ADVERTISEMENT

ಯಾದಗಿರಿ: ಆರೋಗ್ಯ ಇಲಾಖೆ ಸಿಬ್ಬಂದಿಗೆ ಮೊದಲ ಲಸಿಕೆ

ಐದು ಕೇಂದ್ರಗಳಲ್ಲಿ ಲಸಿಕೆ ನೀಡಲು ಸಿದ್ಧತೆ; ಜಿಲ್ಲಾಸ್ಪತ್ರೆಯಲ್ಲಿ ಸರಳ ಕಾರ್ಯಕ್ರಮ ಇಂದು

ಬಿ.ಜಿ.ಪ್ರವೀಣಕುಮಾರ
Published 15 ಜನವರಿ 2021, 15:41 IST
Last Updated 15 ಜನವರಿ 2021, 15:41 IST
ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಾಲಯದಲ್ಲಿರುವ ಕೋವ್ಯಾಕ್ಸಿನ್‌ ಲಸಿಕಾ ಉಗ್ರಾಣ
ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಾಲಯದಲ್ಲಿರುವ ಕೋವ್ಯಾಕ್ಸಿನ್‌ ಲಸಿಕಾ ಉಗ್ರಾಣ   

ಯಾದಗಿರಿ: ಕೊರೊನಾ ವೈರಸ್‌ ವಿರುದ್ಧ ಹೋರಾಡಲು ಕೋವ್ಯಾಕ್ಸಿನ್‌ ಲಸಿಕೆ ನೀಡುವುದಕ್ಕೆ ಕ್ಷಣಗಣನೆ ಆರಂಭವಾಗಿದ್ದು, ‘ಡಿ’ ಗ್ರೂಪ್‌ ಆರೋಗ್ಯ ಸಿಬ್ಬಂದಿಗೆ ಮೊದಲ ಲಸಿಕೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲೆಯಲ್ಲಿ 6,500 ಲಸಿಕೆ ಬರಬೇಕಾಗಿತ್ತು. ಮೊದಲ ಹಂತದಲ್ಲಿ 3,000 ಲಸಿಕೆ ಕಲಬುರ್ಗಿಯಿಂದ ಗುರುವಾರ ಬಂದಿದ್ದು, ಶನಿವಾರ ಸಿಬ್ಬಂದಿಗೆ ನೀಡಲಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಲಸಿಕಾ ವಿತರಣೆ ಸರಳ ಕಾರ್ಯಕ್ರಮ ನಡೆಯಲಿದೆ.

ಜಿಲ್ಲೆಯಲ್ಲಿ 5 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಅಲ್ಲಿ ಕನಿಷ್ಠ ನೂರು ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದೆ. ಲಸಿಕೆ ನಂತರ ಏನಾದರೂ ಪರಿಣಾಮಗಳು ಉಂಟಾದರೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲು ಅಂಬುಲೆನ್ಸ್ ಸಿದ್ಧವಾಗಿಟ್ಟುಕೊಳ್ಳಲಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ADVERTISEMENT

‘ಒಂದು ವೇಳೆ ಚಿಕಿತ್ಸೆ ವ್ಯತಿರಿಕ್ತವಾದರೆ ತಾಲ್ಲೂಕುವಾರು ಸಮಿತಿ ರಚಿಸಲಾಗಿದೆ. ಇವರ ಗಮನಕ್ಕೆ ತರಬೇಕು. ನಂತರ ಜಿಲ್ಲಾಸ್ಪತ್ರೆಗೆ ಕರೆ ತರಲಾಗುತ್ತದೆ’ ಎಂದು ಡಿಎಚ್‌ಒ ಡಾ.ಇಂದುಮತಿ ಪಾಟೀಲ ತಿಳಿಸುತ್ತಾರೆ.

ಐದು ಸರ್ಕಾರಿ ಹಾಗೂ ಒಂದು ಖಾಸಗಿ ಆಸ್ಪತ್ರೆ ಸೇರಿದಂತೆ 6 ಕಡೆ ಲಸಿಕಾ ಪ್ರಯೋಗ ನಡೆಸಲಾಗಿದೆ. ಇದರಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಸದ್ಯಕ್ಕೆ ಲಸಿಕೆ ನೀಡಲಾಗುತ್ತದೆ. ನಂತರ ಹಂತ ಹಂತವಾಗಿ ಖಾಸಗಿ ಆರೋಗ್ಯ ಇಲಾಖೆ ಸಿಬ್ಬಂದಿಗೂ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ ಸರ್ಕಾರಿ 53 ಲಸಿಕಾ ಕೇಂದ್ರ ಸ್ಥಾಪಿಸಲಾಗಿದೆ. ಇದರಲ್ಲಿ ಸದ್ಯಕ್ಕೆ 26 ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಲಾಗುತ್ತದೆ. ನಂತರ ಎಲ್ಲ ಕಡೆ ಲಭ್ಯವಿರುವಂತೆ ಮಾಡಲಾಗುತ್ತಿದೆ.

ಯಾರಿಗೆ ಚಿಕಿತ್ಸೆ ನೀಡಲಾಗುತ್ತದೆ?: ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಇಲಾಖೆ ಸಿಬ್ಬಂದಿಗೆ ಮೊದಲು ಚಿಕಿತ್ಸೆ ನೀಡಲಾಗುತ್ತಿದ್ದರೂ ಎಲ್ಲರಿಗೂ ಚುಚ್ಚುಮದ್ದು ಸಿಗುವುದಿಲ್ಲ. 20ರಿಂದ 50 ವರ್ಷದೊಳಗಿನ ಮಧುಮೇಹ, ರಕ್ತದೊತ್ತಡ ಸೇರಿದಂತೆ ಯಾವುದೇ ಕಾಯಿಲೆಗಳಲಿಲ್ಲದವರಿಗೆ ಮಾತ್ರ ನೀಡಲಾಗುತ್ತಿದೆ. ಇದರಲ್ಲೂ ಗರ್ಭಿಣಿಯರು, ಹಾಲುಣಿಸುವ ತಾಯಂದಿರಿಗೆ ಚಿಕಿತ್ಸೆ ನೀಡುವುದಿಲ್ಲ.

‘ಮೊದಲ ಹಂತದಲ್ಲಿ 6,500 ಕೊರೊನಾ ವಾರಿಯರ್ಸ್‌ಗೆ ಲಸಿಕೆ ನೀಡುವ ಕಾರ್ಯಕ್ರಮವಿದೆ. 3,000 ಡೋಸ್ ಲಸಿಕೆಗಳು ಜಿಲ್ಲೆಗೆ ಬಂದಿವೆ. ಉಳಿದ ಲಸಿಕೆಗಳು ಇನ್ನೊಂದು ವಾರದಲ್ಲಿ ಬರಲಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಲಸಿಕೆ ನೀಡಿದ ನಂತರ ಕೊರೊನಾ ಸೇನಾನಿಗಳಾದ ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗೆ ನೀಡಲಾಗುತ್ತದೆ. ನಂತರ ಉಳಿದ ಇಲಾಖೆ ಮತ್ತು ಸಾರ್ವಜನಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮ ಮುಂದುವರೆಸಲಾಗುತ್ತದೆ' ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ.

ಲಸಿಕೆ ನೀಡುವ ಪ್ರಕ್ರಿಯೆ ಹೇಗೆ?

ಕೋವಿಡ್‌ ಲಸಿಕೆ ನೀಡುವ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದೆ. ಆರೋಗ್ಯ ಇಲಾಖೆ ಸಿಬ್ಬಂದಿಗೆ ಗುರುತಿನ ಚೀಟಿ ನೀಡಲಾಗಿದೆ. ಇವುಗಳನ್ನು ಪರಿಶೀಲಿಸಿದ ನಂತರ ಕಂಪ್ಯೂಟರ್‌ನಲ್ಲಿ‌ ಹೆಸರು ನಮೂದಿಸಲಾಗುತ್ತದೆ. ನಂತರವೇ ಲಸಿಕೆ ನೀಡಲಾಗುತ್ತದೆ. ಇದೆಲ್ಲವನ್ನೂ ವಿಡಿಯೊ ಮಾಡಲಾಗುತ್ತದೆ. ಚಿಕಿತ್ಸೆ ಪಡೆದವರಿಗೆ ಕುಳಿತುಕೊಳ್ಳಲು ಕುರ್ಚಿ, ವಿಶ್ರಾಂತಿ ಬೇಕಾದಲ್ಲಿ ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಈಗಾಗಲೇ ಆರೋಗ್ಯ ಇಲಾಖೆ ಸಿಬ್ಬಂದಿ ಹಲವಾರು ಲಸಿಕೆಗಳನ್ನು ನೀಡಿದ ಅನುಭವ ಹೊಂದಿದ್ದಾರೆ. ಕೋವ್ಯಾಕ್ಸಿನ್‌ ಮೊದಲ ಬಾರಿಗೆ ತಂತ್ರಜ್ಞಾನದಿಂದ ಕೂಡಿದ ಲಸಿಕೆಯಾಗಿದೆ. ರಾಜ್ಯ, ಕೇಂದ್ರದ ಅಧಿಕಾರಿಗಳು ಲೈವ್‌ ಆಗಿ ಲಸಿಕೆ ನೀಡುವುದನ್ನು ಪರಿಶೀಲಿಸುವ ತಾಂತ್ರಿಕತೆ ಒಳಗೊಂಡಿದೆ. ಒಂದು ರೀತಿಯಲ್ಲಿ ಹೇಳಬೇಕಾದರೆ ಮತದಾನ ನಡೆಯುವಾಗ ಯಾವ ರೀತಿ ನಡೆಯುತ್ತದೋ ಅದೇ ರೀತಿ ಪರಿಶೀಲನೆ ನಡೆಯಲಿದೆ. ನಂತರವೇ ಲಸಿಕೆ ನೀಡಲಾಗುತ್ತದೆ. ಇದಕ್ಕಾಗಿ ಮೂರು ಕೋಣೆಗಳನ್ನು ಸಿದ್ಧಪಡಿಸಲಾಗಿದೆ. ಪ್ರವೇಶ, ನೋಂದಣಿ, ಆದ ನಂತರ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುತ್ತಾರೆ’ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಇಂದುಮತಿ ಪಾಟೀಲ.

***

ಐದು ಲಸಿಕಾ ಕೇಂದ್ರಗಳಲ್ಲಿ ಶನಿವಾರ 450 ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದೆ. ಚಿಕಿತ್ಸೆ ನಂತರ ಅರ್ಧಗಂಟೆ ನಿಗಾವಹಿಸಲಾಗುತ್ತಿದೆ

- ಡಾ.ಇಂದುಮತಿ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ

***
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇಚ್ಛಾಶಕ್ತಿಯ ಪರಿಣಾಮ ದೇಶಾದ್ಯಂತ ಕೋವಿಡ್-19 ವಿರುದ್ಧದ ಲಸಿಕೆ ನೀಡಿಕೆ ಕಾರ್ಯಕ್ರಮ ಆರಂಭವಾಗಲಿದೆ

- ಪ್ರಭು ಚವ್ಹಾಣ, ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.