ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಲ್ಲಿ ಐಪಿಎಲ್ ಬೆಟ್ಟಿಂಗ್ ಕಾವೇರಿದ್ದು, ಆನ್‌ಲೈನ್ ಮೂಲಕ ಹಣ ತೊಡಗಿಸುವುದು ಕಂಡುಬರುತ್ತಿದೆ.
ಜಿಲ್ಲೆಯ ಶಹಾಪುರ, ಸುರಪುರ ತಾಲೂಕಿನಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿದೆ. ಐಪಿಎಲ್ ಬೆಟ್ಟಿಂಗ್ ಆನ್‌ಲೈನ್ ಗೇಮ್ ಹಾವಳಿಯಿಂದ ಯುವಜನತೆ ಅಡ್ಡದಾರಿ ಹಿಡಿದು ಹಾಳಾಗುತ್ತಿದ್ದು, ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.
ನಗರ ಪ್ರದೇಶಗಳ ಜೊತೆಗೆ ಗ್ರಾಮೀಣ ಪ್ರದೇಶದಲ್ಲೂ ಈಗ ಬೆಟ್ಟಿಂಗ್ ಹಾವಳಿ ಕಾವೇರಿದೆ. ಶಾಲಾ–ಕಾಲೇಜುಗಳಿಗೆ ರಜೆ ನೀಡಿದ್ದೂ ವಿದ್ಯಾರ್ಥಿಗಳು ಐಪಿಎಲ್ ಬೆಟ್ಟಿಂಗ್ ಆ್ಯಪ್‌ಗಳನ್ನು ತಡಕಾಡುತ್ತಿದ್ದಾರೆ ಎನ್ನುವ ಮಾಹಿತಿ ಬಂದಿದೆ.
ಮೊಬೈಲ್ ಜಪ್ತಿ
ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಲಾಗಿದೆ. Cric365DAY ಆ್ಯಪ್‌ನಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ದಂಧೆಕೋರರು, ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ವೇಳೆ ಪೊಲೀಸರು ಭರ್ಜರಿ ದಾಳಿ ಮಾಡಿದ್ದಾರೆ.
‘ಸುಶಿಕ್ಷಿತ ಯುವಕರು ಶಿಕ್ಷಣ ಮುಗಿದ ನಂತರ ಕೆಲಸವಿಲ್ಲದೇ ಖಾಲಿ ಕುಳಿತಿರುವಾಗ ಮೊದಮೊದಲು ಟೈಮ್ ಪಾಸ್‌ಗಾಗಿ ಇಂತಹ ಆಟಗಳಿಗೆ ಹೋಗುತ್ತಿದ್ದಾರೆ. ಬರುಬರುತ್ತಾ ಈ ಆಟ ಚಟವಾಗಿ ಪರಿವರ್ತನೆಯಾಗುತ್ತಿದೆ. ಮೇಲಾಗಿ ಸಾಮಾಜಿಕ ಜಾಲತಾಣ ಹಿಡಿದು ಎಲ್ಲೆಡೆ ಇಂತಹ ಆನ್‌ಲೈನ್ ಗೇಮಿಂಗ್ ಜಾಹೀರಾತುಗಳು ಯುವಕರನ್ನು ದಾರಿ ತಪ್ಪಿಸುವ ಮಹತ್ತರ ಕೆಲಸ ಮಾಡುತ್ತಿವೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮುದುಕಪ್ಪ ಚಾಮನಳ್ಳಿ.
ಜಿಲ್ಲೆಯಲ್ಲಿ ಐಪಿಎಲ್ ಬೆಟ್ಟಿಂಗ್ ಸಂಬಂಧಿಸಿದಂತೆ 9 ಪ್ರಕರಣಗಳನ್ನು ದಾಖಲಿಸಲಾಗಿದೆ. ಅದರಲ್ಲೂ ಶಹಾಪುರ ಸುರಪುರ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ-ಪೃಥ್ವಿಕ್ ಶಂಕರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಇತ್ತೀಚೆಗೆ ಎಲ್ಲ ವಿಧದ ಜೂಜುಗಳ ಹಾವಳಿ ಹೆಚ್ಚಾಗುತ್ತಿದ್ದು ಯುವಜನತೆ ಅದರಲ್ಲೂ ಗ್ರಾಮೀಣ ಯುವಕರು ಇಂತಹ ಚಟಗಳಿಗೆ ಈಡಾಗುತ್ತಿದ್ದಾರೆ. ಕೂಡಲೇ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು-ಮುದುಕಪ್ಪ ಚಾಮನಳ್ಳಿ ಸಾಮಾಜಿಕ ಕಾರ್ಯಕರ್ತ
₹41 ಲಕ್ಷ ವಶ
ಜಿಲ್ಲೆಯಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆಗೆ ಸಂಬಂಧಿಸಿದಂತೆ ₹41 ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ. ಒಂದು ಲಕ್ಷ ನಗದು ₹40 ಲಕ್ಷ ಬ್ಯಾಂಕಿಂಗ್ ಮೂಲಕ ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಆನ್‌ಲೈನ್ ಬುಕಿಂಗ್ ಬುಕಿಗಳ ವಿರುದ್ಧ ಪೊಲೀಸರು ಅಲ್ಲಲ್ಲಿ ಪ್ರಕರಣ ದಾಖಲಿಸುತ್ತಿದ್ದಾರೆ. ಈಗಾಗಲೇ ಪೊಲೀಸರು ಬುಕ್ಕಿಗಳನ್ನು ಹುಡುಕಲು ಲೊಕೇಶನ್ ಟ್ರ್ಯಾಕ್ ಮಾಡುತ್ತಿದ್ದಾರೆ. ಕೆಲವರು ವಿಜಯಪುರ ರಾಯಚೂರು ಸೇರಿದಂತೆ ಗೋವಾಗೆ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.