ADVERTISEMENT

ಯಾದಗಿರಿ | ಮುಂಗಾರು ಮುನಿಸು; ರೈತ ಕಂಗಾಲು

​ಪ್ರಜಾವಾಣಿ ವಾರ್ತೆ
Published 17 ಜುಲೈ 2023, 5:21 IST
Last Updated 17 ಜುಲೈ 2023, 5:21 IST
ಶಹಾಪುರ ತಾಲ್ಲೂಕಿನಲ್ಲಿ ಮಳೆಯಿಲ್ಲದ ಬಿತ್ತನೆ ಮಾಡಿದ ಜಮೀನಿನಲ್ಲಿ ರಂಟೆ ಹೊಡೆಯುತ್ತಿರುವ ರೈತ
ಶಹಾಪುರ ತಾಲ್ಲೂಕಿನಲ್ಲಿ ಮಳೆಯಿಲ್ಲದ ಬಿತ್ತನೆ ಮಾಡಿದ ಜಮೀನಿನಲ್ಲಿ ರಂಟೆ ಹೊಡೆಯುತ್ತಿರುವ ರೈತ   

ಟಿ.ನಾಗೇಂದ್ರ

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಜೂನ್ ಮೊದಲ ವಾರದಲ್ಲಿ ಒಂದಿಷ್ಟು ಮಳೆ ಬಂದಾಗ ಭರವಸೆಯ ಮೇಲೆ ನಂಬಿಕೆ ಇಟ್ಟು ರೈತರು ಹತ್ತಿ ಬಿತ್ತನೆ ಮಾಡಿದ್ದರು. ಈಗ ಮುಂಗಾರು ಮುನಿಸಿಕೊಂಡಿದ್ದರಿಂದ ರೈತರು ಆತಂಕಗೊಂಡಿದ್ದಾರೆ.

ತಾಲ್ಲೂಕಿನಲ್ಲಿ ಜೂನ್ ಮತ್ತು ಜುಲೈ 14ವರೆಗೆ 175 ಮಿ.ಮೀ ಮಳೆ ನಿರೀಕ್ಷೆ ಮಾಡಲಾಗಿತ್ತು. ಆದರೆ 114 ಮಿ. ಮೀ ಮಳೆಯಾಗಿದ್ದು, ಶೇ.35ರಷ್ಟು ಕೊರತೆ ಮಳೆಯಾಗಿದೆ. ಅದರಂತೆ ವಡಗೇರಾ ತಾಲ್ಲೂಕಿನಲ್ಲಿ 121 ಮಿ.ಮೀ ಮಳೆಯಾಗಬೇಕಾಗಿತ್ತು. 108 ಮಿ.ಮೀ ಮಳೆಯಾಗಿದ್ದು ಶೇ.11ರಷ್ಟು ಕೊರತೆ ಮಳೆಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸುನಿಲಕುಮಾರ ಯರಗೋಳ ತಿಳಿಸಿದರು.

ADVERTISEMENT

ಅಲ್ಲದೇ ತಾಲ್ಲೂಕಿನಲ್ಲಿ 1,400 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಗುರಿ ಹೊಂದಲಾಗಿತ್ತು. ಅದರಲ್ಲಿ ಕೇವಲ 3,550 ಹೆಕ್ಟೇರ್ ಬಿತ್ತನೆಯಾಗಿದೆ. 38,798 ಹೆಕ್ಟೇರ್‌ ಭೂಮಿಯಲ್ಲಿ ಹತ್ತಿ ಬಿತ್ತನೆ ಗುರಿಯಲ್ಲಿ 20,540 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.

‘ರೈತರ ಪಾಲಿನ ಚಿನ್ನದ ಬೆಳೆಯಾಗಿರುವ, ಅಲ್ಪ ಅವಧಿಯಲ್ಲಿ ಕೈಗೆ ಬರುತ್ತಿದ್ದ ಹೆಸರು ಬೆಳೆಯನ್ನು ಕೇವಲ 1,500 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಮಾಡಿದ್ದೆವು. ಈಗ ಮಳೆ ಕೊರತೆಯಿಂದ ಬೆಳೆ ಬಾಡಿ ಹೋಗುತ್ತಲಿದೆ. ಮಳೆ ಬಂದರೂ ಬೆಳೆ ಕೈಗೆ ಬರುವ ಲಕ್ಷಣ ಕಾಣುತ್ತಿಲ್ಲ’ ಎನ್ನುತ್ತಾರೆ ರೈತ ಶಿವಪ್ಪ.

‘ಮಳೆ ಕೊರತೆಯ ನಡುವೆ 25 ದಿನದ ಹಿಂದೆ ಹತ್ತಿ ಬೀಜ ಬಿತ್ತನೆ ಮಾಡಿದ್ದೇವೆ. ಒಂದು ಉತ್ತಮ ಮಳೆ ಬಂದರೆ ಸಾಕು ಬೆಳೆ ನಾಟಿ ಬರುತ್ತದೆ. ಇನ್ನೊಂದು ಮಳೆ ಕೃಪೆ ತೋರಿದರೆ ಸಾಕು. ಕಾಲುವೆ ನೀರು ಬರುತ್ತವೆ ಎಂಬ ವಿಶ್ವಾಸದ ಮೇಲೆ ಒಂದು ಪಾಕೇಟ್ ಬೀಜಕ್ಕೆ ₹7,500 ನೀಡಿ ಬಿತ್ತನೆ ಮಾಡಿದ್ದೇವೆ. ಈಗ ಒಣ ಹವೆ ಮುಂದುವರಿದಿದೆ. ಬೀಜ ಒಣಗುವ ಆತಂಕ ಶುರುವಾಗಿದೆ. ಆಲಮಟ್ಟಿ ಮತ್ತು ನಾರಾಯಣಪುರ ಆಣೆಕಟ್ಟಿನಲ್ಲಿ ನೀರಿನ ಸಂಗ್ರಹವು ಇಲ್ಲ. ಕಾಲುವೆಗೆ ನೀರು ಬಿಡುವ ಸಮಯ ಹೆಚ್ಚು ದಿನ ತೆಗೆದುಕೊಳ್ಳುವ ಭೀತಿ ಶುರುವಾಗಿದೆ’ ಎನ್ನುತ್ತಾರೆ ರೈತ ಮಾನಯ್ಯ.

ಮೂರು ವರ್ಷ ಸಮೃದ್ದಿ ಮಳೆಯನ್ನು ಕಂಡಿದ್ದ ರೈತರಿಗೆ ಪ್ರಸಕ್ತ ಮುಂಗಾರು ಮುನಿಸಿಕೊಂಡಿದೆ. ಅಂತರ್ಜಲ ಮಟ್ಟವು ಕುಸಿತವಾಗಿದೆ. ಕೊಳವೆಬಾವಿ ನೀರಿಲ್ಲದ ಒಣಗುತ್ತಲಿವೆ. ಹಳ್ಳ ಬತ್ತಿವೆ. ಬರದ ಛಾಯೆ ಆವರಿಸಿದೆ. ಮುಂದೇನು ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ಬರ ಘೋಷಣೆ ಮಾಡಿ

ಈಗಾಗಲೇ ಮುಂಗಾರು ಎರಡು ತಿಂಗಳು ಕಳೆದು ಹೋಗಿದೆ. ನೆರೆ ಮಹಾರಾಷ್ಟ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಇರುವುದರಿಂದ ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಕುಸಿತವಾಗಿದೆ. ಮುಂಗಾರು ಬೆಳೆಗೆ ನೀರು ಸಿಗುವುದು ಅನುಮಾನ ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ಸರ್ಕಾರ ಎಚ್ಚೆತ್ತುಕೊಂಡು ರೈತರಿಗೆ ಲಘು ಬೆಳೆಯನ್ನು ಮಾತ್ರ ಬಿತ್ತನೆ ಮಾಡಬೇಕು ಎಂಬ ಜಾಗೃತಿ ಮೂಡಿಸಬೇಕು. ಬರ ಘೋಷಣೆ ಮಾಡಿ ಬರ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಬಿಜೆಪಿಯ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.