
ಕಕ್ಕೇರಾ: ‘ಪ್ರಸ್ತುತ ತಿಂಥಣಿ ಸುಕ್ಷೇತ್ರ ಮೌನೇಶ್ವರ ದೇಗುಲದಲ್ಲಿ ಮೂಲಸೌಕರ್ಯಗಳು ಇಲ್ಲ. ಬಂದಂತಹ ಭಕ್ತರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲದಿರುವುದು ಸರಕಾದ ಕುತಂತ್ರವಾಗಿದೆ’ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಕೆಪಿ ನಂಜುಡಿ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ತಿಂಥಣಿ ಜಗದ್ಗುರು ಮೌನೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ದೇಗುಲ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ತಿಂಥಣಿ ಮೌನೇಶ್ವರ ಕ್ಷೇತ್ರ ಸಮರ್ಪಕವಾಗಿ ಅಭಿವೃದ್ಧಿ ಆಗಬೇಕಾದರೆ ತಿಂಥಣಿ, ವರವಿ, ಗೋನಾಳ, ಲಿಂಗನಬಂಡಿ ಈ ನಾಲ್ಕು ಕ್ಷೇತ್ರಗಳನ್ನು ಸೇರಿಸಿ ಒಂದು ಪ್ರಾಧಿಕಾರ ಸ್ಥಾಪಿಸಬೇಕು. ಸಿಎಂ ಸಿದ್ದರಾಮಯ್ಯನವರಿಗೆ 15 ವರ್ಷದ ಹಿಂದೆಯೇ ಬೇಡಿಕೆಯ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದರು.
‘ರಾಜ್ಯದಲ್ಲಿ ಪ್ರಸ್ತುತ ವಿಶ್ವಕರ್ಮ ಸಮಾಜದವರು 40 ಲಕ್ಷ ಜನರು ವಾಸವಾಗಿದ್ದಾರೆ. ಆದರೆ ಜನಗಣತಿಯಲ್ಲಿ ವಿಶ್ವಕರ್ಮ ಸಮಾಜ ಕೇವಲ 8 ಲಕ್ಷ ಜನರು ರಾಜ್ಯದಲ್ಲಿದ್ದಾರೆ ಎಂಬುದಾಗಿ ಗಣತಿಯಲ್ಲಿ ತೋರಿಸಲಾಗಿದೆ. ಬೆಂಗಳೂರಿನಲ್ಲಿಯೇ 4 ಲಕ್ಷ ಜನ ವಿಶ್ವಕರ್ಮ ಸಮುದಾಯದವರು ವಾಸಿಸುತ್ತಿದ್ದಾರೆ. ಸರಕಾರ ಈ ರೀತಿಯ ಕುತಂತ್ರ ನಡೆಸಿ ನಮ್ಮ ವಿಶ್ವಕರ್ಮ ಸಮುದಾಯವನ್ನು ಮೂಲೆ ಗುಂಪು ಮಾಡುತ್ತಿದೆ. ಬರೀ 8 ಲಕ್ಷ ಮಾತ್ರ ಸಮುದಾಯ ಜನ ಸಂಖ್ಯೆ ತೋರಿಸಿದರೆ ಇನ್ನುಳಿದ 32 ಲಕ್ಷ ಸಮುದಾಯದವರು ಬಾಂಗ್ಲಾದೇಶದಿಂದ ಬಂದಿದ್ದಾರೆಯೇ’ ಎಂದು ಸರಕಾರವನ್ನು ಪ್ರಶ್ನಿಸಿದರು.
‘ನಮ್ಮ ಸಮುದಾಯದಲ್ಲಿ ಮತ ಹಾಕುವ ಜನಸಂಖ್ಯೆ ಕಡಿಮೆ ಇದೆ ಎಂದು ಹೇಳಲಿ ಆದರೆ ಸಂಪೂರ್ಣ ಸಮುದಾಯದ ಜನಸಂಖ್ಯೆ ಕಡಿಮೆ ಇದೆ ಎಂದು ಹೇಳಿದರೆ ನಾವು ಒಪ್ಪುವದಿಲ್ಲ. ಕುಲಶಾಸ್ತ್ರ ಅಧ್ಯಯನವನ್ನು ನಾವು ತಿರಸ್ಕರಿಸುತ್ತೇವೆ’ ಎಂದು ನೇರವಾಗಿ ಕುಟುಕಿದರು.
‘40 ಲಕ್ಷ ಜನಸಂಖ್ಯೆ ಇರುವ ನಾವು ಮೂಲತಃವಾಗಿ ಕಾಡು ಮೇಡುಗಳಿಂದ ಬಂದವರು. ಆದರೆ ನಮ್ಮ ಸಮಾಜವು ಪರಿಶಿಷ್ಟ ಪಂಗಡಕ್ಕೆ ಸೇರುವ ಅರ್ಹತೆ ಇಲ್ಲವೆಂದು ಕುತಂತ್ರ ಮಾಡಿ ಕುಲಶಾಸ್ತ್ರದ ವರದಿಯಲ್ಲಿ ಪ್ರೊ. ನಂಜುಂಡಸ್ವಾಮಿ ಅವರು ವರದಿ ನೀಡಿದ್ದಾರೆ. ಅದಕ್ಕೆ ಈ ಎಲ್ಲಾ ವಿಷಯಗಳ ಕುರಿತು ಮುಂಬರುವ ಮಾರ್ಚ್ ತಿಂಗಳಿನಲ್ಲಿ ಸುಮಾರು ಎರಡು ಲಕ್ಷ ಸಮುದಾಯದ ಜನರು ಸೇರಿ ಸಮಾವೇಶದ ಮೂಲಕ ಪ್ರಾಧಿಕಾರ ಹಾಗೂ ಕುಲಶಾಸ್ತ್ರದ ವರದಿ ಮರುಪರಿಶೀಲಿಸಲು ಒತ್ತಾಯಿಸಲಾಗುವುದು’ ಎಂದು ತಿಳಿಸಿದರು.
ಕಕ್ಕೇರಾ: ಪ್ಟಣದ ಸಮೀಪದ ತಿಂಥಣಿ ಮೌನೇಶ್ವರ ದೇಗುಲಕ್ಕೆ ಭೇಟಿ ನೀಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಕೆಪಿ ನಂಜುಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಗದ್ಗುರು ಮೌನೇಶ್ವರನಿಗೆ ಯಾವುದೇ ಜಾತಿ ಧರ್ಮವಿಲ್ಲ ಸರ್ವ ಧರ್ಮಗಳ ಸಂಕೇತವೆ ಮೌನೇಶ್ವರ. ಇಂತಹ ಮಹಾ ಪುರುಷನ ಸಂತತಿಯವರು ವಿಶ್ವಕರ್ಮದವರು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ.ಕೆಪಿ ನಂಜುಡಿ, ಮಾಜಿ ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.