ಶಹಾಪುರ ತಾಲ್ಲೂಕಿನ ಮುಡಬೂಳ ಗ್ರಾಮದಲ್ಲಿನ ಆರ್ ಒ ಪ್ಲಾಂಟ್ ಹಾಳಾಗಿರುವುದು
ಶಹಾಪುರ: ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ವ್ಯಕ್ತಿಯು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸ್ಥಾಪಿತವಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ (ಆರ್‌ಒ ಪ್ಲಾಂಟ್) ನಿರ್ವಹಣೆ ಹಾಗೂ ದುರಸ್ತಿ ನೆಪದಲ್ಲಿ ನೀರಿಗಿಂತ ಹೆಚ್ಚಾಗಿ ಹಣ ವೆಚ್ಚಮಾಡಿರುವುದು ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿಯಿಂದ ಬಯಲಾಗಿದೆ.
‘ಮ್ಯಾಕ್ಸ್ ಅಕ್ವಾ ಹಾಗೂ ವಾಟರ್ ಲೈಫ್ ಗುತ್ತಿಗೆದಾರರು ನಿರ್ಮಿಸಿದ ಘಟಕಗಳನ್ನು ಲಕ್ಷ್ಮಿ ವೆಂಕಟೇಶ್ವರ ಎಂಬ ಏಜೆನ್ಸಿಯಿಂದ ದುರಸ್ತಿಗೊಳಿಸಿ ಸುಸ್ಥಿತಿಯಲ್ಲಿಡಲಾಗಿದೆ ಎಂದು 2020 ಏಪ್ರಿಲ್ 7ರಂದು ಸಭೆ ನಡವಳಿಕೆಯಲ್ಲಿ ದಾಖಲಾಗಿದೆ. ₹79.60 ಲಕ್ಷ ದುರಸ್ತಿ ಬಿಲ್ ಪಾವತಿಸುವಂತೆ ಶಹಾಪುರ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪ ವಿಭಾಗದ ಎಇ ಅವರು ಯಾದಗಿರಿ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಮನವಿ ಮಾಡಿದ್ದಾರೆ. ಅದರಂತೆ ಬಿಲ್ ಪಾವತಿಯಾಗಿದೆ. ಆದರೆ ವಾಸ್ತವಾಗಿ ಆರ್.ಒ ಪ್ಲಾಂಟ್‌ಗಳಿಂದ ಒಂದೂ ಹನಿ ನೀರು ಸರಬರಾಜು ಮಾಡಿಲ್ಲ’ ಎನ್ನುತ್ತಾರೆ ಮಾಹಿತಿ ಹಕ್ಕು ಕಾರ್ಯಕರ್ತ ಭೀಮರಾಯ ಬಾರಿಗಿಡ.
ದಾಖಲೆಯ ಪ್ರಕಾರ ತಾಲ್ಲೂಕಿನಲ್ಲಿ 97 ಆರ್.ಒ ಪ್ಲಾಂಟ್‌ಗಳಿವೆ. ಘಟಕಗಳ ನಿರ್ಮಾಣದ ಕಂಪನಿಯಿಂದ 2023ರ ಸೆಪ್ಟೆಂಬರ್ 1ರಂದು ಆಯಾ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿಕೊಳ್ಳುವಾಗ ಆಯಾ ಪಿಡಿಒಗಳು ಘಟಕಗಳ ವಸ್ತುಸ್ಥಿತಿಯನ್ನು ಬರೆದು ಷರಾ ಹಾಕಿದ್ದಾರೆ. ಅದರಂತೆ ಶಹಾಪುರ ತಾಲ್ಲೂಕಿನ ಅಣಬಿ ಗ್ರಾಮದಲ್ಲಿ 3 ವರ್ಷದಿಂದ ಘಟಕ ಸ್ಥಗಿತವಿದೆ ಎಂದು ನಮೂದಿಸಲಾಗಿದೆ. ಹೊಸೂರ, ಹುರಸಗುಂಡಗಿ ಇದೇ ಸ್ಥಿತಿ ಇವೆ. ಅಲ್ಲದೇ ಹತ್ತಿಗೂಡೂರ ಗ್ರಾಮದಲ್ಲಿ ಪ್ಲಾಂಟ್‌ನಲ್ಲಿ ಯಾವುದೇ ಸಾಮಗ್ರಿ ಇಲ್ಲ ಶೆಡ್ ಮಾತ್ರ ಇರುತ್ತದೆ ಎಂದು ನಮೂದಿಸಿದ್ದಾರೆ.
ವಿಚಿತ್ರವೆಂದರೆ ತಾಲ್ಲೂಕಿನ ಬಹುತೇಕ ಪ್ಲಾಂಟ್ ಶೆಡ್ ಮಾತ್ರ ನಿರ್ಮಾಣಗೊಂಡಿವೆ. ಆದರೆ ನೀರು ಮಾತ್ರ ಸರಬರಾಜು ಆಗಿಲ್ಲ ಎನ್ನುವುದಕ್ಕೆ ಜೆಸ್ಕಾಂನಿಂದ ಘಟಕಕ್ಕೆ ಅಳವಡಿಸಲು ವಿದ್ಯುತ್ ಮೀಟರ್ ಪಡೆದುಕೊಂಡಿಲ್ಲ. ಅಂದ ಮೇಲೆ ಘಟಕವು ನೀರು ಸರಬರಾಜು ಮಾಡುವ ಪ್ರಶ್ನೆ ಉದ್ಭವಿಸದು. ಆದರೆ ಲಕ್ಷ್ಮಿ ವೆಂಕಟೇಶ್ವರ ಕಂಪನಿಗೆ ಮಾತ್ರ ದುರಸ್ತಿಯ ಹೆಸರಿನಲ್ಲಿ ಹಣ ಸಂದಾಯವಾಗಿರುವುದು ದಾಖಲೆಯಲ್ಲಿ ನಮೂದಿಸಿದ್ದಾರೆ. ಅದರಂತೆ ವಡಗೇರಾ ತಾಲ್ಲೂಕಿನಲ್ಲಿ 77 ಆರ್.ಒ ಪ್ಲಾಂಟ್ ಇವೆ. ಇದೇ ಸ್ಥಿತಿಯ ಸಮಸ್ಯೆಯನ್ನು ಎದುರಿಸುತ್ತಿವೆ ಎನ್ನುತ್ತಾರೆ ಭೀಮರಾಯ ಬಾರಿಗಿಡ.
ಬೇಸಿಗೆ ಕಾಲ ಬಂತೆಂದರೆ ಅದೇ ರಾಗ ಅದೇ ಹಾಡು ಎನ್ನುವಂತೆ ಪ್ರತಿ ವರ್ಷ ಕಾಡುವ ಸಮಸ್ಯಾತ್ಮಕ ಹಳ್ಳಿಗಳ ಪಟ್ಟಿ ಸಿದ್ಧಗೊಂಡಿರುತ್ತದೆ. ಅಲ್ಲದೇ ಆರ್ ಒ ಪ್ಯಾಂಟ್ ದುರಸ್ತಿಗೆ ಖಾಸಗಿ ಏಜೆನ್ಸಿಗಳು ಒಕ್ಕರಿಸುವುದು ಸಾಮಾನ್ಯವಾಗಿದೆ. ದುರಸ್ತಿ ನೆಪದಲ್ಲಿ ಖಾಸಗಿ ಕಂಪನಿಯ ಜತೆಗೂಡಿ ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿಕೊಂಡ ಎಂಜಿನಿಯರ್‌ಗಳ ಹಾಗೂ ಕಂಪನಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಮನವಿ ಮಾಡಿದ್ದಾರೆ.
ತಾಲ್ಲೂಕಿನಲ್ಲಿ 95 ಆರ್‌ಒ ಪ್ಯಾಂಟ್ ಇದ್ದು, ಅದರಲ್ಲಿ 47 ಕಾರ್ಯನಿರ್ವಹಿಸುತ್ತಿವೆ. 21 ದುರಸ್ತಿಗೊಳಿಸಬೇಕು. ಅಲ್ಲದೇ 26 ಸಂಪೂರ್ಣವಾಗಿ ಕೆಟ್ಟು ನಿಂತಿವೆ.ಬಸವರಾಜ ಶರಬೈ, ತಾ.ಪಂ. ಇಒ ಶಹಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.