಿ.ಜೆ. ಹಾಡುಗಳಿಗೆ ಯುವಕರು ಕುಣಿದು ಕುಪ್ಪಳಿಸಿದರು. ನೇತಾಜಿ ಸುಭಾಷ್ ವೃತ್ತದಲ್ಲಿ ಹೂಗಾರ ಮಾದಯ್ಯ ಅವರ ಬೃಹತ್ ಭಾವಚಿತ್ರಕ್ಕೆ ಕ್ರೇನ್ ಮೂಲಕ ಹಾರ ಹಾಕಿ ಪುಷ್ಪದಳ ಹಾಕಲಾಯಿತು.  ಡೊಳ್ಳು ವಾದನ ಲೇಜಿಮ್ ಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಗಮನ ಸೆಳೆದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.