ADVERTISEMENT

ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಷರತ್ತು ಬದ್ಧ ಅನುಮತಿ: ಸಿಂಗಾರಗೊಂಡ ಕೆಂಭಾವಿ ಪಟ್ಟಣ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 7:32 IST
Last Updated 4 ನವೆಂಬರ್ 2025, 7:32 IST
<div class="paragraphs"><p>ಆರ್‌ಎಸ್‌ಎಸ್‌ ಪಥ ಸಂಚಲನ‌ದ ಹಿನ್ನೆಲೆಯಲ್ಲಿ ಕೆಂಭಾವಿ ಪಟ್ಟಣದಲ್ಲಿ ವೃತ್ತಗಳನ್ನು ಅಲಂಕೃತಗೊಳಿಸಿರುವುದು</p></div>

ಆರ್‌ಎಸ್‌ಎಸ್‌ ಪಥ ಸಂಚಲನ‌ದ ಹಿನ್ನೆಲೆಯಲ್ಲಿ ಕೆಂಭಾವಿ ಪಟ್ಟಣದಲ್ಲಿ ವೃತ್ತಗಳನ್ನು ಅಲಂಕೃತಗೊಳಿಸಿರುವುದು

   

ಕೆಂಭಾವಿ: ಪಟ್ಟಣದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಸೋಮವಾರ ಜಿಲ್ಲಾಧಿಕಾರಿ ಅವರು ಷರತ್ತು ಬದ್ಧ ಅನುಮತಿ ನೀಡುವ ಮೂಲಕ ಕಳೆದ ಕೆಲ ದಿನಳಿಂದ ನಡೆದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಮೊದಲು ನ.1 ರಂದು ಆಯೋಜಿಸಲು ಮುಂದಾಗಿದ್ದ ಪಥ ಸಂಚಲನಕ್ಕೆ ಜಿಲ್ಲಾಧಿಕಾರಿ ಅನುಮತಿ ನಿರಾಕರಿಸಿದ್ದರು. ನಂತರ ಆರ್‌ಎಸ್‌ಎಸ್‌ನ ಪ್ರಮುಖರು ಮತ್ತೊಂದು ಅರ್ಜಿ ಸಲ್ಲಿಸಿ ನ.4 ರಂದು ಪಥ ಸಂಚಲನಕ್ಕೆ ಅನುಮತಿ ಕೋರಿದ್ದರು. ನಂತರ ಹಲವು ದಲಿತಪರ ಸಂಘಟನೆಗಳು ಅಂದು ಮೆರವಣಿಗೆ ಮಾಡುವುದಾಗಿ ಹೇಳಿ ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದರು.

ADVERTISEMENT

ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಎರಡೂ ಸಂಘಟನೆಯ ಪ್ರಮುಖರ ಜೊತೆ ಪ್ರತ್ಯೇಕ ಸಭೆ ಜರುಗಿತ್ತು. ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬಾರದೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಜಿಲ್ಲಾಡಳಿತ ಕೊನೆಗೂ ಸಂಘ ಪರಿವಾರಕ್ಕೆ ಹಲವು ಶರತ್ತುಬದ್ಧ ಅನುಮತಿ ನೀಡಿದೆ.

ಶೃಂಗಾರಗೊಂಡ ಬೀದಿಗಳು: ಜಿಲ್ಲಾಡಳಿತ ಪಥ ಸಂಚಲನಕ್ಕೆ ಅವಕಾಶ ನೀಡಲಿದೆ ಎನ್ನುವ ವಿಶ್ವಾಸದಲ್ಲಿ ಭಾನುವಾರದಿಂದ ಸಂಘದ ಪದಾಧಿಕಾರಿಗಳು ಪಟ್ಟಣದ ಪ್ರಮುಖ ಬೀದಿಗಳನ್ನು ಶೃಂಗಾರಗೊಳಿಸಿ, ಮತ್ತಷ್ಟು ಮೆರುಗು ನೀಡಿದ್ದಾರೆ.

ಪಥ ಸಂಚಲನ ಸಂಚರಿಸುವ ಪ್ರಮುಖ ಬೀದಿಗಳಲ್ಲಿ ಭಗವಾ ಧ್ವಜ, ಕಟೌಟ್‍ಗಳು, ಸ್ವಾತಂತ್ರ ಸೇನಾನಿಗಳ ಸ್ವಾಗತ ಕಮಾನುಗಳು ರಾರಾಜಿಸುತ್ತಿದೆ. ಸಂಘ ಪರಿವಾರದ ಶತಮಾನೋತ್ಸವದ ಪಥ ಸಂಚಲನಕ್ಕೆ ಮಂಗಳವಾರ ಪಟ್ಟಣ ಸಾಕ್ಷಿಯಾಗಲಿದೆ.

ಬಿಗಿ ಪೊಲೀಸ್ ಬಂದೋಬಸ್ತ್‌: ಮೂರು ದಿನಗಳಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದೆ. ಎಲ್ಲೆಡೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಎಸ್‌ಪಿ ಪೃಥ್ವಿಕ್‌ ಶಂಕರ ಸೋಮವಾರ ಭೇಟಿ ನೀಡಿ, ಪಥ ಸಂಚಲನ ಮಾರ್ಗ ಮತ್ತು ಸೂಕ್ಷ್ಮ ಪ್ರದೇಶಗಳನ್ನು ಅವಲೋಕನ ಮಾಡಿದ್ದಾರೆ. ಎಲ್ಲ ಭದ್ರತೆ ಕೈಗೊಳ್ಳಲಾಗಿದೆ ಎಂದು ಪಿಎಸ್‍ಐ ಅಮೋಜ ಕಾಂಬಳೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.