ಶಹಾಪುರ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದೆ. ಆದರೆ, ತಾಲ್ಲೂಕಿನಲ್ಲಿ ಕೆಲ ಶಿಕ್ಷಕರು ಇನ್ನೂ ಶಾಲೆಗೆ ತೆರಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ಕೆಲ ಶಿಕ್ಷಕರು ಶಾಲೆಗೆ ಗೈರಾಗುವ ಕೆಟ್ಟ ಸಂಪ್ರದಾಯ ಮುಂದುವರಿಯುತ್ತಾ ಬಂದಿದೆ. ಇದನ್ನು ತಡೆಯಲು ಶಿಕ್ಷಣ ಇಲಾಖೆ ಮುಂದಾಗಬೇಕು. ಶಾಲೆಗೆ ಬಂದು ಸಹಿ ಹಾಕಿ ವಾಪಸ್ ತೆರಳುವಂತಹ ಕೆಸಲ ಮಾಡಬೇಡಿ ಎಂಬ ಕೂಗು ಮಕ್ಕಳ ಪಾಲಕರಿಂದ ಕೇಳಿ ಬರುತ್ತಿದೆ.
‘ಮಕ್ಕಳು ಶಾಲೆಗೆ ಚೆಕ್ಕರ್ ಹಾಕುತ್ತಾರೆ ಎನ್ನುವುದು ಸಾಮಾನ್ಯ. ತಾಲ್ಲೂಕಿನಲ್ಲಿ ಕೆಲ ಶಿಕ್ಷಕರು ಕೂಡ ಸ್ಥಳೀಯ ರಾಜಕೀಯ ಪ್ರಭಾವ ಬಳಸಿ ಶಾಲೆಗೆ ತೆರಳುವುದನ್ನು ಮರೆತು ಬಿಟ್ಟಿದ್ದಾರೆ. ಇನ್ನು ಕೆಲ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆದುಕೊಂಡು ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಯಲ್ಲಿ ಹಾಜರಾತಿ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪಾಠ ಆಲಿಸುತ್ತಿರುವುದರ ಬಗ್ಗೆ ಹೋರಾಟ ನಡೆಸಿದರೂ ನಿರೀಕ್ಷೆಯಷ್ಟು ಫಲ ನೀಡಲಿಲ್ಲ. ಪ್ರಸಕ್ತ ವರ್ಷ ಮತ್ತೆ ಅದೇ ಚಾಳಿ ಮುಂದುವರಿದಿದೆ’ ಎನ್ನುತ್ತಾರೆ ಶಿಕ್ಷಣ ಪ್ರೇಮಿ ಅಶೋಕರಾವ ಮಲ್ಲಾಬಾದಿ.
‘ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಕೆಲಸ ನಿರ್ವಹಿಸುವ ಕೆಲ ಶಿಕ್ಷಕರು ನಗರ ಹಾಗೂ ಜಿಲ್ಲಾ ಕೇಂದ್ರದಲ್ಲಿ ವಾಸವಾಗಿರುತ್ತಾರೆ. ಅವರಿಗೆ ನೆನಪಾದಗೊಮ್ಮೆ ಶಾಲೆಗೆ ಬರುತ್ತಾರೆ. ಸ್ಥಳೀಯ ಶಿಕ್ಷಕರ ನಡುವೆ ಹೊಂದಾಣಿಕೆ ಮಾಡಿಕೊಂಡು ವಾರದಲ್ಲಿ ಇಂತಿಷ್ಟು ದಿನ ಬಂದು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿದರೆ ಕರ್ತವ್ಯ ಮುಗಿದಂತೆ ಎಂದು ಭಾವಿಸಿಕೊಂಡಿದ್ದಾರೆ. ಹೀಗಾದರೆ ಅವರು ಪಾಠ ಮಾಡುವುದಾದರೂ ಯಾವಾಗ?’ ಎಂದು ಪ್ರಶ್ನಿಸುತ್ತಾರೆ ಮಕ್ಕಳ ಪಾಲಕರು.
‘ತಾಲ್ಲೂಕಿನಲ್ಲಿ 380 ಪ್ರಾಥಮಿಕ ಹಾಗೂ 38 ಪ್ರೌಢ ಸರ್ಕಾರಿ ಶಾಲೆಗಳಿವೆ. ಪ್ರಾಥಮಿಕ ಶಾಲೆಯಲ್ಲಿ 715 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಮುಕ್ತಾಯದ ಹಂತಕ್ಕೆ ಬಂದಿದೆ. ಶಾಲೆಗೆ ತೆರಳುತ್ತಾರೆ ಅಥವಾ ಇಲ್ಲ ಎನ್ನುವುದಕ್ಕಾಗಿ ಮಿಂಚಿನ ಸಂಚಾರ ಕಾರ್ಯಕ್ರಮ ಹಮ್ಮಿಕೊಂಡಿದೆ. ಎರಡು ದಿನಗಳ ಹಿಂದೆ ಎರಡು ಶಾಲೆಗಳಿಗೆ ಭೇಟಿ ನೀಡಿದಾಗ ಶಿಕ್ಷಕರು ಬಂದಿರಲಿಲ್ಲ. ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ಬಿಇಒ ವೈ.ಎಸ್.ಹರಗಿ ಮಾಹಿತಿ ನೀಡಿದರು.
‘ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫಲಿತಾಂಶ ಕುಸಿಯಲು ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗದೆ ಇರುವುದು ಒಂದು ಕಾರಣ ಎಂದು ಶಿಕ್ಷಣ ಇಲಾಖೆಯ ಅಧ್ಯಯನ ತಂಡ ಬೊಟ್ಟು ಮಾಡಿ ತೋರಿಸಿದೆ. ಅದರಲ್ಲಿ ಶಾಲೆಗೆ ಚೆಕ್ಕರ್ ಹಾಕಿ ಪಾಠ ಮಾಡದ ಶಿಕ್ಷಕರು ಕೂಡ ಕಾರಣ ಎಂಬ ವಾಸ್ತವಿಕ ಸತ್ಯ ಹೊರಬಂದಿದೆ. ಶಿಕ್ಷಣ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಬಂದು ಪಾಠ ಮಾಡುವಂತಹ ವಾತಾವರಣವನ್ನು ರೂಪಿಸಬೇಕು’ ಎಂದು ಮಕ್ಕಳ ಪಾಲಕರು ಮನವಿ ಮಾಡಿದ್ದಾರೆ.
‘ಶಾಲೆಯ ಸಮಸ್ಯೆ ಇದ್ದರೆ ಗಮನಕ್ಕೆ ತನ್ನಿ’
‘ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆ ಸಂದರ್ಭದಲ್ಲಿ ಹಲವು ಕಠಿಣ ಪರೀಕ್ಷೆಯನ್ನು ಎದುರಿಸಿ ಸರ್ಕಾರಿ ಹುದ್ದೆ ಪಡೆದುಕೊಂಡಿದ್ದೀರಿ. ನೀವು ಎಲ್ಲಿಯೇ ಇರಿ ನಮಗೆ ಬೇಕಾಗಿಲ್ಲ. ನಿಗದಿಪಡಿಸಿದ ಅವಧಿಯಲ್ಲಿ ಶಾಲೆಗೆ ತೆರಳಿ ಆಸಕ್ತಿಯಿಂದ ಮಕ್ಕಳಿಗೆ ವಿದ್ಯಾದಾನ ಮಾಡಿದರೆ ಪುಣ್ಯ ಬರುತ್ತದೆ. ಕೇವಲ ಶಾಲೆಗೆ ತೆರಳಿ ಪಾಂಜ ಮುಟ್ಟಿ ಬರುವುದಲ್ಲ. ನೈತಿಕ ಹಾಗೂ ಆತ್ಮಸಾಕ್ಷಿಯಂತೆ ಮಕ್ಕಳಿಗೆ ಪಾಠ ಮಾಡಿ. ಶಾಲೆಗೆ ಮೂಲಸೌಲಭ್ಯ ಕೊರತೆ ಇದ್ದರೆ ನನ್ನ ಗಮನಕ್ಕೆ ತನ್ನಿ. ಖುದ್ದಾಗಿ ಸಮಸ್ಯೆ ಬಗೆಹರಿಸುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಸಲಹೆ ನೀಡಿದರು.
ಸರ್ಕಾರಿ ಶಾಲೆಯ ಶಿಕ್ಷಕರು ಪ್ರತಿಭಾವಂತರಿದ್ದಾರೆ. ಇಚ್ಛಾಶಕ್ತಿಯ ಕೊರತೆಯಿಂದ ಸರಿಯಾಗಿ ಪಾಠ ಮಾಡುತ್ತಿಲ್ಲ. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ತೆರಳಬೇಕು.ಶರಣಬಸಪ್ಪ ದರ್ಶನಾಪುರ, ಸಚಿವ
ನಿಗದಿಪಡಿಸಿದ ಅವಧಿಯಲ್ಲಿ ಶಿಕ್ಷಕರು ಕರ್ತವ್ಯದ ಮೇಲೆ ಇರದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಶಿಕ್ಷಕರು ಶಾಲೆಗೆ ಬರುತ್ತಾರೆ ಇಲ್ಲವೋ ಎಂಬುದನ್ನು ಪರಿಶೀಲಿಸಲು ಶಿಕ್ಷಣ ಇಲಾಖೆಯ ಸಿಬ್ಬಂದಿ ಜತೆಯಲ್ಲಿ ಮಿಂಚಿನ ಸಂಚಾರ ಹಮ್ಮಿಕೊಂಡಿದೆ.ವೈ.ಎಸ್.ಹರಗಿ ,ಬಿಇಒ, ಶಹಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.