
ಶಹಾಪುರ: ‘ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ಮೂಲಕ ಬೇಸಿಗೆ ಹಂಗಾಮಿನ ಬೆಳೆಗೆ ಏಪ್ರೀಲ್ 3 ತನಕ ನೀರು ಹರಿಸಲು ಶುಕ್ರವಾರ ಬೆಂಗಳೂರಿನಲ್ಲಿ ಸಭೆ ಸೇರಿದ್ದ ನೀರಾವರಿ ಸಲಹಾ ಸಮಿತಿ ನಿರ್ಣಯ ತೆಗೆದುಕೊಂಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
‘ಕಾಲುವೆಗೆ 14 ದಿನ ನಿರಂತರ ಹರಿಸಿ ನಂತರ 10 ದಿನ ನೀರು ಸ್ಥಗಿತಗೊಳಿಸಲಾಗುವುದು. ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದಲ್ಲಿ ನೀರಿನ ಲಭ್ಯತೆ ಇದೆ. ಆದರೆ ರೈತರು ಕಾಲುವೆ ನೀರು ಸ್ಥಗಿತಗೊಳಿಸುವ ಅವಧಿಯ ಒಳಗಡೆ ಬರುವ ಬೆಳೆಯನ್ನು ಮಾತ್ರ ಹಾಕಿದರೆ ಯಾವುದೇ ತೊಂದರೆ ಇಲ್ಲ. ಅನವಶ್ಯಕವಾಗಿ ವಿಳಂಭ ಮಾಡಿ ಬಿತ್ತನೆ ಮಾಡಿದರೆ ಮತ್ತೆ ನೀರಿನ ಸಮಸ್ಯೆ ಉಂಟಾಗಬಹುದು. ಕಾಲ ಮೀತಿಯಲ್ಲಿ ಬೇಸಿಗೆ ಹಂಗಾಮಿನ ಬೆಳೆ ಬೆಳೆಯಬೇಕು’ ಎಂದು ಅವರು ರೈತರಲ್ಲಿ ಮನವಿ ಮಾಡಿದರು.
‘ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಹತ್ತಿ ಹಾಗೂ ಮೆಣಸಿನಕಾಯಿ ಬೆಳೆದ ರೈತರು ತುಂಬಾ ತೊಂದರೆಗೆ ಸಿಲುಕಿದ್ದಾರೆ. ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿವೆ. ಕೊನೆ ಪಕ್ಷ ಏಪ್ರೀಲ್ 15ತನಕ ಬೇಸಿಗೆ ಹಂಗಾಮಿನ ಬೆಳೆಗೆ ನೀರು ಹರಿಸಿದರೆ ಅನುಕೂಲವಾಗುತ್ತದೆ’ ಎಂದು ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ತಿಳಿಸಿದರು.
‘ಕಾಲುವೆ ಜಾಲದಲ್ಲಿ ಈಗ ಭತ್ತ ಕಟಾವ್ ಭರದಿಂದ ಸಾಗಿದೆ. ಇನ್ನೂ ಮುಂಗಾರು ಹಂಗಾಮಿನ ಪ್ರಕ್ರಿಯೆ ಮುಗಿಯಬೇಕಾದರೆ 20 ದಿನ ಬೇಕಾಗುತ್ತದೆ. ಭತ್ತ ನಾಟಿಗಾಗಿ ಕೆಲ ಭಾಗದಲ್ಲಿ ಸಸಿಗಳನ್ನು ಸಿದ್ಧಪಡಿಸಿಕೊಳ್ಳಲು ರೈತರು ನಿರತರಾಗಿದ್ದಾರೆ. ನಂತರ ಜಮೀನು ಹದಗೊಳಿಸಿ ಬೇಸಿಗೆ ಹಂಗಾಮಿನ ಬೆಳೆ ಬಿತ್ತನೆಗೆ ಸಜ್ಜು ಆಗಬೇಕು ಎಂದರೆ ಒಂದು ತಿಂಗಳು ಬೇಕಾಗುತ್ತದೆ. ಮತ್ತೆ ಕಾಲುವೆಗೆ ನೀರು ಹರಿಸಿ ಎಂಬ ಹೋರಾಟ ನಡೆಸುವುದು ಇಲ್ಲಿ ಸಾಮಾನ್ಯವಾಗಿ ಬಿಟ್ಟಿದೆ ’ಎನ್ನುತ್ತಾರೆ ನೀರು ವಂಚಿತ ಕೆಳಭಾಗದರ ರೈತರು.
‘ಹತ್ತಿ ಕೀಳಿದ ರೈತರು ಜಮೀನು ಹದಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಬೇಸಿಗೆ ಹಂಗಾಮಿನ ಬೆಳೆಯಾಗಿ ಸಜ್ಜೆ, ಶೇಂಗಾ ಬಿತ್ತನೆ ಮಾಡಲು ಸಜ್ಜುಗೊಂಡಿದ್ದಾರೆ. ನಮಗೆ 120 ದಿನದ ಬೆಳೆಯಾಗಿದ್ದು ಮಾರ್ಚ್ ತಿಂಗಳು ತನಕ ನೀರು ಬಂದರೆ ಸಾಕು ಬೆಳೆ ಕೈಗೆ ಬರುತ್ತದೆ’ ಎನ್ನುತ್ತಾರೆ ಶೇಂಗಾ ಬಿತ್ತನೆ ಮಾಡಲು ಸಿದ್ದಗೊಂಡಿರುವ ರೈತ ಹಣಮಂತರಾಯ.
ಬೇಸಿಗೆ ಹಂಗಾಮಿನ ಬೆಳೆಗೆ ಸಾಕಾಗುವಷ್ಟು ದಿನ ಕಾಲುವೆ ನೀರು ಹರಿಸಲಾಗುತ್ತದೆ. ರೈತರು ಅನವಶ್ಯಕವಾಗಿ ನೀರು ಪೋಲು ಮಾಡದೆ ಮಿತವಾಗಿ ಬಳಕೆ ಮಾಡಿಕೊಳ್ಳುವದರ ಜತೆಗೆ ಕಾಲುವೆ ಜಾಲದ ಕೆಳಭಾಗದ ರೈತರಿಗೂ ನೀರು ದೊರಕುವಂತೆ ಮಾಡಿಶರಣಬಸಪ್ಪ ದರ್ಶನಾಪುರ ಸಚಿವ
ನೀರು ಭತ್ತ ಲಾಭಿ ಜೋರು...!
ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ನಿಷೇಧಿತ ಬೆಳೆಯಾಗಿರುವ ಭತ್ತ ನಾಟಿಗೆ ಕಾಲುವೆ ಮೇಲ್ಭಾಗದ ರೈತರ ಲಾಭಿ ಜೋರಾಗಿದೆ. ಬೇಸಿಗೆ ಹಂಗಾಮಿನ ಬೆಳೆಯಾಗಿ ಭತ್ತ ನಾಟಿ ಮಾಡಿದರೆ ಕನಿಷ್ಠ ಏಪ್ರೀಲ್ 20ತನಕ ನೀರು ಬೇಕಾಗುತ್ತದೆ. ಅದರಲ್ಲಿ ಬಿಸಿಲು ಹೆಚ್ಚಾದರೆ ನೀರಿನ ಬೇಡಿಕೆ ಅಧಿಕವಾಗುತ್ತದೆ. ಆಗ ರೈತರು ಪ್ರತಿ ವರ್ಷದಂತೆ ಮತ್ತೆ ಅದೇ ರಾಗ ಅದೇ ಹಾಡು ಎನ್ನುವಂತೆ ಕಾಲುವೆಗೆ ನೀರು ಹರಿಸುವಂತೆ ರೈತರ ಪ್ರತಿಭಟನೆ ಧರಣಿ ಹೋರಾಟ ನಡೆಸುವುದು ಸಾಮಾನ್ಯ ಸಂಗತಿಯಾಗಿದೆ’ ಎಂದು ಕಾಲುವೆ ಜಾಲದ ನೀರು ವಂಚಿತ ರೈತರು ಆರೋಪಿಸಿದ್ದಾರೆ. ‘ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯವು ಕೇವಲ ಕಾಗದದಲ್ಲಿ ಮಾತ್ರ ಉಳಿಯುತ್ತದೆ. ಭತ್ತ ಬೆಳೆಗೆ ಮಾತ್ರ ಹೆಚ್ಚು ದಿನ ನೀರು ಬೇಕಾಗುವ ಉದ್ದೇಶದಿಂದ ರೈತರ ಹೆಸರಿನ ಮುಖಂಡರು ಒತ್ತಡ ಹಾಕುತ್ತಾರೆ. ಆದರೆ ನೀರು ವಂಚಿತ ಅದೇ ಕಾಲುವೆ ಜಾಲದ ರೈತರ ಗೋಳು ಅರಣ್ಯರೋಧನವಾಗಿದೆ’ ಎಂಬ ಬೇಸರವನ್ನು ಕಾಲುವೆ ನೀರು ವಂಚಿತ ರೈತ ಸಾಯಿಬಣ್ಣ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.