ADVERTISEMENT

545 ಪಿಎಸ್ಐ ನೇಮಕಾತಿ; ಅ.3ರಂದು ಲಿಖಿತ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 9:07 IST
Last Updated 1 ಸೆಪ್ಟೆಂಬರ್ 2021, 9:07 IST
ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ ತರಬೇತಿಯಲ್ಲಿರುವ ಅಭ್ಯರ್ಥಿಗಳು–ಸಾಂದರ್ಭಿಕ ಚಿತ್ರ
ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ ತರಬೇತಿಯಲ್ಲಿರುವ ಅಭ್ಯರ್ಥಿಗಳು–ಸಾಂದರ್ಭಿಕ ಚಿತ್ರ   

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 545 ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್ಐ) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಅಕ್ಟೋಬರ್ 3ರಂದು ಲಿಖಿತ ಪರೀಕ್ಷೆ ನಡೆಸಲು ನೇಮಕಾತಿ ವಿಭಾಗ ತೀರ್ಮಾನಿಸಿದೆ.

ಈ ಬಗ್ಗೆ ರಾಜ್ಯದ ಎಲ್ಲ ಕಮಿಷನರ್‌ಗಳು ಹಾಗೂ ಜಿಲ್ಲಾ ಎಸ್ಪಿಗಳಿಗೆ ಪತ್ರ ಬರೆದಿರುವ ನೇಮಕಾತಿ ವಿಭಾಗದ ಎಡಿಜಿಪಿ ಅಮ್ರಿತ್ ಪಾಲ್, ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.

‘ಪಿಎಸ್‌ಐ ನೇಮಕಾತಿಗಾಗಿ ಈಗಾಗಲೇ ರಾಜ್ಯದಾದ್ಯಂತ ದೈಹಿಕ ಸಾಮರ್ಥ್ಯ ಪರೀಕ್ಷೆ ಆರಂಭವಾಗಿದ್ದು, ಅದು ಪೂರ್ಣಗೊಳ್ಳಲು ಮತ್ತಷ್ಟು ದಿನಗಳು ಬೇಕಿದೆ. ನಿಗದಿಯಂತೆ ಸೆ. 26ರಂದು ಪರೀಕ್ಷೆ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಅಕ್ಟೋಬರ್ 3ರಂದು ಲಿಖಿತ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

ADVERTISEMENT

‘ಅಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆವರೆಗೆ ಪತ್ರಿಕೆ –1 ಹಾಗೂ ಮಧ್ಯಾಹ್ನ 1.30ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಪತ್ರಿಕೆ –2 ಪರೀಕ್ಷೆ ನಡೆಸಲಾಗುವುದು. ಈಗಾಗಲೇ ನಿಗದಿಪಡಿಸಿರುವ ಪರೀಕ್ಷಾ ಕೇಂದ್ರಗಳಲ್ಲೇ ಈ ಪರೀಕ್ಷೆಗಳು ನಡೆಸಲು ಸಕಲ ಸಿದ್ಧತೆ ಮಾಡಿಕೊಂಡು ಸೆ. 4ರೊಳಗಾಗಿ ಕಚೇರಿಗೆ ವರದಿ ನೀಡಬೇಕು’ ಎಂದೂ ಪತ್ರದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.