ADVERTISEMENT

ನದಿಗೆ ಹಾರಲು ಯತ್ನಿಸುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಕಾನ್‌ಸ್ಟೆಬಲ್‌

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 7:07 IST
Last Updated 19 ಅಕ್ಟೋಬರ್ 2021, 7:07 IST

ಯಾದಗಿರಿ: ನಗರ ಹೊರವಲಯದ ಭೀಮಾ ನದಿಯ ಬ್ರಿಜ್‌ ಕಂ ಬ್ಯಾರೇಜ್‌ ಬಳಿ ನದಿಗೆ ಹಾರಲು ಯತ್ನಿಸುತ್ತಿದ್ದ ಮಹಿಳೆಯನ್ನು ಪೊಲೀಸರುರಕ್ಷಿಸಿದ್ದಾರೆ.

ಮಹಿಳೆಯು ಭಾನುವಾರ ಮಧ್ಯಾಹ್ನ ಬ್ರಿಜ್‌ ಬಳಿ ಮಗುವಿನ ಸಮೇತ ಹೊಳೆಗೆ ಹಾರಲು ಯತ್ನಿಸುತ್ತಿದ್ದರು. ಅದೇ ಹೊತ್ತಿಗೆ ಕರ್ತವ್ಯ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ ಶೇಖಪ್ಪ ತಡಿಬಿಡಿ ಅವರು ಮಹಿಳೆಯ ಅನುಮಾನಾಸ್ಪದ ವರ್ತನೆ ನೋಡಿ ವಿಚಾರಣೆ ಮಾಡಿದ್ದಾರೆ. ನಂತರ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಬಂದು ಮಹಿಳೆಗೆ ಧೈರ್ಯ ತುಂಬಿ ಮಹಿಳಾ ಪೊಲೀಸ್‌ ಠಾಣೆಗೆ ಕಳುಹಿಸಿದ್ದಾರೆ.

ADVERTISEMENT

ಈ ಬಗ್ಗೆ ಮಾಹಿತಿ ನೀಡಿರುವ ಮಹಿಳಾ ಪೊಲೀಸ್‌ ಠಾಣೆಯ ಸಿಪಿಐ ರಾಘವೇಂದ್ರ ಅವರು, ‘ಮಹಿಳೆಗೆ ವಿವಾಹವಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಪತಿ ಬೇರೆ ಜಿಲ್ಲೆಯಲ್ಲಿದ್ದು, ಎರಡು ತಿಂಗಳಿಂದ ಹಣ ಕಳುಹಿಸದ ಕಾರಣ ನೊಂದ ಮಹಿಳೆ ನದಿಗೆ ಹಾರಲು ಯತ್ನಿಸಿದ್ದಾರೆ. ಪೊಲೀಸ್‌ ಸಿಬ್ಬಂದಿ ಗಮನಿಸಿ ವಿಚಾರಿಸಿದ್ದಾರೆ. ಮಹಿಳೆಗೆ ಆಪ್ತಸಮಾಲೋಚನೆ ಮಾಡಿದ್ದು, ಮನೆಗೆ ಕಳುಹಿಸಲಾಗಿದೆ’ ಎಂದರು.

ಈ ಕುರಿತು ಪ್ರಕರಣ ದಾಖಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.