ಯಾದಗಿರಿಯಲ್ಲಿ ಸೋಮವಾರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಯಾದಗಿರಿ: ‘ಸರ್ವಶ್ರೇಷ್ಠ ಸಂವಿಧಾನದಿಂದಾಗಿ ಭಾರತವು ಅತ್ಯುತ್ತಮ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಅಭಿವೃದ್ಧಿ ಹೊಂದುತ್ತಿದೆ’ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೇಳಿದರು.
ಇಲ್ಲಿನ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಸೋಮವಾರ ‘ನನ್ನ ಮತ ನನ್ನ ಹಕ್ಕು’ ಶೀರ್ಷಿಕೆಯಡಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸೇರಿ ಹಲವು ಪ್ರಜ್ಞಾವಂತ ನಾಯಕರ ಪ್ರಯತ್ನದ ಫಲವಾಗಿ ವಿಶ್ವ ಶ್ರೇಷ್ಠವಾದ ಸಂವಿಧಾನ ನಮಗೆ ದೊರೆತಿದೆ. ಭಿನ್ನತೆ ಹಾಗೂ ಅಸಮಾನತೆ ಹೋಗಲಾಡಿಸಲು ಸಂವಿಧಾನವು ಸಾಮಾಜಿಕ, ರಾಜಕೀಯ, ಧಾರ್ಮಿಕ, ಆರ್ಥಿಕ ಮತ್ತು ಸಮಾನತೆಯ ನ್ಯಾಯವನ್ನು ಒದಗಿಸಿದೆ. ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದೇವೆ’ ಎಂದರು.
‘ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಭಾರತವು ತನ್ನದೆಯಾದ ಘನತೆಯನ್ನು ಕಾಯ್ದುಕೊಂಡಿದೆ. ಪಾಕಿಸ್ತಾನ್,ಬಾಂಗ್ಲಾ, ಶ್ರೀಲಂಕಾ, ಆಫ್ರಿಕಾದ ರಾಷ್ಟ್ರಗಳು ಪ್ರಜಾಪ್ರಭುತ್ವ ಉಳಿಸಿಕೊಳ್ಳುವಲ್ಲಿ ವಿಫಲವಾಗಿವೆ’ ಎಂದು ಹೇಳಿದರು.
‘ಸಂವಿಧಾನವು ನಮಗೆ ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಕೊಟ್ಟಿದೆ. ಆಡಳಿತ ಅಧಿಕಾರಿಗಳ ಮೂಲಕ ಜನರಿಗೆ ಸೇವೆ ಕಲ್ಪಿಸಲು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಅವಕಾಶ ಕಲ್ಪಿಸಿದೆ. ನಾಗರಿಕರು ತಮ್ಮ ಕರ್ತವ್ಯ ನಿಭಾಯಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಸಮಗ್ರ ಜ್ಞಾನ ಹಾಗೂ ಜಾಗೃತಿ ಹೊಂದಬೇಕು’ ಎಂದರು.
‘ಯುವಕರು ಅರ್ಹರು ಮತದಾರರ ಗುರುತಿನ ಚೀಟಿ ಪಡೆಯುವುದರ ಜೊತೆಗೆ ಚುನಾವಣೆಗಳಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು’ ಎಂದು ಸಲಹೆ ನೀಡಿದರು.
ಸಂವಿಧಾನದ ಪೀಠಿಕೆ ಬೋಧಿಸಿ ಮಾತನಾಡಿದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ‘ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವು ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯವನ್ನು ಹೆಚ್ಚಿಸಿದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದಂತಹ ಆದರ್ಶಗಳು ಸಂವಿಧಾನದ ಭಾಗವಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಎಲ್ಲರೂ ಸಂವಿಧಾನ ಬದ್ಧವಾಗಿ ನಡೆದು ಗೌರವ ಸಲ್ಲಿಸಬೇಕು’ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಡೆದ ಬೈಕ್ ರ್‍ಯಾಲಿಯಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ, ಎಸ್‌ಪಿ ಪೃಥ್ವಿಕ್ ಶಂಕರ್ ಸೇರಿ ಹಲವರು ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿ.ಪಂ. ಸಿಇಒ ಲವೀಶ್ ಒರಡಿಯಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ, ಡಿಡಿಪಿಐ ಚನ್ನಬಸಪ್ಪ ಮುಧೋಳ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಶಂಭುಲಿಂಗ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.