
ಯಾದಗಿರಿ: ಬೆಂಗಳೂರು ಲೋಕಾಯುಕ್ತ ನ್ಯಾಯಾಧೀಶ ರಮಾಕಾಂತ ಚವ್ಹಾಣ್ ಅವರ ನೇತೃತ್ವದ ತಂಡಗಳು ಸೋಮವಾರವೂ ನಗರದ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದ್ದು, ಕಡತಗಳ ವಿಲೇವಾರಿ ಹಾಗೂ ಸಾರ್ವಜನಿಕರ ಆಕ್ಷೇಪಗಳ ಸಂಬಂಧ ನಾಲ್ಕು ಸ್ವಯಂ ಪ್ರೇರಿತ (ಸುಮೊಟೊ) ಪ್ರಕರಣಗಳನ್ನು ದಾಖಲಿಸಿಕೊಂಡಿತು.
ಲೋಕಾಯುಕ್ತ ಅಧಿಕಾರಿಗಳು ನಾಲ್ಕೈದು ತಂಡಗಳಾಗಿ ಪ್ರತ್ಯೇಕವಾಗಿ ತೆರಳಿದವು. ಅಬಕಾರಿ ಇಲಾಖೆ, ಸಹಾಯಕ ಆಯುಕ್ತರ ಕಚೇರಿ, ನಗರಸಭೆ, ತಹಶೀಲ್ದಾರ್ ಕಚೇರಿಯ ಭೂ ದಾಖಲೆ ವಿಭಾಗದ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಚಾರಣೆಗಾಗಿ ಬೆಂಗಳೂರಿಗೆ ಬರುವಂತೆ ಅಧಿಕಾರಿಗಳಿಗೆ ಸೂಚಿಸಿಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ, ಮರಣ ಪ್ರಮಾಣ ಪತ್ರ, ಭೂಮಿ ಮಂಜೂರು ಅರ್ಜಿಗಳ ಕಡತಗಳು ಸೇರಿದಂತೆ ಕಚೇರಿಯ ಹಾಜರಾತಿ, ಕ್ಯಾಶ್ ನೋಂದಣಿ ಬುಕ್ ನಿರ್ವಹಣೆಯನ್ನು ಪರಿಶೀಲಿಸಿದರು. ಕಚೇರಿಗೆ ಅರ್ಜಿಗಳು ಹಿಡಿದು ಬಂದಿದ್ದ ಸಾರ್ವಜನಿಕರ ದೂರುಗಳನ್ನೂ ಆಲಿಸಿ, ಸಂಬಂಧಿಸಿದ ದಾಖಲೆಗಳನ್ನೂ ಸ್ವೀಕರಿಸಿದರು. ವಿಳಂಬ ಸಂಬಂಧ ಸ್ಪಷ್ಟನೆ ಪಡೆದು, ನ್ಯೂನತೆಯನ್ನು ತಮ್ಮ ನೋಟ್‌ಬುಕ್‌ನಲ್ಲಿ ದಾಖಲಿಸಿಕೊಂಡರು.
ಕಚೇರಿಯಲ್ಲಿ ಸಕಾಲದಲ್ಲಿ ಸಾರ್ವಜನಿಕರ ಕೆಲಸ ಮಾಡದೆ ಕಚೇರಿಗೆ ಅಲೆದಾಡಿಸುವುದು, ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ, ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕಂಡುಬಂತು. ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು. ‘ತಕ್ಷಣವೇ ಸುಧಾರಣೆಗೆ ಕ್ರಮ ತೆಗೆದುಕೊಳ್ಳಬೇಕು. ಕೈಗೊಂಡ ಕ್ರಮಗಳ ವಿವರವಾದ ವರದಿಯನ್ನು ನಿಗದಿತ ಅವಧಿಯಲ್ಲಿ ಸಲ್ಲಿಸಬೇಕು’ ಎಂದು ಸೂಚಿಸಿದರು.
‘ಎರಡ್ಮೂರು ದಿನಗಳು ಸರ್ವರ್ ಸಮಸ್ಯೆಯಾದರೆ ಅರ್ಜಿದಾರರು ಜಗಳ ಮಾಡುವುದಿಲ್ಲ. ಪದೇಪದೇ ಅದೇ ನೆಪ ಹೇಳಿದರೆ ತಾಳ್ಮೆ ಕಳೆದುಕೊಂಡು ಜಗಳಕ್ಕೆ ಇಳಿಯುತ್ತಾರೆ. ತಡವಾದರೆ ಸೂಕ್ತ ಕಾರಣ ಸಹಿತ ಹಿಂಬರಹವನ್ನು ಅರ್ಜಿದಾರರಿಗೆ ಕೊಡಬೇಕು. ಸ್ವಲ್ಪ ಜವಾಬ್ದಾರಿಯಿಂದ ಕೆಲಸ ಮಾಡುವುದನ್ನು ಕಲಿಯಿರಿ’ ಎಂದು ನ್ಯಾ. ಚವ್ಹಾಣ್, ನಗರಸಭೆ ಪೌರಾಯುಕ್ತರ ಉಮೇಶ ಚವ್ಹಾಣ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಪಹಣಿ ತಿದ್ದುಪಡಿ ಪರಿಶೀಲಿಸಿ: ಪಹಣಿಯಲ್ಲಿ 4 ಎಕರೆ 22 ಗುಂಟೆ ಇದ್ದು, ಸರ್ವೆ ಅನ್ವಯ 5 ಎಕರೆ 5 ಗುಂಟೆ ಎಂದು ತಿದ್ದುಪಡಿ ಮಾಡುವಂತೆ 6 ವರ್ಷಗಳಿಂದ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. ಮುಖ್ಯಮಂತ್ರಿ ಕಚೇರಿಯಿಂದ ತಿದ್ದುಪಡಿ ಮಾಡುವಂತೆ ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಬಂದಿದ್ದರೂ ಸ್ಪಂದಿಸುತ್ತಿಲ್ಲ ಎಂದು ಹತ್ತಿಗೂಡುರಿನ ವೃದ್ಧ ಗುರುಬಸಪ್ಪ ಹೊಸಮನಿ ಅಲವತ್ತುಕೊಂಡರು.
ಮನವಿಯನ್ನು ಆಲಿಸಿ, ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಧೀಶರು, ‘ಕಾನೂನು ಅನ್ವಯ ಪಹಣಿ ತಿದ್ದುಪಡಿ ಪರಿಶೀಲಿಸಿ, ಅಗತ್ಯವಿದ್ದರೆ ಕೋರ್ಟ್ ವಿಚಾರಣೆಗೂ ಒಳಪಡಿಸಿ ಹಿರಿಯರಿಗೆ ನೆರವಾಗಿ’ ಎಂದು ಅಧಿಕಾರಿಗೆ ಸೂಚಿಸಿದರು.
ಪರಿಶೀಲನೆಯಲ್ಲಿ ಲೋಕಾಯುಕ್ತ ಡಿಎಸ್‌ಪಿಗಳಾದ ಜೆ.ಎಚ್.ಇನಾಮದಾರ, ಮಲ್ಲಿಕಾರ್ಜುನ ಚುಕ್ಕಿ, ಪೂವಯ್ಯ ಕೆ.ಪಿ., ಪಿಐಗಳಾದ ಸಂಗಮೇಶ, ಗೋವಿಂದರಾಜ, ಉಮಾಮಹೇಶ, ಕಲ್ಲಪ್ಪ ಬಡಿಗೇರ, ಭೀಮನಗೌಡ ಬಿರಾದಾರ, ಪ್ರಭುಲಿಂಗಯ್ಯ ಹಿರೇಮಠ, ಸುನಿಲ್ ಮೇಗಲಮನಿ, ಬಸವರಾಜ ಬುಡನಿ, ಸಿಬ್ಬಂದಿ ಅಮರನಾಥ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಫೋನ್‌ಪೇನಲ್ಲಿ ಹಣ ಸ್ವೀಕಾರ: ಲೆಕ್ಕಕ್ಕೆ ತಾಕೀತು ಯಾದಗಿರಿ ನಗರಸಭೆಯ ಕೆಲವು ಸಿಬ್ಬಂದಿ ಫೋನ್‌ಪೇ ಮೂಲಕ ಅನುಮಾನಾಸ್ಪದವಾಗಿ ಸಾವಿರಾರು ರೂಪಾಯಿ ಸ್ವೀಕರಿಸಿದ್ದು ಪರಿಶೀಲನೆಯಲ್ಲಿ ಕಂಡುಬಂದಿದೆ. ಹಣದ ಮೂಲ ಜಮೆ ಕ್ಯಾಶ್ ಬುಕ್‌ನಲ್ಲಿ ನೋಂದಾಯಿಸಿದ್ದರ ಮಾಹಿತಿ ಸಲ್ಲಿಕೆಗೆ ತಾಕೀತು ಮಾಡಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಲ ಸಿಬ್ಬಂದಿ ಶಂಸಯಾಸ್ಪದವಾಗಿ ₹ 20 ಸಾವಿರ ₹ 25 ಸಾವಿರವನ್ನು ಡಿಜಿಟಲ್ ಮೂಲಕ ಪಡೆದಿದ್ದಾರೆ. ಪ್ರತಿಯೊಂದು ವಹಿವಾಟಿನ ಮಾಹಿತಿಯನ್ನು ಹಂಚಿಕೊಳ್ಳುವಂತೆ ಸೂಚನೆ ಕೊಡಲಾಗಿದೆ ಎಂದು ಹೇಳಿದ್ದಾರೆ.
ಗಂಡನ ಮರಣ ಪತ್ರಕ್ಕಾಗಿ 9 ತಿಂಗಳಿಂದ ಅಲೆದಾಟ ನಗರದ ನಿವಾಸಿ ಅಂಜು ಅವರು ತನ್ನ ಗಂಡನ ಮರಣ ಪತ್ರಕ್ಕಾಗಿ ಒಂಬತ್ತು ತಿಂಗಳಿಂದ ಎರಡು ಚಿಕ್ಕ ಮಕ್ಕಳನ್ನು ಹೊತ್ತುಕೊಂಡು ಅಲೆಯುತ್ತಿದ್ದೇನೆ. ಇದುವರೆಗೂ ಕೊಟ್ಟಿಲ್ಲ ಎಂದು ನ್ಯಾಯಾಧೀಶರ ಮುಂದೆ ಅಲವತ್ತುಕೊಂಡರು. ಮನೆಗೆ ಬಂದ ಸಿಬ್ಬಂದಿ ಪಂಚನಾಮ ಮಾಡಿಕೊಂಡು ಹೋಗಿದ್ದಾರೆ. ಸರ್ಟಿಫಿಕೇಟ್ ಕೊಡಲು ಅಲೆದಾಡಿಸುತ್ತಿದ್ದಾರೆ. ಅಣ್ಣ– ತಮ್ಮಂದಿರೂ ಇಲ್ಲದೆ ಇಬ್ಬರು ಮಕ್ಕಳೊಂದಿಗೆ ಅಲೆದಾಡಿ ಸಾಕಾಗಿದೆ ಎಂದರು. ‘ಮರಣ ಪ್ರಮಾಣ ಪತ್ರವನ್ನು ಕೊಟ್ಟು ಅದರ ವರದಿಯನ್ನು ಲೋಕಾಯುಕ್ತರಿಗೆ ಸಲ್ಲಿಕೆ ಮಾಡಬೇಕು’ ಎಂದು ನ್ಯಾ. ಚವ್ಹಾಣ್ ಅವರು ಪೌರಾಯುಕ್ತರಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.