ADVERTISEMENT

KPSC: 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆ- ಈ ಸಾರಿ ಏನು ಬದಲಾವಣೆ? ಇಲ್ಲಿದೆ ವಿವರ

2023–24ನೇ ಸಾಲಿನ 384 ‘ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್’ ಗ್ರೂಪ್–ಎ, ಗ್ರೂಪ್–ಬಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.

ಮಂಜುನಾಥ್ ಭದ್ರಶೆಟ್ಟಿ
Published 29 ಫೆಬ್ರುವರಿ 2024, 0:31 IST
Last Updated 29 ಫೆಬ್ರುವರಿ 2024, 0:31 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

istock

ಬೆಂಗಳೂರು: 2023–24ನೇ ಸಾಲಿನ 384 ‘ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್’ ಗ್ರೂಪ್–ಎ, ಗ್ರೂಪ್–ಬಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. 

ADVERTISEMENT

ಕೆಪಿಎಸ್‌ಸಿಯ ಈ ನಿರ್ಧಾರ, ಕೆಎಎಸ್ ಅಧಿಕಾರಿ ಆಗಬೇಕು ಎಂದು ಅನೇಕ ವರ್ಷಗಳಿಂದ ತಯಾರಿ ನಡೆಸುತ್ತಿದ್ದ ಅಭ್ಯರ್ಥಿಗಳಿಗೆ ಸುವರ್ಣಾವಕಾಶವನ್ನು ತಂದಿದೆ. 

ಇದೇ ಮಾರ್ಚ್ 4ರಿಂದ ಪೂರ್ವಭಾವಿ ಪರೀಕ್ಷೆಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಏಪ್ರಿಲ್ 3 ಅರ್ಜಿ ಸಲ್ಲಿಸಲು ಕಡೆಯ ದಿನ. ಆಯೋಗದ ಅಧಿಕೃತ ವೆಬ್‌ಸೈಟ್ kpsconline.karnataka.gov.in ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.

ಅರ್ಜಿ ಸಲ್ಲಿಸುವ ಶುಲ್ಕ ಸಾಮಾನ್ಯ ವರ್ಗದವರಿಗೆ ₹600, ಪ್ರವರ್ಗ 2ಎ, 2ಬಿ, 3ಎ, 3ಬಿಗಳಿಗೆ ₹300, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹50 ಹಾಗೂ ಎಸ್‌ಸಿ, ಎಸ್‌ಟಿ, ಪ್ರವರ್ಗ–1, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳೂ (ಹೈ–ಕ) ಸೇರಿದಂತೆ ಒಟ್ಟಾರೆ 384 ಹುದ್ದೆಗಳಲ್ಲಿ ‘ಗ್ರೂಪ್ –ಎ’ 159, ‘ಗ್ರೂಪ್ –ಬಿ’ 225 ಹುದ್ದೆಗಳಿವೆ. ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು ಒಟ್ಟು 77.

ಪದವಿ, ಸ್ನಾತಕೋತ್ತರ ಪದವಿ ಅಥವಾ ತತ್ಸಮಾನವಾದ ವಿದ್ಯಾರ್ಹತೆಯನ್ನು ಹೊಂದಿದವರು ಅರ್ಜಿ ಸಲ್ಲಿಸಲು ಅರ್ಹ.

ಕನಿಷ್ಠ 21 ವರ್ಷ ವಯಸ್ಸು ಮೀರಿದವರು ಅರ್ಜಿ ಸಲ್ಲಿಸಲು ಅರ್ಹ. ಸಾಮಾನ್ಯ ವರ್ಗದವರಿಗೆ ಗರಿಷ್ಠ ವಯೋಮಿತಿ 38, ಪ್ರವರ್ಗ 2ಎ, 2ಬಿ, 3ಎ, 3ಬಿಗಳಿಗೆ 41 ವರ್ಷ, ಎಸ್‌ಸಿ, ಎಸ್‌ಟಿ, ಪ್ರವರ್ಗ–1 ಅಭ್ಯರ್ಥಿಗಳಿಗೆ 43 ವರ್ಷ. ಮಾಜಿ ಸೈನಿಕರಿಗೂ ವಯೋಮಿತಿ ಸಡಿಲಿಕೆ ಇದೆ.

ಪೂರ್ವಭಾವಿ ಪರೀಕ್ಷೆ (ಬಹುಆಯ್ಕೆ ಮಾದರಿಯ ಪ್ರಶ್ನೆಗಳು), ಮುಖ್ಯ ಪರೀಕ್ಷೆ (ವಿವರಣಾತ್ಮಕ) ಮತ್ತು ವ್ಯಕ್ತಿತ್ವ ಪರೀಕ್ಷೆ ಎಂಬ ಮೂರು ಹಂತಗಳಲ್ಲಿ ಈ ನೇಮಕಾತಿ ನಡೆಯಲಿದೆ. ವಿವರವಾದ ಅಧಿಸೂಚನೆಗೆ, ಪಠ್ಯಕ್ರಮ, ಇತರೆ ಹೆಚ್ಚಿನ ಮಾಹಿತಿಗೆ kpsc.kar.nic.in ಭೇಟಿ ನೀಡಬಹುದು.

ಸಂದರ್ಶನಕ್ಕೆ 25 ಅಂಕಗಳು

ಈ ಸಾರಿ ಸಂದರ್ಶನಕ್ಕೆ 25 ಅಂಕಗಳನ್ನು ಮಾತ್ರ ನಿಗದಿಪಡಿಸಲಾಗಿದೆ. 2019ರಲ್ಲಿ  50 ಅಂಕಗಳನ್ನು ಹಾಗೂ ಅದಕ್ಕೂ ಮುನ್ನ ನಡೆದ ಪರೀಕ್ಷೆಗಳಲ್ಲಿ 200 ಅಂಕಗಳನ್ನು ಸಂದರ್ಶನಕ್ಕೆ ನೀಡಲಾಗುತ್ತಿತ್ತು. ಸಂದರ್ಶನಕ್ಕೆ ಅತ್ಯಂತ ಕಡಿಮೆ ಅಂಕಗಳನ್ನು ಇಟ್ಟಿರುವುದನ್ನು ಅನೇಕ ಅಭ್ಯರ್ಥಿಗಳು ಸ್ವಾಗತಿಸಿದ್ದಾರೆ.

ವಯೋಮಿತಿ ಸಡಿಲಿಕೆ ಅವಕಾಶ: ಅನೇಕ ವರ್ಷಗಳಿಂದ ಕೆಎಎಸ್ ನೇಮಕಾತಿ ನೆನೆಗುದಿಗೆ ಬಿದ್ದಿದ್ದರಿಂದ ಈ ಹುದ್ದೆಗಳ ಅನೇಕ ಉದ್ಯೋಗಾಂಕ್ಷಿಗಳು ಬೇಸರಪಟ್ಟುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಂತವರಿಗೆ ಈ ಒಂದು ಭಾರಿ ಅನ್ವಯ ಆಗುವಂತೆ ವಯೋಮಿತಿಯಲ್ಲಿ ಮೂರು ವರ್ಷ ಸಡಿಲಿಕೆ ನೀಡಲಾಗಿದೆ.

ಒಂದೇ ವರ್ಷ ಡೆಡ್‌ಲೈನ್

ಈ ನೇಮಕಾತಿ ಪ್ರಕ್ರಿಯೆಯನ್ನು ಅಧಿಸೂಚನೆ ಪ್ರಕಟವಾದಾಗಿನಿಂದ ಹಿಡಿದು ಒಂದು ವರ್ಷದೊಳಗೆ ಮುಗಿಸುವ ಗಡುವನ್ನು ಆಯೋಗ ಹಾಕಿಕೊಂಡಿದೆ. ಇಷ್ಟು ವರ್ಷ ವಿವಿಧ ಕಾರಣಗಳಿಂದ ನೇಮಕಾತಿ ಭಾರಿ ವಿಳಂಬವಾಗುತ್ತಿದ್ದವು.

ಸರಿಯಾಗಿ ಅರ್ಜಿ ಸಲ್ಲಿಸಲು ಕಟ್ಟುನಿಟ್ಟಿನ ಸೂಚನೆ

ಕೆಪಿಎಸ್‌ಸಿ ವಿವಿಧ ನೇಮಕಾತಿಗಳಿಗೆ ಅರ್ಜಿ ಸಲ್ಲಿಸುವ ಅನೇಕರು ಅರ್ಜಿಯಲ್ಲಿ ದೋಷಗಳಿವೆ ಎಂದು ಸರಿಪಡಿಸಲು ಮನವಿ ಮಾಡುತ್ತಿದ್ದಾರೆ. ಆದರೆ, ಒಂದು ಭಾರಿ ಅರ್ಜಿ ಸಲ್ಲಿಸಿದರೆ ಸರಿಪಡಿಸಲು ಅವಕಾಶ ಇಲ್ಲ. ಹಾಗಾಗಿ ಈ ಪರೀಕ್ಷೆಗೂ ಕೂಡ ನಿಗದಿತ ದಿನಾಂಕದೊಳಗೆ ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ ಸಲ್ಲಿಸಬೇಕು ಎಂದು ಕೆಪಿಎಸ್‌ಸಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಮೇ 5 ರಂದು ಪೂರ್ವಭಾವಿ ಪರೀಕ್ಷೆ

ಬರುವ ಮೇ 5ರಂದು ಪೂರ್ವಭಾವಿ ಪರೀಕ್ಷೆ ನಡೆಸಲು ಆಯೋಗ ತಾತ್ಕಾಲಿಕವಾಗಿ ನಿರ್ಧರಿಸಿದೆ. ಅಂದರೆ ಅರ್ಜಿ ಸಲ್ಲಿಸುವ ಅವಧಿ ಮುಗಿದ ಒಂದೇ ತಿಂಗಳಲ್ಲಿ ಪರೀಕ್ಷೆ ಎದುರಾಗಲಿದೆ. ಈ ನೇಮಕಾತಿ ಪ್ರಕ್ರಿಯೆ ಯಾವಾಗ ಆರಂಭ ಆಗುತ್ತದೆ ಎಂಬ ಗೊಂದಲದಲ್ಲಿ ಇದ್ದ ಅನೇಕರಿಗೆ ಇದೀಗ ಪರೀಕ್ಷೆ ಬೇಗ ಎದುರಾಗಿರುವುದರಿಂದ ಸಿದ್ಧತೆಯನ್ನೂ ಬೇಗ ಮಾಡಿಕೊಳ್ಳಬೇಕಿದೆ. ಪೂರ್ವಭಾವಿ ಪರೀಕ್ಷೆಯ ಪ್ರತಿ ನಾಲ್ಕು ತಪ್ಪು ಉತ್ತರಗಳಿಗೆ 1 ಅಂಕ ಕಳೆಯಲಾಗುತ್ತದೆ.

40 ಎ.ಸಿ ಹುದ್ದೆಗಳು!

ಕೆಪಿಎಸ್‌ಸಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಹಾಯಕ ಆಯುಕ್ತರು (ಅಸಿಸ್ಟಂಟ್ ಕಮಿಷನರ್) ಹುದ್ದೆಗಳನ್ನು ಅತಿಹೆಚ್ಚು ಕರೆಯಲಾಗಿದೆ. ಒಟ್ಟು 40 ಎ.ಸಿ ಹುದ್ದೆಗಳು (ಗ್ರೂಪ್–ಎ) ಇವೆ. ಆರ್‌ಡಿಪಿಆರ್‌ನಲ್ಲಿ ಸಹಾಯಕ ಕಾರ್ಯನಿರ್ವಾಹ ಅಧಿಕಾರಿ 40 ಹುದ್ದೆಗಳು, ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರು 41 ಹುದ್ದೆಗಳು ಅತಿಹೆಚ್ಚು ಗ್ರೂಪ್‌–ಎ ಹುದ್ದೆಗಳಾಗಿವೆ.

ಸಹಾಯವಾಣಿ

ಅರ್ಜಿ ಸಲ್ಲಿಸುವ ಸಮಯದಲ್ಲಿ ಏನಾದರು ಸಹಾಯ ಬೇಕಾದರೆ ಈ ಸಹಾಯವಾಣಿಗಳನ್ನು ಸಂಪರ್ಕಿಸಬಹುದು– 080–30574957/ 080–3057490.

******

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.