ADVERTISEMENT

ಕ್ರೀಡಾ ಹಾಸ್ಟೆಲ್‌ನಲ್ಲಿ ಪಡಿತರ ಅಕ್ಕಿ ಪತ್ತೆ; ನೋಟಿಸ್‌

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 5:07 IST
Last Updated 30 ಅಕ್ಟೋಬರ್ 2025, 5:07 IST
ಯಾದಗಿರಿಯ ಕ್ರೀಡಾ ವಸತಿ ನಿಲಯಕ್ಕೆ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು
ಯಾದಗಿರಿಯ ಕ್ರೀಡಾ ವಸತಿ ನಿಲಯಕ್ಕೆ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಯಾದಗಿರಿ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಇರುವ ಕ್ರೀಡಾ ವಸತಿ ನಿಲಯದಲ್ಲಿ ಪಡಿತರ ಅಕ್ಕಿ ಪತ್ತೆಯಾಗಿದ್ದು, ಕಾರಣ ಕೇಳಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಆಹಾರ ಪೂರೈಕೆದಾರರಿಗೆ ನೋಟಿಸ್ ಕೊಟ್ಟಿದ್ದಾರೆ.

ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅವರು ಈಚೆಗೆ ಕ್ರೀಡಾ ವಸತಿ ನಿಲಯಕ್ಕೆ ಭೇಟಿ ನೀಡಿ, ಅಲ್ಲಿವ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದ್ದರು. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವ್ಯವಸ್ಥೆ ಇಲ್ಲದಕ್ಕೆ ವಾರ್ಡನ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಹಾಸ್ಟೆಲ್‌ನಲ್ಲಿ ಪಡಿತರ ಅಕ್ಕಿಯೂ ಪತ್ತೆಯಾಗಿತ್ತು.

ಈ ಬಗ್ಗೆ ವಾರ್ಡನ್‌ ಅವರನ್ನು ಪ್ರಶ್ನಿಸಿದ ಅಧ್ಯಕ್ಷರು, ಆಹಾರ ಇಲಾಖೆಯ ಡಿ.ಡಿ. ಅವರನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಹೇಳಿದರು. ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಬುಧವಾರ ಭೇಟಿ ನೀಡಿದರು. ಹಾಸ್ಟೆಲ್‌ನಲ್ಲಿ ಪತ್ತೆಯಾದ ಪಡಿತರ ಅಕ್ಕಿಯ ಮಾದರಿಯನ್ನು ಪಡೆದರು.

ADVERTISEMENT

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ ಅವರು ಹಾಸ್ಟೆಲ್‌ಗೆ ಆಹಾರದ ಧಾನ್ಯಗಳನ್ನು ಪೂರೈಸುವ ಟೆಂಡರ್ ಪಡೆದಿರುವ ತಾಲ್ಲೂಕು ವಿವಿಧೋದ್ದೇಶ ಸಂಘಕ್ಕೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.

‘ಬೇರೆ ಹಾಸ್ಟೆಲ್‌ಗಳಂತೆ ಕ್ರೀಡಾ ವಸತಿ ನಿಲಯಗಳಿಗೆ ಪಡಿತರ ಬರುವುದಿಲ್ಲ. ಒಬ್ಬರಿಗೆ ಒಂದು ದಿನಕ್ಕೆ ಇಂತಿಷ್ಟು ಊಟ ಕೊಡಬೇಕು ಎಂದು ನಿಗದಿಪಡಿಸಿ ಆಹಾರ ಪೂರೈಕೆಗೆ ಟೆಂಡರ್ ಕೊಡಲಾಗುತ್ತದೆ. ಆಹಾರ ಪೂರೈಕೆ ಮಾಡುವವರು ಪಡಿತರ ಅಕ್ಕಿ ತಂದಿರುವುದು ತಪಾಸಣೆ ವೇಳೆ ಸಿಕ್ಕಿದೆ. ನೋಟಿಸ್‌ ಕೊಟ್ಟಿದ್ದು ಏನು ಉತ್ತರ ಕೊಡುತ್ತಾರೆ ನೋಡಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ರಾಜು ಬಾವಿಹಳ್ಳಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.