ADVERTISEMENT

ಯಾದಗಿರಿ | 2.68 ಲಕ್ಷ ಮೆಟ್ರಿಕ್‌ ಟನ್ ಮರಳು ಜಪ್ತಿ

ಪ್ರತ್ಯೇಕ ಪ್ರಕರಣ: ₹ 22.82 ಕೋಟಿ ಮೌಲ್ಯದ ಮರಳು ಅಕ್ರಮ ದಾಸ್ತಾನು

ಮಲ್ಲಿಕಾರ್ಜುನ ನಾಲವಾರ
Published 4 ಮಾರ್ಚ್ 2026, 5:03 IST
Last Updated 4 ಮಾರ್ಚ್ 2026, 5:03 IST
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಚಂದ್ರಾಳ ಗ್ರಾಮದ ಜಮೀನೊಂದರಲ್ಲಿ ಜಪ್ತಿ ಮಾಡಲಾದ ಮರಳು
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಚಂದ್ರಾಳ ಗ್ರಾಮದ ಜಮೀನೊಂದರಲ್ಲಿ ಜಪ್ತಿ ಮಾಡಲಾದ ಮರಳು   

ಯಾದಗಿರಿ: ಕಳೆದ ಎರಡು ವಾರಗಳ ಅವಧಿಯಲ್ಲಿನ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಕೃಷ್ಣಾ ನದಿ ತೀರದ ಜಮೀನುಗಳಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಿದ ಆರೋಪದಡಿ ₹22.82 ಕೋಟಿ ಮೌಲ್ಯದ 2.68 ಲಕ್ಷ ಮೆಟ್ರಿಕ್‌ ಟನ್ ಮರಳು ಜಪ್ತಿ ಮಾಡಿದ ಗಣಿ ಇಲಾಖೆ, ಮರಳು ದಾಸ್ತಾನಿಗೆ ಜಮೀನು ನೀಡಿದ ಮಾಲೀಕರ ಪಹಣಿಗಳಲ್ಲಿ ರಾಯಲ್ಟಿಯ ಮೊತ್ತವನ್ನು ಸೇರಿಸಲು ಮುಂದಾಗಿದೆ.

ಫೆಬ್ರುವರಿ 18ರಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಮತ್ತು ಇತರೆ ಇಲಾಖೆಗಳ ಅಧಿಕಾರಿಗಳು ಸುರಪುರ ತಾಲ್ಲೂಕಿನ ಚೌಡೇಶ್ವರಹಾಳ, ಹೆಮ್ಮಡಗಿ, ಕರ್ನಾಳ, ಅಡ್ಡೊಡಗಿ ಗ್ರಾಮಗಳ ಮೇಲೆ ದಾಳಿ ಮಾಡಿದ್ದರು. ಕೃಷ್ಣಾ ನದಿಯಿಂದ ಅಕ್ರಮವಾಗಿ ಮರಳು ತೆಗೆದು 22 ಜಮೀನುಗಳಲ್ಲಿ ದಾಸ್ತಾನು ಇರಿಸಿದ್ದ ₹17.92 ಕೋಟಿ ಮೌಲ್ಯದ 2.02 ಲಕ್ಷ ಮೆಟ್ರಿಕ್ ಟನ್‌ ಮರಳು ಜಪ್ತಿ ಮಾಡಿಕೊಂಡರು. ಜೊತೆಗೆ 22 ಮಂದಿ ಮಾಲೀಕರ ವಿರುದ್ಧ ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಫೆ.27ರಂದು ವಡಗೇರಾ ತಾಲ್ಲೂಕಿನ ಹೈಯಾಳ (ಬಿ) ಗ್ರಾಮದಲ್ಲೂ ದಾಳಿ ನಡೆಸಿದ್ದರು. ಜಮೀನಿನಲ್ಲಿ ₹23.80 ಲಕ್ಷ ಮೌಲ್ಯದ 2,800 ಮೆಟ್ರಿಕ್ ಟನ್ ಅಕ್ರಮ ಮರಳು ಸಂಗ್ರಹಿಸಿ ಇರಿಸಿಕೊಂಡಿದ್ದ ಯಂಕಮ್ಮ ಮಲ್ಲಪ್ಪ ವಿರುದ್ಧ ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಒಂದೇ ಕಡೆ 63,500 ಮೆಟ್ರಿಕ್ ಟನ್ ಮರಳು ಪತ್ತೆ: ಶಹಾಪುರ ತಾಲ್ಲೂಕಿನ ಟೊಣ್ಣೂರ ಗ್ರಾಮದ ಮಹಾಂತಗೌಡ ಬೂಪಣ್ಣಗೌಡ ಅವರ ಜಮೀನಿನಲ್ಲಿ ₹5.39 ಕೋಟಿ ಮೌಲ್ಯದ 63,533 ಮೆಟ್ರಿಕ್ ಟನ್ ಮರಳು ಅಕ್ರಮವಾಗಿ ದಾಸ್ತಾನು ಮಾಡಿರುವುದು  ಪತ್ತೆಯಾಗಿದೆ. ಕೃಷ್ಣಾ ನದಿಯಿಂದ ಮರಳನ್ನು ಕಳ್ಳತನ ಮಾಡಿ, ಅಕ್ರಮವಾಗಿ ಜಮೀನಿನಲ್ಲಿ ಇರಿಸಿಕೊಂಡ ಆರೋಪದಲ್ಲಿ ಮಾ.2ರಂದು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

4 ಹಿಟಾಚಿಗಳು ಜಪ್ತಿ: ಸುರಪುರ ತಾಲ್ಲೂಕಿನ ಹೆಮ್ಮಡಗಿ ಗ್ರಾಮದ ಕೃಷ್ಣಾ ನದಿ ವ್ಯಾಪ್ತಿಯಲ್ಲಿ ಅನಧಿಕೃತ ಮರಳು ಗಣಿಗಾರಿಕೆಗೆ ಬಳಸಿದ ಆರೋಪದಡಿ ತಲಾ ₹15 ಲಕ್ಷದ ನಾಲ್ಕು ಹಿಟಾಚಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಓಡಿ ಹೋದ ಆಪರೇಟರ್‌ಗಳು ಹಾಗೂ ಅವುಗಳ ಮಾಲೀಕರ ವಿರುದ್ಧ ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಚೌಡೇಶ್ವರಿಹಾಳ ಗ್ರಾಮ ಸಮೀಪದ ಕೃಷ್ಣಾ ನದಿಯಲ್ಲಿ ನಿರ್ಮಿಸಲಾದ ಕಚ್ಚಾ ರಸ್ತೆ

‘ಪಹಣಿಯಲ್ಲಿ ರಾಯಲ್ಟಿ ಮೊತ್ತ ಸೇರ್ಪಡೆ’ 

‘ಕೃಷ್ಣಾ ನದಿ ತೀರದ ಕೆಲ ಗ್ರಾಮಗಳ ಜಮೀನಿನ ಮಾಲೀಕರು ಹಣದ ಆಸೆಗಾಗಿ ಅಕ್ರಮವಾಗಿ ತೆಗೆದ ಮರಳನ್ನು ದಾಸ್ತಾನು ಇರಿಸಲು ತಮ್ಮ ಜಮೀನುಗಳನ್ನು ಬಾಡಿಗೆಗೆ ಕೊಡುತ್ತಿದ್ದಾರೆ. ಇದು ಒಂದೂವರೆ ದಶಕದಿಂದ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ನಿಯಂತ್ರಣಕ್ಕೆ ತರಲು ಜಮೀನು ಬಾಡಿಗೆಗೆ ಕೊಟ್ಟವರ ಪಹಣಿಗಳಲ್ಲಿ ಮರಳು ರಾಯಲ್ಟಿಯ ಮೊತ್ತವನ್ನು ಸೇರಿಸಲಾಗುವುದು’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ವೀರೇಶ ಶಾಂತಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕೆಲ ರೈತರು ಮೂರ್ನಾಲ್ಕು ಲಕ್ಷ ರೂಪಾಯಿ ಪಡೆದು ಮರಳು ಅಕ್ರಮ ಸಂಗ್ರಹಕ್ಕೆ ಬೆಂಬಲವಾಗಿದ್ದಾರೆ. ಪ್ರಕರಣಗಳು ದಾಖಲಾಗುತ್ತಿದ್ದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಸರ್ಕಾರಕ್ಕೆ ಆಗಿರುವ ನಷ್ಟದ ಮೊತ್ತವನ್ನು ಅಕ್ರಮದಲ್ಲಿ ಭಾಗಿಯಾದ ರೈತರ ಜಮೀನುಗಳ ಪಹಣಿಯಲ್ಲಿ ಸೇರಿ ಭೋಜಾ ಕೂಡಿಸಲು ಸಂಬಂಧಪಟ್ಟ ತಹಶೀಲ್ದಾರ್‌ಗಳಿಗೆ ಪತ್ರ ಬರೆಯಲಾಗಿದೆ’ ಎಂದರು. ‘ಮರಳು ಅಕ್ರಮಕ್ಕಾಗಿ ನದಿಯಲ್ಲೇ ಅಲ್ಲಲ್ಲಿ 200ರಿಂದ 300 ಮೀಟರ್ ಕಚ್ಚಾ ರಸ್ತೆಯೂ ನಿರ್ಮಾಣ ಮಾಡಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.